ಬಂಗಾರಪೇಟೆವರೆಗೆ ಚತುಷ್ಪಥ; ಸ್ಥಳ ಸಮೀಕ್ಷೆಗೆ ಹಸಿರು ನಿಶಾನೆ
ಚತುಷ್ಪಥ ಮಾಡುವುದರಿಂದ ಆಗುವ ಅನುಕೂಲಗಳೇನು? ಇದಕ್ಕಾಗಿ ಭೂಮಿ ಎಷ್ಟು ಬೇಕಾಗುತ್ತದೆ
Team Udayavani, Jun 3, 2022, 3:57 PM IST
ಬೆಂಗಳೂರು: ನಗರದ ಕಂಟೋನ್ಮೆಂಟ್- ವೈಟ್‌ಫೀಲ್ಡ್ ನಡುವಿನ ಚತುಷ್ಪಥ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಚುರುಕುಗೊಂಡ ಬೆನ್ನಲ್ಲೇ ಈ ಚತುಷ್ಪಥವನ್ನು ಕೋಲಾರದ ಬಂಗಾರಪೇಟೆವರೆಗೆ ವಿಸ್ತರಿಸಲು ನೈಋತ್ಯ ರೈಲ್ವೆ ಉದ್ದೇಶಿಸಿದ್ದು, ಈ ಸಂಬಂಧ ಅಂತಿಮ ಸ್ಥಳ ಸಮೀಕ್ಷೆ (ಫೈನಲ್ ಲೊಕೇಷನ್ ಸರ್ವೆ)ಗೆ ರೈಲ್ವೆ ಮಂಡಳಿ ಹಸಿರು ನಿಶಾನೆ ತೋರಿಸಿದೆ.
ವೈಟ್‌ಫೀಲ್ಡ್- ಬಂಗಾರಪೇಟೆ ನಡುವಿನ 47 ಕಿ.ಮೀ. ಉದ್ದದ ದ್ವಿಪಥ ರೈಲು ಮಾರ್ಗವನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಸಂಬಂಧ ಅಂತಿಮ ಸ್ಥಳ ಸಮೀಕ್ಷೆ ನಡೆಸುವಂತೆ ಈಚೆಗೆ ಅನುಮೋದನೆ ನೀಡಲಾಗಿದ್ದು, 1.88 ಕೋಟಿ ರೂ. ವೆಚ್ಚದಲ್ಲಿ ಈ ಕಾರ್ಯ ಮಾಡಿಮುಗಿಸಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಂಬರುವ ದಿನಗಳಲ್ಲಿ ಈ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ದೊರೆತರೆ, ಕಂಟೋನ್ಮೆಂಟ್‌ನಿಂದ ಬಂಗಾರಪೇಟೆವರೆಗಿನ
ಸುಮಾರು 85 ರೈಲು ಮಾರ್ಗ ಚತುಷ್ಪಥವಾಗಲಿದೆ.
ಬಂಗಾರಪೇಟೆಯಿಂದ ಮುಂದೆ ಆಂಧ್ರಪ್ರದೇಶದ ಮೂಲಕ ತಮಿಳುನಾಡಿಗೂ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಸರಕು ಸಾಗಣೆ ರೈಲುಗಳು ಮಾತ್ರವಲ್ಲ; ನಗರಕ್ಕೆ ಹತ್ತಿರ ಇರುವುದರಿಂದ ಪ್ಯಾಸೆಂಜರ್ ರೈಲುಗಳ ದಟ್ಟಣೆ ಕೂಡ ಹೆಚ್ಚು. ಅದರಲ್ಲೂ ದಿನಗೂಲಿ ನೌಕರರು ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ.
ನಿತ್ಯ ಉದ್ದೇಶಿತ ಈ ಮಾರ್ಗದಲ್ಲಿ 88 ಪ್ಯಾಸೆಂಜರ್/ ಎಕ್ಸ್‌ಪ್ರೆಸ್ (ದ್ವಿಮುಖ ಸೇರಿ) ಹಾಗೂ 24 ಸರಕು ಸಾಗಣೆ ರೈಲುಗಳು (ದ್ವಿಮುಖ ಸೇರಿ) ಕಾರ್ಯಾಚರಣೆ ಮಾಡುತ್ತವೆ. ಮಾರ್ಗಗಳ ಸಾಮರ್ಥ್ಯ ದುಪ್ಪಟ್ಟಾಗುವುದರಿಂದ ರೈಲುಗಳ ಸಂಚಾರ ಸುಗಮವಾಗಲಿದೆ. ಅದರೊಂದಿಗೆ ಸಾಕಷ್ಟು ಸಮಯ ಕೂಡ ಉಳಿತಾಯ ಆಗಲಿದೆ ಎಂದು ಬೆಂಗಳೂರು ರೈಲ್ವೆ ವಿಭಾಗದ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ಮುಂಬೈ- ದೆಹಲಿ, ದೆಹಲಿ- ಕೋಲ್ಕತಾ, ಚೆನ್ನೈ- ಮುಂಬೈ ಸೇರಿದಂತೆ ಹಲವು ರಾಜ್ಯಗಳ ಪ್ರಮುಖ ನಗರಗಳ ನಡುವೆ ಪ್ರತ್ಯೇಕ ಸರಕು ಸಾಗಣೆ ರೈಲ್ವೆ ಕಾರಿಡಾರ್‌ಗಳಿವೆ. ಇವುಗಳಲ್ಲಿ ಬಹುತೇಕ ಬಂದರುಗಳಿರುವುದು ಇದಕ್ಕೆ ಕಾರಣ. ಆದರೆ, ರಾಜ್ಯದಲ್ಲಿ ಆ ರೀತಿಯ ಪ್ರತ್ಯೇಕ ಕಾರಿಡಾರ್ ಇಲ್ಲ.
