ಶಿಕ್ಷಕ ಸಮುದಾಯದ ನಿಯತ್ತಿನ ಆಳು ನಾನು : ಬಸವರಾಜ ಹೊರಟ್ಟಿ
ವಿಧಾನ ಪರಿಷತ್ತು ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಮನದಾಳದ ಮಾತು
Team Udayavani, Jun 10, 2022, 9:34 AM IST
ಹುಬ್ಬಳ್ಳಿ: ಶಿಕ್ಷಕ ಸಮುದಾಯವೇ ನನ್ನ ಉಸಿರು, ಅವರ ನಿಯತ್ತಿನ ಆಳು ಎಂದು ಹೇಳಿಕೊಳ್ಳುವುದಕ್ಕೆ ಯಾವ ಮುಜುಗರವೂ ಇಲ್ಲ. ರಾಜಕೀಯ ವಾಗಿ ನಾನೇನಾದರೂ ಅಷ್ಟು ಇಷ್ಟು ಸ್ಥಾನಗಳನ್ನು ಪಡೆದು ಕೈಲಾದ ಸೇವೆ ಮಾಡಿದ್ದೇನೆ ಎಂದರೆ ಅದಕ್ಕೆ ಶಿಕ್ಷಕ ಸಮುದಾಯವೇ ಕಾರಣ..ಇದು ನನ್ನ ಸ್ಪಷ್ಟೋಕ್ತಿ.
ಹೀಗೆಂದು ಹೇಳಿದವರು, ವಿಧಾನ ಪರಿ ಷತ್ತು ಮಾಜಿ ಸಭಾಪತಿ, ದೇಶದಲ್ಲೇ ಸುದೀರ್ಘ ಅವಧಿಗೆ ವಿಧಾನ ಪರಿ ಷತ್ತು ಸದಸ್ಯರಾಗಿರುವ ಖ್ಯಾತಿಯ ಬಸವರಾಜ ಹೊರಟ್ಟಿ ಅವರು.
ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ “ಉದಯವಾಣಿ’ ಜತೆ ಮಾತನಾಡಿದ ಅವರು, ಶಿಕ್ಷಕರಾಗಿ ಎದುರಿಸಿದ ಸವಾಲು, ಶಿಕ್ಷಕರ ಧ್ವನಿಯಾಗಿ ಬೆಳೆದು ಬಂದ ಇತಿಹಾಸ, ಮೊದಲ ಚುನಾವಣೆಯಲ್ಲಿ ಅನುಭವಿಸಿದ ಮುಜುಗರ, ಶಿಕ್ಷಕರ ಪ್ರತಿನಿಧಿಯಾಗಿ ಕೈಗೊಂಡ ಸೇವಾ ಕಾರ್ಯ ಸೇರಿದಂತೆ ಮನದಾಳದ ಅನಿಸಿಕೆಗಳನ್ನು ಹಂಚಿಕೊಂಡರು.
ಶಿಕ್ಷಣ-ಶಿಕ್ಷಕರಿಗಾಗಿಯೇ ಮುಡಿಪು: ಶಿಕ್ಷಕನಾಗಿ ಮುಂದುವರಿಯಬೇಕೆಂದು ಗ್ರಾಮೀಣ ವಲಯದಿಂದ ಬಂದ ನನ್ನನ್ನು ಹೋರಾಟಕ್ಕೆ ಉತ್ತೇಜಿಸಿ, ತಮ್ಮ ಪ್ರತಿನಿಧಿ ಸ್ಥಾನ ನೀಡಿದವರು ಶಿಕ್ಷಕರು. ಅವರ ಋಣವನ್ನು ಜೀವನದಲ್ಲಿ ಮರೆಯಲು ಹೇಗೆ ಸಾಧ್ಯ ಹೇಳಿ. ಶಿಕ್ಷಣ ಕ್ಷೇತ್ರದ ಸುಧಾರಣೆ, ಶಿಕ್ಷಕರ ಹಿತ ಕಾಯುವುದಕ್ಕಾಗಿಯೇ ಈ ನನ್ನ ಜೀವನ ಮುಡಿಪಾಗಿಟ್ಟಿದ್ದೇನೆ. ಇದನ್ನು ನಾನು ಕೇವಲ ಮಾತಿಗೆ, ಚುನಾವಣೆ ಸಂದರ್ಭ ಮನವೊಲಿಕೆ ಪ್ರಚಾರಕ್ಕೆ ಹೇಳುತ್ತಿಲ್ಲ. ಕಳೆದ 42 ವರ್ಷಗಳಿಂದ ನುಡಿದಂತೆ ನಡೆದಿದ್ದೇನೆ ಎಂಬ ಆತ್ಮತೃಪ್ತಿ ಇದೆ.
