ಕರಾವಳಿಯಿಂದ ಮೊಳಗಿತ್ತು ಸ್ವಾತಂತ್ರ್ಯದ ಕಹಳೆ


Team Udayavani, May 27, 2022, 6:10 AM IST

ಕರಾವಳಿಯಿಂದ ಮೊಳಗಿತ್ತು ಸ್ವಾತಂತ್ರ್ಯದ ಕಹಳೆ

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರದಲ್ಲಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಾಜ್ಯದ 75 ಪ್ರಮುಖ ಐತಿಹಾಸಿಕ ಸ್ಥಳಗಳಲ್ಲಿ “ಅಮೃತ ಭಾರತಿಗೆ ಕನ್ನಡದಾರತಿ’ ಎಂಬ ದೇಶಭಕ್ತಿ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಇದರ ಮೊದಲ ಹಂತ ವೀರ ಸಾವರ್ಕರ್‌ ಅವರ ಜನ್ಮದಿನವಾದ ಮೇ 28ರಂದು ನಡೆಯಲಿದ್ದು ರಾಜ್ಯದ 45 ಸ್ಥಳಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಪೈಕಿ ಮಂಗಳೂರಿನ ನೆಹರೂ ಮೈದಾನ, ಉಳ್ಳಾಲ, ಅಮರ ಸುಳ್ಯ ಹಾಗೂ ಉಡುಪಿಯ ಅಜ್ಜರಕಾಡು ಮೈದಾನ ಮತ್ತು ಕುಂದಾಪುರದ ಬಸ್ರೂರು ಸೇರಿದೆ. ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ಈ ಸ್ಥಳಗಳಿಗಿರುವ ನಂಟನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸಿಕೊಡುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ  ಈ  5 ಸ್ಥಳಗಳ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

ಸ್ವಾತಂತ್ರ್ಯ ಹೋರಾಟದ ಪ್ರಧಾನ ತಾಣ “ನೆಹರೂ ಮೈದಾನ’

ಮಂಗಳೂರು: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಂಗಳೂರಿನ ನೆಹರೂ ಮೈದಾನ (ಆಗಿನ ಕೇಂದ್ರ ಮೈದಾನ) ಬಹುಮುಖ್ಯ ಪಾತ್ರ ವಹಿಸಿದೆ. ಬ್ರಿಟಿಷರ ವಿರುದ್ಧ ರ್ಯಾಲಿ, ಹೋರಾಟ, ಪ್ರತಿಭಟನೆ ಎಲ್ಲವೂ ಮಂಗಳೂರಿನ ಈಗಿನ ನೆಹರೂ ಮೈದಾನದಲ್ಲಿಯೇ ರೂಪಿತವಾಗಿತ್ತು. ಸ್ವಾತಂತ್ರ್ಯ ಪಡೆಯುವ ಹುಮ್ಮಸ್ಸಿನಿಂದ ಕರಾವಳಿ ಭಾಗದಲ್ಲಿ ನಡೆಯುತ್ತಿದ್ದ ದೊಡ್ಡ ಮಟ್ಟದ ಹೋರಾಟಕ್ಕೆ ಈ ಮೈದಾನ ಪ್ರಮುಖ ತಾಣವಾಗಿತ್ತು.

