ನಂದಿನಿ ನದಿಗೆ ಸೇತುವೆಯಾದರೆ ಅಭಿವೃದ್ಧಿಗೆ ವೇಗ
ದೇಲಂತಬೆಟ್ಟು: ಕೃಷಿ, ಹೈನುಗಾರಿಕೆಯೇ ಇಲ್ಲಿನ ಜೀವಾಳ
Team Udayavani, Jun 28, 2022, 10:47 AM IST
ಸೂರಿಂಜೆ: ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಸೂರಿಂಜೆ ಗ್ರಾಮ ಪಂಚಾಯತ್‌ನ ದೇಲಂತಬೆಟ್ಟು ಪುಟ್ಟ ಗ್ರಾಮ. ಅಂದಾಜು 2 ಸಾವಿರ ಜನಸಂಖ್ಯೆಯಿದೆ. ಒಳರಸ್ತೆ ಅಭಿವೃದ್ಧಿಯಾಗಬೇಕಿದೆ. ಕುಡಿಯುವ ನೀರಿಗೆ ಹೆಚ್ಚಿನ ಕುಟುಂಬ ಬಾವಿ ಅವಲಂಬಿತ. ಉಳಿದಂತೆ ಪಂಚಾಯತ್ ಬೋರ್ ಅಳವಡಿಸಿ ಪೂರೈಕೆ ಮಾಡುತ್ತಿದೆ.
ದೇಲಂತಬೆಟ್ಟುವಿನಲ್ಲಿ ನಂದಿನಿ ನದಿಗೆ ಸೇತುವೆ ನಿರ್ಮಾಣಕ್ಕೆ ಒಂದೆರಡು ಬಾರಿ ಅಡಿಗಲ್ಲು ಹಾಕಿದರೂ ಸೇತುವೆ ಕನಸು ಈಡೇರಿಲ್ಲ. ಇದಾದಲ್ಲಿ ಕಟೀಲು ಕ್ಷೇತ್ರಕ್ಕೆ ಅತೀ ಸಮೀಪದ ದಾರಿಯಾಗಲಿದೆ. ಈ ಮೂಲಕ ಅಭಿವೃದ್ಧಿಗೂ ವೇಗ ದೊರಕಲಿದೆ.
ಹೈನುಗಾರಿಕೆ, ಕೃಷಿ ಪ್ರಧಾನ ಉದ್ಯೋಗವಾಗಿದ್ದು, ಹಾಲು ಉತ್ಪಾದಕರ ಸಂಘದ ಮೂಲಕ ಹೈನುಗಾರಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕೃಷಿ ಇಲಾಖೆಯಿಂದ ಭತ್ತ ಬೇಸಾಯಕ್ಕೆ ಆದ್ಯತೆ ನೀಡಲಾಗಿದೆ. ಅಂದಾಜು 150 ಎಕರೆ ಅರಣ್ಯ ಪ್ರದೇಶವಿದ್ದು, ಕಾಡುಕೋಣ, ಚಿರತೆಗಳ ಗ್ರಾಮಸ್ಥರಿಗೆ ಕಾಣಸಿಗುತ್ತವೆ.