ಮಂಗಳೂರು ಬಂದರು ಇದ್ದರೂ, ಪಶ್ಚಿಮಘಟ್ಟದಲ್ಲಿ ಹಾದುಹೋಗಬೇಕಾಗಿರುವುದರಿಂದ ಅದು ಕಷ್ಟ ಕೂಡ. ವೈಟ್ ಫೀಲ್ಡ್‌ನಲ್ಲಿ ಒಳನಾಡು ಕಂಟೈನರ್ ಡಿಪೋ (ಐಸಿಡಿ) ಇದ್ದು, ಇಲ್ಲಿಂದ ಚೆನ್ನೈ ಬಂದರು ಮೂಲಕ ಸಾಕಷ್ಟು ಸರಕುಗಳು ರಫ್ತು ಆಗುತ್ತವೆ. ಈ ಹಿನ್ನೆಲೆಯಲ್ಲಿ ಚತುಷ್ಪಥ ಮಾರ್ಗ ನಿರ್ಮಾಣದ ಅವಶ್ಯಕತೆ ಹೆಚ್ಚಿದ್ದು, ಚೆನ್ನೈವರೆಗೂ ಇದನ್ನು ವಿಸ್ತರಿಸಬೇಕು ಎಂದು ರೈಲ್ವೆ ಹೋರಾಟಗಾರ ಸಂಜೀವ್ ದ್ಯಾಮಣ್ಣವರ ಆಗ್ರಹಿಸಿದ್ದಾರೆ.
ಈ ಯೋಜನೆ ಏಕೆ ಪ್ರಮುಖ?
ವೈಟ್‌ಫೀಲ್ಡ್-ಬಂಗಾರಪೇಟೆ ನಡುವೆ ಪ್ರಾಥಮಿಕ ಎಂಜಿನಿಯರಿಂಗ್ ಮತ್ತು ಟ್ರಾಫಿಕ್ ಸಮೀಕ್ಷೆ ಪೂರ್ಣಗೊಳಿಸಿ, ರೈಲ್ವೆ ಇಲಾಖೆಗೆ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಇದರ ನಂತರದ ಹಂತ ಅಂತಿಮ ಸ್ಥಳ ಸಮೀಕ್ಷೆಯಾಗಿದೆ. ಈಗಾಗಲೇ ಮಾರ್ಗದಲ್ಲಿ ನಿಲ್ದಾಣಗಳು ಇರುವುದರಿಂದ ಅದರ ಹೊರತಾಗಿ ರೈಲುಗಳ ದಟ್ಟಣೆ ಎಷ್ಟಿದೆ? ಚತುಷ್ಪಥ ಮಾಡುವುದರಿಂದ ಆಗುವ ಅನುಕೂಲಗಳೇನು? ಇದಕ್ಕಾಗಿ ಭೂಮಿ ಎಷ್ಟು ಬೇಕಾಗುತ್ತದೆ? ಒಂದು ವೇಳೆ ಚತುಷ್ಪಥ ಮಾಡುವುದರಿಂದ ಬರುವ ಆದಾಯ ಎಷ್ಟು? ಎನ್ನುವುದು ಸೇರಿದಂತೆ ಹಲವು ಅಂಶಗಳ ಸಮೀಕ್ಷೆ ಈ ಹಂತದಲ್ಲಿ ನಡೆಯಲಿದೆ.
ಇದೆಲ್ಲವನ್ನೂ ಪೂರ್ಣಗೊಳಿಸಿ ವರದಿಯನ್ನು ಮಂಡಳಿಗೆ ಸಲ್ಲಿಸಲಾಗುತ್ತದೆ. ಅಲ್ಲಿ ಪರಿಶೀಲಿಸಿ ಯೋಜನೆ ಜಾರಿಗೆ ಅನುಮೋದನೆ ನೀಡಲಾಗುತ್ತದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಬರುವ ಬಜೆಟ್‌ನಲ್ಲಿ ಈ ಯೋಜನೆಗೆ ಅನುದಾನವನ್ನೂ ಮೀಸಲಿಡಬಹುದು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ. “ಈಗಾಗಲೇ ಕಂಟೋನ್ಮೆಂಟ್‌ನಿಂದ ವೈಟ್‌ಫೀಲ್ಡ್‌ವರೆಗೆ ಚತುಷ್ಪಥ ಆಗುತ್ತಿದೆ. ಅದು ಬಂಗಾರಪೇಟೆವರೆಗೆ ವಿಸ್ತರಣೆಯಾದರೆ, ಹೆಚ್ಚು ರೈಲುಗಳನ್ನು ಕಾರ್ಯಾಚರಣೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ನಿತ್ಯ ಸಾವಿರಾರು ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ದಟ್ಟಣೆ ಅವಧಿ (ಪೀಕ್ ಅವರ್) ಯಲ್ಲಿ ರೈಲುಗಳ ಕಾಯುವಿಕೆ ತಪ್ಪಲಿದೆ. ಈ ದೃಷ್ಟಿಯಿಂದ ಮಾರ್ಗವು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.
*ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್