ಪ್ರಪಂಚ ಒಂದಾಗಿಸಿದ ಮಣ್ಣು ಉಳಿಸಿ ಅಭಿಯಾನ
27 ರಾಷ್ಟ್ರಗಳಲ್ಲಿ ಒಬ್ಬಂಟಿ ಮೋಟಾರ್ ಬೈಕ್ ಪ್ರಯಾಣ, ಲಂಡನ್‌ನಿಂದ ಭಾರತದ ವರೆಗೆ ಸದ್ಗುರು ಪ್ರಪಂಚ ಪರ್ಯಟನೆ
Team Udayavani, Jun 17, 2022, 8:00 AM IST
27 ರಾಷ್ಟ್ರಗಳಲ್ಲಿ ಮಣ್ಣು ಉಳಿಸಿ ಅಭಿಯಾನ ಕೈಗೊಂಡು, ಭಾರತ ಪ್ರವೇಶಿಸಿ, ಇಲ್ಲೂ ರಾಜ್ಯದಿಂದ ರಾಜ್ಯಕ್ಕೆ ಪ್ರವಾಸ ಮಾಡುತ್ತಿರುವ ಸದ್ಗುರು ಜಗ್ಗಿ ವಾಸುದೇವ್ ಅವರು ಇದೇ 18ರ ರಾತ್ರಿ ಕರ್ನಾಟಕಕ್ಕೆ ಬರಲಿದ್ದಾರೆ. ಇತ್ತೀಚೆಗಷ್ಟೇ ಹೊಸದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು “ಭಾರತದ ಮಣ್ಣಿನ ಶಕ್ತಿಯನ್ನು ಸದ್ಗುರುಗಳ 27 ರಾಷ್ಟ್ರಗಳ 100 ದಿನಗಳ ಮಣ್ಣು ಉಳಿಸಿ ಅಭಿಯಾನದ ಮೂಲಕ ಪ್ರಪಂಚಕ್ಕೆ ಪರಿಚಯಿಸಲಾಗಿದೆ’ ಎಂದು ಶ್ಲಾ ಸಿದ್ದಾರೆ. ಹಾಗಾದರೆ ಸದ್ಗುರು ಅವರ ಈ ಮಣ್ಣು ಉಳಿಸಿ ಅಭಿಯಾನದ ಪ್ರಾಮುಖ್ಯತೆ ಏನು? ಈ ಪ್ರವಾಸ ಹೇಗಿತ್ತು ಎಂಬ ಕುರಿತ ಒಂದು ಸಮಗ್ರ ಮಾಹಿತಿ ಇಲ್ಲಿದೆ…
ಸಾಯುತ್ತಿರುವ ಮಣ್ಣಿನ ಸಮಸ್ಯೆ :
ಮಣ್ಣು ತನ್ನಲ್ಲಿನ ಜೈವಿಕಾಂಶವನ್ನು ಕಳೆದುಕೊಂಡರೆ ಆಹಾರ ಬೆಳೆಸಲಾಗದೆ ಮರಳಾಗಿ ಹೋಗುತ್ತದೆ. ಸಮೃದ್ಧ ಮಣ್ಣು ಅಸಂಖ್ಯಾತ ಸೂಕ್ಷ್ಮ ಜೀವಾಣುಗಳಿಗೆ ಆಶ್ರಯವಾಗಿದ್ದು, ಇಂಗಾಲ(ಕಾರ್ಬನ್)ವನ್ನು ಪ್ರತ್ಯೇಕಿಸುತ್ತದೆ. ಈ ಮೂಲಕ ಪ್ರಪಂಚದ ತಾಪಮಾನ ತಗ್ಗಿಸಿ ನೀರನ್ನು ಹಿಡಿದಿಡುತ್ತದೆ. ಮಣ್ಣಿನ ಜೈವಿಕ ವೈವಿಧ್ಯ ಮತ್ತು ಮಣ್ಣಿನೊಳಗೆ ಹುದುಗಿರುವ ಜೀವಾಣುಗಳು ಮತ್ತು ಬೆಳೆಗಳ ನಡುವಿನ ಪೋಷಕ – ಸಂಬಂಧವು ಆಹಾರದ ರಕ್ಷಣೆಯಷ್ಟೇ ಅಲ್ಲದೆ ನಮ್ಮ ಆಹಾರದಲ್ಲಿನ ಪೋಷಕಾಂಶವನ್ನೂ ನಿರ್ಧರಿಸುತ್ತದೆ. ದುರದೃಷ್ಟ ವೆಂದರೆ ಇವತ್ತು ಯಾವುದೇ ರಾಷ್ಟ್ರವೂ ಮಣ್ಣಿನಲ್ಲಿ ಬೇಕಾಗಿರುವ ಶೇ.3ರಷ್ಟು ಜೈವಿಕಾಂಶವನ್ನು ಹೊಂದಿಲ್ಲ. ಜೀವನದ ಮೂಲವೇ ಮಣ್ಣು. ಅದರಲ್ಲಿನ ಜೈವಿಕ ಮಟ್ಟದ ಇಳಿಕೆಯಿಂದಾಗಿ ಮಾನವಕುಲವೇ ಸಂಕಷ್ಟ ಎದುರಿಸಬೇಕಾಗಿದೆ.
