![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 2, 2022, 2:34 PM IST
ವಾಡಿ: ಜಾತಿ ಸ್ವಾಭಿಮಾನವೋ ಅಥವಾ ಕರಳು ಬಳ್ಳಿಯ ವ್ಯಾಮೋಹವೋ ತಲೆಗಳು ಮಾತ್ರ ಉರುಳುತ್ತಿವೆ. ಸಂಶಯದ ಪಿಶಾಚಿಯೋ, ಸಂಗ ದೋಷದ ಫಲವೋ ಒಟ್ಟಾರೆ ಕೊಲೆಗಳಾಗುತ್ತಿವೆ. ನೈತಿಕವೋ, ಅನೈತಿಕವೋ ಕತ್ತಿ ಗುರಾಣಿಗಳಿಗೆ ಅಮಾಯಕರು ಬೀದಿ ಹೆಣವಾಗುತ್ತಿದ್ದಾರೆ!
ಹೌದು, ಕಲಬುರಗಿಯ ಭೀಮಾತೀರದ ರಕ್ತ ರಂಜಿತ ಇತಿಹಾಸ ಇನ್ನೂ ಹಸಿಯಾಗಿರುವಾಗಲೇ ಚಿತ್ತಾಪುರದ ಕಾಗಿಣಾ ತೀರದಲ್ಲಿ ಮಚ್ಚು ಲಾಂಗುಗಳು ಸದ್ದು ಮಾಡುತ್ತಿವೆ. ತೀರಾ ಸರಳ ಎನ್ನುವಂತೆ ನಿರ್ಭಯವಾಗಿ ಹಾಡಹಗಲೇ ಕೊಲೆ ಘಟನೆಗಳು ನಡೆದು ಹೋಗುತ್ತಿವೆ.
ರಾವೂರ-ಚಿತ್ತಾಪುರ ಹಾಗೂ ರಾವೂರ-ವಾಡಿ ರಾಷ್ಟ್ರೀಯ ಹೆದ್ದಾರಿ ಮಾತ್ರ ರಕ್ತಾಭಿಷೇಕದಿಂದ ನಲುಗುತ್ತಿದೆ. ಬಂದೂಕಿನ ಗುಂಡು ಹಾರಿಸಿ ಸಾಯಿಸುವಷ್ಟರಮಟ್ಟಿಗೆ ಮುಂದು ಹೋಗಿರುವ ಯುವ ಮನಸ್ಸುಗಳು ದ್ವೇಷದ ಕುಲುಮೆಯಲ್ಲಿ ಕೊಥ ಕೊಥ ಕುದಿಯುತ್ತಿವೆ. ಹೊಟ್ಟೆಗೆ ಚಾಕು ಚೂರಿ ಇರಿಯಲು ಹಿಂದೆ ಮುಂದೆ ಯೋಚಿಸದ ಕೊಲೆ ಪಾತಕಿಗಳು ಕ್ರೌರ್ಯ ಮೆರೆಯುತ್ತಿದ್ದಾರೆ. ಹಿಂಸಾತ್ಮಕ ಶಕ್ತಿಗಳು ಅಮಾಯಕರ ರಕ್ತದ ಕೋಡಿ ಹರಿಸಿ ಮರಣ ಮೃದಂಗ ಭಾರಿಸುತ್ತಿರುವುದು ಚಿತ್ತಾಪುರ ನಗರ ಹಾಗೂ ವಾಡಿ ಪಟ್ಟಣಗಳು ಅಕ್ಷರಶಃ ತಲ್ಲಣಿಸುವಂತೆ ಮಾಡಿದೆ.
