ತಲೈವಿ ಪಡೆಯಲ್ಲಿ “ಇರುವರ್’ ತಿಕ್ಕಾಟ
Team Udayavani, Jul 12, 2022, 6:55 AM IST
“ಇಬ್ಬರು ನಾಯಕ’ರ ದಳ್ಳುರಿಗೆ ಎಐಎಡಿಎಂಕೆ ತುತ್ತಾಗಿರುವುದು ಇದೇ ಮೊದಲಲ್ಲ. ನೀನು ನೀನೇ, ಇಲ್ಲಿ ನಾನು ನಾನೇ ಎಂಬ ಹಠದಲ್ಲಿ ಈ ಪಕ್ಷ ಹಿಂದೆಯೂ ಹೋಳಾದ ಉದಾಹರಣೆಗಳಿವೆ. ಪ್ರಸ್ತುತ ಬೆಳವಣಿಗೆಯಲ್ಲಿ, ಒಂದು ಕಾಲದಲ್ಲಿ ಪುರುಚ್ಚಿ ತಲೈವಿ ಬಿರುದಾಂಕಿತ ಪಕ್ಷದ ಅಧಿನಾಯಕಿಯಾದ ಜಯಲಲಿತಾ ಅವರ ವಿಧೇಯ ಸೇವಕ ಎಂದೇ ಗುರುತಿಸಲ್ಪಟ್ಟಿದ್ದ ಪನ್ನೀರ್‌ಸೆಲ್ವಂ ಅವರನ್ನು ಎಐಎಡಿಎಂಕೆಯಿಂದ ಹೊರಹಾಕಲಾಗಿದೆ. ಇಡೀ ಪಕ್ಷ ಮತ್ತೊಬ್ಬ ನಾಯಕ ಪಳನಿಸ್ವಾಮಿ ಅವರ ಪಾಲಾಗಿದೆ. ನಾಯಕರ ಈಷ್ಯೆìಗಳಿಂದ ಈ ಹಿಂದೆ ಪಕ್ಷ ಹೋಳಾಗಿದ್ದರ ಇತಿಹಾಸ ಇಲ್ಲಿದೆ.
ಏನಿದು ಗಲಾಟೆ?
ಜಯಲಲಿತಾ ಅವರ ಸಾವಿನ ನಂತರ ಎಐಎಡಿಎಂಕೆಯಲ್ಲಿ ನಾಯಕತ್ವ ಸಮರ ಆರಂಭವಾಯಿತು. ವಿಚಿತ್ರವೆಂದರೆ, ಜಯಲಲಿತಾ ಅವರ ಉತ್ತರಾಧಿಕಾರಿಯಾಗಿ ಗುರುತಿಸಿಕೊಳ್ಳಲು ಮೊದಲು ಪ್ರಯತ್ನಿಸಿದವರು ಅವರ ಬಹುಕಾಲದ ಸ್ನೇಹಿತೆಯಾಗಿದ್ದ ಶಶಿಕಲಾ. ಅಲ್ಲದೆ, ಶಶಿಕಲಾ ಅವರೇ ಪ್ರಧಾನ ಕಾರ್ಯದರ್ಶಿ (ಎಐಎಡಿಎಂಕೆ ಪರಮೋತ್ಛ ಹುದ್ದೆ)ಯಾಗಿ ಆಯ್ಕೆಯಾದರು. ಜಯಲಲಿತಾ ಸಾವಿನ ವೇಳೆಯಲ್ಲಿ ತಮಿಳುನಾಡು ಸಿಎಂ ಆದವರು ಒ.ಪನ್ನೀರಸೆಲ್ವಂ(ಒಪಿಎಸ್). ಶಶಿಕಲಾ ಪ್ರಧಾನ ಕಾರ್ಯದರ್ಶಿಯಾದ ಮೇಲೆ ಪನ್ನೀರಸೆಲ್ವಂ (ಒಪಿಎಸ್) ರಾಜೀನಾಮೆ ನೀಡಿದರು. ಇವರ ಬದಲಿಗೆ ಶಶಿಕಲಾ, 2016ರಲ್ಲಿ ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದರು. ಆಗಿನಿಂದಲೂ ಪನ್ನೀರಸೆಲ್ವಂ ಮತ್ತು ಪಳನಿಸ್ವಾಮಿ ಮಧ್ಯೆ ನಾಯಕತ್ವ ಸಮರ ನಡೆಯುತ್ತಲೇ ಇದೆ.
