ತಾಲೂಕಿಗೊಂದು ಪಶು ಸಂಜೀವಿನಿ ಆ್ಯಂಬುಲೆನ್ಸ್: ಸಚಿವ ಪ್ರಭು ಬಿ. ಚವ್ಹಾಣ್
ಜಿಲ್ಲಾ ಗೋ ಶಾಲೆಗೆ ಶಂಕುಸ್ಥಾಪನೆ
Team Udayavani, Jun 30, 2022, 6:20 AM IST
ಕಡಬ: ರಾಮಕುಂಜದಲ್ಲಿ ನಿರ್ಮಾಣಗೊಳ್ಳಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಸರಕಾರಿ ಗೋ ಶಾಲೆಗೆ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಸಚಿವರು, ಪಶುಸಂಜೀವಿನಿ ಆ್ಯಂಬುಲೆನ್ಸ್ ಮುಖ್ಯಮಂತ್ರಿ ಬೊಮ್ಮಾಯಿಯವರ ಮೂಲಕ ಬೆಂಗಳೂರಿನಲ್ಲಿ ಲೋಕಾರ್ಪಣೆ ಗೊಂಡಿದ್ದು, ಶೀಘ್ರದಲ್ಲಿ ಬೆಳಗಾವಿ, ಮೈಸೂರು, ಕಲಬುರಗಿ ವಿಭಾಗದಲ್ಲೂ ಅನುಷ್ಠಾನಕ್ಕೆ ಬರಲಿದೆ. 275 ಆ್ಯಂಬುಲೆನ್ಸ್ ಗಳಿದ್ದು ಪ್ರತೀ ತಾಲೂಕು, ವಿಧಾನಸಭಾ ಕ್ಷೇತ್ರಕ್ಕೊಂದರಂತೆ ನೀಡಲಾಗುವುದು. 1962 ನಂಬರ್‌ಗೆ ರೈತರು ಕರೆ ಮಾಡಿದಲ್ಲಿ ಮನೆ ಬಾಗಿಲಿಗೆ ವೈದ್ಯರು ಹೋಗಿ ಜಾನುವಾರುಗಳಿಗೆ ಚಿಕಿತ್ಸೆ ನೀಡಿ ವರದಿ ನೀಡಲಿದ್ದಾರೆ ಎಂದರು.
ಆತ್ಮನಿರ್ಭರ ಗೋ ಶಾಲೆ
ಗೋಮೂತ್ರ, ಸೆಗಣಿಯಿಂದ ಸುಮಾರು 32 ಉತ್ಪನ್ನಗಳನ್ನು ತಯಾರಿಸಬಹುದಾಗಿದೆ. ಆದುದರಿಂದ ರಾಜ್ಯದಲ್ಲಿ ಆತ್ಮನಿರ್ಭರ ಗೋ ಶಾಲೆ ತೆರೆಯುವ ಮೂಲಕ ಗೋ ಉತ್ಪನ್ನಗಳನ್ನು ಸಿದ್ಧಪಡಿಸಲಾಗುವುದು ಎಂದು ಚವ್ಹಾಣ್ ಹೇಳಿದರು.
ಪಶುಸಂಗೋಪನೆಗೆ ಒತ್ತು: ನಳಿನ್
ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ರಾಜ್ಯ ಸರಕಾರ ಪಶುಸಂಗೋಪನೆಗೆ ಒತ್ತು ನೀಡುತ್ತಿದೆ. ಹಿಂದಿನ ಸರಕಾರಗಳು ದೃಢ ನಿರ್ಧಾರ ಕೈಗೊಳ್ಳದ್ದರಿಂದ ರಾಜ್ಯದಲ್ಲಿ ಗೋಹತ್ಯೆ ಹೆಚ್ಚಾಗಿತ್ತು. ಈಗಿನ ಸರಕಾರ ಪ್ರತೀ ಜಿಲ್ಲೆಯಲ್ಲೂ ಗೋಶಾಲೆ ತೆರೆಯುವ ಮೂಲಕ ರಕ್ಷಣೆ ಮಾಡುತ್ತಿದೆ ಎಂದರು.
ಜಾನುವಾರುಗಳ ವೀರ್ಯ ಬ್ಯಾಂಕ್ ಸ್ಥಳಾಂತರ ಬೇಡ
ಮುಖ್ಯ ಅತಿಥಿಯಾಗಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಡಿ.ವಿ. ಸದಾನಂದ ಗೌಡರು ಶಾಸಕರಾಗಿದ್ದಾಗ ದ.ಕ., ಕೊಡಗು ಹಾಗೂ ಉಡುಪಿ ಜಿಲ್ಲೆಗೆ ಸಂಬಂಧಿಸಿ ಪುತ್ತೂರಿನಲ್ಲಿ ಜಾನುವಾರು ವೀರ್ಯ ಬ್ಯಾಂಕ್ ಸ್ಥಾಪನೆಯಾಗಿತ್ತು. ಅದನ್ನು ಮಂಗಳೂರಿಗೆ ಸ್ಥಳಾಂತರಿಸುವ ಬದಲು ಇಲ್ಲಿಯೇ ಆಧುನಿಕವಾಗಿ ಅಭಿವೃದ್ಧಿಗೊಳಿಸಬೇಕೆಂದು ಹೇಳಿದರು.
