ವಾಯವ್ಯ ಸಾರಿಗೆಯಿಂದ ಡ್ಯಾಶ್ ಬೋರ್ಡ್ ಅಭಿವೃದ್ಧಿ
ವ್ಯವಸ್ಥಿತ ಬಸ್ ಕಾರ್ಯಾಚರಣೆಗೆ ಮುಂದಡಿ
Team Udayavani, Jun 7, 2022, 10:20 AM IST
ಹುಬ್ಬಳ್ಳಿ: ನಿತ್ಯದ ಬಸ್‌ಗಳ ಕಾರ್ಯಾಚರಣೆ ಸರಿಪಡಿಸಿ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆ ನೀಡಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮುಂದಾಗಿದೆ.
ಘಟಕಗಳ (ಡಿಪೋ) ಹಂತದಿಂದಲೇ ಬಸ್ ಕಾರ್ಯಾಚರಣೆಯ ಪ್ರತಿಯೊಂದು ಮಾಹಿತಿ ನೇರವಾಗಿ ಕೇಂದ್ರದ ಕಚೇರಿಯಲ್ಲಿ ದೊರೆಯುವ ನಿಟ್ಟಿನಲ್ಲಿ ಡ್ಯಾಶ್ ಬೋರ್ಡ್ (ಮಾಹಿತಿ ಫಲಕ) ಅಭಿವೃದ್ಧಿಪಡಿಸಲಾಗಿದೆ. ಸಂಸ್ಥೆಯ ಎಲ್ಲಾ ಇಲಾಖೆಯ ಮುಖ್ಯಸ್ಥರು ಕುಳಿತಲ್ಲಿಯೇ ಪ್ರತಿಯೊಂದು ಘಟಕದ ಸಂಪೂರ್ಣ ವಿವರ ಪಡೆಯಬಹುದಾಗಿದೆ.
ಸಮಯ ಪಾಲನೆಯ ವೈಫಲ್ಯತೆಯೂ ಸಾರಿಗೆ ಆದಾಯ ಕುಂಠಿತಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ನಿಯಮಿತತೆಯನ್ನು ಶೇ.100ಕ್ಕೆ ತರಬೇಕು ಎನ್ನುವ ಕಾರಣಕ್ಕೆ ಈ ಮಾಹಿತಿ ಫಲಕವನ್ನು ಸಿದ್ಧಪಡಿಸಿದೆ. ಹಿಂದೆ ಇಂತಹ ಹಲವು ಕ್ರಮಗಳಿದ್ದರೂ ಸಮರ್ಪಕವಾಗಿ ಅನುಷ್ಠಾನಗೊಂಡಿರಲಿಲ್ಲ. ಹೀಗಾಗಿ ಹಲವು ಕಾರಣಗಳಿಂದಾಗಿ ಬಸ್‌ಗಳು ಕೆಲ ಮಾರ್ಗಗಳಲ್ಲಿ ಸಕಾಲಕ್ಕೆ ತೆರಳುತ್ತಿಲ್ಲ. ಈ ಅವ್ಯವಸ್ಥೆಗೆ ಕಡಿವಾಣ ಹಾಕಿ ಶಿಸ್ತು ತರುವ ನಿಟ್ಟಿನಲ್ಲಿ ನೂತನ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ ಅವರು ಮಾಹಿತಿ ಫಲಕ ಅಭಿವೃದ್ಧಿಗೆ ಸೂಚಿಸಿದ್ದು, ಸಂಸ್ಥೆಯ ಮಾಹಿತಿ ತಂತ್ರಜ್ಞಾನ ಇಲಾಖೆ ಸಿದ್ದಪಡಿಸಿದೆ.
