ಮೇಯರ್ ಚುನಾವಣೆಗೆ ಶೀಘ್ರ ಮೀಸಲಾತಿ ಪ್ರಕಟ?
Team Udayavani, Jun 25, 2022, 3:10 PM IST
ಮೈಸೂರು: ರಾಜ್ಯ ಸರ್ಕಾರ ಮೈಸೂರು ಮೇಯರ್, ಉಪಮೇಯರ್ ಚುನಾವಣೆಗೆ ಇನ್ನೂ ಮೀಸಲಾತಿ ಪ್ರಕಟಿಸದ ಹಿನ್ನೆಲೆ ಕಳೆದ ನಾಲ್ಕು ತಿಂಗಳಿನಿಂದ ಮೇಯರ್ ಚುನಾವಣೆ ನನೆಗುದಿಗೆ ಬಿದ್ದಿದೆ.
3ನೇ ಅವಧಿಗೆ ಮೇಯರ್ ಆಗಿ ಆಯ್ಕೆಯಾಗಿದ್ದ ಸುನಂದಾ ಫಾಲನೇತ್ರ ಅವರ ಅಧಿಕಾರಾವಧಿ ಫೆ.23ರಂದು ಅಂತ್ಯಗೊಂಡು ನಾಲ್ಕು ತಿಂಗಳು ಕಳೆದರೂ ಮೀಸಲಾತಿ ಪ್ರಕಟಿಸದ ಕಾರಣ ಮೇಯರ್ ಚುನಾವಣೆ ಸಾಧ್ಯವಾಗಿಲ್ಲ. ಸರ್ಕಾರದ ಈ ವಿಳಂಬ ಧೋರಣೆಯಿಂದ ಕೊನೆಯ ಮೇಯರ್ ಅವಧಿ ಕಡಿಮೆಯಾಗುವುದು ನಿಚ್ಚಳವಾಗಿದೆ.
ತಿಂಗಳಾಂತ್ಯಕ್ಕೆ ಮೀಸಲಾತಿ ಪ್ರಕಟ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆ ಅಡ್ಡಿಯಾದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಅವಧಿಯ ಮೇಯರ್ ಚುನಾವಣೆ ಸಾಧ್ಯವಾಗಿರಲಿಲ್ಲ. ಜತೆಗೆ ಪ್ರಧಾನಮಂತ್ರಿಗಳ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ಮೀಸಲಾತಿ ಪ್ರಕಟಿಸುವುದು ವಿಳಂಬವಾಗಿತ್ತು. ಇದರಿಂದಾಗಿ ಸುನಂದಾ ಫಾಲನೇತ್ರ ಅವರೇ ಮೇಯರ್ ಆಗಿ ಮುಂದುರಿದಿದ್ದಾರೆ. ಸದ್ಯಕ್ಕೆ ವಿಧಾನಪರಿಷತ್ ಚುನಾವಣೆ ಮುಕ್ತಾಯ ಗೊಂಡಿರುವುದರಿಂದ ಮೀಸಲಾತಿ ನಿಗದಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಜೂನ್ ಅಂತ್ಯಕ್ಕೆ ಮೀಸಲಾತಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪರಿಶಿಷ್ಟ ಪಂಗಡ (ಎಸ್ಟಿ) ಅಥವಾ ಸಾಮಾನ್ಯ ವರ್ಗಕ್ಕೆ ಈ ಬಾರಿ ಮೈಸೂರು ಮೇಯರ್ ಸ್ಥಾನ ಮೀಸಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮೀಸಲಾತಿ ನಿಗದಿಗೆ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಒತ್ತಡ ಜಾಸ್ತಿಯಾಗಿದ್ದು, ಮೇಯರ್ ಚುನಾವಣೆ ಸಂಬಂಧ ಮೂರು ಪಕ್ಷಗಳಲ್ಲಿ ಕುತೂಹಲ ಕೆರಳಿಸಿದೆ.
