ಸಿಎಂ ಮನೆ ಮುಂದೆ ರೈತರ ಪ್ರತಿಭಟನೆ
ಅನ್ನದಾತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಸರಕಾರ: ಹಸಿರು ಸೇನೆ ಜಿಲ್ಲಾಧ್ಯಕ್ಷ ಮುತ್ತಣ್ಣ ಗುಡಗೇರಿ
Team Udayavani, May 19, 2022, 3:46 PM IST
ಶಿಗ್ಗಾವಿ: ಕಳೆದ ನಾಲ್ಕು ವರ್ಷಗಳಿಂದ ರಾಜ್ಯದ ರೈತರ ಸಂಕಷ್ಟಗಳ ಕುರಿತು ಸರ್ಕಾರಕ್ಕೆ ಎಚ್ಚರಿಸುತ್ತಲೇ ಬಂದಿದ್ದರೂ ಸರ್ಕಾರ ದಿವ್ಯ ನಿರ್ಲಕ್ಷ ವಹಿಸಿದೆ. ಕೇವಲ ಸುಳ್ಳು ಭರವಸೆ ನೀಡುತ್ತ ಬಂದ ರಾಜಕಾರಣಿಗಳು ಇಲ್ಲಿ ಬೆಳೆದರೇ ಹೊರತು ರೈತರನ್ನು ಆರ್ಥಿಕವಾಗಿ ಬೆಳೆಸುವ ಪ್ರಯತ್ನ ಮಾಡಿಲಿಲ್ಲ ಎಂದು ಹಸಿರು ಸೇನೆ ಜಿಲ್ಲಾಧ್ಯಕ್ಷ ಮುತ್ತಣ್ಣ ಗುಡಗೇರಿ ಆರೋಪಿಸಿದರು.
ಬುಧವಾರ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತ ಮುಖಂಡರು, ರೈತ ಸಮುದಾಯದ ಪ್ರತಿನಿಧಿಗಳ ಸಂಯುಕ್ತಾಶ್ರಯದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಖ್ಯಮಂತ್ರಿಗಳ ಜನಸಂಪರ್ಕ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ, ರೈತರನ್ನು ಉದ್ದೇಶಿಸಿ ಮಾತನಾಡಿದರು.
ರೈತ ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಇಲ್ಲ. ಬೀಜ, ಗೊಬ್ಬರ ನೀಡುವಲ್ಲೂ ಸರ್ಕಾರ ಮಾರಾಟಗಾರರ ಪರವಾಗಿ ಕೆಲಸ ಮಾಡುತ್ತಿದೆ. ನಾಲ್ಕು ವರ್ಷಗಳ ಬೆಳೆ ಹಾನಿ ಪರಿಹಾರ, ವಿಮಾ ಪರಿಹಾರ ಬಾಕಿ ಇರಿಸಿಕೊಂಡಿದೆ. ಇದು ಕೇವಲ ಕ್ಷೇತ್ರದ ಸಮಸ್ಯೆಯಲ್ಲ. ಇಡೀ ರಾಜ್ಯವೇ ಸಮಸ್ಯೆಯಲ್ಲಿದೆ. ರೈತ ಅನ್ನದಾತ ಎನ್ನುವ ಸರ್ಕಾರ ಅವರ ಜೀವನವನ್ನೇ ಗಂಡಾಂತರದಲ್ಲಿರಿಸಿದೆ. ವಿಫಲ ಕೃಷಿ ಯೋಜನೆಗಳನ್ನು ಜಾರಿಗೆ ತಂದು ವ್ಯವಸ್ಥೆಯನ್ನೇ ಹಾಳು ಮಾಡಿದೆ ಎಂದರು.
ರೈತ ಮುಖಂಡ ಶಿವಾನಂದ ಮುಗಳಿಹಾಳ ಮಾತನಾಡಿ, ವಿವಿಧ ಉದ್ದೇಶಿತ ಕಾರಣಗಳಿಗೆ ರೈತರ ಕೃಷಿ ಭೂಮಿಯನ್ನು ಬಲವಂತವಾಗಿ ವಶಕ್ಕೆ ಪಡೆಯಲಾಗುತ್ತಿದೆ. ರಾಜ್ಯದ ಹಲವಾರು ಕಡೆ ಇಂತಹ ನಿದರ್ಶನಗಳಿವೆ. ಈ ಕುರಿತು ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಯಾವುದಕ್ಕೂ ಸ್ಪಂದನೆ ಸಿಕ್ಕಿಲ್ಲ. ಕೇವಲ ರೈತರ ಹೆಸರು ಹೇಳಿಕೊಂಡು ಬಂದ ರಾಜಕಾರಿಣಿಗಳು ರೈತ ನನ್ನು ಬಳಸಿಕೊಂಡು ಕಾರ್ಖಾನೆ ಮಾಲಿಕರಾದರು. ಆದರೆ, ರೈತರನ್ನು ಗುಲಾಮರಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ರೈತ ಮುಖಂಡ ಮರಿಗೌಡ್ರ ಮಾತನಾಡಿ, ರೈತರ ಮತ್ತು ಸರ್ಕಾರದ ಮಧ್ಯೆ ಸಾಮರಸ್ಯ ಇರಬೇಕು. ಇಲ್ಲಿ ಸಂಘರ್ಷವಿದೆ. ದೇಶಕ್ಕೆ ಬಲಿಷ್ಠ ಸರ್ಕಾರಗಳು ಬೇಕು. ಅದರಂತೆಯೇ ದೇಶದ ಅನ್ನದಾತ ರೈತರೂ ಬಲಿಷ್ಠಗೊಳ್ಳಬೇಕು. ಕೇಂದ್ರ ಸರ್ಕಾರ ಜಾರಿ ಮಾಡಿದ ಕೃಷಿ ಕಾಯಿದೆಗಳನ್ನು ಹಿಂಪಡೆದಿದೆ. ಆದರೆ, ರಾಜ್ಯ ಸರ್ಕಾರದಿಂದ ಯಾವುದೇ ಕ್ರಮವಾಗಿಲ್ಲ ಎಂದರು.
