ಅಧಿಕಾರಿಗಳೇ ರೈತರ ಸಮಸ್ಯೆಗೆ ಸ್ಪಂದಿಸಿ
Team Udayavani, Jun 25, 2022, 2:43 PM IST
ದೇವನಹಳ್ಳಿ: ತಾಲೂಕಾದ್ಯಂತ ಎಲ್ಲಾ ಹೋಬಳಿ ಮತ್ತು ಗ್ರಾಪಂ ವ್ಯಾಪ್ತಿಗಳಲ್ಲಿ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ತೋಟಗಾರಿಕೆ, ಕೃಷಿ, ರೇಷ್ಮೆ ಇಲಾಖೆ, ಪಶುಪಾಲನಾ ಇಲಾಖೆ ಸಿಗುವ ಸೌಲಭ್ಯಗಳ ಬಗ್ಗೆ ಕರಪತ್ರ ಹಂಚಿ ಮಾಹಿತಿ ನೀಡಬೇಕು ಎಂದು ತಹಶೀಲ್ದಾರ್ ಶಿವರಾಜ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರೈತ ಮುಖಂಡರು ಮತ್ತು ತಾಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಪ್ರತಿ ಅಧಿಕಾರಿಗಳು ಮಾಡಬೇಕು. ಈ ಸಭೆಯಲ್ಲಿ ರೈತರ ಸಮಸ್ಯೆಗಳ ಸಂಬಂಧಪಟ್ಟಂತೆ ಚರ್ಚೆಯಾದ ವಿಷಯಗಳನ್ನು ತೀರ್ಮಾನ ಮಾಡಿ ಜಿಲ್ಲಾಧಿಕಾರಿ ಗಳಿಗೆ, ಸಂಬಂಧಪಟ್ಟ ಮೇಲಧಿಕಾರಿಗಳಿಗೆ ತಿಳಿಸಿ ಕೊಡಬೇಕು. ಎಲ್ಲಾ ಔಷಧ ಅಂಗಡಿ, ರಸಗೊಬ್ಬರ, ಬಿತ್ತನೆ ಬೀಜ ನೀಡುವ ಎಲ್ಲೆಡೆ ರೈತರಿಗೆ ತಿಳಿಯುವ ರೀತಿಯಲ್ಲಿ ದರದಪಟ್ಟಿಯನ್ನು ಪ್ರಕಟಿಸಬೇಕು ಎಂದರು.
ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ: ತಾಲೂಕಿನಲ್ಲಿ ಮಳೆಯಾಗುತ್ತಿರುವುದರಿಂದ ಬಿತ್ತನೆ ಕಾರ್ಯ ಚುರುಕುಕೊಂಡಿರುವುದರಿಂದ ಯಾವುದೇ ರೀತಿಯಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕೆ ಕೊರತೆಯಾಗದಂತೆ ಅಧಿಕಾರಿಗಳು ಎಚ್ಚರವಹಿಸ ಬೇಕು. ರೈತರ ಎಲ್ಲ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲಾಗಿದ್ದು, ತಾಲೂಕು ಆಡಳಿತದ ವ್ಯಾಪ್ತಿಯಲ್ಲಿರುವ ತೊಂದರೆಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಗಣಿಯಿಂದ ಉಂಟಾಗುತ್ತಿರುವ ಬೆಳೆನಷ್ಟ ಸಂಬಂಧ ಜಿಲ್ಲಾಧಿಕಾರಿಗಳಿಂದ ಸೂಕ್ತ ನಿರ್ದೇಶನ ಪಡೆದು ಆದಷ್ಟು ಬೇಗ ಸಮಸ್ಯೆ ನಿವಾರಣೆ ಮಾಡಲಾಗುವುದು ಎಂದು ತಿಳಿಸಿದರು.