ಇದರ ಮೂಲಕ ಸಂಸ್ಥೆಯ ವ್ಯಾಪ್ತಿ 9 ವಿಭಾಗ ವ್ಯಾಪ್ತಿಯ 54 ಘಟಕಗಳ ಮಾಹಿತಿಯನ್ನು ಕುಳಿತಲ್ಲಿಯೇ ಸಂಸ್ಥೆಯ ಹಿರಿಯ ಅಧಿಕಾರಿಗಳು ಪಡೆಯಬಹುದಾಗಿದ್ದು, ನ್ಯೂನತೆಗಳು ಕಂಡುಬರುವ ಘಟಕಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಸಮಯ ಪಾಲನೆ ಮೂಲಕ ಉತ್ತಮ ಸಾರಿಗೆ ಆದಾಯಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಎಲ್ಲಾ ಮಾಹಿತಿಯೂ ವ್ಯವಸ್ಥಾಪಕ ನಿರ್ದೇಶಕರಿಗೂ ಲಭ್ಯವಿದ್ದು, ಮೊಬೈಲ್‌ನಲ್ಲೂ ಕೂಡ ದೊರೆಯಲಿದೆ.
ಪ್ರತಿಯೊಂದು ಮಾರ್ಗದಲ್ಲಿ ಬಸ್ ಗಳು ಸರಿಯಾದ ಸಮಯಕ್ಕೆ ಕಾರ್ಯಾಚರಣೆಗೊಳ್ಳಬೇಕು. ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಸಂಸ್ಥೆ ವ್ಯಾಪ್ತಿಯ 4500 ಅನುಸೂಚಿಗಳು ಡ್ಯಾಶ್‌ಬೋರ್ಡ್‌ನಲ್ಲಿ ದೊರೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನೂ ಹಲವು ಅಂಶಗಳನ್ನು ಸೇರಿಸಿ ಸೂಕ್ತ, ಸಮರ್ಪಕ ಸಾರಿಗೆ ಸೇವೆ ಹಾಗೂ ಕರ್ತವ್ಯದಲ್ಲಿ ಶಿಸ್ತು ತರುವ ಕಾರ್ಯವಾಗಿದೆ. –ಎಸ್.ಭರತ, ವ್ಯವಸ್ಥಾಪಕ ನಿರ್ದೇಶಕ, ವಾಕರಸಾ ಸಂಸ್ಥೆ
ಏನಿದು ಡ್ಯಾಶ್ ಬೋರ್ಡ್?
ಮಾಹಿತಿ ಫಲಕದ ಮೂಲಕ ಕೇಂದ್ರ ಕಚೇರಿಯಲ್ಲಿರುವ ವಿವಿಧ ಇಲಾಖೆಗಳು ಮುಖ್ಯಸ್ಥರು ಪ್ರತಿಯೊಂದು ಘಟಕದ ಮಾಹಿತಿಯನ್ನು ಪಡೆಯಬಹುದಾಗಿದೆ. ಪ್ರಮುಖವಾಗಿ ಸಾರಿಗೆ ಆದಾಯ, ಇಂಧನ ಬಳಕೆ, ಪ್ರತಿ ಕಿಲೋಮೀಟರ್‌ನ ಆದಾಯ ಅಥವಾ ಖರ್ಚು, ರದ್ದಾದ ಮಾರ್ಗಗಳು, ತಡವಾಗಿ ಸಂಚರಿಸಿದ ಬಸ್‌ಗಳು, ಗುರಿಗಿಂತ ಕಡಿಮೆ ಕಿಲೋಮೀಟರ್ ಸಂಚಾರ, ಇವುಗಳಿಗೆ ಸಂಬಂಧಿಸಿದ ಕಾರಣ, ಹೀಗೆ ಸಮಯ ಪಾಲನೆಗೆ ಪೂರಕವಾಗಿರುವ ಅಂಶಗಳಿವೆ. ಒಂದು ವಾರದ ಮಾಹಿತಿಯೂ ಕೂಡ ಲಭ್ಯವಾಗಲಿದೆ. ಇನ್ನು ಆಯಾ ವಿಭಾಗಕ್ಕೆ ಸಂಬಂಧಿಸಿದ ಮಾಹಿತಿಯು ವಿಭಾಗ ಮಟ್ಟದ ಅಧಿಕಾರಿಗಳಿಗೆ ದೊರೆಯಲಿದೆ. ಇದರಿಂದ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ಮೇಲಾಗಿ ವ್ಯವಸ್ಥಾಪಕ ನಿರ್ದೇಶಕರು ನಿತ್ಯದ ಬಸ್‌ಗಳ ಕಾರ್ಯಾಚರಣೆ ಮೇಲೆ ನಿಗಾ ವಹಿಸುವುದರಿಂದ ಘಟಕೆಗಳ ಮಟ್ಟದಲ್ಲಿ ಸಮಯ ಪಾಲನೆ ಮತ್ತಷ್ಟು ಸುಧಾರಿಸಲಿದೆ. ಇದರಿಂದ ವಿಭಾಗೀಯ ಕಚೇರಿ ಅಧಿಕಾರಿಗಳ ಕಾರ್ಯಕ್ಷಮತೆ ಮತ್ತಷ್ಟೆ ಹೆಚ್ಚಾಗಲಿದೆ ಎನ್ನುವ ನಿರೀಕ್ಷೆಯಿದೆ.
ತಕ್ಷಣ ನಿರ್ಧಾರಕ್ಕೆ ವ್ಯವಸ್ಥೆ: ಈ ಹಿಂದೆ ಘಟಕದಿಂದ ವಿಭಾಗೀಯ ಕಚೇರಿಗೆ ಮಾಹಿತಿ ರವಾನಿಸಿ ಅಲ್ಲಿಂದ ಕೇಂದ್ರ ಕಚೇರಿಗೆ ಕಳುಹಿಸಲಾಗುತ್ತಿತ್ತು. ಕೆಲ ಇಲಾಖೆ ಅಧಿಕಾರಿಗಳಿಗೆ ಮಾತ್ರ ಈ ಮಾಹಿತಿ ಲಭ್ಯವಾಗುತ್ತಿತ್ತು. ಇದರಿಂದಾಗಿ ಪ್ರತಿಯೊಂದು ವಿಭಾಗಗಳ ಮೇಲುಸ್ತುವಾರಿ ಅಧಿಕಾರಿಗಳಿಗೆ ಸಕಾಲಕ್ಕೆ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಘಟಕಗಳ ಪರಿಶೀಲನೆಗೆ ಹೋದಾಗ ಮಾತ್ರ ಈ ಮಾಹಿತಿಗಳು ದೊರೆಯುತ್ತಿತ್ತು. ಅಷ್ಟೊಂದಾಗಿ ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಆದರೆ ಇದೀಗ ಡ್ಯಾಶ್ ಬೋರ್ಡ್ ಸಿದ್ಧವಾದ ನಂತರ ಎಲ್ಲಾ ವಿಭಾಗೀಯ ಮೇಲುಸ್ತುವಾರಿ ಅಧಿಕಾರಿಗಳು ನಿತ್ಯವೂ ಪರಿಶೀಲಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ದೊರೆಯುವುದರಿಂದ ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳಲು ಅನುಕೂಲವಾಗಲಿದೆ. ಇನ್ನೂ ಈ ಎಲ್ಲಾ ಅಂಶಗಳಲ್ಲಿ ಉತ್ತಮ ಸಾಧನೆ ತೋರಿದ 5 ಘಟಕಗಳು ಹಾಗೂ ಅತ್ಯಂತ ಕಡಿಮೆ ಸಾಧನೆ ಮಾಡಿದ 5 ಘಟಕಗಳನ್ನು ಗುರುತಿಸಲಾಗುತ್ತದೆ. ಕಡಿಮೆ ಸಾಧನೆ ತೋರಿದ ಘಟಕಗಳಲ್ಲಿ ಇರುವ ಕೊರತೆ, ವಿಫಲತೆಗಳ ಕಾರಣಗಳನ್ನು ಗುರುತಿಸಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ.