ಮೂರನೇ ಅವಧಿಗೆ ಇಬ್ಬರು ಮೇಯರ್: ಮೇಯರ್ ಸ್ಥಾನದ 3ನೇ ಅವಧಿಗೆ 2021ರ ಫೆ.24ರಂದು ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ರುಕ್ಮಿಣಿ ಮಾದೇಗೌಡ ಮೇಯರ್ ಆಗಿ ಮತ್ತು ಕಾಂಗ್ರೆಸ್‌ನ ಅನ್ವರ್ ಬೇಗ್ ಉಪಮೇಯರ್ ಆಗಿ ಆಯ್ಕೆಯಾಗಿದ್ದರು. ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದ ಕಾರಣಕ್ಕೆ ರುಕ್ಮಿಣಿ ಮಾದೇಗೌಡರ ಪಾಲಿಕೆ ಸದಸ್ಯತ್ವ ರದ್ದಾದ್ದರಿಂದ ಅವರು ಮೇಯರ್ ಸ್ಥಾನ ಕಳೆದು ಕೊಂಡಿದ್ದರು. ನಂತರ 2021ರ ಆಗಸ್ಟ್ ನಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಸುನಂದ ಪಾಲನೇತ್ರ ಆಯ್ಕೆಯಾದರು.
ಅದರಂತೆ ಮೇಯರ್ ಅಧಿಕಾರಾವಧಿ ಅಂತ್ಯವಾಗಿ ನಾಲ್ಕು ತಿಂಗಳಾದರೂ ಮೀಸಲಾತಿ ನಿಗದಿಯಾಗದ ಕಾರಣ ಸುನಂದಾ ಫಾಲನೇತ್ರ ಅವರೇ ಮುಂದುವರಿಯಲು ಅವಕಾಶ ಸಿಕ್ಕಿದೆ.
ಮೀಸಲಾತಿ ಪಟ್ಟಿಯತ್ತ ಎಲ್ಲರ ಚಿತ್ತ: ಮೈಸೂರು ಮೇಯರ್ ಸ್ಥಾನದ ನಾಲ್ಕನೇ ಅವಧಿಗೆ ರಾಜ್ಯ ಸರ್ಕಾರ ಜೂನ್ ತಿಂಗಳಾಂತ್ಯಕ್ಕೆ ಅಥವಾ ಜುಲೈ ಮೊದಲ ವಾರದಲ್ಲಿ ಮೀಸಲಾತಿ ಪ್ರಕಟಿಸುವ ಸಾಧ್ಯತೆ ಇದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಚಿತ್ತ ಮೀಸಲಾತಿ ಪಟ್ಟಿಯ ಮೇಲಿದೆ. ಪಟ್ಟಿ ಪ್ರಕಟವಾಗುತ್ತಿದ್ದಂತೆ ಮೂರು ಪಕ್ಷಗಳು ತಮ್ಮ ಅಭ್ಯರ್ಥಿ ಆಯ್ಕೆಗೆ ಮತ್ತೂಂದು ಪಕ್ಷದ ಬೆಂಬಲ ಪಡೆಯಲು ರಣತಂತ್ರ ರೂಪಿಸಲಿವೆ.
ಮೂರನೇ ಅವಧಿಯಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಇಡೀ ರಾಜ್ಯದ ಗಮನ ಸೆಳೆದಿತ್ತು. ಇದರಿಂದ ಪಾಲಿಕೆಯಲ್ಲಿ ಯಾವೊಂದು ಪಕ್ಷವು ಅಧಿಕೃತ ವಿರೊಧ ಪಕ್ಷವಾಗಿ ಗುರುತಿಸಿಕೊಂಡಿರಲಿಲ್ಲ. ಈಗ ನಾಲ್ಕನೇ ಅವಧಿಯ ಮೇಯರ್ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದ್ದು, ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಮೂರು ಪಕ್ಷಗಳು ನಾನಾ ಲೆಕ್ಕಾಚಾರದಲ್ಲಿ ತೊಡಗಿವೆ.
ಜೆಡಿಎಸ್-ಬಿಜೆಪಿ ಮೈತ್ರಿ ಸಾಧ್ಯತೆ: ಪಾಲಿಕೆಯಲ್ಲಿ ಮೇಯರ್ ಸ್ಥಾನ ಹಿಡಿಯಲು ಯಾವೊಂದು ಪಕ್ಷಕ್ಕೂ ಪೂರ್ಣ ಬಹುಮತ ಇಲ್ಲದ ಕಾರಣ, ಮತ್ತೂಂದು ಪಕ್ಷದ ಮೈತ್ರಿಯೊಂದಿಗೆ ಮೇಯರ್ ಗದ್ದುಗೆ ಏರುವ ಸ್ಥಿತಿ ಮೂರು ಪಕ್ಷದಲ್ಲಿ ನಿರ್ಮಾಣವಾಗಿದೆ. ಮೊದಲ ಎರಡು ಅವಧಿಯ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಬಳಿಕ ಈ ಎರಡೂ ಪಕ್ಷಗಳ ರಾಜ್ಯ ನಾಯಕರಲ್ಲಿ ಗೊಂದಲ ನಿರ್ಮಾಣವಾಗಿ ಸಂಬಂಧ ಹಳಸಿದ ಕಾರಣ ಮೂರನೇ ಅವಧಿಯ ಮೇಯರ್ ಸ್ಥಾನ ಬಿಜೆಪಿಗೆ ದಕ್ಕಿತ್ತು. ಸಧ್ಯಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಂಬಂಧ ಹಳಸಿರುವುದರಿಂದ ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗುವ ಸಾಧ್ಯತೆಗಳಿದೆ.
