ತಡೆಯಿಲ್ಲದೇ ಓಡುತ್ತಿದೆ ಐಪಿಎಲ್‌ನ ಸಿರಿವಂತ ಕುದುರೆ
ಪ್ರಸಾರದ ಹಕ್ಕು ಪಡೆಯಲು ದೈತ್ಯಸಂಸ್ಥೆಗಳ ಪೈಪೋಟಿ; ವಿಶ್ವದ ಶ್ರೀಮಂತ ಕ್ರೀಡಾಲೀಗ್‌ಗಳಲ್ಲಿ ಐಪಿಎಲ್‌ಗೆ 2ನೇ ಸ್ಥಾನ
Team Udayavani, Jun 16, 2022, 6:50 AM IST
2023ರಿಂದ 2027ರವರೆಗಿನ ಐಪಿಎಲ್ ನೇರಪ್ರಸಾರ ಹಕ್ಕುಗಳು ಬೇರೆಬೇರೆ ವಿಭಾಗಗಳಲ್ಲಿ ಒಟ್ಟು 48,390 ಕೋಟಿ ರೂ.ಗೆ ಮಾರಾಟವಾಗಿವೆ. ಇನ್ನು ಬಿಸಿಸಿಐ ಒಂದು ಐಪಿಎಲ್ ಪಂದ್ಯದ ನೇರಪ್ರಸಾರದ ಮೂಲಕ ಪಡೆಯುವ ಹಣ 114 ಕೋಟಿ ರೂ.ಗಳು. ಐಪಿಎಲ್ ನೇರಪ್ರಸಾರದ ಹಕ್ಕುಗಳನ್ನು ಪಡೆಯಲು ವಿಶ್ವದ ಶ್ರೀಮಂತ ಸಂಸ್ಥೆಗಳ ನಡುವೆ ಈ ಮಟ್ಟದ ಪೈಪೋಟಿ ಏರ್ಪಟ್ಟಿದ್ದೇಕೆ? ಏನಿದರ ಮರ್ಮ? ಐಪಿಎಲ್ ಆದಾಯದ ಮೂಲಗಳೇನು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.
ಯಾಕಿಷ್ಟೊಂದು ಜನಪ್ರಿಯತೆ?
ಭಾರತ ವಿಶ್ವದಲ್ಲೇ 2ನೇ ಗರಿಷ್ಠ ಜನಸಂಖ್ಯೆ (140 ಕೋಟಿ) ಹೊಂದಿರುವ ದೇಶ. ಹೀಗೆಯೇ ಹೋದರೆ ಇನ್ನು ಕೆಲವೇ ವರ್ಷಗಳಲ್ಲಿ ಚೀನವನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆಯಲಿದೆ. ಇಲ್ಲಿನ ಜನಪ್ರಿಯ ಕ್ರೀಡೆಗಳ ಪೈಕಿ ಕ್ರಿಕೆಟ್‌ನದ್ದು ಏಕಸ್ವಾಮ್ಯ!
ಇಡೀ ದೇಶದ ಮೂಲೆಮೂಲೆಗಳಲ್ಲಿ ಆಡುವ ಏಕೈಕ ಕ್ರೀಡೆಯೆಂದರೆ ಕ್ರಿಕೆಟ್ ಮಾತ್ರ. ಇನ್ನಿತರೆ ಜನಪ್ರಿಯ ಕ್ರೀಡೆಗಳು ನಿರ್ದಿಷ್ಟ ರಾಜ್ಯಗಳು, ಜಿಲ್ಲೆಗಳಿಗೆ ಸೀಮಿತವಾಗಿವೆ. ಕ್ರಿಕೆಟ್ ಪಂದ್ಯಗಳಲ್ಲಿ ಭಾರತ ತಂಡ ಗೆದ್ದಾಗ ಜನರು ಅದನ್ನು ದೇಶದ ಗೆಲುವು, ದೇಶದ ಹೆಮ್ಮೆ ಎಂದು ಭಾವಿಸುವಷ್ಟು ಕ್ರಿಕೆಟ್ ಆವರಿಸಿಕೊಂಡಿದೆ. ಅದಕ್ಕೆ ಪೂರಕವಾಗಿ ಬಿಸಿಸಿಐ ಒಂದು ವೃತ್ತಿಪರ ಸಂಸ್ಥೆಯಾಗಿ ಬೆಳೆದುನಿಂತಿದೆ. ಕ್ರಿಕೆಟ್‌ಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಜಿಲ್ಲಾಮಟ್ಟದಲ್ಲೂ ರೂಪಿಸಿದೆ.