ಬ್ರಿಟಿಷರ ಕಾಲದಲ್ಲಿ ಪೊಲೀಸರ ಕವಾಯತಿಗಾಗಿ ಈ ಮೈದಾನ ಬಳಕೆಯಾಗುತ್ತಿತ್ತು. ಈ ಮೈದಾನ ಖಾಸಗಿ ಕುಟುಂಬವೊಂದರ ಕೊಡುಗೆ. ಬಳಿಕ ಇದು ಈ ಭಾಗದ ಸ್ವಾತಂತ್ರ್ಯ ಚಳವಳಿಗೆ ಮುಖ್ಯ ನೆಲೆಯಾಗಿತ್ತು. 1920ರಲ್ಲಿ ಮಹಾತ್ಮಾ ಗಾಂಧೀಜಿಯವರು ಅಸಹಕಾರ ಚಳವಳಿಯನ್ನು ಪ್ರಾರಂಭಿಸಿದರು. ಇದಕ್ಕಾಗಿ ಗಾಂಧೀಜಿಯವರು ರಾಷ್ಟ್ರವ್ಯಾಪಿ ಪ್ರವಾಸ ಕೈಗೊಂಡರು. ಈ ಪ್ರವಾಸ “ಖೀಲಾಫತ್‌ ಪ್ರವಾಸ’ ಎಂದೇ ಜನಪ್ರಿಯ. ಈ ಪ್ರವಾಸದ ಭಾಗವಾಗಿ ಗಾಂಧೀಜಿ ಯವರು ರೈಲಿನಲ್ಲಿ ಮಂಗಳೂರಿಗೆ ಭೇಟಿಯಿತ್ತರು. 1920 ಆ.12ರಂದು ಕೇಂದ್ರ ಮೈದಾನದಲ್ಲಿ ಸರಿಸುಮಾರು 10 ಸಾವಿರ ಮಂದಿಯನ್ನು ಉದ್ದೇಶಿಸಿ ಅವರು ಮಾತನಾಡಿದ್ದರು. ಬಳಿಕ 1934ರಲ್ಲಿಯೂ ಗಾಂಧೀಜಿಯವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಇಲ್ಲಿ ಮಾತನಾಡಿದ್ದರು. 1932ರಲ್ಲಿ ಜವಾಹರ್‌ಲಾಲ್‌ ನೆಹರೂ ಅವರು ಮೈದಾನದಲ್ಲಿ ಭಾಷಣ ಮಾಡಿದ್ದರು. ಈ ಮಧ್ಯೆ, ದೇಶಾದ್ಯಂತ ನಡೆದ ಉಪ್ಪಿನ ಸತ್ಯಾಗ್ರಹ ಚಳವಳಿಯು ಮಂಗಳೂರಿನ ನೆಹರೂ ಮೈದಾನದಲ್ಲಿ ಬಹುವಿಕೋಪಕ್ಕೆ ತಿರುಗಿತ್ತು. ಪ್ರತಿಭಟನಕಾರರು ಉಪ್ಪು ಸಿದ್ಧಪಡಿಸಿ ನೆಹರೂ ಮೈದಾನದಲ್ಲಿ ಮಾರಿದ್ದರು. ಅದರಿಂದ ಬೆದರಿದ ಬ್ರಿಟಿಷ್‌ ಅಧಿಕಾರಿಗಳು ಲಾಠೀ ಚಾರ್ಜ್‌ ಮಾಡಿದ್ದರು. ಬ್ರಿಟಿಷರ ಲಾಠಿ ಏಟಿನಿಂದ ಕರಾವಳಿ ಭಾಗದ ಹಲವಾರು ಮಂದಿಯ ತಲೆಗೆ ಭಾರೀ ಗಾಯಗಳಾಗಿತ್ತು.

ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ. ಅಧಿಕಾರಿ ಅವರ ತಲೆಗೂ ಮಾರಣಾಂತಿಕ ಪೆಟ್ಟಾಗಿತ್ತು. ಸ್ವಾತಂತ್ರ್ಯದ ಬಳಿಕ 1951ರಲ್ಲಿ ಮಂಗಳೂರಿಗೆ ಭೇಟಿ ನೀಡಿದ್ದ ಜವಾಹರ್‌ ಲಾಲ್‌ ನೆಹರೂ ಅವರು ಮೈದಾನದಲ್ಲಿ ಕ್ರಿಕೆಟ್‌ ಪೆವಿಲಿಯನ್‌ ಉದ್ಘಾಟಿಸಿದ್ದರು. ಆ ಬಳಿಕ ಈ ಮೈದಾನಕ್ಕೆ “ನೆಹರೂ ಮೈದಾನ’ವೆಂಬ ಹೆಸರಿಡಲಾಗಿತ್ತು.