ಅಭಿಯಾನವನ್ನು ಅಪ್ಪಿಕೊಂಡ ಪ್ರಪಂಚ :
27 ರಾಷ್ಟ್ರಗಳಲ್ಲಿ ಪ್ರಯಾಣಿಸುತ್ತ ಸದ್ಗುರುಗಳು ಅನೇಕ ವಿಜ್ಞಾನಿಗಳು, ಚುನಾಯಿತ ಪ್ರತಿನಿಧಿಗಳು, ಪ್ರಭಾವೀ ವ್ಯಕ್ತಿಗಳನ್ನು ಭೇಟಿ ಮಾಡಿ ಈ ಸಂದರ್ಭದ ತುರ್ತು ಪರಿಸ್ಥಿತಿಯನ್ನು ಉದ್ದೇಶಿಸಿ ಹಲವು ಸಾರ್ವಜನಿಕ ಮತ್ತು ಖಾಸಗಿ ಕಾರ್ಯ ಕ್ರಮಗಳನ್ನು ನಡೆಸಿದರು. ಸ್ಲೊವಾಕಿಯಾದ ರಾಜಧಾನಿ ಬ್ರಾಟಿಸ್ಲಾವಾದಲ್ಲಿ ಸದ್ಗುರುಗಳಿದ್ದಾಗ ಸ್ಲೊವಾಕ್ ಗಣರಾಜ್ಯದ ನ್ಯಾಶನಲ್ ಕೌನ್ಸೆಲ್ ಸದಸ್ಯರಾದ ರೊಮಾನ ತಬಕ್ ಅವರು ಸದ್ಗುರುಗಳನ್ನು ಪಾರ್ಲಿಮೆಂಟಿಗೆ ತಮ್ಮ ಅಥಿತಿಯಾಗಿ ಕರೆದೊಯ್ದರು. ಸ್ಲೊವೇನಿಯಾದ ರಾಜಧಾನಿ ಲುಬ್ಲಿಯಾನಾದಲ್ಲಿ ಭಾರತದ ರಾಯಭಾರಿಯಾದ ನಮ್ರತಾ ಎಸ್. ಕುಮಾರ್ ಅವರು ಸದ್ಗುರುಗಳು ಅಭಿಯಾನವನ್ನು ಆರಂಭಿಸಿದ್ದಕ್ಕಾಗಿ ಮನಃಪೂರ್ವಕ ವಂದನೆಗಳನ್ನು ಸಲ್ಲಿಸಿ, ಸದ್ಗುರುಗಳನ್ನು “ಇಡೀ ಪ್ರಪಂಚಕ್ಕೆ ಭಾರತದ ರಾಯಭಾರಿ’ ಎಂದು ಬಣ್ಣಿಸಿದರು.