ಬೇರೆಯಾದರು, ಮತ್ತೆ ಜತೆಯಾದರು…
ಮುಖ್ಯಮಂತ್ರಿ ಪದವಿ ಕಿತ್ತುಕೊಂಡ ತಕ್ಷಣವೇ ಒಪಿಎಸ್, ಶಶಿಕಲಾ ವಿರುದ್ಧ ಧರ್ಮಯುದ್ಧ ಸಾರಿದರು. ಶಶಿಕಲಾ ಬಣದ ವಿರುದ್ಧ ಜಯಲಲಿತಾ ಅವರ ಹೆಸರಿನಲ್ಲಿಯೇ ಪಕ್ಷ ಕಟ್ಟಿ ಹೋರಾಟ ಶುರು ಮಾಡಿದರು. ನಂತರದಲ್ಲಿ ಪಳನಿಸ್ವಾಮಿ ಕೂಡ ಶಶಿಕಲಾ ವಿರುದ್ಧ ತಿರುಗಿಬಿದ್ದರು. ಸಿಎಂ ಆದ ಆರು ತಿಂಗಳಲ್ಲೇ ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಒಂದಾದರು. ಇವರಿಬ್ಬರೂ ಸೇರಿ ಶಶಿಕಲಾ ಮತ್ತು ಅವರ ಸಂಬಂಧಿ ಟಿಟಿವಿ ದಿನಕರನ್ ಅವರನ್ನು ಎಐಎಡಿಎಂಕೆಯಿಂದ ಹೊರಹಾಕಿದರು.
ಎರಡು ಹುದ್ದೆ ನಿರ್ಮಾಣ
ಪಕ್ಷದಲ್ಲಿ ನಾಯಕತ್ವಕ್ಕಾಗಿ ಸಮರವಾಗಬಾರದು ಎಂಬ ಕಾರಣದಿಂದಾಗಿ ಒಪಿಎಸ್ ಮತ್ತು ಇಪಿಎಸ್ ಸೇರಿ, ಪಕ್ಷದ “ಬೈ-ಲಾ’ಗೆ ತಿದ್ದುಪಡಿ ತಂದು ಎರಡು ಹುದ್ದೆ ನಿರ್ಮಾಣ ಮಾಡಿದರು. ಅಂದರೆ, ಒಂದು ಸಂಚಾಲಕ ಮತ್ತು ಜಂಟಿ ಸಂಚಾಲಕ. ಸಂಚಾಲಕರಾಗಿ ಪಳನಿಸ್ವಾಮಿ ಆಯ್ಕೆಯಾದರೆ, ಜಂಟಿ ಸಂಚಾಲಕರಾಗಿ ಪನ್ನೀರಸೆಲ್ವಂ ಆಯ್ಕೆಯಾದರು. ಹಾಗೆಯೇ ಸರ್ಕಾರದಲ್ಲಿ ಆಡಳಿತವನ್ನೂ ನಡೆಸಿಕೊಂಡು ಹೋಗುತ್ತಿದ್ದರು. ಆದರೆ, 2019ರ ಲೋಕಸಭೆಯಲ್ಲಿ ಎಐಎಡಿಎಂಕೆ ಪಕ್ಷಕ್ಕಾದ ಸೋಲು ಮತ್ತೆ ನಾಯಕತ್ವ ಸಮರಕ್ಕೆ ಕಾರಣವಾಯಿತು.