ಯುವ ಘಟಕದ ಅಧ್ಯಕ್ಷ ಬಸವಲಿಂಗಪ್ಪ ನರಗುಂದ ಮಾತನಾಡಿ, ಪ್ರಸಕ್ತ ಸರ್ಕಾರದ ನಾಯಕರು ರೈತರ ಹೆಸರೇಳಿ ಮುಂಚೂಣಿಯಲ್ಲಿ ಬಂದವರು. ಅವರು ನಮ್ಮ ಸಾಕಷ್ಟು ಸಮಸ್ಯೆಗಳಿಗೆ ಸ್ಪಂದಿಸಿಯೇ ಇಲ್ಲ. ರೈತ ಪ್ರತಿನಿಧಿಗಳನ್ನು ನಾಯಕರನ್ನಾಗಿ ಬೆಳೆಸಲೇ ಇಲ್ಲ ಎಂದು ಆರೋಪಿಸಿದರು.
ಬೆಳೆಗ್ಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ರೈತ ಪ್ರತಿನಿಧಿಗಳು ಪಟ್ಟಣದ ಕೃಷಿ ಹುಟ್ಟುವಳಿ ಮಾರುಕಟ್ಟೆ ಆವರಣದಲ್ಲಿ ಸೇರಿ ಪ್ರತಿಭಟನೆಗೆ ಸಿದ್ಧತೆ ನಡೆಸಿದರು. ರಾಜ್ಯದ ವಿವಿಧೆಡೆಯಿಂದ ಬರುವ ಪ್ರತಿಭಟನಾಕಾರರನ್ನು ತಡೆಯುವ ಪ್ರಯತ್ನವಾಗಿ ಅವರ ವಾಹನಗಳನ್ನು ತಡೆದು, ನಾಯಕರನ್ನು ಬಂಧಿಸುವ ಪ್ರಯತ್ನಗಳಾದವು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಸಂಖ್ಯೆಯ ರೈತರ ಮೆರವಣಿಗೆ ನಡೆಯಿತು.
ನಂತರ ತಾಪಂ ಆವರಣದಲ್ಲಿರುವ ಶಾಸಕರ ಜನಸಂಪರ್ಕ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿ, ಸಿಎಂ ವಿರುದ್ಧ ಘೋಷಣೆ ಕೂಗಿದರು. ಸುಮಾರು ನಾಲ್ಕು ತಾಸು ಪ್ರತಿಭಟನೆ ಮಳೆಯಲ್ಲೂ ಮುಂದುವರೆಯಿತು. ಮಧ್ಯಾಹ್ನ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ರೈತರ ಅಹವಾಲು ಸರ್ಕಾರಕ್ಕೆ ತಿಳಿಸಲಾಗುವುದು. ಅಲ್ಲದೇ, ಸಧ್ಯದಲ್ಲಿಯೇ ಸಿಎಂ ಬಸವರಾಜ ಬೊಮ್ಮಾಯಿ ಅವರ ಭೇಟಿಗೂ ಅವಕಾಶ ಕಲ್ಪಿಸಲಾಗುವುದು ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಸವಣೂರು ಕಂದಾಯ ಉಪವಿಭಾಗಾ ಧಿಕಾರಿಗಳು, ತಹಶೀಲ್ದಾರ್ ಶಿವಾನಂದ ರಾಣೆ ಸ್ಥಳದಲ್ಲಿದ್ದರು. ಪಟ್ಟಣದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ರೈತ ಮುಖಂಡರಾದ ರಾಮಣ್ಣ ಕೆಂಚೆಳ್ಳೇರ, ಚನ್ನಪ್ಪ ಮರಡೂರು, ರಾಘವೇಂದ್ರ ನಾಯಿಕ್, ಅಡಿವೆಪ್ಪ ಆಲದಕಟ್ಟಿ, ಮಲ್ಲಿಕಾರ್ಜುನ ಬಳ್ಳಾರಿ, ರಮೇಶ ಹೆಸರೂರು, ರಾಜು ತರ್ಲಘಟ್ಟ, ಮಂಜುನಾಥ ಹಾವೇರಿ, ಶಂಕರಗೌಡ ಪಾಟೀಲ, ಅಲ್ಲದೇ, ವಿವಿಧ ಜಿಲ್ಲೆಯಿಂದ ಆಗಮಿಸಿದ್ದ ಮಹಿಳಾ ರೈತ ಪ್ರತಿನಿಧಿಗಳೂ ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.