ಚಿತ್ತಾಪುರ ತಾಲೂಕು ವ್ಯಾಪ್ತಿಯಲ್ಲಿ ಕಳೆದೆರಡು ವರ್ಷಗಳಿಂದ ವಿವಿಧ ಕಾರಣಗಳಿಗಾಗಿ ಸರಣಿ ಕೊಲೆ ಘಟನೆಗಳು ನಡೆದಿವೆ. ಹತ್ತಾರು ಕೊಲೆ ಪ್ರಕರಣಗಳು ವಾಡಿ-ಚಿತ್ತಾಪುರ ಠಾಣೆಗಳಲ್ಲಿ ದಾಖಲಾಗಿವೆ. ಕೊಲೆಗಡುಕರು ಕೊಲೆಗೆ ಸಹಕರಿಸಿದವರು ಜೈಲಿನ ಕಂಬಿ ಎಣಿಸುತ್ತಿದ್ದಾರೆ. ವಾಡಿ, ರಾವೂರ, ಚಿತ್ತಾಪುರ, ಕುಂಬಾರಹಳ್ಳಿ, ನಾಲವಾರ ವಲಯಗಳು ಕೊಲೆಗಳ ತಾಣವಾಗಿ ಪರಿವರ್ತನೆಯಾಗುತ್ತಿವೆ.
ಸಿಮೆಂಟ್ ನಗರಿ ವಾಡಿ ಪಟ್ಟಣದ ಹೃದಯ ಭಾಗವಾದ ಅಂಬೇಡ್ಕರ್ ವೃತ್ತದ ಬಾಡಿಗೆ ಮನೆಯೊಂದರಲ್ಲಿ ಪಕ್ಕದ ಬಾಡಿಗೆ ಮನೆಯ ಅವಿವಾಹಿತ ಗೆಳೆಯನೇ ಹಣದಾಸೆಗಾಗಿ ಅವಿವಾಹಿತ ರೈಲ್ವೆ ನೌಕರನೊಬ್ಬನ ಕತ್ತು ಕೋಯ್ದು ಹೆಣವನ್ನು ಹಾಸಿಗೆಯಲ್ಲಿ ಸುತ್ತಿಟ್ಟು ಪರಾರಿಯಾಗಿದ್ದ. ಕುಂಬಾರಹಳ್ಳಿಯ ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಕೊಂದು ಕಲ್ಲು ಮಣ್ಣುಗಳ ಮಧ್ಯೆ ಮುಚ್ಚಿಟ್ಟು ಶವ ಕೊಳೆಯವಂತೆ ನೋಡಿಕೊಂಡಿದ್ದ ಅಫಜಲಪುರ ಮೂಲದ ಪಾತಕಿಗಳು ಕೊನೆಗೂ ಪೊಲೀಸರ ಬಲೆಗೆ ಬಿದ್ದರು. ಗಾಂಜಾ ಮಾರಾಟ ವಿಚಾರವಾಗಿ ದ್ವೇಷ ಬೆಳೆದು ಚಿತ್ತಾಪುರದಲ್ಲಿ ಯುವಕನೊಬ್ಬನ ಕೊಲೆಯಾಯಿತು.
