ಮಾವಿಗೆ ನೋವು ತಂದ ಮಳೆರಾಯ
ಮಾವು ಕೀಳಲು ಬಿಡುತ್ತಿಲ್ಲ ಮಳೆ
Team Udayavani, May 22, 2022, 10:41 AM IST
ಧಾರವಾಡ: ಹಣ್ಣುಗಳ ರಾಜ ಅಲ್ಫೋನ್ಸೋ ಮಾವಿನ ರಾಜಧಾನಿ ಧಾರವಾಡ ಜಿಲ್ಲೆಗೆ 2022ರ ಜನವರಿಯಲ್ಲಿ ಸುದೀರ್ಘ ಸುಗ್ಗಿ ಕಾಟ, ಫೆಬ್ರವರಿ ತಿಂಗಳಿನಲ್ಲಿ ಇಬ್ಬನಿ ಮಾಡಿಟ್ಟ ಮಾಟ, ಮಾರ್ಚ್ ತಿಂಗಳಿನಲ್ಲಿ ವಿಪರೀತ ಬಿರು ಬಿಸಿಲಿನ ಶಾಖ, ಏಪ್ರಿಲ್ ತಿಂಗಳಿನಲ್ಲಿ ಮುಂಗಾರು ಪೂರ್ವ ಬಿದ್ದ ಅಲಿಕಲ್ಲು ಮಳೆ ಮತ್ತು ಬಿರುಗಾಳಿಯ ಬಿಸಿಯೂಟ. ಇನ್ನೇನು ಹಣ್ಣು ತಿನ್ನಬೇಕು. ಇದೀಗ ಸೈಕ್ಲಾನ್ ಕಾಟದಿಂದ ಸುರಿಯುತ್ತಿರುವ ಭಾರಿ ಮಳೆಯ ಕಾಟ.
ಹೌದು. ಮಾವು ಮಿಡಿಯಾದಾಗಿನಿಂದ ಶುರುವಾದ ಪ್ರಕೃತಿಯ ಮುನಿಸು ಇನ್ನೇನು ಎಲ್ಲಾ ಗಂಡಾಂತರಗಳನ್ನು ದಾಟಿಕೊಂಡು ಅಳಿದುಳಿದ ಹಣ್ಣಾದರೂ ತಿನ್ನೋಣ ಅಥವಾ ಮಾರಾಟ ಮಾಡಿ ಒಂದಿಷ್ಟು ಖರ್ಚಾದರೂ ತೆಗೆಯೋಣ ಎನ್ನುವಾಗ ಮಳೆ ಒಕ್ಕರಿಸಿಕೊಂಡಿದ್ದು, ಮಾವು ಬೆಳೆಗಾರರು ಮಾತ್ರವಲ್ಲ, ಮಾವು ದಲ್ಲಾಳಿಗಳು ಕೂಡ ತತ್ತರಿಸಿ ಹೋಗುವಂತಾಗಿದೆ. ಚಂಡಮಾರುತದಿಂದ ಸುರಿಯುತ್ತಿರುವ ಮಳೆ ಅಲ್ಫೋನ್ಸೋ ಮಾವು ಮಾರಾಟ ಮತ್ತು ರಫ್ತಿಗೆ ತೀವ್ರ ಅಡ್ಡಿಯನ್ನುಂಟು ಮಾಡಿದ್ದು, ಮಾವು ಖರೀದಿ ಕೇಂದ್ರಗಳಲ್ಲಿ ಮಾಲು ರವಾನಿಸುವ ಲಾರಿಗಳು ಕೆಸರಿನಲ್ಲಿ ಸಿಲುಕುವಂತಾಗಿದೆ. ಇನ್ನೊಂದೆಡೆ ರೈತರ ಹೊಲದಲ್ಲಿನ ಮಾವು ಕೂಡ ಮಳೆ-ಗಾಳಿಗೆ ಉದುರಿ ಬೀಳುತ್ತಿದ್ದು, ಮೂರೇ ದಿನಗಳಲ್ಲಿ ಕೆಲವು ತೋಟಗಳಲ್ಲಿನ ಮಾವಿನ ಕಾಯಿ ಕೊಳೆತು ಉದುರುತ್ತಿವೆ.
