ತಪ್ಪು ತಿದ್ದಲು ಆದೇಶ: ಪರಿಷ್ಕೃತ ಪಠ್ಯದ ಮರು ಪರಿಷ್ಕರಣೆಗೆ ಸರಕಾರ ನಿರ್ಧಾರ
ತೀವ್ರ ವಿರೋಧದ ಹಿನ್ನೆಲೆಯಲ್ಲಿ ತಿದ್ದೋಲೆ ಪ್ರತಿ ಮುದ್ರಣ: ಬುಕ್‌ಲೆಟ್ ಮಾದರಿಯಲ್ಲಿ ಶಾಲೆಗಳಿಗೆ ವಿತರಣೆ
Team Udayavani, Jun 28, 2022, 7:05 AM IST
ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆಗೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರಕಾರವು ಕೆಲವು ತಿದ್ದುಪಡಿಗಳನ್ನು ಮಾಡಲು ತೀರ್ಮಾನಿಸಿದೆ.
ಪ್ರಮುಖವಾಗಿ ಡಾ| ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ “ಸಂವಿಧಾನ ಶಿಲ್ಪಿ’ ಎಂಬ ಪದ ಕೈಬಿಟ್ಟದ್ದು ಮತ್ತು ಕುವೆಂಪು, ಬಸವಣ್ಣನವರ ವಿಚಾರಗಳಲ್ಲಿ ಆಗಿರುವ ತಪ್ಪುಗಳು, ಮಠ-ಮಾನ್ಯಗಳ ಪ್ರಸ್ತಾವಗಳನ್ನು ಪರಿಗಣಿಸಿ ಲೋಪ ಸರಿಪಡಿಸಲು ಮುಂದಾಗಿದೆ.
ಪರಿಷ್ಕೃತ ಪಠ್ಯದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸುವ ಸಂಬಂಧ ಸರಕಾರ ಆದೇಶ ಹೊರಡಿಸಿದೆ. ಪಠ್ಯಕ್ಕೆ ಸಾಹಿತ್ಯಿಕ, ರಾಜಕೀಯ ಮತ್ತು ಹಲವು ರಂಗಗಳಿಂದ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂತಿಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮತ್ತೂಮ್ಮೆ ಪರಿಷ್ಕರಣೆಗೆ ಒಳಪಡಿಸಿದ ವಿಚಾರಗಳ ಪುಸ್ತಕವನ್ನು ಬುಕ್‌ಲೆಟ್ ಮಾದರಿಯಲ್ಲಿ ಮುದ್ರಿಸಿ ಎಲ್ಲಾ ಶಾಲೆಗಳಿಗೂ ವಿತರಣೆ ಮಾಡಲಾಗುತ್ತದೆ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಎಚ್.ಎಸ್. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ರೋಹಿತ್ ಚಕ್ರತೀರ್ಥ ಸಮಿತಿಯು 1ರಿಂದ 10ನೇ ತರಗತಿ ಭಾಷಾ ವಿಷಯಗಳು, ಪರಿಸರ ಅಧ್ಯಯನ ಮತ್ತು 6ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ವಿಷಯಗಳ ಪಠ್ಯಗಳನ್ನು ಪರಿಷ್ಕರಣೆ ಮಾಡಿತ್ತು. ಇದರಲ್ಲಿ 6ರಿಂದ 8ನೇ ತರಗತಿಯ ಸಮಾಜ ವಿಜ್ಞಾನದ 68 ಮತ್ತು 1ರಿಂದ 10ನೇ ತರಗತಿಯ ಕನ್ನಡ ಭಾಷಾ ವಿಷಯದ 15 ಪರಿಷ್ಕೃತ ಪಠ್ಯ ಸೇರಿ ಒಟ್ಟು 83 ವಿಚಾರಗಳನ್ನು ಪರಿಷ್ಕರಣೆ ಮಾಡಲಾಗಿದೆ.
