ಮೇಲ್ಮನೆ: ಇಂದು ಸ್ಪಷ್ಟ ಚಿತ್ರಣ? ಕಾಂಗ್ರೆಸ್ ಪಟ್ಟಿಯಲ್ಲಿ ಹಲವು ಪ್ರಭಾವಿ ನಾಯಕರ ಹೆಸರು
ಎಲ್ಲರ ದೃಷ್ಟಿ ದಿಲ್ಲಿಯತ್ತ
Team Udayavani, May 23, 2022, 7:20 AM IST
ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನ ಸಮೀಪಿಸುತ್ತಿದೆ. ಹೀಗಿದ್ದರೂ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ ಮಾಡಲು ಲೆಕ್ಕಾಚಾರದಲ್ಲಿ ತೊಡಗಿವೆ. ಆದರೆ ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವುದರಿಂದ ಸೋಮವಾರ ಮೂರು ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿವೆ.
ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ 4, ಕಾಂಗ್ರೆಸ್‌ಗೆ 2 ಹಾಗೂ ಜೆಡಿಎಸ್‌ಗೆ ಒಂದು ಸ್ಥಾನ ಸಿಗುವುದು ಖಚಿತ. ರವಿವಾರ ಕಾಂಗ್ರೆಸ್ ಹಾಗೂ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ಟಿಕೆಟ್ ಆಕಾಂಕ್ಷಿಗಳು ಕಾದಿದ್ದರು. ಆದರೆ ದಿಲ್ಲಿಯಲ್ಲಿ ಎರಡೂ ಪಕ್ಷಗಳ ವರಿಷ್ಠರು ಪಟ್ಟಿ ಬಿಡುಗಡೆ ಮಾಡದಿರುವುದರಿಂದ ಸೋಮವಾರದ ವರೆಗೆ ಕಾಯುವಂತಾಗಿದೆ.
ಕಾಂಗ್ರೆಸ್ ಹಾಗೂ ಬಿಜೆಪಿಯ ರಾಜ್ಯ ನಾಯಕರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸಿ ಕೊಟ್ಟಿದ್ದಾರೆ. ಅದನ್ನು ಪರಿಶೀಲಿಸಿ ವರಿಷ್ಠರು ಸೋಮವಾರ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಜೆಡಿಎಸ್ ಕೂಡ ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ.
ಬಿಜೆಪಿ ಸಂಭಾವ್ಯರು
ನಾಲ್ಕು ಸ್ಥಾನಗಳಿಗೆ ರಾಜ್ಯ ಬಿಜೆಪಿಯು ಸುಮಾರು 20 ಸಂಭಾವ್ಯರ ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸಿಕೊಟ್ಟಿದೆ. ಎಸ್‌ಸಿ, ಒಬಿಸಿ, ಮಹಿಳೆ ಮತ್ತು ಸಾಮಾನ್ಯ ವರ್ಗಕ್ಕೆ ತಲಾ ಒಂದು ಸ್ಥಾನ ಹಂಚಿಕೆ ಮಾಡುವ ಲೆಕ್ಕಾಚಾರದಲ್ಲಿ ಒಂದೊಂದು ವರ್ಗಕ್ಕೆ ಸೇರಿದ ಐವರ ಹೆಸರುಗಳನ್ನು ರಾಜ್ಯ ಕೋರ್ ಕಮಿಟಿ ವರಿಷ್ಠರಿಗೆ ಕಳುಹಿಸಿ ಕೊಟ್ಟಿದೆ ಎನ್ನಲಾಗಿದೆ. ಪ್ರಮುಖವಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಪಕ್ಷದ ವರಿಷ್ಠರು ಆಯ್ಕೆ ಮಾಡುತ್ತಾರೋ, ಇಲ್ಲವೋ ಎನ್ನುವುದು ಕುತೂಹಲ ಮೂಡಿಸಿದೆ.
ಉಳಿದಂತೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ನಿರ್ಮಲ ಕುಮಾರ ಸುರಾನಾ, ಗೀತಾ ವಿವೇಕಾನಂದ, ಎಸ್. ಮಂಜುಳಾ, ಛಲವಾದಿ ನಾರಾಯಣ ಸ್ವಾಮಿ, ಸಿದ್ದರಾಜು, ತೇಜಸ್ವಿನಿ ಅನಂತಕುಮಾರ್, ಲಿಂಗರಾಜ ಪಾಟೀಲ್, ಮಹೇಶ್ ಟೆಂಗಿನಕಾಯಿ, ಜಗದೀಶ್ ಹಿರೇಮನಿ ಹೆಸರು ಗಳು ಸಂಭಾವ್ಯರಲ್ಲಿ ಮುಂಚೂಣಿಯಲ್ಲಿವೆ.
ರಾಜ್ಯಸಭೆಗೆ
ರಾಜ್ಯಸಭೆ ಚುನಾವಣೆಗೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಬೇಕಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರನ್ನು ರಾಜ್ಯ ಕೋರ್ ಕಮಿಟಿ ಕಳುಹಿಸಿದೆ. ಎರಡನೇ ಸ್ಥಾನಕ್ಕೆ ಅಧಿಕೃತವಾಗಿ ಯಾರದೇ ಹೆಸರನ್ನು ಸೂಚಿಸಿಲ್ಲ. ಅದಕ್ಕೆ ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್, ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಹೆಸರುಗಳು ಕೇಳಿ ಬರುತ್ತಿವೆ.
ಕಾಂಗ್ರೆಸ್ ಪಟ್ಟಿಗೆ ಕಸರತ್ತು
ಕಾಂಗ್ರೆಸ್‌ಗೆ ಸಿಗಬಹುದಾದ ಎರಡಒಲ್ಲಿ ಒಂದನ್ನು ಹಿಂದುಳಿದ ವರ್ಗ ಹಾಗೂ ಮತ್ತೊಂದನ್ನು ಮುಸ್ಲಿಂ ಅಥವಾ ಕ್ರೈಸ್ತ ಸಮುದಾಯಕ್ಕೆ ಕೊಡಲು ಸಿದ್ಧರಾಮಯ್ಯ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅಭಿಪ್ರಾಯಗಳನ್ನು ಹೈಕಮಾಂಡ್ ಪಡೆದುಕೊಂಡಿದೆ. ಈ ಮಧ್ಯೆ ಎಸ್.ಆರ್. ಪಾಟೀಲ್ ಪರ ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಪಾಟೀಲ್ ರವಿವಾರ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಹಿಂದುಳಿದ ವರ್ಗದ ಒಂದು ಸ್ಥಾನಕ್ಕಾಗಿ ಮಾಜಿ ಸಚಿವ ಎಂ.ಆರ್. ಸೀತಾರಾಮ್, ಪರಿಷತ್ ಮಾಜಿ ಸದಸ್ಯರಾದ ಎಂ.ಡಿ. ಲಕ್ಷ್ಮೀನಾರಾಯಣ, ಎಂ.ಸಿ. ವೇಣುಗೋಪಾಲ್, ತಿಪ್ಪಣ್ಣ ಕಮಕನೂರ ಅವರ ಹೆಸರು ಚಾಲ್ತಿಯಲ್ಲಿವೆ. ಅಲ್ಪಸಂಖ್ಯಾಕರ ಪಟ್ಟಿಯಲ್ಲಿ ಕೇಂದ್ರದ ಮಾಜಿ ಸಚಿವ ರಹಮಾನ್ ಖಾನ್ ಪುತ್ರ ಮನ್ಸೂರ್ ಅಲಿ ಖಾನ್, ವಿಧಾನ ಪರಿಷತ್ ಮಾಜಿ ಸದಸ್ಯ ಅಬ್ದುಲ್ ಜಬ್ಟಾರ್, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಶಫಿ ಅಹಮದ್, ಐವನ್ ಡಿ’ ಸೋಜಾ, ಮಾಜಿ ಕೇಂದ್ರ ಸಚಿವೆ ಮಾರ್ಗರೆಟ್ ಆಳ್ವ ಅವರ ಪುತ್ರ ನಿವೇದಿತ್ ಆಳ್ವ ಹಾಗೂ ದಿ| ಆಸ್ಕರ್ ಫೆರ್ನಾಂಡಿಸ್ ಅವರ ಪುತ್ರಿಯ ಹೆಸರು ಕೇಳಿ ಬರುತ್ತಿದೆ.