ತಪ್ಪು ಮಾಹಿತಿ ನೀಡುವಂತಿಲ್ಲ: ಹಿಂದೆ ವಿಭಾಗೀಯ ಕಚೇರಿಗಳ ಮೂಲಕ ಕೇಂದ್ರ ಕಚೇರಿಗೆ ಮಾಹಿತಿ ಕಳುಹಿಸಲಾಗುತ್ತಿತ್ತು. ಕೆಲ ವಿಭಾಗೀಯ ಕಚೇರಿಯಲ್ಲಿ ಅಧಿಕಾರಿಗಳು ಪೂರಕ ಅಂಕಿ-ಅಂಶಗಳಲ್ಲಿ ಹೊಂದಾಣಿಕೆ ಮಾಡುತ್ತಿದ್ದರು. ಇದೀಗ ಘಟಕಗಳಲ್ಲಿನ ಸಿಬ್ಬಂದಿ ನೇರವಾಗಿ ಮಾಹಿತಿಯನ್ನು ಘಟಕಗಳಿಂದಲೇ ಅಪ್‌ಲೋಡ್ ಮಾಡಬೇಕು. ಹೀಗಾಗಿ ಯಾವುದೇ ಹೊಂದಾಣಿಕೆ ಮಾಡುವ, ಆಗಿರುವ ನ್ಯೂನತೆಯಿಂದ ಪಾರಾಗಲು ತಪ್ಪು ಮಾಹಿತಿ ನೀಡುವಂತಿಲ್ಲ. ವಾರಕ್ಕೆ ಎರಡು ಬಾರಿ ವಿಭಾಗೀಯ ಮೇಲುಸ್ತುವಾರಿ ಅಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲಿಸಬೇಕು ಎನ್ನುವ ಎಂಡಿ ಫರ್ಮಾನು ಇರುವ ಪರಿಣಾಮ ತಪ್ಪು ಮಾಹಿತಿ ನೀಡಿದವರ ತಲೆದಂಡ ಖಚಿತ.
4500 ಅನುಸೂಚಿಗಳ ಮಾಹಿತಿಗೆ ಚಿಂತನೆ: ಇದೀಗ ಘಟಕವಾರು ಸಂಕ್ಷಿಪ್ತ ಮಾಹಿತಿ ಡ್ಯಾಶ್ ಬೋರ್ಡ್‌ನಲ್ಲಿ ಲಭ್ಯವಾಗುತ್ತಿದೆ. ಆದರೆ ಪ್ರತಿಯೊಂದು ಅನುಸೂಚಿಗಳ ಮಾಹಿತಿಯೂ ಡ್ಯಾಶ್ ಬೋರ್ಡ್‌ನಲ್ಲಿ ದೊರೆಯುವಂತೆ ಮಾಡುವ ಚಿಂತನೆಯಿದೆ. ವ್ಯವಸ್ಥಾಪಕ ನಿರ್ದೇಶಕ ಎಸ್.ಭರತ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ನಿತ್ಯವೂ ಘಟಕದಿಂದ ಮಾಹಿತಿ ಅಪ್‌ಲೋಡ್‌ಗೆ ಸಂಬಂಧಿಸಿದಂತೆ ಸಮಗ್ರ ತಂತ್ರಜ್ಞಾನ, ನುರಿತ ಸಿಬ್ಬಂದಿ ಅಗತ್ಯವಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ಪರಿಣಾಮ ಯಾವುದೇ ನೇಮಕಾರಿ ಆಗದ ಪರಿಣಾಮ ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ ಸದ್ಯಕ್ಕೆ ಇದು ಅಸಾಧ್ಯ ಎನ್ನುವ ಅಭಿಪ್ರಾಯವಿದೆ.
-ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.