ಐತಿಹಾಸಿಕ ಹಿನ್ನೆಲೆ
ಮಂಗಳೂರು ಮಹಾನಗರ ಪಾಲಿಕೆಯ ಸರಹದ್ದಿನಲ್ಲಿ ಬರುವ ಸೂರಿಂಜೆ ಗ್ರಾಮ ಪಂಚಾಯತ್ ನ ಮೂರು ಗ್ರಾಮಗಳಲ್ಲಿ ದೇಲಂತಬೆಟ್ಟು ಒಂದಾಗಿದೆ. ದೊಡ್ಡ ಕುಟುಂಬಗಳ ಗುತ್ತು ಮನೆಗಳಿಲ್ಲಿವೆ. ನಂದಿನಿ ನದಿ ತಟದಲ್ಲಿರುವ ಈ ಗ್ರಾಮದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೊಡಮಣಿತ್ತಾಯ ಕ್ಷೇತ್ರವಿದೆ. ಪ್ರತೀ ವರ್ಷ ಒಂದು ವಾರ ಕಾಲ ನಡೆಯುವ ಜಾತ್ರೆಗೆ ದೇಶ, ವಿದೇಶಗಳಲ್ಲಿ ನೆಲೆಸಿರುವ ಇಲ್ಲಿನ ಗ್ರಾಮಸ್ಥರು ತಪ್ಪದೆ ಬರುತ್ತಾರೆ. ಪರ ಊರಿನ ಗ್ರಾಮಸ್ಥರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಯದಲ್ಲಿ ಭೇಟಿ ನೀಡುತ್ತಾರೆ. ಶಿಬರೂರು ಲಕ್ಷ್ಮೀ ಜನಾರ್ದನ ದೇವಸ್ಥಾನ ನಂದಿನಿ ನದಿ ತಟದಲ್ಲಿದೆ.
ಪಶುಚಿಕಿತ್ಸಾ ಕೇಂದ್ರ
ಹೈನುಗಾರಿಕೆ ಪ್ರಧಾನವಾಗಿರುವುದರಿಂದ ಪಶು ಚಿಕಿತ್ಸಾ ಕೇಂದ್ರ ಬೇಕಿದೆ ಎಂಬುದು ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ. ಚಿಕಿತ್ಸೆಗಾಗಿ ಸುರತ್ಕಲ್ ಇಲ್ಲವೇ ದೂರದ ಕಿನ್ನಿಗೋಳಿ ಮತ್ತಿತರ ಕಡೆಯಿಂದ ಪಶು ವೈದ್ಯಾಧಿಕಾರಿ ಆಗಮಿಸಿ ಚಿಕಿತ್ಸೆ ನೀಡಬೇಕಿದೆ. ಇದರ ಜತೆಗೆ ಉಪ ಆರೋಗ್ಯ ಕೇಂದ್ರ ಮತ್ತು ಪ್ರತ್ಯೇಕ ಕಟ್ಟಡ ಬೇಕಿದೆ. ಆಶಾ ಕಾರ್ಯಕರ್ತೆಯರ ತಂಡ ಇಲ್ಲಿ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದಾರೆ. ಪಡಿತರ ವ್ಯವಸ್ಥೆ ಗ್ರಾಮದಲ್ಲೇ ಸಿಗುವಂತೆ ಮಾಡಿದರೆ ಉತ್ತಮ. ಅಗತ್ಯ ವಸ್ತುಗಳಿಗೆ ಜನತೆ ಸುರತ್ಕಲ್ ಇಲ್ಲವೇ ಕಿನ್ನಿಗೋಳಿ ಪಟ್ಟಣವನ್ನು ಅವಲಂಬಿಸಿದ್ದಾರೆ. ಬ್ಯಾಂಕು, ಸಹಕಾರಿ ಬ್ಯಾಂಕಿನ ಶಾಖೆಗಳು ಇಲ್ಲಿಲ್ಲ.