ರಾಮಕುಂಜ ಗ್ರಾ.ಪಂ. ಅಧ್ಯಕ್ಷೆ ಮಾಲತಿ ಎನ್.ಕೆ. ಶುಭ ಹಾರೈಸಿದರು. ಪುತ್ತೂರು ಎಸಿ ಗಿರೀಶ್ ನಂದನ್ ಎಂ., ಕಡಬ ತಾ.ಪಂ. ಇಒ ನವೀನ್ ಭಂಡಾರಿ ಎಚ್., ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಶ್ರೀನಿವಾಸ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮೈಸೂರು ಇಲ್ಲಿನ ಜಂಟಿ ನಿರ್ದೇಶಕ ಡಾ| ಸಿ.ವೀರಭದ್ರಯ್ಯ ಉಪಸ್ಥಿತರಿದ್ದರು.
ಪಶುಪಾಲನ ಇಲಾಖೆ ದ.ಕ. ಉಪನಿರ್ದೇಶಕ (ಆಡಳಿತ) ಡಾ| ಪ್ರಸನ್ನಕುಮಾರ್ ಟಿ.ಜಿ. ಸ್ವಾಗತಿಸಿದರು. ಡಾ| ಪ್ರಸನ್ನ ಹೆಬ್ಟಾರ್ ನಿರೂಪಿಸಿ, ಡಾ| ನಿತಿನ್ ಪ್ರಭು ವಂದಿಸಿದರು.
15 ಸಾವಿರ ಹಸುಗಳ ರಕ್ಷಣೆ
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದ್ದು, ಗೋವು ಕಸಾಯಿಖಾನೆಗೆ ಹೋಗುವುದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಶು ಸಂಗೋಪನೆ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಕಾಯ್ದೆ ಜಾರಿಗೊಂಡ ಬಳಿಕ 15 ಸಾವಿರ ಹಸುಗಳ ರಕ್ಷಣೆ ಆಗಿದೆ. 700ಕ್ಕಿಂತಲೂ ಹೆಚ್ಚು ಕೇಸುಗಳು ದಾಖಲಾಗಿವೆ ಎಂದು ಹೇಳಿದ ಚವ್ಹಾಣ್, ಪ್ರಸ್ತುತ ಜಿಲ್ಲೆಗೊಂದು ಗೋಶಾಲೆ ನಿರ್ಮಾಣ ಆಗುತ್ತಿದೆ. ಮುಂದೆ ತಾಲೂಕಿಗೊಂದರಂತೆ ರಾಜ್ಯದಲ್ಲಿ 100 ಗೋ ಶಾಲೆ ಆರಂಭಿಸಲಾಗುವುದು. ರಾಮಕುಂಜದ ಗೋಶಾಲೆ 2 ತಿಂಗಳಲ್ಲಿ ಪೂರ್ಣಗೊಳ್ಳಬೇಕೆಂದು ಸಚಿವ ಚವ್ಹಾಣ್ ಸೂಚಿಸಿದರು.
ಕೊಯಿಲ ಪಶು ವೈದ್ಯ ಕಾಲೇಜು ಶೀಘ್ರ
ಲೋಕಾರ್ಪಣೆ
ಕಡಬ: ಕೊಯಿಲ ಪಶು ಸಂಗೋಪನೆ ಕ್ಷೇತ್ರದಲ್ಲಿ 145 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಪಶುವೈದ್ಯಕೀಯ ಕಾಲೇಜಿನ ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರ ಲೋಕಾರ್ಪಣೆಯಾಗಲಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದರು.
ಅವರು ಪಶುವೈದ್ಯಕೀಯ ಕಾಲೇಜಿನ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಶಂಕುಸ್ಥಾಪನೆಯಾಗಿ 5 ವರ್ಷ ಗಳಾಗುತ್ತಾ ಬಂದರೂ ಕಾಮಗಾರಿ ಮುಗಿದಿಲ್ಲ. ಯಾರ ಕಾಲಕ್ಕೆ ಕಾಲೇಜು ತೆರೆಯಲಿದೆ ಎನ್ನುವ ಪತ್ರಕರ್ತರ ಪ್ರಶ್ನೆಗೆ, ಸದಾನಂದ ಗೌಡರು ಬಜೆಟ್‌ನಲ್ಲಿ ಘೋಷಿಸಿದ್ದರು, ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು, ಕಾಮಗಾರಿ ಪೂರ್ತಿಗೊಳಿಸಲು ಮತ್ತೆ ಯಡಿಯೂರಪ್ಪ-ಬಸವರಾಜ ಬೊಮ್ಮಾಯಿ ಬರಬೇಕಾಯಿತು, ಉದ್ಘಾಟನೆಯನ್ನು ಪ್ರಭು ಚವ್ಹಾಣ್ ಮಾಡುತ್ತಾರೆ ಎಂದು ಚಟಾಕಿ ಹಾರಿಸಿದರು.
ಕಾಮಗಾರಿ ಕಳಪೆಯಾಗಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿ, ಕಟ್ಟಡ ಹಸ್ತಾಂತರ ಆಗಬೇಕಾದರೆ ತಾಂತ್ರಿಕ ಪರೀಕ್ಷೆ ನಡೆಸಲಾಗುವುದು. ಥರ್ಡ್ ಪಾರ್ಟಿಯಿಂದಲೂ ಪರಿಶೀಲನೆ ನಡೆಯಲಿದೆ. ಸಮರ್ಪಕವಾಗಿವೆ ಎಂದು ಖಾತರಿಯಾದ ಬಳಿಕವೇ ಹಸ್ತಾಂತರ ನಡೆಯಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.