ಅಧಿಕಾರ ಇದ್ದಾಗ ಶಿಕ್ಷಣ ಕ್ಷೇತ್ರದ ಸೌಲಭ್ಯ, ಶಿಕ್ಷಕರ ಕಲ್ಯಾಣಕ್ಕೆ ಪೂರಕವಾಗಿ ಕೈಲಾದ ಕೆಲಸ ಮಾಡಿದ್ದೇನೆ. ಅಧಿಕಾರ ಇಲ್ಲದಾಗ ಸ್ಥಾನಮಾನಗಳನ್ನು ಬದಿಗಿರಿಸಿ ಶಿಕ್ಷಕರಿಗಾಗಿ ಬೀದಿಗಿಳಿದಿದ್ದೇನೆ, ಕಚೇರಿ ಕಚೇರಿ ಸುತ್ತಿದ್ದೇನೆ. ಇದು ಶಿಕ್ಷಕರ ಸಮುದಾಯಕ್ಕೆ ತಿಳಿಯದ ವಿಷಯವೇನಲ್ಲ.
2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನನ್ನ ಮೇಲೆ ನಂಬಿಕೆ ಇರಿಸಿ ಸಚಿವನನ್ನಾಗಿ ಮಾಡಿದರು. ವಿಜ್ಞಾನ, ತಂತ್ರಜ್ಞಾನ, ಸಣ್ಣ ಉಳಿತಾಯ ಖಾತೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸೇರಿದಂತೆ ಹಲವು ಖಾತೆ ನಿರ್ವಹಿಸಿದ್ದೇನೆ. ನನ್ನ ನೆಚ್ಚಿನ ಶಿಕ್ಷಣ ಖಾತೆಗೆ ಬೇಡಿಕೆ ಇರಿಸಿದಾಗ, ಜೆಡಿಎಸ್ ವರಿಷ್ಠರು ವಿಪಕ್ಷದಲ್ಲಿದ್ದಾಗ ಸಾಕಷ್ಟು ಹೋರಾಟ ಮಾಡಿ ಒತ್ತಾಯಿಸಿದ್ದೀರಿ, ಇದೀಗ ಸಚಿವರಾದರೆ ಅವುಗಳ ಈಡೇರಿಕೆ ಕಷ್ಟ ಸಾಧ್ಯ ಎಂದಿದ್ದರೂ ಖಾತೆ ಪಡೆದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವನಾಗಿ 1,039 ಸರಕಾರಿ ಪ್ರೌಢಶಾಲೆ, 500 ಪಿಯುಸಿ ಕಾಲೇಜುಗಳನ್ನು ಮಂಜೂರು ಮಾಡಿದ್ದೆ. ಶಾಲಾ-ಕಾಲೇಜು ಕಟ್ಟಡ ನಿರ್ಮಾಣಕ್ಕೆ 500 ಕೋಟಿ ರೂ. ಬಿಡುಗಡೆ ಮಾಡಿದ್ದೆ. ಎಸ್ಸೆಸ್ಸೆಲ್ಸಿವರೆಗೆ ಬಿಸಿಯೂಟ ವಿಸ್ತರಣೆ, 1984-94ವರೆಗಿನ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸುವುದು, ಶಿಕ್ಷಕರ ನೇಮಕಾತಿ, ಪಾರದರ್ಶಕ ಶಿಕ್ಷಕರ ವರ್ಗಾವಣೆ ನೀತಿ ಹತ್ತು ಹಲವು..
