17 ಟನ್ ಮಾರಾಟ: 15 ಲ.ರೂ. ವಹಿವಾಟು
ಮಾವು ಮೇಳಕ್ಕೆ ಭರ್ಜರಿ ಸ್ಪಂದನೆ
Team Udayavani, May 23, 2022, 12:08 PM IST
ಉಡುಪಿ: ಜಿಲ್ಲಾಡಳಿತ, ಜಿ. ಪಂ. ಹಾಗೂ ತೋಟಗಾರಿಕೆ ಇಲಾಖೆಯಿಂದ ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ಆಶ್ರಯದಲ್ಲಿ ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕೆ ತೋಟಗಾರಿಕೆ ಕ್ಷೇತ್ರದ ರೈತ ಸೇವಾ ಕೇಂದ್ರದ ಆವರಣದಲ್ಲಿ ಆಯೋಜಿಸಿದ ಮಾವು ಮೇಳಕ್ಕೆ ಎರಡನೆಯ ದಿನ ಉಡುಪಿ ನಾಗರಿಕರಿಂದ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ.
ಮಾವು ಮೇಳವನ್ನು ಮೇ 23ರವರೆಗೆ ಆಯೋಜಿಸಲಾಗಿದ್ದು, ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಗ್ರಾಕರು ವಿವಿಧ ತಳಿಯ ಮಾವಿನ ಹಣ್ಣಿನ ರುಚಿ ನೋಡಿ ಖರೀದಿಸಿದರು. ಒಟ್ಟಾರೆ ಶನಿವಾರ, ಭಾನುವಾರ ಮಧಾಹ್ನವರೆಗೆ 17 ಟನ್ ವರೆಗೂ ಮಾವು ಮಾರಾಟವಾಗಿದೆ. ಸರಾಸರಿ ಕೆಜಿಗೆ 70 ರಿಂದ 120 ರೂ. ಲೆಕ್ಕವಾದರೂ ಅಂದಾಜು 15ಲಕ್ಷ ರೂ., ಮಿಕ್ಕಿ ವಹಿವಾಟು ನಡೆದಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು. ಬೆಳೆಗಾರರು 30 ಟನ್ ಮಾವು ಮೇಳಕ್ಕೆ ತಂದಿದ್ದು, ರವಿವಾರವೂ ಎರಡು ಏಸ್ ಟೆಂಪೋಗಳಲ್ಲಿ ಮತ್ತೆ ಮಾವನ್ನು ತರಿಸಿಕೊಂಡಿದ್ದಾರೆ.
ಕೋಲಾರ ಬಳಿಕ ರಾಮ ನಗರ ರಾಜ್ಯದಲ್ಲಿ ಅತೀ ಹೆಚ್ಚು ಮಾವು ಬೆಳೆಯುವ ಎರಡನೇ ಸ್ಥಾನದಲ್ಲಿರುವ ಜಿಲ್ಲೆಯಾಗಿದೆ. ನೈಸರ್ಗಿಕವಾಗಿ ಮಾಗಿಸಿರುವ ವಿವಿಧ ಮಾವಿನ ತಳಿಯ ಹಣ್ಣುಗಳು ಇಲ್ಲಿ ಹೆಚ್ಚು ಪ್ರಸಿದ್ದಿ. ಬೆಳೆಗಾರರು ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ಸ್ಥಾಪಿಸಿಕೊಂಡು ಬೆಂಗಳೂರು, ಮೈಸೂರು ಭಾಗದಲ್ಲಿ ನಡೆಯುವ ಮಾವು ಮೇಳಕ್ಕೆ ಹೋಗಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಾರೆ. ಇದೀಗ ಉಡುಪಿಯಲ್ಲಿ ಮೊದಲ ಬಾರಿಗೆ ಮಾವು ಮೇಳ ಆಯೋಜನೆಯಾಗಿದ್ದು, ತೋಟಗಾರಿಕೆ, ಉಡುಪಿ ಜಿಲ್ಲಾಡಳಿತ ಮಾವು ಮಾರಾಟಕ್ಕೆ ಉತ್ತಮ ವೇದಿಕೆ ಮಾಡಿಕೊಟ್ಟಿದೆ. ಎಲ್ಲ ಬಗೆಯ ಹಣ್ಣುಗಳಿಗೂ ಬೇಡಿಕೆ ಇದ್ದು, ಅಲ್ಫೋನ್ಸ್, ಸಕ್ಕರೆ ಗುತ್ತಿ, ಮಲಗೋವ ಖಾಲಿಯಾಗಿದೆ. ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎನ್ನುತ್ತಾರೆ ಮಾವು ಬೆಳೆಗಾರ ರಾಮನಗರದ ಸಿದ್ದರಾಜು.
ಸಕ್ಕರೆಗುತ್ತಿ (ಶುಗರ್ ಬೇಬಿ) ಮೊದಲ ದಿನವೇ ಖಾಲಿ
ಮೇಳದಲ್ಲಿ ವಿಶೇಷ ಆಕರ್ಷಣೆಯಾಗಿದ್ದ ಸಕ್ಕರೆಗುತ್ತಿ ಮಾವು ಮೊದಲ ದಿನವೆ ಖಾಲಿಯಾಗಿತ್ತು. ತಿನ್ನಲು ರುಚಿ, ಸಾಂಬಾರ್ ಮಾಡಲು ಬಳಸುವ ಸಕ್ಕರೆ ಗುತ್ತಿ ಮಾವಿಗೆ ಬಹು ಬೇಡಿಕೆ ಇದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಗ್ರಾಕರು ಖರೀದಿಸಿದ್ದರು. ರಸಪುರಿ, ಅಲ್ಫೋನ್ಸ್, ಮಲಗೋವ, ಸಿಂಧೂರಕ್ಕೂ ಹೆಚ್ಚಿನ ಬೇಡಿಕೆ ಇದ್ದು ಬಹುತೇಕ ಮಳಿಗೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ತಳಿ ಮಾರಾಟವಾದವು.
ಮಾವು ಮೇಳಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಮೇಳದಲ್ಲಿ ಅಂದಾಜು 15 ಲಕ್ಷ ರೂ,ಗೂ ಅಧಿಕ ವಹಿವಾಟು ನಡೆದಿದೆ. ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ರಸಪುರಿ, ಅಲ್ಫೋನ್ಸ್, ಮಲಗೋವ ಹಣ್ಣುಗಳು ಹೆಚ್ಚಿನ ಬೇಡಿಕೆಯೊಂದಿಗೆ ಮಾರಾಟವಾದವು. – ನಿದೀಶ್ ಹೊಳ್ಳ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.