ಶಿವಣ್ಣನ ಚಿತ್ರಕ್ಕೆ ಅರ್ಜುನ್ ಜನ್ಯ ನಿರ್ದೇಶನ
Team Udayavani, Jun 14, 2022, 11:55 AM IST
![Arjun Janya to direct a movie to Shiva rajkumar](https://www.udayavani.com/wp-content/uploads/2022/06/shivanna-1-620x342.jpg)
![Arjun Janya to direct a movie to Shiva rajkumar](https://www.udayavani.com/wp-content/uploads/2022/06/shivanna-1-620x342.jpg)
ಕನ್ನಡ ಚಿತ್ರರಂಗದಲ್ಲಿ ಸಂಗೀತ ಸಂಯೋಜಕನಾಗಿ, ಗಾಯಕನಾಗಿ ಗುರುತಿಸಿಕೊಂಡಿರುವ ಅರ್ಜುನ್ ಜನ್ಯ, ಈಗ ಡೈರೆಕ್ಟರ್ ಕ್ಯಾಪ್‌ಧರಿಸಿ, ಸಿನಿಮಾ ನಿರ್ದೇಶಕನ ಸ್ಥಾನ ಅಲಂಕರಿಸುತ್ತಿದ್ದಾರೆ.
ಹೌದು, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ಹೊಸಚಿತ್ರಕ್ಕೆ ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿದ್ದು, ಈ ಮೂಲಕ ಅರ್ಜುನ್ ಜನ್ಯ ನಿರ್ದೇಶಕರಾಗಿ ಬಡ್ತಿ ಪಡೆದುಕೊಳ್ಳುತ್ತಿದ್ದಾರೆ. ಅಂದಹಾಗೆ, ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿರುವ ಮಾಹಿತಿಯನ್ನು ಸ್ವತಃ ನಾಯಕ ನಟ ಶಿವರಾಜ ಕುಮಾರ್ ಅವರೇ ಖುದ್ದಾಗಿ ಹಂಚಿಕೊಂಡಿದ್ದಾರೆ.
ತಮ್ಮ ನಿವಾಸದಲ್ಲಿ ನಡೆದ “ಬೈರಾಗಿ’ ಸಿನಿಮಾದ ಪತ್ರಿಕಾಗೋಷ್ಟಿ ವೇಳೆ ಮಾತನಾಡಿದ ಶಿವರಾಜ ಕುಮಾರ್, ತಮ್ಮ ಮತ್ತು ಅರ್ಜುನ್ ಜನ್ಯ ಕಾಂಬಿನೇಶನ್ ಸಿನಿಮಾದ ಬಗ್ಗೆ ಮಾತನಾಡಿದರು. “ಅರ್ಜುನ್ ಜನ್ಯ ಮಾಡಿಕೊಂಡಿರುವ ಸಬ್ಜೆಕ್ಟ್ ತುಂಬ ಚೆನ್ನಾಗಿದೆ. ಕಥೆ ಕೇಳಿ ನಾನೂ ಕೂಡ ತುಂಬ ಎಕ್ಸೈಟ್ ಆಗಿದ್ದೇನೆ. ಸದ್ಯ ಈ ಸಬ್ಜೆಕ್ಟ್ ಮೇಲೆ ಸ್ಕ್ರಿಪ್ಟ್ ಕೆಲಸಗಳು ಶುರುವಾಗುತ್ತಿದೆ. ಪ್ರೀ-ಪ್ರೊಡಕ್ಷನ್ ಕೆಲಸಗಳಿಗೆ ಐದಾರು ತಿಂಗಳು ಬೇಕಾಗಬಹುದು’ ಎಂದು ತಿಳಿಸಿದ್ದಾರೆ.