ಭಾರತದಲ್ಲಿ ಸ್ಪಂದನೆ :
ಭಾರತದಲ್ಲಿಯೂ ಉತ್ತಮ ಪ್ರತಿಸ್ಪಂದನೆ ಸಿಕ್ಕಿದೆ. 27 ರಾಷ್ಟ್ರಗಳ ತಮ್ಮ ಪ್ರಯಾಣ ವನ್ನು ಮುಗಿಸಿ ಗುಜರಾತಿನ ಜಾಮ್ ನಗರಕ್ಕೆ ಬಂದ ಸದ್ಗುರು ಭಾರತದ 9 ರಾಜ್ಯಗಳಲ್ಲಿ ಪಯಣ ಮುಂದುವರಿಸಲಿದ್ದಾರೆ. ಆಗಿನಿಂದ ಗುಜರಾತ್, ರಾಜಸ್ಥಾನ, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರ ಸರಕಾರಗಳು ಮಣ್ಣು ಉಳಿಸಿ ಒಡಂಬಡಿಕೆಗೆ ಸಹಿ ಹಾಕಿವೆ. 5 ಲಕ್ಷಕ್ಕೂ ಹೆಚ್ಚಿನ ಭಾರತದ ವಿದ್ಯಾರ್ಥಿಗಳು ತಮ್ಮ ಮಂತ್ರಿಗಳಿಗೆ ಪತ್ರ ಬರೆದು ಮಣ್ಣಿನ ಪುನರುಜ್ಜೀವನಕ್ಕಾಗಿ ಕಾರ್ಯಗತರಾಗಲು ವಿನಂತಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ, ಎಎಪಿ, ಟಿಆರ್‌ಎಸ್, ಬಿಜೆಡಿ, ಎಸ್‌ಪಿ, ಶಿವಸೇನಾ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳ ರಾಜಕಾರಣಿಗಳು, ಜನನಾಯಕರು ಮತ್ತಿತರರು ಮನಃ ಪೂರ್ವಕವಾಗಿ ಈ ಅಭಿಯಾನವನ್ನು ಅನುಮೋದಿಸಿದ್ದಾರೆ.
ಅಭಿಯಾನದ ಮೈಲಿಗಲ್ಲುಗಳು :
7ಕೆರೇಬಿಯನ್ ರಾಜ್ಯಗಳು, ಅಜರ್ಬೈಜಾನ್, ರೊಮೇನಿಯಾ, ಮತ್ತು ಯುಎಇ “ಮಣ್ಣು ಉಳಿಸಿ’ ಒಡಂಬಡಿಕೆ (ಎಂಒಯು)ಗೆ ಸಹಿ ಹಾಕಿ, ಮಣ್ಣನ್ನು ಉಳಿ ಸಲು ಸೂಕ್ತ ಕಾರ್ಯನೀತಿಗಳನ್ನು ಜಾರಿಮಾಡಲು ಒಪ್ಪಿವೆ. ಅಭಿಯಾನವು ಇಲ್ಲಿಯವರೆಗೆ ಪ್ರಪಂಚದಾದ್ಯಂತ 240 ಕೋಟಿ ಜನರನ್ನು ತಲುಪಿದೆ. ಹವಾಮಾನದ ಬದಲಾವಣೆ ತಗ್ಗಿಸಲು ಮತ್ತು ಮಣ್ಣಿನ ಪುನರುಜ್ಜೀವನದ ಮೂಲಕ ಆಹಾರದ ಭದ್ರತೆ ಪಡೆಯಲು ಆರಂಭವಾದ ಫ್ರೆಂಚ್ ಸರಕಾರದ “4 ಪರ್ 1,000′ ಯೋಜನೆ “ಮಣ್ಣು ಉಳಿಸಿ’ ಅಭಿಯಾನದ ಜತೆ ಒಡಂಬಡಿಕೆಗೆ ಸಹಿ ಹಾಕಿದೆ.
ಅಭಿಯಾನದ ಉದ್ದೇಶವೇನು? :
ಅಭಿಯಾನದ ಮೂಲೋದ್ದೇಶವು ಕೃಷಿ ಜಮೀನುಗಳಲ್ಲಿ ಕಡೇ ಪಕ್ಷ ಶೇ. 3ರಿಂದ ಶೇ. 6ರ ವರೆಗೆ ಜೈವಿಕಾಂಶವಿರುವಂತೆ ನೋಡಿಕೊಳ್ಳಲು ಸರಕಾರಗಳನ್ನು ಆಗ್ರಹಿಸುವುದು. ಈ ಉದ್ದೇಶ ಸಾಧಿಸಲು ಯುಎನ್‌ಸಿಸಿಡಿಯ ಕಾಪ್-15 ಅಧಿವೇಶನದಲ್ಲಿ 195 ರಾಷ್ಟ್ರಗಳನ್ನು ಉದ್ದೇಶಿಸಿ ಮಾತನಾಡಿದ ಸದ್ಗುರು, ಇದಕ್ಕಾಗಿ ಮೂರು ಹಂತಗಳ ಯೋಜನೆಯನ್ನು ರೂಪಿಸಿ ವಿವರಿಸಿದರು. ಹಾಗೆಯೇ ರೈತರು ಕನಿಷ್ಠ ಶೇ.3 ಜೈವಿಕಾಂಶದ ಗುರಿ ಮುಟ್ಟುವಂತೆ ಮಾಡಬೇಕು ಎಂದರು. ಈ ಗುರಿಯನ್ನು ಮುಟ್ಟಲು ಸ್ಪರ್ಧಾತ್ಮಕವಾಗಿಸಿ ರೈತರನ್ನು ಉತ್ತೇಜಿಸಲು ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೆ ರೈತರಿಗೆ ಈಗಿರುವ “ಕಾರ್ಬನ್ ಕ್ರೆಡಿಟ್ ವ್ಯವಸ್ಥೆ’ ಕ್ಲಿಷ್ಟವಾದುದೆಂದು ಹೇಳಿ ಅದನ್ನು ಸರಳಗೊಳಿಸಲು ಹೇಳಿದರು.