ರೇಷ್ಮೆ ಬೆಳೆಗಾರರಿಗೆ ನಷ್ಟ: ಸಾಮಾಜಿಕ ಕಾರ್ಯಕರ್ತ ಹಾಗೂ ರೈತ ಕೊಯಿರ ಚಿಕ್ಕೇಗೌಡ ಮಾತನಾಡಿ, ಕಾರಹಳ್ಳಿ, ಕೊಯಿರ, ತೈಲಗೆರೆ, ಚಿಕ್ಕಗೊಲ್ಲಹಳ್ಳಿ, ಮಾಯಸಂದ್ರ ಇತರೆ ಕಡೆಗಳಲ್ಲಿ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡು ರೈತರು ಜೀವನ ಸಾಗಿಸುತ್ತಿದ್ದಾರೆ. ಗಣಿಗಾರಿಕೆಯ ಧೂಳು ರೇಷ್ಮೆ ಬೆಳೆಗಾರರಿಗೆ ನಷ್ಟ ಉಂಟು ಮಾಡುತ್ತಿದೆ. ಇದರ ಸಂಬಂಧಪಟ್ಟಂತೆ ರೇಷ್ಮೆ ಇಲಾಖೆಯಿಂದ ವರದಿ ಸಹ ನೀಡಿದ್ದಾರೆ. ಹಿಪ್ಪುನೇರಳೆ ಬೆಳೆಯ ಮೇಲೆ ಸಾಕಷ್ಟು ನಷ್ಟ ಅನುಭವಿಸುತ್ತಿದ್ದೇವೆ. ಗಣಿದನಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಗ್ರಾನೈಟ್ ಪ್ಯಾಕ್ಟರಿಗಳಿಗೆ ಜಿಲ್ಲಾಧಿಕಾರಿಗಳು ತಾತ್ಕಾಲಿಕ ಅನುಮತಿ ನೀಡಿದ್ದಾರೆ. ಕೂಡಲೇ ತಹಶೀಲ್ದಾರ್ ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಟ್ರ್ಯಾಕ್ಟರ್ ಬಳಕೆಗೆ ಅವಕಾಶ ನೀಡಿ: ರೈತ ಸಂಘದ ತಾಲೂಕು ಉಪಾಧ್ಯಕ್ಷ ಮುನಿನಾರಾಯಣಪ್ಪ ಮಾತನಾಡಿ, ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುವ ಕೃಷಿ ಉಪಕರಣಗಳನ್ನು ಬಾಡಿಗೆ ನೀಡುವ ವಿಚಾರದಲ್ಲಿ ತಾರತಮ್ಯ ಆಗುತ್ತಿದೆ. ಸಣ್ಣ ಹಿಡುವಳಿದಾರರು ಮತ್ತು 5ಎಕರೆ ಮೇಲ್ಪಟ್ಟ ರೈತರಿಗೂ ಸಮಾನವಾಗಿ ಟ್ರ್ಯಾಕ್ಟರ್ ಬಳಕೆಗೆ ಅವಕಾಶ ನೀಡಬೇಕು. ನಿಗದಿ ಮಾಡಿರುವ ಬಾಡಿಗೆಯೂ ವ್ಯತ್ಯಯವಾಗುತ್ತಿದ್ದು, ನಿರ್ಧಿಷ್ಟವಾಗಿ ಬಾಡಿಗೆ ನಿಗದಿ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಗ್ರೇಡ್-2 ತಹಶೀಲ್ದಾರ್ ಉಷಾ, ತಾಲೂಕು ಶಿರಸ್ತೇದಾರ್ ಭರತ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣಸ್ವಾಮಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ನರೇಂದ್ರಬಾಬು ಮತ್ತಿತರರು ಇದ್ದರು.
ಪ್ರತಿ ತಿಂಗಳು ಅಂಗಡಿಗೆ ಭೇಟಿ ಪರಿಶೀಲಿಸಿ ಅವಧಿ ಮೀರಿದ ಮುದ್ರಣ ಬದಲಾಯಿಸಿ ಬಿತ್ತನೆ ಬೀಜ ಕೊಡುತ್ತಿದ್ದಾರೆ. ಕೆಲವು ಅಂಗಡಿಗಳಲ್ಲಿ ಬಿತ್ತನೆ ಬೀಜಗಳನ್ನು ಕಡಿಮೆ ದರದಲ್ಲಿ ನೀಡಲಾಗುತ್ತಿದೆ ಎಂದು ರೈತರ ದೂರುಗಳಿದ್ದು, ಅದರ ಸಂಬಂಧಪಟ್ಟಂತೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಅಂಗಡಿಗಳಿಗೆ ಪರಿಶೀಲನೆ ಮಾಡಲಾಗುವುದು. ಹೋಬಳಿವಾರು ಅಧಿಕಾರಿಗಳು ಪ್ರತಿತಿಂಗಳು ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ರೈತರಿಂದ ಬಂದಂತಹ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಕಳಪೆ ಬಿತ್ತನೆ ಬೀಜ ನೀಡಿದ ಅಂಗಡಿ ಮಾಲೀಕರ ಅಂಗಡಿ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ತಹಶೀಲ್ದಾರ್ ಶಿವರಾಜ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.