ಸ್ವದೇಶಿ-ಸ್ವಾತಂತ್ರ್ಯ ಚಳವಳಿಯ ಕೇಂದ್ರ ಅಜ್ಜರಕಾಡು

ಉಡುಪಿ: ಸ್ವಾತಂತ್ರ್ಯ ಹೋರಾಟಗಳಲ್ಲಿ ಉಡುಪಿಯ ರಥಬೀದಿ ಮತ್ತು ಅಜ್ಜರಕಾಡು ಪ್ರದೇಶಕ್ಕೆ ಬಹಳ ಮಹತ್ವವಿದೆ. ಮೆರವಣಿಗೆ ಹೊರಡುವುದು ರಥಬೀದಿಯಲ್ಲಾದರೆ ಕೊನೆಗೊಳ್ಳುವುದು ಅಜ್ಜರಕಾಡಿನಲ್ಲಿ.

ಅಜ್ಜರಕಾಡಿನಲ್ಲಿ ಈಗ ಕಂಡುಬರುವ ಬಂಡೆಗಳೇ ಸ್ವಾತಂತ್ರ್ಯ ಹೋರಾಟದ ಸಾಕ್ಷಿಗಳು. ಇಲ್ಲಿ 1919ರ ಸುಮಾರಿಗೆ ಸ್ವಾತಂತ್ರ್ಯಪ್ರಿಯರು ಬಂಡೆಗಳ ಮೇಲೆ ಕುಳಿತು ಸಮಾಲೋಚನೆ, ಚಿಂತನೆ ನಡೆಸಿದ್ದರು. ಬಂಡೆಗಳು ಎತ್ತರದ ಪ್ರದೇಶದಲ್ಲಿರುವುದು, ಅದು ವೇದಿಕೆಯಾದರೆ ಮುಂದೆ ವಿಶಾಲ ಭೂ ಪ್ರದೇಶವಿರುವುದು, ಉಡುಪಿ ಪೇಟೆಯಿಂದ ಸ್ವಲ್ಪ ದೂರದಲ್ಲಿರುವುದು, ಕಾಡು ಪ್ರದೇಶವಾದ ಕಾರಣ ಬ್ರಿಟಿಷ್‌ ಪೊಲೀಸರು ಕಾರ್ಯಾಚರಣೆ ನಡೆಸಿದರೂ ತಪ್ಪಿಸಿಕೊಳ್ಳಲು ಅವಕಾಶಗಳಿರುವುದು ಈ ಜಾಗದ ಆಯ್ಕೆಗೆ ಕಾರಣಗಳಿರಬಹುದು.

ಮುಂಬಯಿಯಲ್ಲಿದ್ದ ವೈದ್ಯ ಆರ್‌.ಎಸ್‌. ಶೆಣೈಯವರು ಉಡುಪಿಗೆ ಬಂದು ಸ್ವದೇಶಿ ಚಳವಳಿ ಕುರಿತು ಮಾತನಾಡಿದ್ದರು. ಇವರಿಗೆ ಜತೆಯಾದವರು ಮಡಿಕೇರಿಯಿಂದ ಬಂದ ಸತ್ಯಮಿತ್ರ ಬಂಗೇರ. ಇದು ಸುಮಾರು 1920ರ ಅವಧಿ. ಇದುವೇ ಸ್ವಾತಂತ್ರ್ಯ ಚಳವಳಿಯ ಮೊದಲ ಹಂತ ಎಂದು ತಿಳಿದುಬರುತ್ತದೆ. ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ (1919) ನಡೆದು ಒಂದು ವರ್ಷದ ಬಳಿಕ ಅದರ ಕಿಚ್ಚು ಇಲ್ಲಿ ಹರಡಿತು. ವಿದ್ಯಾರ್ಥಿಗಳು ತರಗತಿಗಳನ್ನು, ನ್ಯಾಯವಾದಿಗಳು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿದರು. ಕುಬೇರ ಪಾಂಡುರಂಗ ರಾವ್‌ ಎಂಬ ಪ್ರಸಿದ್ಧ ವಕೀಲರು ವಕೀಲಿ ವೃತ್ತಿಯ ಕಾಗದಪತ್ರ ಹರಿದು ಹಾಕಿ ಚಳವಳಿಗೆ ನಾಂದಿ ಹಾಡಿದರು.