ಮತ್ತೊಮ್ಮೆ ಪರಿಷ್ಕರಣೆ
ಪರಿಷ್ಕೃತ ಪಠ್ಯಪುಸ್ತಕಗಳನ್ನು ಈಗಾಗಲೇ 2022-23ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರವಾನೆ ಮಾಡಲಾಗಿದೆ. ಕರ್ನಾಟಕ ಪಠ್ಯಪುಸ್ತಕ ಸಂಘದ ವೆಬ್‌ಸೈಟ್‌ನಲ್ಲಿ ಕೂಡ ಪ್ರಕಟಿಸಲಾಗಿದೆ. ಬಳಿಕ ನಾಗರಿಕರು, ಮಾಧ್ಯಮಗಳು, ಸಾಮಾಜಿಕ ತಾಣಗಳಿಂದ ವ್ಯಕ್ತವಾಗಿರುವ ಟೀಕೆ-ಟಿಪ್ಪಣಿಗಳು ಮತ್ತು ಆಕ್ಷೇಪಣೆಗಳನ್ನು ಪರಿಗಣಿಸಿ ಮತ್ತೊಮ್ಮೆ ಪರಿಷ್ಕರಿಸಲಾಗುತ್ತಿದೆ.
ಸಾಮಾನ್ಯವಾಗಿ ಪಠ್ಯಪುಸ್ತಕಗಳ ರಚನೆ ಮತ್ತು ಪರಿಷ್ಕರಣೆಗಳಾದ ಸಂದರ್ಭದಲ್ಲಿ ಅಗತ್ಯ ತಿದ್ದುಪಡಿಗಳನ್ನು ತಿದ್ದೋಲೆ ರೂಪದಲ್ಲಿ ನೀಡುವುದು ಶಿಕ್ಷಣ ಇಲಾಖೆಯಲ್ಲಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪ್ರಕ್ರಿಯೆಯಾಗಿದೆ. ಅದೇ ರೀತಿ ಪ್ರಸ್ತುತ ತಿಧ್ದೋಲೆ ಪ್ರತಿಗಳನ್ನು ಮುದ್ರಿಸಲು ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಸೂಚಿಸಲಾಗಿದೆ. ಸಂಘವು ತನ್ನಲ್ಲಿ ಲಭ್ಯವಿರುವ ಅನುದಾನದಿಂದ ಇದರ ವೆಚ್ಚವನ್ನು ಭರಿಸಲಿದೆ.
ಈ ಪ್ರತಿಗಳನ್ನು ಎಲ್ಲ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಉಚಿತವಾಗಿ ತಲಾ ಒಂದು ಪ್ರತಿಯಂತೆ ವಿತರಿಸಬೇಕು. ತಿಧ್ದೋಲೆಯ ವಿಷಯಾಂಶಗಳನ್ನು ಪಠ್ಯಪುಸ್ತಕ ಸಂಘದ ಜಾಲತಾಣದಲ್ಲಿ ಸಾಫ್ಟ್ ಪ್ರತಿಯಾಗಿ ಅಪ್‌ಲೋಡ್ ಮಾಡಲಾಗುತ್ತದೆ ಎಂದು ತಿಳಿಸಿದೆ.
ಸೇರ್ಪಡೆಯಾಗಲಿರುವ ಪ್ರಮುಖ ಅಂಶಗಳು
– 9ನೇ ತರಗತಿ ಸಮಾಜ ವಿಜ್ಞಾನ ಭಾಗ- 01ರಲ್ಲಿ “ನಮ್ಮ ಸಂವಿಧಾನ’ ಪಾಠದಲ್ಲಿ ಸಂವಿಧಾನದ ಕರಡು ರಚನೆ ಸಮಿತಿ ಬಗ್ಗೆ ಉಲ್ಲೇಖವಿದೆ. ಪರಿಷ್ಕೃತ ಪಠ್ಯದಲ್ಲಿ ಸಂವಿಧಾನ ರಚನೆಗೆ ಡಾ| ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಕೊಡುಗೆ ಆಧರಿಸಿ “ಸಂವಿಧಾನ ಶಿಲ್ಪಿ’ ಎಂದು ಕರೆಯಲಾಗಿದೆ ಎಂಬ ವಾಕ್ಯವು ಇಲ್ಲವಾಗಿದ್ದು, ಮರಳಿ ಸೇರ್ಪಡೆ ಮಾಡಲಾಗುತ್ತಿದೆ.