ಐಪಿಎಲ್ ಮೂಲಕ ಅತ್ಯಂತ ಬಡವರ್ಗದಿಂದ ಬಂದ ಅಪರಿಚಿತರೂ ರಾತ್ರೋರಾತ್ರಿ ಶ್ರೀಮಂತರಾಗಿದ್ದಾರೆ. ಇವೆಲ್ಲ ಕ್ರಿಕೆಟನ್ನು ಜನ ಗಂಭೀರವಾಗಿ ಪರಿಗಣಿಸಲು ಕಾರಣ.
ಕ್ರಿಕೆಟ್‌ನಂತೆ ಮೂಲಸೌಕರ್ಯ ಹೊಂದಿರುವ ಇನ್ನೊಂದು ಕ್ರೀಡೆ ಭಾರತದಲ್ಲಿಲ್ಲ. ಇಲ್ಲಿ ಕಾಲಕಾಲಕ್ಕೆ ವಿಶ್ವದರ್ಜೆಯ ಆಟಗಾರರು ರೂಪುಗೊಂಡು ಜನರನ್ನು ಮುಂದಕ್ಕೆ ಒಯ್ಯುತ್ತಲೇ ಇದ್ದಾರೆ. ಆದ್ದರಿಂದ ಅಭಿಮಾನಿಗಳ ಸಂಖ್ಯೆ ನಿರಂತರವಾಗಿ ಬೆಳೆಯುತ್ತಲೇ ಇದೆ. ಇದು ನೇರಪ್ರಸಾರ ಮಾಡುವ ಟೀವಿಗಳಿಗೆ ಖಚಿತವಾಗಿ ಗೊತ್ತಿದೆ.
ವಿಶ್ವದ ಬೃಹತ್ ಮಾರುಕಟ್ಟೆಯಲ್ಲಿ ಕ್ರಿಕೆಟ್‌ಗೆ ಅಗ್ರಸ್ಥಾನ!
ಜಾಗತಿಕವಾಗಿ ಅತ್ಯಂತ ಜನಪ್ರಿಯ ಕ್ರೀಡೆಯೆಂದರೆ ಫುಟ್‌ಬಾಲ್. ಇನ್ನು ಟೆನಿಸ್ ಬಹಳ ಶ್ರೀಮಂತ ಕ್ರೀಡೆ. ತಂಡ ಕ್ರೀಡೆಗಳ ಪೈಕಿ ಫುಟ್‌ಬಾಲ್ ಬಿಟ್ಟರೆ ಕ್ರಿಕೆಟ್‌ಗೆ ಗರಿಷ್ಠ ಜನಪ್ರಿಯತೆ, ಶ್ರೀಮಂತಿಕೆಯಿರುವುದು! ಇದಕ್ಕೆ ಕಾರಣವಿದೆ. ಕ್ರಿಕೆಟ್ ಆಡುವುದು ಕೆಲವೇ ರಾಷ್ಟ್ರಗಳಲ್ಲಾದರೂ, ಅದರಲ್ಲೊಂದು ದೇಶ ಭಾರತ ಎನ್ನುವುದು ಅತ್ಯಂತ ಮಹತ್ವದ ಸಂಗತಿ. ಇಲ್ಲಿನ 140 ಕೋಟಿ ಜನಸಂಖ್ಯೆಯಲ್ಲಿ ಕ್ರಿಕೆಟ್ ಗೊತ್ತಿಲ್ಲ ಅನ್ನುವ ವ್ಯಕ್ತಿಗಳು ಬಹಳ ವಿರಳ. ಭಾರತದಲ್ಲಿರುವ ಬೃಹತ್ ಮಾರುಕಟ್ಟೆಗೆ ಕ್ರಿಕೆಟ್ ಮೂಲಕ ಲಗ್ಗೆ ಹಾಕಲು ಎಲ್ಲರೂ ಬಯಸುತ್ತಾರೆ. ಇದು ಫುಟ್‌ಬಾಲ್, ಟೆನಿಸ್‌ಗಿಲ್ಲದ ಸೌಲಭ್ಯವನ್ನು, ಕ್ರಿಕೆಟ್‌ಗೆ ತಂದುಕೊಟ್ಟಿದೆ.