1921ರ ಬಳಿಕ ಮಣಿಪಾಲದ ಪೈ ಕುಟುಂಬದ ತೋನ್ಸೆ ಮುಕುಂದ ಪೈಯವರ ಮನೆ “ಮುಕುಂದ ನಿವಾಸ’ದಲ್ಲಿ ನಾಯಕರು ಸಭೆ ಸೇರುತ್ತಿದ್ದರು. ಉಡುಪಿಯಲ್ಲಿದ್ದ ಸ್ವದೇಶಿ ಚಳವಳಿ ತೀವ್ರಗೊಂಡು ಕುಂದಾಪುರ, ಕಾರ್ಕಳಕ್ಕೂ ವಿಸ್ತರಿಸಿತು. 1930ರಲ್ಲಿ ಉಪ್ಪಿನ ಸತ್ಯಾಗ್ರಹವು ಅಜ್ಜರಕಾಡಿನಿಂದ ಮೆರವಣಿಗೆ ಹೊರಟು ರಥಬೀದಿಯ ಮೂಲಕ ಮಲ್ಪೆಗೆ ಹೋಗಿ ವಡಭಾಂಡೇಶ್ವರದಲ್ಲಿ ಸಂಪನ್ನಗೊಂಡಿತು. 1934ರ ಫೆ. 25ರಂದು ಗಾಂಧೀಜಿಯವರು ಅಜ್ಜರಕಾಡಿಗೆ ಬಂದು ಭಾರೀ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ್ದರು. 1942ರ ಕ್ವಿಟ್‌ ಇಂಡಿಯಾ ಚಳವಳಿ ಅಜ್ಜರಕಾಡಿನಲ್ಲಿ ನಡೆದು ವಿದೇಶೀ ಬಟ್ಟೆಗಳನ್ನು ಅಜ್ಜರಕಾಡಿನಲ್ಲಿ ಬಹಿರಂಗವಾಗಿ ಸುಟ್ಟು ಹಾಕಿ ಜನರು ಪ್ರತಿಭಟನೆ ನಡೆಸಿದರು. 1947ರಲ್ಲಿ ಶ್ರೀಕೃಷ್ಣಮಠ ಸಹಿತ ಉಡುಪಿ ನಗರಾದ್ಯಂತ ಮಠ ಮಂದಿರಗಳಲ್ಲಿ, ಶಾಲೆ, ಕಚೇರಿಗಳಲ್ಲಿ ಸ್ವಾತಂತ್ರ್ಯ ದಿನೋತ್ಸವ ವನ್ನು ಆ. 14ರ ರಾತ್ರಿಯಿಂದ ಮರುದಿನ ರಾತ್ರಿ ವರೆಗೆ ಸಂಭ್ರಮದಿಂದ ಆಚರಿಸಲಾಗಿತ್ತು.

ಆ. 15ರ ಬೆಳಗ್ಗೆ ಶ್ರೀಕೃಷ್ಣಮಠದಿಂದ ಪ್ರಭಾತ್‌ ಫೇರಿ ಹೊರಟು ಅಜ್ಜರಕಾಡು ಮೈದಾನದಲ್ಲಿ ಸಮಾಪನಗೊಂಡಿತು.

ತುಳುನಾಡ ವೀರವನಿತೆ ಉಳ್ಳಾಲದ ರಾಣಿ ಅಬ್ಬಕ್ಕ

ಉಳ್ಳಾಲ: ರಾಜ್ಯದ ಮಂಗಳೂರು ಭಾಗದಲ್ಲಿ ಉಳ್ಳಾಲವನ್ನು ಕೇಂದ್ರೀಕರಿಸಿ ಕೊಂಡು ನಡೆದ ಹೋರಾಟ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಸ್ಮರಣಾರ್ಹ ವಾದುದು. ಪರಕೀಯರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ರುವ ಹೆಸರು ವೀರರಾಣಿ ಅಬ್ಬಕ್ಕಳದ್ದು.

ಭಾರತದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದ ವೀರರಾಣಿ ಅಬ್ಬಕ್ಕ ತುಳುನಾಡಿನ ವೀರ ವನಿತೆ. ಉಳ್ಳಾಲ ವನ್ನು ಆಳಿದ  ಚೌಟ ರಾಣಿ ಅಬ್ಬಕ್ಕ ಮಂಗಳೂರಿನ ಬಂಗರಸ ನನ್ನು ವಿವಾಹವಾಗಿದ್ದರು.

ಸಾಗರ ಮಾರ್ಗದಲ್ಲಿ ವ್ಯಾಪಾರ- ವಹಿವಾಟು ನಡೆಯುತ್ತಿದ್ದ ಸಂದರ್ಭ ದಲ್ಲಿ ವ್ಯಾಪಾರದ ಉದ್ದೇಶದಿಂದ ಪಶ್ಚಿಮ ಕರಾವಳಿಗೆ ಬಂದಿದ್ದ ಪೋರ್ಚು ಗೀಸರು ಇಲ್ಲಿನ ನೆಲದ ಮೇಲೆ ಹಕ್ಕು ಸ್ಥಾಪಿಸಲೆತ್ನಿಸಿದಾಗ ಅವರ ವಿರುದ್ಧ ಸಡ್ಡು ಹೊಡೆದು ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿದವಳು ವೀರರಾಣಿ ಅಬ್ಬಕ್ಕ. ಇಲ್ಲಿನ ಹಿಂದೂ-ಮುಸ್ಲಿಂ ಕಟ್ಟಾಳುಗಳ ಬೆಂಬಲದೊಂದಿಗೆ  ದೇಶಾಭಿಮಾನ, ಸಾಮರಸ್ಯದ ಪತಾಕೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಳು.

ಇನ್ನು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಉಳ್ಳಾಲದ ಸುತ್ತಮುತ್ತಲಿನ ಪ್ರದೇಶದಲ್ಲಿ ಅನೇಕ ಮಹನೀಯರು ತೊಡಗಿಸಿಕೊಂಡಿದ್ದರು.  ಉಳ್ಳಾಲ ಶ್ರೀನಿವಾಸ ಮಲ್ಯ ಅವರು, ಕಾರ್ನಾಡು ಸದಾಶಿವರಾಯರ ಮುಂದಾಳತ್ವದಲ್ಲಿ ಮಂಗಳೂರು ಪ್ರಾಂತದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯಲ್ಲಿ ತನ್ನ 18ನೇ ವಯಸ್ಸಿನಲ್ಲೇ ಶಿಕ್ಷಣ ಮೊಟಕುಗೊಳಿಸಿ ಹೋರಾಟಕ್ಕಿಳಿದಿದ್ದರು. ಸ್ವಾತಂತ್ರ್ಯಾ ನಂತರ 18 ವರ್ಷಗಳ ಕಾಲ ಸಂಸದ ರಾಗಿದ್ದ ಇವರು ಆಧುನಿಕ ಕೆನರಾ ಪ್ರಾಂತದ ಹರಿಕಾರರು ಎನ್ನಿಕೊಂಡಿ ದ್ದರು. ಇವರೊಂದಿಗೆ ಅಂದಿನ ಕಾಲ ದಲ್ಲಿ ಉಳ್ಳಾಲ ಮಂಗೇಶರಾಯರು ಸಾಹಿತ್ಯದ ಮೂಲಕ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. ಕರುಣಾಕರ ಉಚ್ಚಿಲ್‌, ನಾರಾಯಣ ಉಚ್ಚಿಲ್‌ ಸಹೋದರರು ಮುಂಬಯಿ ಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗ ವಹಿಸಿರುವ ದಾಖಲೆಗಳಿವೆ.