ಶಿಕ್ಷಣ ಇಲಾಖೆಯನ್ನು ಸಮಸ್ಯೆ ರಹಿತವಾಗಿಸುವುದು ಕಷ್ಟಸಾಧ್ಯವಾದರೂ ಸಚಿವನಾಗಿದ್ದಾಗ ಶಿಕ್ಷಕ ಸಮುದಾಯಕ್ಕೆ ಮಾನಸಿಕ ನೆಮ್ಮದಿ, ಬಡ್ತಿ ಸಮಸ್ಯೆ ನಿವಾರಣೆ, ವೇತನ, ಸೇವಾ ಭದ್ರತೆ ಇನ್ನಿತರೆ ಸೌಲಭ್ಯಗಳ ವಿಚಾರದಲ್ಲಿ ಪ್ರಾಮಾಣಿಕ ಯತ್ನ ಕೈಗೊಂಡಿದ್ದೇನೆ. ಚುನಾವಣೆ ಬಂದಾಗಲೊಮ್ಮೆ ಶಿಕ್ಷಕರ ಮೇಲೆ ಮಮಕಾರ ತೋರುವ, ಪೊಳ್ಳು ಭರವಸೆ ನೀಡುವ ಪ್ರತಿನಿಧಿ ನಾನಲ್ಲ. ಚುನಾವಣೆ ಇರಲಿ, ಇಲ್ಲದಿರಲಿ ಶಿಕ್ಷಕ ಸಮುದಾಯದೊಂದಿಗಿನ ನನ್ನ ನಂಟು ಕಿಂಚಿತ್ತು ಕಡಿಮೆಯಾಗಿಲ್ಲ.
ಕಳೆದ 42 ವರ್ಷಗಳಲ್ಲಿ ಏಳು ಚುನಾವಣೆಗಳನ್ನು ಎದುರಿಸಿದ್ದೇನೆ, ಗೆಲುವು ಸಾಧಿಸಿದ್ದೇನೆ ಎನ್ನುವುದಕ್ಕಿಂತ ಶಿಕ್ಷಕರು ನನ್ನನ್ನು ಗೆಲ್ಲಿಸಿದ್ದಾರೆ. ಪ್ರತಿ ಚುನಾವಣೆ ಸಂದರ್ಭದಲ್ಲೂ ಆರು ವರ್ಷಗಳ ಅವಧಿಯಲ್ಲಿ ನಾನೇನು ಮಾಡಿದ್ದೇನೆ ಎಂಬುದರ ಅಂಕಿ-ಅಂಶದ ಮಾಹಿತಿ, ಸರಕಾರಿ ಆದೇಶಗಳ ಸಮೇತ ಕಿರುಹೊತ್ತಿಗೆ ಹೊರಡಿಸಿ ಶಿಕ್ಷಕ ಸಮುದಾಯಕ್ಕೆ ವರದಿ ಒಪ್ಪಿಸುತ್ತ ಬಂದಿದ್ದೇನೆ.
8ನೇ ಬಾರಿಯ ಸ್ಪರ್ಧೆ ವೇಳೆಯೂ ಏಳನೇ ಅವಧಿಯ ಸಾಧನೆ ಪುಸ್ತಕವನ್ನು ಶಿಕ್ಷಕ ಸಮುದಾಯದ ಮುಂದಿಟ್ಟಿದ್ದೇನೆ. ನನ್ನನ್ನು ಟೀಕಿಸುವ ವಿರೋಧಿಗಳು ಸಾಧನೆ ಇರಲಿ, ಶಿಕ್ಷಕರ ಪರ ತಾವೇನು ಹೋರಾಟ ಮಾಡಿದ್ದೇವೆ ಎಂದಾದರೂ ಹೇಳಲಿ.