ಮಾವಿನ ಮಾರಾಟಕ್ಕಿಲ್ಲ ಪ್ರತ್ಯೇಕ ಮಾರುಕಟ್ಟೆ: ಇನ್ನು ಎಪಿಎಂಸಿಗಳು ಮತ್ತು ತೋಟಗಾರಿಕೆ ಕಚೇರಿಗಳನ್ನು ಹೊರತುಪಡಿಸಿ ಮಾವು ಉತ್ಪಾದನೆ, ರವಾನೆ ಮತ್ತು ರಫ್ತು ಮಾಡುವುದಕ್ಕೆ ಸುಸಜ್ಜಿತ ಮಾವು ಮಾರುಕಟ್ಟೆಯ ಅಗತ್ಯ ಇತ್ತೀಚಿನ ವರ್ಷಗಳಲ್ಲಿ ಕಾಣುತ್ತಿದೆ. ಹುಬ್ಬಳ್ಳಿ-ಧಾರವಾಡ ಬೈಪಾಸ್‌ಗೆ ಅಂಟಿಕೊಂಡು ಕೆಲಗೇರಿ ಬಳಿ ಮಾವು ದಲ್ಲಾಳಿಗಳು ತಾತ್ಕಾಲಿಕ ಸೆಡ್‌ಗಳನ್ನು ನಿರ್ಮಿಸಿಕೊಂಡು ಅಲ್ಲಿಂದಲೇ ಅನ್ಯ ರಾಜ್ಯಗಳಿಗೆ ಮಾವು ರವಾನಿಸುತ್ತಾರೆ. ಆದರೆ ಟ್ರ್ಯಾಕರ್, ಟಂಟಂ, ಚಕ್ಕಡಿ, ಜೀಪ್‌ಗಳು ಮತ್ತು ಬೈಕ್‌ಗಳ ಮೂಲಕ ಮಾವು ಬೆಳೆಗಾರರು ಮಾವಿನಕಾಯಿ ತಂದು ಮಾರಾಟ ಮಾಡುತ್ತಾರೆ. ಅವರಿಗೆ ದಲ್ಲಾಳಿಗಳ ಖಾಸಗಿ ಅಂಗಡಿಗಳಲ್ಲಿ ನ್ಯಾಯ ಸಿಕ್ಕುವುದು ಅಷ್ಟಕ್ಕಷ್ಟೇಯಾಗಿದೆ. ಜತೆಗೆ ಕ್ವಿಂಟಲ್ ಗಟ್ಟಲೇ ತೂಕ ವ್ಯತ್ಯಾಸ ಬಂದರೂ ರೈತರು ಗಪ್‌ಚುಪ್ ಉಳಿಯುವ ಅನಿವಾರ್ಯತೆ ಎದುರಾಗಿದೆ.
ಪಲ್ಪ್ ಗಾಗಿ ಹೊರ ರಾಜ್ಯಕ್ಕೆ ರವಾನೆ: ಧಾರವಾಡ ನೆಲದ ಅಲ್ಫೋನ್ಸೋ ಮಾವಿನ ರುಚಿ ಎಷ್ಟಿದೆ ಎಂದರೆ ಹಣ್ಣಷ್ಟೇ ಅಲ್ಲ. ಮಾವಿನ ಕಾಯಿಯ ಫಲ್ಪ್ ಕೂಡ ಅತ್ಯಂತ ರುಚಿಕಟ್ಟಾಗಿ ಬರುತ್ತಿದೆ. ಹೀಗಾಗಿ ನೆರೆ ರಾಜ್ಯಗಳಾದ ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಧಾರವಾಡದಿಂದ ನೇರವಾಗಿ ಮಾವಿನ ಹಣ್ಣು ರವಾನೆಯಾಗುತ್ತಿದೆ. 2021ರಲ್ಲಿ 97 ಸಾವಿರ ಮೆ.ಟನ್ ಮಾವು ಉತ್ಪಾದನೆಯಾಗಿದ್ದು, ಬರೊಬ್ಬರಿ 250 ಕೋಟಿ ರೂ. ಗಳ ವಹಿವಾಟು ನಡೆದಿತ್ತು. 