ಮುಂದುವರಿದ ಪ್ರಯಾಣ…
2022ರ ಮಾ. 21ರಂದು ತಮ್ಮ ಪ್ರಯಾಣ ಆರಂಭಿಸಿದ ಸದ್ಗುರುಗಳು ತಮ್ಮ ಬದ್ಧತೆಯನ್ನು ನಿರಂತರವಾಗಿ ತೋರಿಸಿದ್ದಾರೆ. ಯೂರೋಪಿನಲ್ಲಿ, ಹಿಮಪಾತ, ಮಳೆ, ಶೂನ್ಯಕ್ಕೂ ಕೆಳಗಿನ ತಾಪಮಾನಗಳ ಜತೆಗೆ ಅರಬ್ ರಾಜ್ಯಗಳಲ್ಲಿನ ಮರಳಿನ ಬಿರುಗಾಳಿ, ಅತೀ ಶಾಖದ ಹವೆ ಮುಂತಾದ ಅತ್ಯಂತ ಅಪಾಯದ ಪರಿಸ್ಥಿತಿಯನ್ನು ಎದುರಿಸುತ್ತಲೇ ತಮ್ಮ ಅಭಿಯಾನ ಮುಂದುವರಿಸಿದ್ದಾರೆ. ಭಾರತಕ್ಕೆ ಮರಳಿದ ಅನಂತರ, ಗುಜರಾತ್, ರಾಜಾಸ್ಥಾನ, ಹರಿಯಾಣ, ಹೊಸದಿಲ್ಲಿ ಮತ್ತು ಲಕ್ನೋ ಪ್ರಯಾಣವನ್ನು ಸುಡುಬೇಸಗೆಯಲ್ಲಿ ಮುಂದುವರಿಸಿದ್ದಾರೆ. ನೂರೇ ದಿನಗಳಲ್ಲಿ 30,000 ಕಿಲೋ ಮೀಟರ್ ಪ್ರಯಾಣ ಎಂದರೆ ದಿನವೂ ದೀರ್ಘಕಾಲದ ಪ್ರಯಾಣ. ನಿಗದಿತ ಸಮಯಕ್ಕೆ ತಲುಪುವ ಸದ್ಗುರುಗಳ ಬದ್ಧತೆಯೂ ಸೇರಿದಂತೆ ಎಂತಹುದೇ ಪರಿಸ್ಥಿತಿಯ ನಡುವೆಯೂ ಕಾರ್ಯಕ್ರಮದ ಬದಲಾವಣೆಗೆ ಯಾವುದೇ ಆಸ್ಪದವಿರಲಿಲ್ಲ. ಅಂತಹ ಒಂದು ಪ್ರಸಂಗದಲ್ಲಿ 65 ವರ್ಷದ ಯೋಗಿಯಾದ ಸದ್ಗುರುಗಳು ರೊಮೇನಿಯಾದಿಂದ ಟರ್ಕಿಗೆ ಬರಲು 18 ಗಂಟೆಗಳ ಪ್ರಯಾಣವನ್ನು ಬೆಳಗ್ಗೆ 8 ಗಂಟೆಗೆ ಆರಂಭಿಸಿ ನಡುರಾತ್ರಿಯ ಅನಂತರ 2 ಗಂಟೆಗೆ ಮುಗಿಸಿದ್ದರು.
ಈ ಆಂದೋಲನ ಅಪಾಯದ್ದೇ, ಯುವಕರು ಅರ್ಥ ಮಾಡಿಕೊಳ್ಳಲೆಂದು ಇದನ್ನು ಮಾಡುತ್ತಿದ್ದೇನೆ. ನಾವೀಗಲೇ ಇದನ್ನು ಮಾಡದಿದ್ದರೆ ಬಹಳ ಪರಿತಪಿಸಬೇಕಾಗುತ್ತದೆ.-ಸದ್ಗುರು, ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.