“ಅಪಾತ್ರ’ರಿಗೆ ಮಣೆ ಬೇಡ
2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಇರಾದೆ ಇಟ್ಟುಕೊಂಡಿರುವ, ಪಕ್ಷದಲ್ಲಿ ಎಲ್ಲವನ್ನೂ ಅನುಭವಿಸಿ ಅಧಿಕಾರಕ್ಕೆ ಇನ್ನೊಂದು ಪಕ್ಷಕ್ಕೆ ಹೋಗುವ ಅಪಾತ್ರರಿಗೆ ಟಿಕೆಟ್ ಕೊಡಬೇಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ಸಿ.ಎಂ. ಇಬ್ರಾಹಿಂ ಪಕ್ಷ ಬಿಟ್ಟಿದ್ದರಿಂದ ಅವರ ಅವಧಿ ಇನ್ನೂ ಒಂದೂವರೆ ವರ್ಷ ಇದ್ದರೂ ಪಕ್ಷಕ್ಕೆ ನಷ್ಟ ಆಗಿದೆ. ಈಗ ಪರಿಷತ್ತಿನಲ್ಲಿ ಗೆದ್ದು ಮುಂದೆ ವಿಧಾನಸಭೆಗೆ ಸ್ಪರ್ಧಿಸುವ ಮನಸ್ಸು ಇದ್ದವರಿಗೂ ಟಿಕೆಟ್ ಕೊಡಬೇಡಿ. ಯಾಕೆಂದರೆ ಆಗ ಆ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಟ್ಟಂತಾಗುತ್ತದೆ ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ಹೇಳಲಾಗಿದೆ.
ಜೆಡಿಎಸ್ ಲೆಕ್ಕಾಚಾರ
ಸಂಖ್ಯಾಬಲದ ಆಧಾರದಲ್ಲಿ ಜೆಡಿಎಸ್‌ಗೆ ಸಿಗುವುದು ಒಂದು ಸ್ಥಾನ ಮಾತ್ರ. ಅದಕ್ಕೆ ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದಾರೆ. ಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ, ಹಾಲಿ ಸದಸ್ಯರಾದ ರಮೇಶ್ ಗೌಡ, ನಾರಾಯಣ ಸ್ವಾಮಿ ನಡುವೆ ಪೈಪೋಟಿ ಇದೆ. ಜತೆಗೆ ಸಿ.ಎಂ ಇಬ್ರಾಹಿಂ ಕೂಡ ಒಲವು ವ್ಯಕ್ತಪಡಿಸಿದ್ದರು ಎನ್ನಲಾಗಿದ್ದು, ಎಚ್.ಡಿ. ದೇವೇಗೌಡರು “ಈಗ ಸುಮ್ಮನಿರಿ, ಮುಂದೆ ನೋಡೋಣ’ ಎಂದು ಹೇಳಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ಚಿತ್ರದುರ್ಗದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ಉದ್ಯಮಿ ಕೆ.ಸಿ. ವೀರೇಂದ್ರ ಪಪ್ಪಿ (ಹಿರಿಯ ನಟ ದೊಡ್ಡಣ ಅವರ ಅಳಿಯ)ಅವರು ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಲಿಂಗಾಯತ ಸಮುದಾಯದ ವೀರೇಂದ್ರರಿಗೆ ಟಿಕೆಟ್ ಕೊಟ್ಟರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಲಾಭವಾದೀತು ಎಂಬ ಲೆಕ್ಕಾಚಾರವೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.