ಅಮರ ಸುಳ್ಯ ರೈತ ದಂಗೆ

ಪುತ್ತೂರು: 1837 ಮಾರ್ಚ್‌ 3 ರಂದು ಪ್ರಾರಂಭಗೊಂಡ ರೈತರೇ ಒಗ್ಗೂಡಿ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದೇ ಕರೆಯಲ್ಪಡುವ ಅಮರ ಸುಳ್ಯ ರೈತ ದಂಗೆ ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾದಂತಹ ಹೋರಾಟ.

ಅಮರ ಸುಳ್ಯದ ಪೂಮಲೆ ಕೆದಂಬಾಡಿಯಲ್ಲಿ ರಾಮಯ್ಯ ಗೌಡ ಎಂಬ ರೈತ ಕಂದಾಯ ಕಟ್ಟಲಾಗದೆ ಭೂರಹಿತ ಕಾರ್ಮಿಕರಾದ ಸುಮಾರು 1,200 ರೈತ ರನ್ನು ಒಗ್ಗೂಡಿಸಿ ತಂಡ ಕಟ್ಟಿದ್ದ. ಚಿಕ್ಕವೀರ ರಾಜೇಂದ್ರನ ಸುಬೇ ದಾರರುಗಳಾಗಿದ್ದ ಗುಡ್ಡೆ ಮನೆ ಅಪ್ಪಯ್ಯ ಮತ್ತು ತಮ್ಮಯ್ಯ ಹಾಗೂ ಚೆಟ್ಟಿ ಕುಡಿಯ ಮತ್ತು ಕರ್ತು ಕುಡಿಯರಿಂದ ರೈತ ದಂಡಿಗೆ ಶಸ್ತ್ರಾಸ್ತ್ರ ಶಿಕ್ಷಣ ಕೊಡಿಸಿ ಬ್ರಿಟಿಷರನ್ನು ದಕ್ಷಿಣ ಹಿಂದೂಸ್ಥಾನದಿಂದ ಓಡಿಸುವ ಪಣ ತೊಟ್ಟು ಯೋಜನೆ ರೂಪಿಸಿದರು.

ಕ್ರಿ.ಶ. 1837ರ ಮಾರ್ಚ್‌ 30ರಂದು ಕೆದಂಬಾಡಿ ಯಿಂದ ಹೊರಟ ರೈತ ದಂಡು ಅಮರ ಸುಳ್ಯದ ರಾಜಧಾನಿ ಬೆಳ್ಳಾರೆಯ ಬಂಗ್ಲೆ ಗುಡ್ಡೆಯ ಖಜಾನೆ ಯನ್ನು ವಶಪಡಿಸಿಕೊಂಡಿತು. ಮರುದಿನ ಪುತ್ತೂರಲ್ಲಿ ಆಗಿನ ಕಲೆಕ್ಟರ್‌ ಲೂವಿನ್‌ ಮೇಜರ್‌ ಡೌಕರ್‌ ತನ್ನ 150 ಸೈನಿಕರೊಡನೆ ರೈತ ದಂಡಿಗೆ ಎದುರಾದ. ಈ ಸಂಘರ್ಷದಲ್ಲಿ ನಾಲ್ವರು ರೈತರು ಹುತಾತ್ಮರಾದರು. ಆದರೆ 1,200 ರೈತರನ್ನು ಎದುರಿಸಲಾಗದೆ ಲೂವಿನ್‌ನ ದಂಡು ಸ್ಥಳದಿಂದ ಪಲಾಯನ ಮಾಡಿತು. ಎಪ್ರಿಲ್‌ 5 ರಂದು ರೈತ ದಂಡು ಮಂಗಳೂರನ್ನು ತಲುಪಿ ಬಾವುಟ ಗುಡ್ಡೆಯಲ್ಲಿ ಹಾಲೇರಿ ರಾಜರ ವಿಜಯ ಧ್ವಜ ವನ್ನು ಹಾರಿಸಿ ದಕ್ಷಿಣ ಕನ್ನಡ ಜಿಲ್ಲೆ ಸ್ವತಂತ್ರವಾಯಿತೆಂದು ಘೋಷಿಸಿತು. ಎರಡು ವಾರ ಜಿಲ್ಲೆಯ ಆಡಳಿತ ನಡೆಸಿತು. ಆದರೆ ಎಪ್ರಿಲ್‌ 19ರಂದು ಮುಂಬಯಿ ಮತ್ತು ತಲಶೆರಿಯಿಂದ ಬಂದ ಬ್ರಿಟಿಷ್‌ ಪಡೆಯನ್ನು ಎದುರಿಸಲಾಗದೆ ರೈತ ದಂಡು ಪಲಾಯನ ಮಾಡಿತು. ದಂಡಿನ ನಾಯಕರಾದ ಲಕ್ಷ್ಮಪ್ಪ ಬಂಗರಸ, ಪುಟ್ಟ ಬಸವ ಮತ್ತು ಗುಡ್ಡೆಮನೆ ಅಪ್ಪಯ್ಯರನ್ನು ನೇಣಿಗೇರಿಸಲಾಯಿತು. ಕೆದಂಬಾಡಿ ರಾಮಯ್ಯ ಗೌಡ ಮೊದಲಾದವರು ಬ್ರಿಟಿಷರಿಂದ ತೀವ್ರ ಹಿಂಸೆಗೆ ಒಳಗಾಗಿ ಕಡಲಾಚೆಗೆ ಅಂತ್ಯ ಕಂಡರು.