ಜೂ. 17ಕ್ಕೆ ರಾಕ್‌ಲೈನ್ ಜೊತೆ ಹೊಸಚಿತ್ರ ಇನ್ನು ಶಿವರಾಜಕುಮಾರ್, ಪ್ರಭುದೇವ ಅವರ ಕಾಂಬಿನೇಶನ್‌ನಲ್ಲಿ ಬರಲಿರುವ ಹೊಸ ಸಿನಿಮಾಕ್ಕೆ ಯೋಗರಾಜ್ ಭಟ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿಯ ಬಗ್ಗೆಯೂ ಇದೇ ವೇಳೆ ಒಂದಷ್ಟು ಅಪ್ಡೇಟ್ ಸಿಕ್ಕಿದೆ.
ಶಿವರಾಜ ಕುಮಾರ್, ಪ್ರಭುದೇವ ಮತ್ತು ಯೋಗರಾಜ್ ಭಟ್ ಮೂವರ ಸಮಾಗಮದಲ್ಲಿ ಮೂಡಿಬರುತ್ತಿರುವ ಹೊಸಚಿತ್ರಕ್ಕೆ ಇದೇ ಜೂ. 17ಕ್ಕೆ ಮುಹೂರ್ತ ನಡೆಯಲಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಶಿವಣ್ಣ – ಪ್ರಭುದೇವ ತೆರೆಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಸರಳವಾಗಿ ಜನ್ಮದಿನ ಆಚರಣೆ: ಈ ವರ್ಷ ಶಿವರಾಜ್ ಕುಮಾರ್ 60ನೇ ವರ್ಷಕ್ಕೆ ಕಾಲಿಡುತ್ತಿದ್ದು, ಶಿವಣ್ಣ ಹುಟ್ಟುಹಬ್ಬವನ್ನು ಈ ಬಾರಿ ಅದ್ಧೂರಿ ಮತ್ತು ಸಡಗರದಿಂದ ಆಚರಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಪುನೀತ್ ರಾಜಕುಮಾರ್ ನಿಧನದ ಹಿನ್ನೆಲೆಯಲ್ಲಿ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ಶಿವರಾಜ ಕುಮಾರ್ ನಿರ್ಧರಿಸಿದ್ದಾರೆ.
“ಬೈರಾಗಿ’ ದರ್ಶನಕ್ಕೆ ರೆಡಿ: ಜುಲೈ 1ರಂದು ಶಿವರಾಜಕುಮಾರ್ ಅಭಿನಯದ “ಬೈರಾಗಿ’ ಸಿನಿಮಾ ಬಿಡುಗಡೆಯಾಗುತ್ತಿದೆ. ಇನ್ನು “ಬೈರಾಗಿ’ ಚಿತ್ರತಂಡ ಶಿವಣ್ಣ ಹುಟ್ಟುಹಬ್ಬಕ್ಕೂ ಮುನ್ನ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಎಂದು ಶಿವಣ್ಣ ತಿಳಿಸಿದ್ದಾರೆ. ಶಿವರಾಜ ಕುಮಾರ್ ಹುಟ್ಟುಹಬ್ಬಕ್ಕಾಗಿ ಹತ್ತು ದಿನ ಮೊದಲೇ ಬೈರಾಗಿ ಸಿನಿಮಾ ರಿಲೀಸ್ ಆಗುತ್ತಿದ್ದು, ಚಾಮರಾಜನಗರದಲ್ಲಿ ಪ್ರಿ-ರಿಲೀಸ್ ಇವೆಂಟ್ ನಡೆಯಲಿದೆ. ಜೂ. 25 ರಂದು ಚಾಮರಾಜನಗರದಲ್ಲಿ ಪ್ರೀ-ಇವೆಂಟ್ ಕಾರ್ಯಕ್ರಮ ಆಯೋಜನೆಯಾಗಿದ್ದು, ಜೂ 24 ರಂದು ರಾಮನಗರದಿಂದ ಮೈಸೂರುವರೆಗೆ ರೋಡ್ ಶೋ ಕೂಡ ನಡೆಯಲಿದೆ.