ವಾಗ್ಧಾನ ಉಲ್ಲಂಘಿಸಿಲ್ಲ: ಸುಮಾರು 42 ವರ್ಷಗಳಿಂದಲೂ ನನ್ನನ್ನು ಬೆಳೆಸಿದ, ಬೆನ್ನು ತಟ್ಟಿದ ಶಿಕ್ಷಕ ಸಮುದಾಯಕ್ಕೆ ನೀಡಿದ ವಾಗ್ಧಾನವನ್ನು ಇಂದಿಗೂ ಕಿಂಚಿತ್ತು ಲೋಪವಿಲ್ಲದೆ ನಿಯತ್ತಿನಿಂದ ಪಾಲಿಸಿಕೊಂಡು ಬಂದಿದ್ದೇನೆ. ಅದು 1981ರ ಕಾಲಘಟ್ಟ. ಜುಲೈ 9ರಂದು ಪರಿಷತ್ತಿನಲ್ಲಿ ಅಂದಿನ ಸಭಾಪತಿ ಬಸವರಾಜೇಶ್ವರಿಯವರು ಮೊದಲ ಬಾರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಿದಾಗ ಶಿಕ್ಷಕರ ಸಮಸ್ಯೆ, ಶಿಕ್ಷಣದ ಕೊರತೆ ಬಗ್ಗೆ ಗಮನ ಸೆಳೆದಿದ್ದೆ. ಅಲ್ಲಿಂದ ಇಲ್ಲಿವರೆಗೆ ಅಧಿಕಾರ ಇರಲಿ, ಇಲ್ಲದಿರಲಿ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿದ್ದೇನೆ. ಶಿಕ್ಷಕರ ಜಾತಿ ನೋಡದೆ ಕೆಲಸ ಮಾಡುತ್ತಿದ್ದೇನೆ. ನನ್ನ ವಿರುದ್ಧ ಮತ ಚಲಾಯಿಸಿದ ಶಿಕ್ಷಕರಿಗೂ ಮರು ಮಾತನಾಡದೆ ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವೆ. ಹೊಸ ಪಿಂಚಣಿ ನೀತಿ ವಿರುದ್ಧ ಧ್ವನಿ ಎತ್ತಿದ್ದೇನೆ. ಹೋರಾಟದ ಜತೆಗೆ ಅನೇಕ ಸಮಾವೇಶದಲ್ಲಿ ಭಾಗವಹಿಸಿದ್ದೇನೆ. ಇದು ದೇಶದ ಸಮಸ್ಯೆ. ಸಭಾಪತಿಯಾಗಿ ಸಿಎಂ ಜತೆ ಸಭೆ ಮಾಡಿ ಪರಿಹಾರಕ್ಕೆ ಸರಕಾರಕ್ಕೆ ನಿರ್ದೇಶನ ನೀಡಿದ್ದೇನೆ. ನನ್ನದೇ ಅಧ್ಯಕ್ಷತೆಯ ಕಾಲ್ಪನಿಕ ವೇತನ ವರದಿ ಜಾರಿಗೆ ಪ್ರಾಮಾಣಿಕವಾಗಿ ಯತ್ನಿಸಿದ್ದೇನೆ. ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡಿದಾಗಲೂ ಸರಕಾರಕ್ಕೆ ಮನವರಿಕೆ ಮಾಡಿ ಜಾರಿಗೆ ಯತ್ನಿಸಿದ್ದೇನೆ. ಅನುದಾನ ರಹಿತ-ಅನುದಾನಿತ, ಸರಕಾರಿ ಎನ್ನದೇ ಎಲ್ಲ ಶಿಕ್ಷಕರ ನೋವಿಗೆ ಸ್ಪಂದಿಸಿದ್ದೇನೆ. ಅವರ ವಿಶ್ವಾಸಕ್ಕೆ ಆತ್ಮವಂಚನೆ ಕೆಲಸ ಇಲ್ಲಿಯವರೆಗೆ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ವಿರೋಧಿಗಳ ಕ್ಷುಲ್ಲಕ ಟೀಕೆಗಳಿಗೆ ಉತ್ತರ ಕೊಡುವ ಬದಲು, ಶಿಕ್ಷಕ ಸಮುದಾಯದ ಹಿತಕ್ಕೆ ಹೆಚ್ಚಿನ ಚಿಂತನೆ, ಸಮಯ ಮೀಸಲಿಡಲು ನಿರ್ಧರಿಸಿದ್ದೇನೆ.