ಅಮೆಜಾನ್, ಗೂಗಲ್, ಆ್ಯಪಲ್‌ಗೂ ಆಸಕ್ತಿ
ಅಮೆರಿಕದ ದೈತ್ಯ ತಾಂತ್ರಿಕ ಸಂಸ್ಥೆಗಳಾದ ಆಲ್ಫಾಬೆಟ್ (ಗೂಗಲ್), ಆ್ಯಪಲ್ ಮತ್ತು ಆನ್‌ಲೈನ್ ಮಾರಾಟ ದಿಗ್ಗಜ ಅಮೆಜಾನ್‌ಗೂ ಐಪಿಎಲ್ ನೇರಪ್ರಸಾರದ ಹಕ್ಕನ್ನು ಖರೀದಿಸಲು ಆಸಕ್ತಿಯಿತ್ತು. ಕಡೆಯಕ್ಷಣದಲ್ಲಿ ಈ ಸಂಸ್ಥೆಗಳು ಹಿಂದೆ ಸರಿದವು. ಐಪಿಎಲ್ ಪ್ರಸಾರದಿಂದ ಆ ಮಟ್ಟದಲ್ಲಿ ಲಾಭವಿರುವುದೇ, ಈ ಸಂಸ್ಥೆಗಳೂ ಪ್ರಸಾರಕ್ಕೆ ಕೈಹಾಕಬಹುದಾ ಎಂದು ಚಿಂತಿಸಲು ಕಾರಣ. ಸಹಜವಾಗಿ ಐಪಿಎಲ್ ಅನ್ನು ನೇರಪ್ರಸಾರ ಮಾಡುವ ಸಂಸ್ಥೆ ಜನಪ್ರಿಯವೂ ಆಗುತ್ತದೆ, ಶ್ರೀಮಂತವೂ ಆಗುತ್ತದೆ. ಆ ಸಂಸ್ಥೆಗೆ ಇನ್ನಿತರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರೆ ಅವಕ್ಕೂ ಸಹಜವಾಗಿ ಪ್ರಚಾರ ಸಿಗುತ್ತದೆ.
ಏಕಸ್ವಾಮ್ಯ ಮುಗಿಯಿತು!