2022ರಲ್ಲಿಯೂ ಭಾರಿ ಉತ್ಪಾದನೆ ನಿರೀಕ್ಷೆಯಿತ್ತಾದರೂ ಮಾರ್ಚ್ ತಿಂಗಳಿನಲ್ಲಿ ಬಿದ್ದ ಇಬ್ಬನ್ನಿ ಮತ್ತು ನುಶಿಪೀಡೆಗೆ ಮಿಡಿಮಾವು ಕತ್ತರಿಸಿ ಬಿದ್ದು ಭಾರಿ ಪ್ರಮಾಣದ ಹಾನಿಯಾಗಿ ಉತ್ಪಾದನೆ ಶೇ.40 ಕುಸಿತ ಕಂಡಿದೆ. ಮಾವಿಗೆ ಬರೀ ನೋವೇ ಗತಿಯಾಗಿದ್ದು, ಈ ವರ್ಷ ಮಾವು ಬೆಳೆಗಾರರ ಸಂಕಷ್ಟ ಹಣ್ಣು ತಿನ್ನುವುದಕ್ಕೂ ಬಿಡದಂತಾಗಿ ಹೋಗಿದೆ. ಒಂದೆಡೆ ಹಳದಿ ನೊಣದ ಕಾಟದಿಂದ ಕಂಗಾಲಾದ ಮಾವು ಬೆಳೆಗಾರರು ಹಾಗೂ ಹೀಗೂ ಉಳಿದ ಹಣ್ಣಲ್ಲಿ ಶೀಕರಣಿ ಉಣ್ಣಬೇಕು ಎನ್ನುವಷ್ಟರಲ್ಲಿ ಮಳೆರಾಯ ಕೈಗೆ ಬಂದ ತುತ್ತನ್ನು ಬಾಯಿಗೆ ಬರದಂತೆ ಮಾಡುತ್ತಿದ್ದಾನೆ.
ಸ್ಮಾರ್ಟ್ ವ್ಯವಸ್ಥೆಯ ನಿರೀಕ್ಷೆ: ಧಾರವಾಡದ ಪಶ್ಚಿಮ ಭಾಗದ ತಾಲೂಕುಗಳಾದ ಅಳ್ನಾವರ, ಕಲಘಟಗಿ ಮತ್ತು ಧಾರವಾಡ ಭಾಗದಲ್ಲಿ ದೊಡ್ಡ ದೊಡ್ಡ ಅಲ್ಫೋನ್ಸೋ ತೋಟಗಳಿವೆ. ಇಲ್ಲಿ ಸಾವಿರಾರು ಟನ್ ಮಾವು ಉತ್ಪಾದನೆಯಾಗುತ್ತದೆ. ಅಷ್ಟೇಯಲ್ಲ, ಪಕ್ಕದ ಜಿಲ್ಲೆಗಳಾದ ಉತ್ತರ ಕನ್ನಡ, ಹಾವೇರಿ, ಬೆಳಗಾವಿಯಿಂದಲೂ ಮಾವು ಇಲ್ಲಿಗೆ ಬರುತ್ತದೆ. ಅದನ್ನು ದಲ್ಲಾಳಿಗಳು ಖರೀದಿಸಿ ರವಾನಿಸುವ ವ್ಯವಸ್ಥೆ ಇಲ್ಲಿದೆಯಾದರೂ ಅದಕ್ಕೆ ಹೈಟೆಕ್ ಸ್ಪರ್ಶ ಸಿಕ್ಕಬೇಕಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಎನ್ನುವ ಕೇಂದ್ರ ಸರ್ಕಾರದ ಪರಿಕಲ್ಪನೆಯಡಿ ಧಾರವಾಡ ಜಿಲ್ಲೆಗೆ ಮಾವು ಹೆಸರಾಗಿದ್ದು ಇದಕ್ಕೆ ಪ್ರಾಶಸ್ತ್ಯ ಸಿಕ್ಕುವ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಮೌಲ್ಯವರ್ಧನ ಕೇಂದ್ರವನ್ನು ಮುಖ್ಯಮಂತ್ರಿಗಳು ತಮ್ಮ ತವರು ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ಸ್ಥಾಪಿಸಲು ಮುಂದಾಗಿದ್ದಾರೆ. ಆದರೆ ಪ್ರತಿವರ್ಷ ಲಕ್ಷ ಮೆಟ್ರಿಕ್ ಟನ್‌ನಷ್ಟು ಮಾವು ಉತ್ಪಾದಿಸುವ ಧಾರವಾಡ ಜಿಲ್ಲೆಯಲ್ಲಿ ಕೇಂದ್ರ ಸ್ಥಾಪನೆಯಾದರೆ ಮಾವು ಬೆಳೆಗಾರರಿಗೆ ನೇರವಾಗಿ ಅದರ ಲಾಭ ಸಿಕ್ಕುತ್ತದೆ.
