![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 10, 2022, 3:55 PM IST
ಬೆಂಗಳೂರು: ನಾವು ಯಾರನ್ನೂ ಹೈಜಾಕ್ ಮಾಡಿಲ್ಲ, ಅದರ ಅವಶ್ಯಕತೆಯು ನಮಗಿಲ್ಲ. ಕಾಂಗ್ರೆಸ್ ನ ಎಲ್ಲ 69 ಮಂದಿ ಪಕ್ಷಕ್ಕೆ ಮತ ನೀಡಿದ್ದಾರೆ. ಅದು ಸಮಾಧಾನದ ವಿಷಯ. ಬೇರೆ ಪಕ್ಷದ ವಿಚಾರ ನನಗೆ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ತಮ್ಮ ಪಕ್ಷದ ಶಾಸಕರನ್ನು ಕಾಂಗ್ರೆಸ್ ನವರು ಹೈಜಾಕ್ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ನಾವು ಹೈಜಾಕ್ ಮಾಡಬೇಕೆಂದಿದ್ದರೆ ಅರ್ಧ ಡಜನ್ ಶಾಸಕರಿದ್ದರು. ಆದರೆ ನಮಗೆ ಅದರ ಅವಶ್ಯಕತೆ ಇಲ್ಲ. ಬೇರೆಯವರಿಗೆ ಮುಜುಗರ ಮಾಡುವುದು ನಮಗೆ ಬೇಕಿಲ್ಲ. ಅವರಿಗೆ ನಾವೇನು ಸಲಹೆ ನೀಡಿದ್ದೇವೆಂದು ಬೇಕಿದ್ದರೆ ಅವರನ್ನೇ ಕೇಳಿ. ನಮ್ಮ ಪಕ್ಷದ 69 ಮಂದಿಗೆ ವಿಪ್ ನೀಡಿದ್ದೆವು. ಅವರೆಲ್ಲರೂ ನಮಗೆ ಮತ ಹಾಕಿದ್ದಾರೆ. ಅದನ್ನು ನಾನು ಕಣ್ಣಲ್ಲಿ ನೋಡಿದ್ದೇನೆ. ನನಗೆ ಅಷ್ಟು ಸಾಕು. ಬೇರೆಯವರ ವಿಚಾರ ನಾನು ಮಾತಾಡುವುದಿಲ್ಲ ಎಂದರು.
ಜೆಡಿಎಸ್ ಮುಖಂಡ ರೇವಣ್ಣ ನಿಮಗೆ ಮತಪತ್ರ ತೋರಿಸಿದರಂತಲ್ಲ ಎಂಬ ಪ್ರಶ್ನೆಗೆ, ನಾನು ಒಂದು ಪಕ್ಷದ ಮತಗಟ್ಟೆ ಎಜೆಂಟ್ ಆಗಿ ಗೌಪ್ಯ ಮತದಾನ ಪ್ರಕ್ರಿಯೆ ಬಗ್ಗೆ ಮಾತಾಡಲು ಹಕ್ಕಿಲ್ಲ. ಅದು ಸರಿಯೂ ಅಲ್ಲ. ನಾನು ಕಣ್ಣಲ್ಲಿ ಕಂಡಿದ್ದು ಮಾತ್ರ ಹೇಳಬಹುದು. ಬೇರೆ ಪಕ್ಷದ ಯಾರೂ ನನಗೆ ಮತಪತ್ರ ತೋರಿಸಿಲ್ಲ. ರೇವಣ್ಣನವರ ವಿಚಾರಕ್ಕೆ ಎರಡೂ ಪಕ್ಷದವರೂ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಗೌಪ್ಯ ಮತದಾನದ ಬಗ್ಗೆ ನಾನು ಮಾತಾಡುವುದಿಲ್ಲ, ಅದಕ್ಕೆ ನನಗೆ ಹಕ್ಕೂ ಇಲ್ಲ ಎಂದರು.
ಇದನ್ನೂ ಓದಿ:ಬಿಜೆಪಿಯನ್ನು ಗೆಲುವಿನ ದಡ ಹತ್ತಿಸಿದ ‘ಆತ್ಮಸಾಕ್ಷಿ’ಯ ಮತ; ಸೋತರೂ ಗೆದ್ದ ಸಿದ್ದರಾಮಯ್ಯ
ಜೆಡಿಎಸ್ ನ ಕೆಲವರು ನಿಮ್ಮ ಅಭ್ಯರ್ಥಿಗೆ ಮತ ಹಾಕಿದ್ದಾರಂತಲ್ಲ, ಹಾಗೆಂದು ಶ್ರೀನಿವಾಸಗೌಡರೇ ಹೇಳಿದ್ದಾರೆ ಎಂಬ ಪ್ರಸ್ತಾಪಕ್ಕೆ, ಬೇರೆಯವರ ವಿಚಾರ ನನಗೆ ಗೊತ್ತಿಲ್ಲ. ನನಗೆ ಬೇರೆ ಯಾರೂ ಮತಪತ್ರ ತೋರಿಸಿಲ್ಲ. ಹೀಗಾಗಿ ನಾನು ಅದರ ಬಗ್ಗೆ ಮಾತಾಡುವುದಿಲ್ಲ. ಶ್ರೀನಿವಾಸಗೌಡರು ನಮ್ಮ ಉತ್ತಮ ಸ್ನೇಹಿತರು. ಬಹಳ ಬೇಕಾದವರು. ಅದರಲ್ಲಿ ಎರಡು ಮಾತಿಲ್ಲ. ಅಸೆಂಬ್ಲಿಯಲ್ಲಿ ನಾವು ಧರಣಿ ಮಾಡಿದಾಗ ನಮ್ಮ ಜತೆ ಕೂತಿದ್ದರು, ಹೋರಾಟ ಮಾಡಿದ್ದರು. ಸ್ಥಳೀಯ ಚುನಾವಣೆಯಲ್ಲಿ ನಮಗೆ ಬಹಳ ಸಹಾಯ ಮಾಡಿದ್ದಾರೆ. ನಿನ್ನೆ ನನ್ನ ಮನೆಗೂ ಬಂದು ಭೇಟಿ ಮಾಡಿದ್ದರು. ಆದರೆ ಮತದಾನದ ವಿಚಾರದಲ್ಲಿ ಆವರೇನು ಮಾಡಿದ್ದಾರೋ ಗೊತ್ತಿಲ್ಲ. ಆತ್ಮಸಾಕ್ಷಿ ಮತ ನೀಡಿ ಎಂದು ಕೇಳಿದ್ದೆವು. ಅವರೇನು ಮಾಡಿದ್ದಾರೋ, ಬೇರೆಯವರು ಏನೂ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರ ಹೇಗೆ ಮಾತಾಡಲಿ ಎಂದರು.
You seem to have an Ad Blocker on.
To continue reading, please turn it off or whitelist Udayavani.