ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
ರೈತರು ಬಾರಕೋಲು ಬೀಸಿದರೆ ಸರ್ಕಾರಕ್ಕೆ ಉಳಿಗಾಲವಿಲ್ಲ: ಮಾಜಿ ಶಾಸಕ ಜಿ.ಎಸ್.ಪಾಟೀಲ
Team Udayavani, Jun 2, 2022, 3:58 PM IST
ಗಜೇಂದ್ರಗಡ: ಸರ್ಕಾರ ಅಸಮರ್ಪಕ ವಿದ್ಯುತ್ ಪೂರೈಸುವ ಮೂಲಕ ರೈತರ ಬದುಕಿನ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ರೈತರು ಸಿಡಿದೆದ್ದು ಬಾರಕೋಲು ಬೀಸಿದರೆ ಸರ್ಕಾರಕ್ಕೆ ಉಳಿಗಾಲವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಉಣಚಗೇರಿ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಪೂರೈಸಲು ಮುಂದಾಗಬೇಕೆಂದು ಮಾಜಿ ಶಾಸಕ ಜಿ.ಎಸ್. ಪಾಟೀಲ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಟ್ಟಣದ ಉಣಚಗೇರಿ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಸ್ಥಳೀಯ ಹೆಸ್ಕಾಂ ಕಚೇರಿ ಮುಂದೆ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ದೇಶ, ರಾಜ್ಯ ರೈತರ ಶ್ರಮದಿಂದಲೇ ಮುನ್ನಡೆಯುತ್ತಿವೆ. ಆದರೆ, ರೈತರ ಬೆಳೆಗೆ ಸಮರ್ಪಕ ವಿದ್ಯುತ್ ನೀಡದೇ, ವಿದ್ಯುತ್ ಕಡಿತ ಮಾಡಿದರೆ ಇದ್ಯಾವ ನ್ಯಾಯ? ಕಳೆದ ಹಲವಾರು ದಶಕಗಳಿಂದ ಉಣಚಗೇರಿ ಹದ್ದಿನ ರೈತರಿಗೆ ನಿರಂತರ ವಿದ್ಯುತ್ ನೀಡಲಾಗುತ್ತಿತ್ತು. ಆದರೆ, ಈಗ ಸ್ಥಗಿತಗೊಳಿಸಿದರೆ ಕೃಷಿ ಚಟುವಟಿಕೆ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಈ ಹಿಂದೆ ರಾಜ್ಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಹಿನ್ನಡೆಯಿತ್ತು. ಆದರೆ, ಈಗ ವಿದ್ಯುತ್ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಹೀಗಿದ್ದರೂ, ವಿದ್ಯುತ್ ಕಡಿತ ಮಾಡುವುದೇಕೆ. ಸಾಲ ಸೂಲ ಮಾಡಿ ಕೃಷಿ ಚಟುವಟಿಕೆ ಮಾಡಿದ ರೈತರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ರೈತರು ಬಿತ್ತನೆ ಸಂದರ್ಭದಲ್ಲಿರುವಾಗ ವಿದ್ಯುತ್ ಪೂರೈಕೆ ಮಾಡದಿದ್ದರೆ ಕೃಷಿ ಕಾರ್ಯಗಳು ಹೇಗೆ ಸಾಗಬೇಕು. ಕೂಡಲೇ ಈ ಹಿಂದಿನಂತೆ ವಿದ್ಯುತ್ ಪೂರೈಕೆಗೆ ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೆ, ಬಾರಕೋಲ ಚಳವಳಿ ಮಾಡಲಾಗುವುದೆಂದು ಎಚ್ಚರಿಸಿದರು. ಇದಕ್ಕೆ ಧ್ವನಿಗೂಡಿಸಿದ ರೈತರು, ಈಗಾಗಲೇ ಬ್ಯಾಂಕಿನಿಂದ ಲಕ್ಷಾಂತರ ರೂ. ಸಾಲ ಮಾಡಿದ್ದೇವೆ. ನೀವೇನಾದರೂ ನಮ್ಮ ಬೆಳೆಗೆ ನೀರುಣಿಸಲು ವಿದ್ಯುತ್ ಪೂರೈಕೆ ಮಾಡದಿದ್ದರೆ, ನಮ್ಮ ಬದುಕು ಬೀದಿಪಾಲಾಗುವುದಂತೂ ಸತ್ಯ. ವಿದ್ಯುತ್ ನೀಡಿ. ಇಲ್ಲವೇ, ಬದುಕು ಕಟ್ಟಿಕೊಡಿ ಎಂದು ರೈತರು ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಬೆಳಿಗ್ಗೆ 9 ಗಂಟೆಗೆ ಪ್ರತಿಭಟನೆ ಆರಂಭಿಸಿದ ರೈತರು ಮೇಲಧಿಕಾರಿಗಳು ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ಮಧ್ಯಾಹ್ನ 2 ಗಂಟೆಯಾದರೂ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಸ್ಪಂದಿಸದ ಕಾರಣ ಆಕ್ರೋಶಗೊಂಡ ರೈತರು, ರಸ್ತೆ ತಡೆದು, ಹೆಸ್ಕಾಂ ಕಚೇರಿಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಸ್ಥಳದಲ್ಲಿದ್ದ ಪಿಎಸ್‌ಐ ರಾಘವೇಂದ್ರ ಎಸ್., ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು. ವಿನಾಕಾರಣ ರಸ್ತೆ ತಡೆಯುವುದಾಗಲಿ, ಬೀಗ ಹಾಕಲು ಮುಂದಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಆಗ ಆಕ್ರೋಶಗೊಂಡ ರೈತರು ಮತ್ತು ಪೊಲೀಸರ ನಡುಗೆ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್-ಸಿಪಿಎಂ ಬೆಂಬಲ: ಉಣಚಗೇರಿ ಹದ್ದಿನ ರೈತರಿಗೆ ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರು, ಸಾರ್ವಜನಿಕರು ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್, ಸಿಪಿಎಂ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಗಳು ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ರೈತರ ಜಮೀನುಗಳಿಗೆ ವಿದ್ಯುತ್ ಪೂರೈಸುವವರೆಗೂ ಹೋರಾಟ ನಡೆಸಲಾಗುವುದೆಂದು ಅಧಿಕಾರಿಗಳಿಗೆ ಎಚ್ಚರಿಕೆ ರವಾನಿಸಿದರು.
ಸ್ಥಳೀಯ ಹೆಸ್ಕಾಂ ಕಚೇರಿ ಆವರಣದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರೇಶ ರಾಜೂರ, ನಿರಂತರ ವಿದ್ಯುತ್ ಪೂರೈಕೆ ಕುರಿತು ಮೇಲಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೊಪ್ಪದ ಪ್ರತಿಭಟನಾಕಾರರು, ತಕ್ಷಣವೇ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಾಗುವ ಅವಘಡಗಳಿಗೆ ನೀವೇ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಸಿದರು.
ಮಧ್ಯೆ ಪ್ರವೇಶಿಸಿ ಮಾತನಾಡಿದ ಮಾಜಿ ಶಾಸಕ ಜಿ.ಎಸ್.ಪಾಟೀಲ, ರೈತರ ಬಿತ್ತನೆ ಸಂದರ್ಭದಲ್ಲಿ ಇಂತಹ ನಿರ್ಧಾರ ಸರಿಯಾದ ಕ್ರಮವಲ್ಲ. ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ವರ್ಗಾವಣೆ ತಗೊಂಡು ಬೇರೆಡೆಗೆ ತೆರಳಿ. ಯಾವುದೇ ಸಮಜಾಯಿಷಿ ಬೇಡ. ತಕ್ಷಣವೇ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಗಜೇಂದ್ರಗಡದಿಂದ ಬಾರಕೋಲ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತರ ಒತ್ತಾಯಕ್ಕೆ ಮಣಿದ ಅಧಿಕಾರಿಗಳು ಈ ಹಿಂದೆ ನೀಡುವಂತೆಯೇ ವಿದ್ಯುತ್ ಪೂರೈಸಲಾಗುವುದು. ಈ ಕುರಿತು 8 ಜನರ ಸಮಿತಿ ರಚನೆ ಮಾಡಿ, ಸಮಿತಿ ಕೈಗೊಳ್ಳುವ ನಿರ್ಧಾರ ಪಾಲನೆಗೆ ಮುಂದಾಗುವುದಾಗಿ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.
ರೈತರಾದ ಬಸವರಾಜ ಪಲ್ಲೇದ, ಎಂ.ಕೆ. ಕಟ್ಟಿಮನಿ, ಚಂದ್ರು ಹೂಗಾರ, ರಾಜಪ್ಪ ದಾರೋಜಿ, ಅಂಬರೀಶ ಹಿರೇಕೊಪ್ಪ, ಫಕೀರಪ್ಪ ಕಂಠಿ, ವಿವಿಧ ಪಕ್ಷಗಳ ಮುಖಂಡರಾದ ಶ್ರೀಕಾಂತ್ ಅವಧೂತ್, ಎಂ.ಎಸ್. ಹಡಪದ, ಶಿವರಾಜ ಘೋರ್ಪಡೆ, ವೀರಣ್ಣ ಶೆಟ್ಟರ, ಎಚ್.ಎಸ್.ಸೋಂಪೂರ, ಬಾಲು ರಾಠೊಡ, ಮಂಜುಳಾ ರೇವಡಿ, ಶ್ರೀಧರ ಬಿದರಳ್ಳಿ, ರಾಜು ಸಾಂಗ್ಲಿಕಾರ, ಮಾರುತಿ ಚಿಟಗಿ, ಉಮೇಶ ರಾಠೊಡ, ಫಯಾಜ್ ತೋಟದ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ರೈತರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.