ಬಸ್ರೂರಿನಲ್ಲಿ ವಿಜಯ ಪತಾಕೆ ಹಾರಿಸಿದ್ದ  ಶಿವಾಜಿ

ಕುಂದಾಪುರ: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕರಾವಳಿಯ ಸ್ಥಳಗಳ ಪೈಕಿ ಬಸರೂರು, ವಸುಪುರ, ವಾಣಿಜ್ಯ ನಗರಿ, ಬಂದರು ನಗರಿ ಅಂತೆಲ್ಲ ಕರೆಯಲ್ಪಡುವ ಬಸ್ರೂರಿನ ಪಾತ್ರ ಪ್ರಮುಖವಾಗಿತ್ತು.  ಕ್ರಿ.ಶ. 12ನೇ ಶತಮಾನ ದಲ್ಲಿ ವೈಭವದ ಪಟ್ಟಣದಂತಿದ್ದ ಬಸ್ರೂರು ಬೃಹತ್‌ ಸಂಪದ್ಭರಿತವಾದ ಪ್ರದೇಶವಾಗಿತ್ತು ಎನ್ನುವು ದರಲ್ಲಿ ಎರಡು ಮಾತಿಲ್ಲ.

ಆಳುಪ, ವಿಜಯನಗರ, ಕೆಳದಿಯಂತಹ ರಾಜ ಮನೆತನದವರ ಆಳ್ವಿಕೆಯ ಕಾಲದಲ್ಲಿ ಗತ ವೈಭವವನ್ನು ಕಂಡಂತಹ ಬಸ್ರೂರು, 1525ರಲ್ಲಿ ಪೋರ್ಚುಗೀಸರು, ಡಚ್ಚರಿಂದ ಆರಂಭಗೊಂಡು 1947ರ ವರೆಗೆ ಬ್ರಿಟಿಷ್‌ ಸಹಿತ ಅನೇಕ ಪರಕೀಯರ ದಾಳಿಗೆ ತುತ್ತಾಗಿ ವ್ಯಾಪಾರ, ವಹಿವಾಟು, ಆರ್ಥಿಕ ವ್ಯವಹಾರ ಕ್ಷೀಣಿಸಿತ್ತು. ಜತೆಗೆ ಇಲ್ಲಿನ ಸಾಂಸ್ಕೃತಿಕ ವೈಭವವೂ ಮಸುಕಾಗಿತ್ತು. 1665ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಪೋರ್ಚುಗೀಸರ ವಿರುದ್ಧ ನೌಕಾಯಾನ ಕೈಗೊಂಡು ಅದೇ ವರ್ಷದ ಫೆ.13 ರಂದು ಮೊದಲ ವಿಜಯದ ಪತಾಕೆ ಹಾರಿಸಿದ್ದು ಉಲ್ಲೇಖನೀಯವಾಗಿದ್ದು, ಕಳೆದ 9 ವರ್ಷಗಳಿಂದ ಆ ದಿನವನ್ನು “ಬಸ್ರೂರು ಸ್ವಾತಂತ್ರ್ಯ ದಿನ’ವನ್ನಾಗಿ ಆಚರಿಸಲಾಗುತ್ತಿದೆ.

