ಹೊಸದಿಲ್ಲಿಯಲ್ಲಿ ಪ್ರಾಗ್ಯ ಸಾಗರ ಮುನಿಮಹಾರಾಜರ ದೀಕ್ಷಾ ವಿಂಶತಿ
Team Udayavani, Jun 16, 2022, 5:30 AM IST
ಮೂಡುಬಿದಿರೆ: ಪರಮ ಪೂಜ್ಯ ಆಚಾರ್ಯ 108 ಪ್ರಾಗ್ಯ ಸಾಗರ ಮುನಿ ಮಹಾರಾಜರ 20ನೇ ದೀಕ್ಷಾ ವರ್ಧಂತಿಯು ದಿಲ್ಲಿ ದ್ವಾರಕ ಸೆಕ್ಟರ್ 10ನಲ್ಲಿ ರವಿವಾರ ಜರಗಿತು.
ಆಚಾರ ಹಾಗೂ ಧರ್ಮದ ಪ್ರಚಾರದಿಂದ ಅಜ್ಞಾನದ ಕೊಳೆ ಅಳಿದು ಲೋಕದಲ್ಲಿ ಶಾಂತಿ ನೆಮ್ಮದಿಯಾಗಿ ಮುಕ್ತಿ ಸಾಧ್ಯ ಎಂದು ಅವರು ಆಶೀರ್ವಚನದಲ್ಲಿ ತಿಳಿಸಿದರು.
ಚಲಿಸುವ ವಿಶ್ವಕೋಶವಾಗಿದ್ದ ಕುಂದ ಕುಂದ ಭಾರತಿ ಪ್ರಾಕೃತ ಸಂಶೋಧನೆ ಕೇಂದ್ರದ ಆಚಾರ್ಯ ವಿದ್ಯಾನಂದರ ಶಿಷ್ಯರಾಗಿ ನಿರಂತರ ಸ್ವಾಧ್ಯಾಯ, ಸನ್ಯಾಸದ ಸಂಯಮ ಧರ್ಮದ ಪಾಠ ನಿರಂತರ ತಮಗೆ ಲಭಿಸಿದ್ದು, ಅವರೊಂದಿಗಿನ ಸತ್ಸಂಗ ಅವಿಸ್ಮರಣೀಯ ಎಂದರು.
ಮೂಡುಬಿದಿರೆಯ ಭಟ್ಟಾರಕ ಶ್ರೀಗಳು ಭಾಗಿ
ಮುನಿಮಹಾರಾಜರಿಗೆ ಮೂಡುಬಿದಿರೆ ಜೈನಮಠದ ವತಿಯಿಂದ ವಿನಯಾಂಜಲಿಪೂರ್ವಕ ಭಕ್ತಿ ಕಾಣಿಕೆ ಸಮರ್ಪಿಸಿದ ಮೂಡುಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಂಗಲ ಪ್ರವಚನವಿತ್ತರು.
ಸುಮಾರು 16 ವರ್ಷಗಳಿಂದ ಮುನಿವರ್ಯರ ಸಂಪರ್ಕ, ಅನೇಕ ಗ್ರಂಥಗಳ ಅಧ್ಯಯನ, ಪಾಠ ಪ್ರವಚನದ ಯೋಗ, ಆಚಾರ್ಯ ವಿದ್ಯಾನಂದ ಮುನಿರಾಜರ ಮಾರ್ಗದರ್ಶನ ತಮಗೆ ಲಭಿಸಿದೆ; ಗುರುವರ್ಯರ ಆಶೀರ್ವಾದ ನಿರಂತರ ಸರ್ವರಿಗೂ ಲಭಿಸಲಿ ಎಂದು ಹಾರೈಸಿದರು.
ದಿಲ್ಲಿ, ಮುಂಬಯಿ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮೊದಲಾದ ಕಡೆಗಳಿಂದ ಭಕ್ತರು ಆಗಮಿಸಿ, ಮುನಿವರ್ಯರ ಪಾದಪೂಜೆಗೈದು, ಆರತಿ ಬೆಳಗಿ ಪಿಂಚಿ, ಕಮಂಡಲ, ಶಾಸ್ತ್ರ ದಾನ ಮಾಡಿ ಭಕ್ತಿ ಕಾಣಿಕೆ ಸಮರ್ಪಿಸಿದರು.
ಸಭೆಯಲ್ಲಿ 108 ವಿಹರ್ಷ್ ಸಾಗರ ಮುನಿ ಸಂಘ, ಸೌರಭ ಸಾಗರ ಭಟ್ಟಾರಕರು, ಪಂಜಾಬ್ ಕೇಸರಿ ಪತ್ರಿಕಾ ಸಂಪಾದಕ ಸ್ವದೇಶ್ ಭೂಷಣ ಚಕ್ರೇಶ್ ಜೈನ್, ತ್ರಿಲೋಕ್ ಜೈನ್, ಸುಧೀರ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.