ಸಾಗರ : ಹಳೆ ಇಕ್ಕೇರಿಯಲ್ಲಿ ಅಕ್ರಮ ಅಕೇಶಿಯಾ ಕಡಿತಲೆ, ಕಣ್ಣು ಮುಚ್ಚಿ ಕುಳಿತ ಇಲಾಖೆ
Team Udayavani, Jul 7, 2022, 11:12 PM IST
ಸಾಗರ : ತಾಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳೆ ಇಕ್ಕೇರಿ ಗ್ರಾಮದ ಸರ್ವೇ ನಂ. 96ರ ಕಂದಾಯ ಇಲಾಖೆ ಜಾಗದಲ್ಲಿ ಕಳೆದ ಕೆಲ ದಿನಗಳಿಂದ ಅಕೇಶಿಯಾ ಮರಗಳ ಕಡಿತಲೆಯನ್ನು ರಾಜಕೀಯ ಪ್ರಭಾವಿಗಳು ಮಾಡುತ್ತಿದ್ದರೂ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಲಾಗಿದೆ.
ಗ್ರಾಮ ಪಂಚಾಯ್ತಿಯೊಂದರ ಮಾಜಿ ಅಧ್ಯಕ್ಷರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಾಲಿ ಉಪಾಧ್ಯಕ್ಷರೋರ್ವರು ಈ ಅಕ್ರಮ ಸಾಗಾಣಿಕೆಯಲ್ಲಿ ಪಾಲ್ಗೊಂಡಿರುವುದನ್ನು ಗ್ರಾಮದ ಜನ ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ಹೇಳುತ್ತಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ನಂತರವೂ ಅಕೇಶಿಯಾ ತುಂಡುಗಳ ಲಾರಿಯ ಸಾಗಾಟ ನಡೆದಿದೆ ಎಂದು ಗ್ರಾಮದವರು ಆರೋಪಿಸಿದ್ದಾರೆ.
ಕ್ಷೇತ್ರದ ಶಾಸಕ ಎಚ್.ಹಾಲಪ್ಪ ಹರತಾಳು ಅವರು ಸಕ್ರಮವಾಗಿಯೂ ಜೂನ್‌ನಿಂದ ಜುಲೈವರೆಗೆ ಮರಗಳ ಕಟಾವು ಪರವಾನಗಿ ಕೊಡಬಾರದು ಎಂದಿದ್ದಾರೆ. ಈ ಸಂಬಂಧ ಸರ್ಕಾರ ಕೂಡ ಆದೇಶ ಹೊರಡಿಸಿದೆ. ಆದರೆ ಈ ಬಗ್ಗೆ ನಿರ್ಲಕ್ಷ್ಯ ತೋರಿ ಈಗಾಗಲೇ ಐದಾರು ಲೋಡ್ ಅಕೇಶಿಯಾ ಬೇನಾಮಿಯಾಗಿ ಸಾಗಿಸಲಾಗಿದೆ. ರಾಜಕೀಯ ಪ್ರಭಾವ ಇರುವ ವ್ಯಕ್ತಿಗಳು ಭಾಗಿಯಾಗಿರುವುದರಿಂದ ಸರ್ಕಾರ ಕ್ರಮಕ್ಕೆ ಮುಂದಾಗಿಲ್ಲ. ಸ್ಥಳೀಯವಾಗಿ ಹಲವರಲ್ಲಿ ಈ ಕಂದಾಯ ಭೂಮಿಯಲ್ಲಿ ಅಕೇಶಿಯಾ ಕಟಾವು ಮಾಡಿದ, ಸಾಗಿಸಿದ ಫೋಟೋ, ವಿಡಿಯೋಗಳ ಸಾಕ್ಷಿಯಿವೆ. ಇವುಗಳನ್ನು ಬಳಸಿ ಸಂಬಂಧಿಸಿದ ವ್ಯಕ್ತಿಗಳು, ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಈ ಕುರಿತು ತಕ್ಷಣ ಶಾಸಕ ಹಾಲಪ್ಪ ಗಮನ ಹರಿಸಬೇಕು ಎಂದು ಅಲ್ಲಿನ ಜನ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.