ಈ ಬಾರಿ ಐಪಿಎಲ್ ನೇರಪ್ರಸಾರದಲ್ಲಿ ಒಂದು ಸಂಸ್ಥೆಯ ಏಕಸ್ವಾಮ್ಯ ಮುಗಿದಿದೆ. 2008ರಿಂದ 2017ರವರೆಗೆ ಸೋನಿ ಪಿಕ್ಚರ್ಸ್ 8,200 ಕೋಟಿ ರೂ. ನೀಡಿ 10 ವರ್ಷಗಳ ಅವಧಿಗೆ ನೇರಪ್ರಸಾರದ ಹಕ್ಕನ್ನು ಹೊಂದಿತ್ತು. 2018-22ರ ಐದು ವರ್ಷದ ಅವಧಿಗೆ 16,348 ಕೋಟಿ ರೂ.ಗಳನ್ನು ನೀಡಿ ಸ್ಟಾರ್ ಸಂಸ್ಥೆಯು ಟೀವಿ ಮತ್ತು ಡಿಜಿಟಲ್ ಹಕ್ಕನ್ನು ಪಡೆದಿತ್ತು. ಈ ಎರಡೂ ಅವಧಿಯಲ್ಲಿ ನೇರಪ್ರಸಾರದ ಹಕ್ಕು ಒಂದೇ ಸಂಸ್ಥೆಗೇ ಸಿಕ್ಕಿ ಏಕಸ್ವಾಮ್ಯ ಸಾಧ್ಯವಾಗಿತ್ತು. ಆದರೆ ಈ ಬಾರಿ ಟೀವಿ ನೇರಪ್ರಸಾರ ಸ್ಟಾರ್‌ಗೆ, ಡಿಜಿಟಲ್ ಪ್ರಸಾರ ವಯಾಕಾಮ್18ಗೆ ಲಭಿಸಿದೆ. ಇನ್ನು ಬೇರೆ ಬೇರೆ ಹಕ್ಕುಗಳು ಬೇರೆಬೇರೆ ಸಂಸ್ಥೆಗಳಿಗೆ ಸಿಕ್ಕಿ ಏಕಸ್ವಾಮ್ಯ ಮುಗಿದು ಹೋಗಿದೆ.
ಆದಾಯದ ಮೂಲಗಳು
1. ನೇರಪ್ರಸಾರ: ಈ ಹಕ್ಕುಗಳ ಮಾರಾಟವೇ ಐಪಿಎಲ್‌ನ ಬೃಹತ್ ಮತ್ತು ಯಾವುದೇ ಆತಂಕಗಳಿಲ್ಲದ ಆದಾಯದ ಮೂಲ. ನೇರಪ್ರಸಾರ ಮಾಡುವ ಸಂಸ್ಥೆ ಪ್ರತೀ ಓವರ್‌ಗಳ ನಡುವೆ ಜಾಹೀರಾತು ಪ್ರದರ್ಶಿಸಿ, ಕಂಪನಿಗಳಿಂದ ಧಾರಾಳವಾಗಿ ಹಣ ಗಳಿಸುತ್ತದೆ.
2. ಪ್ರಾಯೋಜಕತ್ವ: ಐಪಿಎಲ್‌ನ ಶೀರ್ಷಿಕೆ, ಸ್ಟ್ರಾಟೆಜಿಕ್ ಟೈಮ್‌ಔಟ್, ಅಂಪೈರ್‌ಗಳು, ಬೌಂಡರಿ ಗೆರೆಗಳ ಪ್ರಾಯೋಜಕತ್ವವನ್ನು ಬೇರೆ ಬೇರೆ ಕಂಪನಿಗಳು ಭಾರೀ ಮೊತ್ತ ನೀಡಿ ಪಡೆದಿವೆ. ಇನ್ನು ಆಟಗಾರರ ಜೆರ್ಸಿ, ಹೆಲ್ಮೆಟ್, ಬ್ಯಾಟ್, ಟೂಲ್‌ಕಿಟ್‌ಗಳ ಪ್ರಾಯೋಜಕತ್ವವನ್ನೂ ಬಹಳ ಕಂಪನಿಗಳು ಪಡೆದಿವೆ.
3. ಉತ್ಪನ್ನಗಳ ಮಾರಾಟ: ಐಪಿಎಲ್‌ನದ್ದೇ ಆದ ಜೆರ್ಸಿ, ಇತರೆ ಉಡುಪುಗಳು, ಉಪಕರಣಗಳ ಮಾರಾಟದಿಂದಲೂ ಬಿಸಿಸಿಐ ಹಣ ಗಳಿಸಬಹುದು.