2021ರಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆಯಲ್ಲೂ ಎಐಎಡಿಎಂಕೆ ಸೋಲು ಕಂಡಿತು. ಇದಾದ ಮೇಲೆ ನಾಯಕತ್ವ ಜಗಳ ಮತ್ತಷ್ಟು ಜೋರಾಗಿ, ಎರಡು ಹುದ್ದೆ ಬೇಡ, ಒಂದೇ ಹುದ್ದೆ ಇರಬೇಕು ಎಂಬ ವಾದ ಇಪಿಎಸ್ ಬಣದ ಕಡೆಯಿಂದ ಬಂದಿತು.
ಕಳೆದ ಡಿಸೆಂಬರ್‌ನಲ್ಲಿ ಎಐಎಡಿಎಂಕೆ ಜನರಲ್ ಬಾಡಿ ಮೀಟಿಂಗ್ ಆಗಿ, ಇದರಲ್ಲಿ ಸಂಚಾಲಕ ಮತ್ತು ಜಂಟಿ ಸಂಚಾಲಕರಾಗಿ ಇಪಿಎಸ್ ಮತ್ತು ಒಪಿಎಸ್ ಆಯ್ಕೆಯಾದರು. ಆದರೆ, ಏಪ್ರಿಲ್ ವೇಳೆಗೆ ಒಪಿಎಸ್ ವಿರುದ್ಧ ಇಪಿಎಸ್ ಬಣದ ಅಸಹನೆ ಮುಂದುವರಿದು, ಇವರಿಗೆ ಡಿಎಂಕೆ ಬೆಂಬಲವಿದೆ ಎಂಬ ಆರೋಪ ವ್ಯಕ್ತವಾಯಿತು. ಕಡೆಗೆ ಮತ್ತೆ ಪ್ರಧಾನ ಕಾರ್ಯದರ್ಷಿ ಹುದ್ದೆ ಮರುಸ್ಥಾಪಿಸಬೇಕು ಎಂದು ಉದ್ದೇಶಿಸಿ ಜೂ.14ರಂದು ಜನರಲ್ ಬಾಡಿ ಮಿಟಿಂಗ್ ಕರೆಯಲಾಗಿತ್ತು. ಇದಕ್ಕೆ ಒಪಿಎಸ್ ಹೈಕೋರ್ಟ್ ಕಡೆಯಿಂದ ತಡೆ ತಂದಿದ್ದರು. ಆದರೆ, ಇತ್ತೀಚೆಗಷ್ಟೇ ಮದ್ರಾಸ್ ಹೈಕೋರ್ಟ್, ಜನರಲ್ ಬಾಡಿ ಮೀಟಿಂಗ್ ನಡೆಸಬಹುದು ಎಂದಿದ್ದರಿಂದ, ಜು.11ರಂದು ಎಐಎಡಿಎಂಕೆ ಜನರಲ್ ಬಾಡಿ ಮೀಟಿಂಗ್ ನಡೆಸಲಾಗಿದೆ.
ಯಾರಿವರು ಒಪಿಎಸ್?
ಆರಂಭದ ಕಾಲದಿಂದಲೂ ಜಯಲಲಿತಾ ಅವರ ನೆಚ್ಚಿನ ಬಂಟ. 2012ರಲ್ಲಿ ಒಮ್ಮೆ ಮತ್ತು ಜಯಲಲಿತಾ ಅವರ ಸಾವಿನ ಬಳಿಕವೂ ಇವರೇ ಸಿಎಂ ಆಗಿದ್ದರು. ಜಯಾ ಮೇಲಿನ ಇವರ ನಿಷ್ಠೆ ಎಷ್ಟು ಅಗಾಧವಾಗಿತ್ತು ಎಂದರೆ, ಎಂದಿಗೂ ಇವರು ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಲೇ ಇಲ್ಲ. ಹಾಗೆಯೇ ಎಂದಿಗೂ ಜಯಲಲಿತಾ ಅವರ ಫೋಟೋವನ್ನು ಜೇಬಿನಲ್ಲಿ ಇರಿಸಿಕೊಂಡೇ ಅಧಿಕಾರ ನಡೆಸುತ್ತಿದ್ದರು. ಇನ್ನು ತಮಿಳುನಾಡಿನ ಥೇವರ್ ಸಮುದಾಯದ ಪ್ರಭಾವಿ ನಾಯಕರೂ ಹೌದು.