ಶಿಕ್ಷಣಕ್ಕಿದೆ ಇಲ್ಲಿ ಅವಕಾಶ
ಇಲ್ಲಿ ಸರಕಾರಿ ಪ್ರಾಥಮಿಕ, ಪ್ರೌಢಶಾಲೆಯಿದೆ. ಉನ್ನತ ವಿದ್ಯಾಭ್ಯಾಸಕ್ಕೆ ಇಲ್ಲಿನ ವಿದ್ಯಾರ್ಥಿಗಳು ಕಟೀಲು ಶಾಲೆಯನ್ನು ಅವಲಂಬಿಸಿದ್ದು, ಅಂದಾಜು 150ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸೀಮಿತ ಬಸ್ ನಂಬಿಕೊಂಡು, ಇಲ್ಲವೇ ನಡಿಗೆಯ ಮೂಲಕ ಕಾಲೇಜು ತಲುಪುತ್ತಾರೆ. ಸರಕಾರಿ ನರ್ಮ್ ಬಸ್ ಬಂದರೆ ಅನುಕೂಲ. ಬೊಳ್ಳಾಯರು ಸರಕಾರಿ ಶಾಲೆಗೆ ಸುಣ್ಣ ಬಣ್ಣ ಹಚ್ಚಿ, ಕಟ್ಟಡವನ್ನು ದುರಸ್ತಿಗೊಳಿಸಿ ಮಕ್ಕಳು ಬರುವಂತೆ ಕ್ರಮ ಕೈಗೊಳ್ಳಬೇಕಿದೆ. ಪಿಯುಸಿ ವಿಭಾಗಕ್ಕೆ ಕಟೀಲು, ಕೃಷ್ಣಾಪುರ ಶಾಲೆಯನ್ನು ಇಲ್ಲಿನ ಗ್ರಾಮದ ವಿದ್ಯಾರ್ಥಿಗಳು ಅವಲಂಬಿಸಬೇಕಿದೆ. ಎರಡು ಸರಕಾರಿ ಪ್ರೌಢಶಾಲೆಯಿದ್ದು, ಈ ಭಾಗಕ್ಕೆ ಪಿಯುಸಿ ಶಾಲೆಯ ಬೇಡಿಕೆ ಗ್ರಾಮಸ್ಥರದ್ದಾಗಿದೆ. ಇದರಿಂದ ಎಸೆಸೆಲ್ಸಿ ಬಳಿಕ ವಿದ್ಯಾರ್ಥಿನಿಯರು ಶಿಕ್ಷಣ ಮೊಟಕುಗೊಳಿಸದೆ ಪ.ಪೂ ವಿದ್ಯಾಭ್ಯಾಸಕ್ಕೆ ಒತ್ತು ನೀಡಲು ಅನುಕೂಲವಾಗಲಿದೆ.
ಸರಕಾರಿ ನಿವೇಶನ ಅತಿಕ್ರಮಣ?
ನಿವೇಶನ ರಹಿತರನ್ನು ಗುರುತಿಸಿ ಭೂಮಿ ಹಂಚಿಕೆಗೆ ಪಂಚಾಯತ್ ಸಿದ್ಧವಿದೆ ಆದರೆ ಸರಕಾರದಿಂದ ಗಡಿ ಗುರುತಿಸುವಿಕೆ ಆಗಬೇಕಿದೆ. ಬಡವರಿಗೆ ನಿವೇಶನ ನೀಡಲು ಅಂದಾಜು 3 ಎಕರೆ ಜಾಗವನ್ನು ಜಿಲ್ಲಾಧಿಕಾರಿ ಕಾದಿರಿಸಿದ್ದರೂ ಬಡವರಿಗೆ ಸಿಕ್ಕಿಲ್ಲ. ಅತಿಕ್ರಮಣವಾಗುವ ಮುನ್ನ ಹಂಚಿಕೆ ಆಗಬೇಕಿದೆ.
ದೇಲಂತಬೆಟ್ಟು, ಶಿಬರೂರು ಹೈನುಗಾರಿಕೆ, ಕೃಷಿ ಪ್ರದೇಶ. ಹೀಗಾಗಿ ಪೂರಕವಾದ ಪಶು ಕೇಂದ್ರ ಬೇಕಿದೆ. ಇದರ ಜತೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಕಾರಿ ಬಸ್ ಸೌಲಭ್ಯ ನೀಡಬೇಕು. ಕಾರಣಿಕ ದೈವಕ್ಷೇತ್ರ ಕೊಡಮಣಿತ್ತಾಯ ಕ್ಷೇತ್ರವು ಇಲ್ಲಿರುವುದರಿಂದ ನಮ್ಮ ಊರಿನ ಹೆಸರು ದೇಶ, ವಿದೇಶಗಳಲ್ಲಿ ಪ್ರಸಿದ್ಧಿಯಾಗಿದೆ. – ಸುಬ್ರಹ್ಮಣ್ಯ ಶಿಬರೂರಾಯ, ಗ್ರಾಮಸ್ಥರು
ಲಕ್ಷ್ಮೀ ನಾರಾಯಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.