ಧಾರವಾಡದಲ್ಲಿಲ್ಲ ಮಾವು ಮೌಲ್ಯವರ್ಧನ ಕೇಂದ್ರ: ಜಿಲ್ಲೆಯಲ್ಲಿ ಅತ್ಯಧಿಕ ಮಾವು ಉತ್ಪಾದನೆಯಾದರೂ ಕೂಡ ಅದನ್ನು ಪಲ್ಪ್ ಮಾಡುವ ಅಥವಾ ಹಣ್ಣಾಗಿಸಿ ಇಲ್ಲಿಂದಲೇ ಉತ್ತಮ ಪ್ಯಾಕೇಟ್‌ಗಳಲ್ಲಿ ತುಂಬಿ ಹೊರ ರಾಜ್ಯ, ದೇಶ ಮತ್ತು ವಿದೇಶಗಳಿಗೆ ರಫ್ತು ಮಾಡುವ ವ್ಯವಸ್ಥೆ ಇನ್ನೂ ಬಂದಿಲ್ಲ. ಇಲ್ಲಿಂದ ಅಕ್ಕದ ರಾಜ್ಯಗಳಲ್ಲಿನ ಪಲ್ಪ್ ತಯಾರಿಕಾ ಫ್ಯಾಕ್ಟರಿಗಳಿಗೆ ಅಲ್ಫೋನ್ಸೋ ಹಣ್ಣು ರಫ್ತಾಗುತ್ತಿದೆ. ಆದರೆ ಸ್ಥಳೀಯವಾಗಿ ದೊಡ್ಡ ಮಟ್ಟದಲ್ಲಿ ಇಷ್ಟು ಮಾವು ಉತ್ಪಾದನೆಯಾದರೂ ಇಲ್ಲಿಯೇ ಯಾಕೆ ಸುಸಜ್ಜಿತ ಮತ್ತು ಹೈಟೆಕ್ ಮಾವು ಮೌಲ್ಯವರ್ಧನ ಕೇಂದ್ರ ಸ್ಥಾಪನೆಯಾಗುತ್ತಿಲ್ಲ ಎನ್ನುವ ಬೇಸರ ಜಿಲ್ಲೆಯ ಮಾವು ಬೆಳೆಗಾರರಲ್ಲಿ ಮತ್ತು ಮಾವು ದಲ್ಲಾಳಿಗಳಲ್ಲಿ ಮೂಡಿದೆ.
ಮೊದಲೇ ಅಲ್ಫೋನ್ಸೋ ಉತ್ಪಾದನೆ ಕುಸಿತವಾಗಿ ನಷ್ಟವಾಗಿತ್ತು. ಇದೀಗ ಮಾವು ಕೂಯಿಲು ಸಂದರ್ಭದಲ್ಲಿ ಜಡಿ ಮಳೆ ಹಿಡಿದಿದ್ದರಿಂದ ರೈತರಿಗೆ ಮತ್ತು ವ್ಯಾಪಾರಿಗಳಿಗೆ ಇಬ್ಬರಿಗೂ ನಷ್ಟವಾಗಿದೆ. ಈ ವರ್ಷದ ಮಾವು ಬರೀ ನೋವು. –ಇರ್ಫಾನ್ ಹನೀಫ್, ಮಾವು ದಲ್ಲಾಳಿ, ಗೋವಾ ರಸ್ತೆ,ಧಾರವಾಡ.
ಹೊಲದಲ್ಲಿನ ಗಿಡಗಳಲ್ಲಿ ಉಳಿದ ಮಾವು ಕೀಳಲು ಹಾಗೂ ಬಿರುಗಾಳಿಗೆ ತೋಟದಲ್ಲಿ ಬಿದ್ದ ಮಾವು ಎತ್ತಲು ಕೂಡ ಮಳೆ ಬಿಡುತ್ತಿಲ್ಲ. ಈ ವರ್ಷದ ಮಾವು ಹಾನಿಗೆ ಸರ್ಕಾರ ಪರಿಹಾರ ನೀಡಬೇಕು. –ನಾಗರಾಜ ಗೌಡರ, ಮಾವು ಬೆಳೆಗಾರ, ಕ್ಯಾರಕೊಪ್ಪ.
–ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.