ಇಪಿಎಸ್ ಯಾರು?
ಸೇಲಂ ಜಿಲ್ಲೆಯ ಸಿಲುವಾಂಪಾಲಯಂ ಗ್ರಾಮದ ಇವರು ಎಐಡಿಎಂಕೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ಜಯಾ ಸಾವಿನ ಬಳಿಕ ಸಿಎಂ ಹುದ್ದೆಗೈರಿದವರು. ಎಂಜಿಆರ್ ಸಾವಿನ ಬಳಿಕ, ಎಐಎಡಿಎಂಕೆ ಇಬ್ಭಾಗವಾಗಿತ್ತು. ಆಗ ಜಯಲಲಿತಾ ಅವರ ಬೆನ್ನಿಗೆ ನಿಂತವರು. ಇವರು ತಮಿಳುನಾಡಿನ ಪ್ರಭಾವಿ ಗೌಂಡರ್ ಸಮುದಾಯಕ್ಕೆ ಸೇರಿದವರು.
ಇದೇ ಮೊದಲೇನಲ್ಲ
ಎಐಎಡಿಎಂಕೆ ಸೃಷ್ಟಿಯಾಗಿದ್ದೇ ಡಿಎಂಕೆಯಿಂದ ಸಿಡಿದು ಬಂದ ಒಂದು ಬಣದಿಂದ. ಆನಂತರ, ಎಐಡಿಎಂಕೆಯೂ ಕಾಲಾನುಕ್ರಮದಲ್ಲಿ ಒಡೆದು ಹೋದ ಉದಾಹರಣೆಗಳಿವೆ. 1987ರಲ್ಲಿ ಪಕ್ಷದ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್ ಅವರ ಸಾವಿನ ಬಳಿಕವೂ ಹೋಳಾಗಿತ್ತು. ಒಂದಕ್ಕೆ ಎಂಜಿಆರ್ ಪತ್ನಿ ಜಾನಕಿ ಅವರು ನೇತೃತ್ವ ವಹಿಸಿ, 23 ದಿನಗಳ ಸಿಎಂ ಕೂಡ ಆಗಿದ್ದರು. ಮತ್ತೂಂದು ಬಣದ ನೇತೃತ್ವವನ್ನು ಜಯಲಲಿತಾ ಅವರ ವಹಿಸಿಕೊಂಡಿದ್ದರು. ಪಕ್ಷ ಹೋಳಾಗಿದ್ದರಿಂದ 1989ರ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಹೀನಾಯ ಸೋಲು ಕಂಡಿತ್ತು. ಬಳಿಕ ಮತ್ತೆ ಎರಡೂ ಬಣಗಳು ಒಂದಾದವು.
ಶಶಿಕಲಾ, ದಿನಕರನ್ ಪಾತ್ರವೇನು?
ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ಬೆಂಗಳೂರಿನ ಜೈಲಿನಲ್ಲಿದ್ದ ಶಶಿಕಲಾ ಅವರು ಬಿಡುಗಡೆಯಾಗಿ ವಾಪಸ್ ಚೆನ್ನೈ ಸೇರಿಕೊಂಡಿದ್ದಾರೆ. ಈಗ ಸಕ್ರಿಯ ರಾಜಕಾರಣದಲ್ಲಿ ಇಲ್ಲ. ಇನ್ನು ಶಶಿಕಲಾ ಅವರ ಸಂಬಂಧಿ ಟಿಟಿವಿ ದಿನಕರನ್ ಅವರೂ, ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ಪಕ್ಷ ಕಟ್ಟಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದಾರೆ. ಈ ಎಲ್ಲಾ ಬೆಳವಣಿಗೆಯನ್ನು ದೂರದಲ್ಲೇ ನಿಂತು ಗಮನಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.