4. ಟಿಕೆಟ್ ಮಾರಾಟ: ಐಪಿಎಲ್‌ನಲ್ಲಿ ದೊಡ್ಡ ಆದಾಯದ ಮೂಲಗಳಲ್ಲಿ ಟಿಕೆಟ್ ಮಾರಾಟವೂ ಒಂದು. ಅಹ್ಮದಾಬಾದ್ ಮೈದಾನದ ಪ್ರೇಕ್ಷಕ ಸಾಮರ್ಥ್ಯ 1.32 ಲಕ್ಷ. ಈ ಮೈದಾನ ತುಂಬಿದರೆ ಬರುವ ಆದಾಯವನ್ನು ನೀವೇ ಅಂದಾಜು ಮಾಡಿ!
ವಿಶ್ವದ ಶ್ರೀಮಂತ ಲೀಗ್‌ಗಳು
ನೇರಪ್ರಸಾರದಿಂದ ಬಂದ ಆದಾಯದ ಲೆಕ್ಕಾಚಾರದಲ್ಲಿ ಪ್ರಸ್ತುತ ಐಪಿಎಲ್, ವಿಶ್ವದ ಶ್ರೀಮಂತ ಲೀಗ್‌ಗಳಲ್ಲಿ 2ನೇ ಸ್ಥಾನ ಪಡೆದಿದೆ. ಐದು ಶ್ರೀಮಂತ ಲೀಗ್‌ಗಳ ಪಟ್ಟಿ ಇಲ್ಲಿದೆ.
1. ಎನ್‌ಎಫ್ಎಲ್: ಅಮೆರಿಕದ ನ್ಯಾಷನಲ್ ಫುಟ್‌ಬಾಲ್ ಲೀಗ್, ಒಂದು ಪಂದ್ಯದ ಪ್ರಸಾರದಿಂದ 132 ಕೋಟಿ ರೂ. ಗಳಿಸುತ್ತದೆ. ಇದಕ್ಕೆ ಅಗ್ರಸ್ಥಾನ.
2. ಐಪಿಎಲ್: ಇಲ್ಲಿನ ಒಂದು ಪಂದ್ಯದ ಪ್ರಸಾರದಿಂದ ಬಿಸಿಸಿಐ 114 ಕೋಟಿ ರೂ. ಗಳಿಸುತ್ತದೆ.
3. ಇಪಿಎಲ್: ಇಂಗ್ಲೆಂಡ್‌ನ ವಿಶ್ವಪ್ರಸಿದ್ಧ ಫುಟ್‌ಬಾಲ್ ಲೀಗ್ ಇಪಿಎಲ್ (ಇಂಗ್ಲಿಷ್ ಪ್ರೀಮಿಯರ್ ಲೀಗ್), ತನ್ನ ಒಂದು ಪಂದ್ಯದ ಪ್ರಸಾರದಿಂದ 82 ಕೋಟಿ ರೂ. ಗಳಿಸುತ್ತದೆ.
4. ಎಂಎಲ್‌ಬಿ: ಅಮೆರಿಕದ ಮೇಜರ್ ಲೀಗ್ ಬೇಸ್‌ಬಾಲ್ ತನ್ನ ಒಂದು ಪಂದ್ಯದ ಪ್ರಸಾರದಿಂದ 75 ಕೋಟಿ ರೂ. ಗಳಿಸುತ್ತದೆ.
5. ಬುಂಡೆಸ್ಲಿಗಾ: ಇದು ಜರ್ಮನಿಯ ಅತ್ಯಂತ ಜನಪ್ರಿಯ ಫುಟ್‌ಬಾಲ್ ಲೀಗ್. ಇದರ ಒಂದು ಪಂದ್ಯದ ಪ್ರಸಾರದಿಂದ 30 ಕೋಟಿ ರೂ. ಲಭಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.