ಕಲೆಕ್ಟರ್‌ ಕಚೇರಿ ಬಸ್ರೂರಿನಲ್ಲಿತ್ತು…

1799ರಲ್ಲಿ ಮದ್ರಾಸ್‌ ಪ್ರಾಂತಕ್ಕೆ ಸೇರಿದ ದ.ಕ. ಜಿಲ್ಲೆಯಲ್ಲಿ ಬ್ರಿಟಿಷ್‌ ಪದ್ಧತಿ ಜಾರಿಗೆ ಬಂದಾಗ ಸರ್‌ ಥಾಮಸ್‌ ಮನ್ರೊà ಮೊದಲ ಕಲೆಕ್ಟರ್‌ ಆಗಿದ್ದು, ಆತನ ಬಂಗಲೆ (ಕಲೆಕ್ಟರ್‌ ಕಚೇರಿ) ಇದ್ದುದು ಬಸ್ರೂರಲ್ಲಿ. ಈಗಲ್ಲಿ ನಿವೇದಿತಾ ಪ್ರೌಢಶಾಲೆಯಿದೆ. ಈ ಸ್ಥಳವನ್ನು ಈಗಲೂ ಕಚೇರಿಗುಡ್ಡ ಅಂತ ಕರೆಯುತ್ತಾರೆ. ಜಿಲ್ಲೆಯ ಉತ್ತರ ಭಾಗದ ಕಂದಾಯ ವಸೂಲಿ, ಆಡಳಿತವನ್ನೆಲ್ಲ ಥಾಮಸ್‌ ಇಲ್ಲಿಂದಲೇ ನಡೆಸುತ್ತಿದ್ದ.

ಕಾಲಕ್ರಮೇಣ ಬಸ್ರೂರಿನ ಮಹತ್ವ ಕಡಿಮೆಯಾಗಿ, ಕುಂದಾಪುರ ಪ್ರದೇಶ ಪ್ರಮುಖ ನಗರವಾಗಿ ಬೆಳೆಯಿತು. 1929ರಲ್ಲಿ ಕುಂದಾಪುರದ ನರಿ ಬೇಣದ (ಈಗಿನ ಗಾಂಧಿ ಮೈದಾನ) ಎಂಬಲ್ಲಿ ಸಾರ್ವಜನಿಕ ಸಭೆಯ ಮೂಲಕ ಹೋರಾಟ ಮೊದಲ್ಗೊಂಡಿತು. ಗಾಂಧೀಜಿಯವರ ಪ್ರೇರಣೆಯಿಂದ 1930ರ ಉಪ್ಪಿನ ಸತ್ಯಾಗ್ರಹದಲ್ಲಿ ಬಸ್ರೂರಿನ ಉತ್ಸಾಹಿ ಯುವಕರಾದ ಶುಂಠಿ ರಾಮ ಪ್ರಭು, ಗಾಂಧಿ ರಾಮಣ್ಣ ಶೆಟ್ಟಿ, ರಾಮದಾಸ ಪಡಿಯಾರ್‌, ಸೂರಪ್ಪ ಶೆಟ್ಟಿ, ಸುಬ್ಬಣ್ಣ ಶೆಟ್ಟಿ, ಸದಾಶಿವ ದೇವಾಡಿಗ, ಕಳಿಂಜೆ ರಾಮಕೃಷ್ಣ, ಗೋಪಾಲ ಕೃಷ್ಣ ಶೆಣೈ ಸಹಿತ ಅನೇಕರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.