ಸಂತೋಷದಿಂದಲೇ ಬಿಜೆಪಿ ಸೇರ್ಪಡೆ: ಬದಲಾದ ರಾಜಕೀಯ ಸ್ಥಿತಿ, ಶಿಕ್ಷಕರು ಅದರಲ್ಲೂ ಯುವ ಶಿಕ್ಷಕರ ಅನಿಸಿಕೆ ಮೇರೆಗೆ ಸಂತೋಷದಿಂದ ಬಿಜೆಪಿ ಸೇರಿದ್ದೇನೆ. 1980ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನ ಪರಿಷತ್ತಿಗೆ ಹೋದಾಗ ರಾಮಕೃಷ್ಣ ಹೆಗಡೆಯವರು ನನ್ನನ್ನು ಗುರುತಿಸಿದರು. 1986ರಲ್ಲಿ ಜನತಾ ಪಕ್ಷದಿಂದ ಟಿಕೆಟ್ ನೀಡಿದರು. ಅವರ ಜೀವಿತಾವಧಿವರೆಗೂ ಅವರೊಂದಿಗಿದ್ದೆ. ಲೋಕಶಕ್ತಿಯಿಂದಲೂ ಗೆಲುವು ಸಾಧಿಸಿದೆ. ನಂತರ ಜೆಡಿಎಸ್ ಸೇರಿ ಮೂರು ಬಾರಿ ಆಯ್ಕೆಯಾದೆ, ನಿಷ್ಠೆಯಿಂದ ಪಕ್ಷದಲ್ಲಿದ್ದೆ. ಇದೀಗ ರಾಜಕೀಯ ಸ್ಥಿತಿ ಬದಲಾಗಿದೆ. ಶಿಕ್ಷಕರ ಅನಿಸಿಕೆಗಳ ಹೊರತಾಗಿ ನಾನಿಲ್ಲ. ಬಿಜೆಪಿ ಸೇರಿದ್ದೇನೆ. ಬಿಜೆಪಿ ಎಲ್ಲ ನಾಯಕರು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ. ಚುನಾವಣೆಯಲ್ಲಿ ನನ್ನ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಾರೆ. ಯಾವ ಪಕ್ಷದಲ್ಲಿರುತ್ತೇನೋ ಆ ಪಕ್ಷಕ್ಕೆ ನಿಷ್ಠೆ ನನ್ನ ಜಾಯಮಾನ.
“”ರಾಜಕೀಯ ಹಿನ್ನೆಲೆಯೇ ಇಲ್ಲದ, ಸಾಮಾನ್ಯ ಶಿಕ್ಷಕನಾಗಿದ್ದ ನನ್ನನ್ನು ಏಳು ಬಾರಿ ವಿಧಾನ ಪರಿಷತ್ತು ಸದಸ್ಯನನ್ನಾಗಿಸಿ ದೇಶದಲ್ಲೇ ದಾಖಲೆಯಾಗುವಂತೆ ಮಾಡಿದ್ದು, ಸಚಿವ-ಸಭಾಪತಿ ಸ್ಥಾನಕ್ಕೇರುವಂತೆ ಮಾಡಿದ್ದು, ಶಿಕ್ಷಕರ ಬಲ ಹಾಗೂ ಆಶೀರ್ವಾದ..” – ಬಸವರಾಜ ಹೊರಟ್ಟಿ
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.