ಕಡೆ ಅವಧಿ ಮೇಯರ್‌ಗೆ ಅನ್ಯಾಯ : ಮೈಸೂರು: ಮಹಾನಗರ ಪಾಲಿಕೆ 3ನೇ ಮೇಯರ್ ಅವರ ಅವಧಿ ಪೂರ್ಣಗೊಂಡು ನಾಲ್ಕು ತಿಂಗಳಾದರೂ ಚುನಾವಣೆ ನಡೆಯದ ಹಿ°ನೆಲೆ ಕೊನೆ ಅವಧಿಗೆ ಆಯ್ಕೆಯಾಗುವ ಮೇಯರ್‌ನ ಅಧಿಕಾರ ಅವಧಿ ಕಡಿಮೆಯಾಗಲಿದೆ. 3ನೇ ಅವಧಿಯಲ್ಲಿ ಆಯ್ಕೆಯಾಗಿದ್ದ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವವನ್ನು ನ್ಯಾಯಾಲಯ ಅಸಿಂಧುಗೊಳಿಸಿತ್ತು. ಬಳಿಕ ಉಳಿದ 5 ತಿಂಗಳ ಅವಧಿಗೆ ಬಿಜೆಪಿಯ ಸುನಂದಾ ಫಾಲನೇತ್ರ ಮೇಯರ್ ಆಗಿ ಆಯ್ಕೆಯಾಗಿದ್ದರು. ಸದ್ಯಕ್ಕೆ ಅವರ ಅವಧಿ ಪೂರ್ಣಗೊಂಡು ನಾಲ್ಕು ತಿಂಗಳಾದರೂ ಸರ್ಕಾರ ಮೇಯರ್, ಉಪಮೇಯರ್ ಮೀಸಲಾತಿಯನ್ನು ಪ್ರಕಟಿಸಿಲ್ಲ. ಇದರಿಂದ ಕೊನೆಯ ಮೇಯರ್‌ಗೆ ಅನ್ಯಾಯವಾಗಲಿದೆ ಎಂಬುದು ವಿಪಕ್ಷಗಳ ಆರೋಪ.
ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಮೇಯರ್ ಆಗಿದ್ದರೆ, ಅವರಿಗೆ ಸಿಕ್ಕ ಅವಧಿ ಐದು ತಿಂಗಳು ಮಾತ್ರ. ಈ ಹಿನ್ನೆಲೆ ಸರ್ಕಾರವೇ ಮೀಸಲಾತಿ ಪ್ರಕಟಿಸದೆ, ಈಗಿರುವ ಮೇಯರ್ ಅವರಿಗೆ ಪರೋಕ್ಷವಾಗಿ ಹೆಚ್ಚಿನ ಅಧಿಕಾರವಧಿ ನೀಡುತ್ತಿದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಮೇಯರ್ ಚುನಾವಣೆ ಮೀಸಲಾತಿ ಪ್ರಕಟಿಸದೆ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಕೊನೆಯ ಅವಧಿಯ ಮೇಯರ್‌ಗೆ ಅಧಿಕಾರವಧಿ ಕಡಿಮೆಯಾಗಿ ಅನ್ಯಾಯವಾಗಲಿದೆ. ಸರ್ಕಾರವೇ ಹೀಗೆ ಮಾಡಿದರೆ, ಸಾಮಾಜಿಕ ನ್ಯಾಯ ಮತ್ಯಾರಿಂದ ನಿರೀಕ್ಷಿಸಲು ಸಾಧ್ಯ. ಮೀಸಲಾತಿ ಪ್ರಕಟವಾದ ಬಳಿಕ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂಬ ಬಗ್ಗೆ ನಮ್ಮ ನಾಯಕರು ನಿರ್ಧರಿಸಲಿದ್ದಾರೆ. – ಪ್ರೇಮಾ ಶಂಕರೇಗೌಡ, ಜೆಡಿಎಸ್ ಪಾಲಿಕೆ ಸದಸ್ಯೆ
– ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.