– 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರ “ಭಕ್ತಿ ಪಂಥ ಹಾಗೂ ಸೂಫಿ ಸಂತರು’ ಪಾಠವನ್ನು ಪೂರ್ಣವಾಗಿ ಕೈಬಿಡಲಾಗಿದೆ. 9ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಭಾಗ-2ರಲ್ಲಿ ಭಕ್ತಿಪಂಥ ಎಂಬ ಅಧ್ಯಾಯದಲ್ಲಿ ಪುರಂದರದಾಸರು, ಕನಕದಾಸರ ಕುರಿತ ವಿಷಯಗಳನ್ನು ಸಂಕ್ಷಿಪ್ತಗೊಳಿಸಲಾಗಿದೆ. ಆದ್ದರಿಂದ 2021-22ನೇ ಸಾಲಿನ 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರ “ಭಕ್ತಿ ಪಂಥ ಹಾಗೂ ಸೂಫಿ ಸಂತರು’ ಸಂಪೂರ್ಣ ಪಾಠ ಸೇರ್ಪಡೆ.
– 7ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದ ಪುಟ ಸಂಖ್ಯೆ 147ರಲ್ಲಿ “ಗೊಂಬೆ ಕಲಿಸುವ ನೀತಿ’ ಪಠ್ಯದ ಕೃತಿಕಾರರ ಹೆಸರು ಡಾ| ಆರ್.ಎನ್. ಜಯಗೋಪಾಲ್ ಎಂದು ತಪ್ಪಾಗಿ ಮುದ್ರಣಗೊಂಡಿದ್ದು, ಮೂಲ ಕೃತಿಕಾರರಾದ ಚಿ| ಉದಯಶಂಕರ್ ಅವರ ಕವಿ ಪರಿಚಯ.
– 6ನೇ ತರಗತಿ ಸಮಾಜ ವಿಜ್ಞಾನ ಭಾಗ-1ರ “ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ’ ಪಾಠದಲ್ಲಿ ಸಿದ್ಧಗಂಗಾ ಮಠ ಹಾಗೂ ಆದಿಚುಂಚನಗಿರಿ ಮಠದ ಕುರಿತಾದ ಸೇವೆಯ ಸಾಲುಗಳ ಸೇರ್ಪಡೆ.
– 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರ “ಮೈಸೂರು ಮತ್ತು ಇತರ ಸಂಸ್ಥಾನಗಳು’ ಎಂಬ ಪಾಠದಲ್ಲಿದ್ದ ಸುರಪುರ ನಾಯಕರ ಕುರಿತಾದ ವಿವರಗಳು
– 9ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರ ಪಠ್ಯಪುಸ್ತಕದಲ್ಲಿ “ಭಾರತದ ಮತ ಪ್ರವರ್ತಕರು’ ಎಂಬ ಅಧ್ಯಾಯದಲ್ಲಿ ಬಸವಣ್ಣನವರ ಕುರಿತಾದ ವಿಷಯಾಂಶ.
– 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-2ರ ಪಠ್ಯಪುಸ್ತಕದ “ಕರ್ನಾಟಕ ರಾಜ್ಯ ಏಕೀಕರಣ ಹಾಗೂ ಗಡಿ ವಿವಾದಗಳು’ ಎಂಬ ಪಾಠದಲ್ಲಿ ರಾಷ್ಟ್ರಕವಿ ಕುವೆಂಪು ಮತ್ತು ಹುಯಿಲಗೋಳ ನಾರಾಯಣರಾವ್ ಭಾವಚಿತ್ರಗಳನ್ನು ಅಳವಡಿಸುವುದು.
– 4ನೇ ತರಗತಿಯ “ಪರಿಸರ ಅಧ್ಯಯನ ಪ್ರತಿಯೊಬ್ಬರು ವಿಶಿಷ್ಟ’ ಎಂಬ ಪಾಠದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಕುವೆಂಪು ಅವರಿಗೆ ಚಿಕ್ಕಂದಿನಿಂದಲೂ ಕಥೆ, ಕವನ, ಪುಸ್ತಕ ಓದುವ, ಬರೆಯುವ ಅಭ್ಯಾಸ ಇತ್ತು ಎಂಬ ವಾಕ್ಯದ ಅನಂತರ “ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು’ ಎಂಬ ಸಾಲನ್ನು ಕೈಬಿಡುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ
ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್ ನಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.