ಇದನ್ನೂ ಓದಿ:ಐಪಿಎಸ್ ಅಧಿಕಾರಿ ರೂಪಾ ಸಣ್ಣ ಮಟ್ಟಕ್ಕೆ ಇಳಿದಿದ್ದಾರೆ: ಬೇಳೂರು ರಾಘವೇಂದ್ರ ಶೆಟ್ಟಿ
ಚಿತ್ತಾಪುರದಲ್ಲೇ ವ್ಯಕ್ತಿಯೊಬ್ಬ ಕತ್ತಿ ಬೀಸಿ ಹೆಂಡತಿ, ಮಗುವನ್ನು ರಕ್ತದ ಮಡುವಿನಲ್ಲಿ ಮಲಗಿಸಿದ್ದ ಹೃದಯ ವಿದ್ರಾವಕ ಘಟನೆ ಇಡೀ ಜಿಲ್ಲೆಯನ್ನೇ ನಡುಗಿಸಿತ್ತು. ಸಾಲದ ವಿಚಾರವಾಗಿ ಕಲಬುರಗಿ ನಗರದ ಚಿನ್ನದ ವ್ಯಾಪಾರಿಯೊಬ್ಬನನ್ನು ರಾವೂರ-ಚಿತ್ತಾಪುರ ನಡುವಿನ ರಸ್ತೆಯಲ್ಲಿ ಕೊಂದು ದೇಹದ ಮೇಲೆ ಕಲ್ಲುಬಂಡೆ ಎಸೆಯಲಾಗಿತ್ತು. ಪ್ರೀತಿ ಪ್ರೇಮದ ವಿಚಾರವಾಗಿ ವಾಡಿ ನಗರದ ಯುವಕನನ್ನು ಶಹಾಬಾದ ನಗರದಲ್ಲಿ ಹೊಡೆದು ಸಾಯಿಸಲಾಯಿತು. ಇದೇ ಕಾರಣಕ್ಕೆ ವಾರದ ಹಿಂದೆ ಪಟ್ಟಣದಲ್ಲಿ ದಲಿತ ಯುವಕನೊಬ್ಬನ ಹೊಟ್ಟೆಗೆ ಚೂರಿ ಇರಿದು ಕೊಲೆಗೈಯಲಾಯಿತು. ಇದಕ್ಕೂ ಮೊದಲು ವಿವಿಧ ಕಾರಣಗಳಿಗಾಗಿ ಹಲವರ ಹೆಣಗಳು ಉರುಳಿದ ಹಸಿಹಸಿ ಪ್ರಕರಣಗಳು ಪೊಲೀಸ್ ಠಾಣೆಗಳ ಕಡತಗಳಲ್ಲಿ ಸೇರಿಕೊಂಡಿವೆ. ಸಣ್ಣ ಸಣ್ಣ ಕಾರಣಗಳನ್ನು ಮುಂದಿಟ್ಟು ಜೀವಿಸುವ ಹಕ್ಕನ್ನೇ ಕಸಿದುಕೊಳ್ಳುವ ಶಕ್ತಿಗಳು ಕಾಗಿಣಾ ತೀರದಲ್ಲಿ ತಲೆ ಎತ್ತುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ.
ಹದಗೆಡುತ್ತಿದೆಯೇ ಕಾನೂನು ಸುವ್ಯವಸ್ಥೆ?
ಕಾಗಿಣಾ ತೀರದ ಚಿತ್ತಾಪುರ ಹಾಗೂ ವಾಡಿ ಠಾಣೆಗಳ ವ್ಯಾಪ್ತಿಯಲ್ಲಿ ಘಟಿಸಿದ ಸರಣಿ ಕೊಲೆಗಳ ಸಂಖ್ಯೆ ನೋಡಿದರೆ, ನಾಗಾವಿ ನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬಹುದಾದ ಸಮಸ್ಯೆಗಳು ಅಮಾಯಕರ ಜೀವ ಬಲಿ ಕೇಳುತ್ತಿವೆ. ಕೊಲೆಯಾದವರ ಮನೆ ಮನಗಳು ಮಸಣವಾಗಿ ಪರಿವರ್ತನೆಯಾಗುತ್ತಿವೆ. ಕೋಮುವಾದ ಮತ್ತು ಜಾತಿವಾದ, ಪ್ರೇಮಿಗಳ ಗೋರಿ ಕಟ್ಟುತ್ತಿದೆ. ಇದು ಚಿತ್ತಾಪುರ ಜನರ ಕೋಮು ಸೌಹಾರ್ಧತೆಗೆ ಧಕ್ಕೆಯುಂಟಾಗುತ್ತಿದೆ.
ಚಿತ್ತಾಪುರ ಹಾಗೂ ವಾಡಿ ವ್ಯಾಪ್ತಿಯಲ್ಲಿ ನಡೆದಿರುವ ಎಲ್ಲಾ ಕೊಲೆಗಳು ವೈಯಕ್ತಿಕ ಕಾರಣಗಳಿಗಾಗಿ ನಡೆದಂತಹವು ಆಗಿವೆ. ಈ ಪ್ರಕರಣಗಳಲ್ಲಿ ಯಾವುದೇ ರೀತಿಯ ಕೋಮು ದ್ವೇಷ ಕಂಡು ಬಂದಿಲ್ಲ. ಇತ್ತೀಚೆಗೆ ವಾಡಿಯಲ್ಲಿ ನಡೆದ ದಲಿತ ಯುವಕನ ಕೊಲೆ ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ಹಂತದಲ್ಲಿ ವೈಯಕ್ತಿಕ ದ್ವೇಷ ಕಾರಣ ಕಂಡು ಬಂದಿದೆ. ಸ್ಥಳೀಯರು ಆರೋಪಿಸುತ್ತಿರುವಂತೆ ಹತ್ಯೆಯ ಹಿಂದೆ ಯಾರದ್ದಾದರೂ ಕೈವಾಡವಿದೆಯೇ ಎಂಬ ಅನುಮಾನದಲ್ಲೂ ತನಿಖೆ ಮುಂದುವರಿದಿದೆ. ಕೊಲೆಗಡುಕರನ್ನು ರಕ್ಷಿಸದೆ ಈ ಹಿಂದಿನ ಎಲ್ಲಾ ಪ್ರಕರಣಗಳ ಹಂತಕರನ್ನು ಪೊಲೀಸ್ ಇಲಾಖೆ ಹೆಡೆಮುರಿ ಕಟ್ಟಿದೆ. ತಾಲೂಕಿನಲ್ಲಿ ಇನ್ನಷ್ಟು ಕಾನೂನು ಬಿಗಿಗೊಳಿಸಲು ಚಿಂತನೆ ನಡೆಸಿದ್ದೇನೆ. -ಪ್ರಕಾಶ ಯಾತನೂರ, ಸಿಪಿಐ, ಚಿತ್ತಾಪುರ
ರೋಮು ಸೌಹಾರ್ದತೆಯಿಂದ ನಡೆದುಕೊಂಡರೂ ಹಿಂದೂಗಳ ಜೀವ ರಕ್ಷಣೆ ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ನಡೆದ ಐದಾರು ಕೊಲೆ ಪ್ರಕರಣಗಳಲ್ಲಿ ಒಂದೇ ಕೋಮಿಗೆ ಸೇರಿದ ಹಂತಕರು ಬಂಧನಕ್ಕೊಳಗಾಗಿರುವುದು ಕೋಮು ದ್ವೇಷದ ಆತಂಕ ಮೂಡಿಸಿದೆ. ಕೊಲೆಗಡುಕರಿಗೆ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆ ನೀಡಿದಾಗಲೇ ಮುಂದಿನವರಿಗೆ ಭಯ ಹುಟ್ಟುತ್ತದೆ. ಇಲ್ಲದಿದ್ದರೆ, ಜಾಮೀನು ಸಹಾಯದಿಂದ ಬಚಾವ್ ಆಗುತ್ತಲೇ ಇರ್ತಾರೆ. ವಾಡಿ ವಲಯದಲ್ಲಿ ಸಂಘಟಿತ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿರುವುದರಿಂದ ಯುವಕರ ಗುಂಪುಗಳು ಬೆಳೆಯುತ್ತಿವೆ. ಇವು ಸಮಾಜದ ಅಶಾಂತಿಗೆ ಕಾರಣವಾಗುತ್ತಿವೆ. ಕಾನೂನು ಸುವ್ಯವಸ್ಥೆ ಇನ್ನಷ್ಟು ಬಲಗೊಳ್ಳಬೇಕಿದೆ. -ವೀರಣ್ಣ ಯಾರಿ, ಬಿಜೆಪಿ ತಾಲೂಕು ಉಪಾಧ್ಯಕ್ಷ, ಚಿತ್ತಾಪುರ
-ಮಡಿವಾಳಪ್ಪ ಹೇರೂರ
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.