ಅಮೃತ್ ಪೌಲ್-ಶಾಂತಕುಮಾರ್ ನಡುವೆ 1.36 ಕೋಟಿ ರೂ. ವಹಿವಾಟು!
ಡಿವೈಎಸ್ಪಿಯಿಂದ ಎಡಿಜಿಪಿ ಸೂಚಿಸಿದ ಖಾತೆಗೆ ಹಣ ವರ್ಗಾವಣೆ: ಅಮೃತ್ ಪೌಲ್ ಮತ್ತೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ
Team Udayavani, Jul 14, 2022, 7:30 AM IST
ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣದ ಕಿಂಗ್‌ಪಿನ್‌ಗಳಾದ ಎಡಿಜಿಪಿ ಅಮೃತ್ ಪೌಲ್ ಮತ್ತು ಡಿವೈಎಸ್ಪಿ ಶಾಂತಕುಮಾರ್ ನಡುವೆ 1.36 ಕೋಟಿ ರೂ.ಗಳ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ತನಿಖಾಧಿಕಾರಿಗಳು ಅಮೃತ್ ಪೌಲ್‌ರನ್ನು ಮತ್ತೆ 3 ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
10 ದಿನಗಳ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಬುಧವಾರ ಪೌಲ್ ಅವರನ್ನು ಒಂದನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಆಗ ಆರೋಪಿಯ ಹಣದ ವ್ಯವಹಾರ ಸಂಬಂಧ ವಿಚಾರಣೆಗಾಗಿ 6 ದಿನ ವಶಕ್ಕೆ ನೀಡುವಂತೆ ಸಿಐಡಿ ಕೋರಿದ್ದು, ಕೋರ್ಟ್ ಶುಕ್ರವಾರದವರೆಗೆ ಕಸ್ಟಡಿಗೆ ನೀಡಿದೆ.
35ನೇ ಆರೋಪಿಯಾಗಿರುವ ಅಮೃತ್ ಪೌಲ್ ಸೂಚಿಸಿದ ಖಾತೆಗೆ 31ನೇ ಆರೋಪಿ ಡಿವೈಎಸ್ಪಿ ಶಾಂತ ಕುಮಾರ್ 1.36 ಕೋ. ರೂ. ವರ್ಗಾಯಿಸಿದ್ದಾರೆ. ಶಾಂತಕುಮಾರ್ ಅಭ್ಯರ್ಥಿ ದರ್ಶನ್ ಗೌಡ ಜತೆ ಹೆಚ್ಚು ಸಂಪರ್ಕದಲ್ಲಿದ್ದದ್ದು ಹಾಗೂ ಆತನಿಂದಲೂ 60 ಲಕ್ಷ ರೂ. ಪಡೆದಿರುವುದು ತಿಳಿದು ಬಂದಿದ್ದು, ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಹಿರಿಯ ಸ ಸರಕಾರಿ ಅಭಿಯೋಜಕಿ ಎ.ವಿ.ಮಧು ವಾದ ಮಂಡಿಸಿದರು.
ಮೊಬೈಲ್ ಡೇಟಾ ಡಿಲೀಟ್!
ಅಮೃತ್ ಪೌಲ್ ಅವರ ಐಫೋನ್ ವಶಕ್ಕೆ ಪಡೆಯಲಾಗಿದ್ದು, ಅದರಲ್ಲಿರುವ ಮಾಹಿತಿಯನ್ನು ಸಂಪೂರ್ಣವಾಗಿ ಅಳಿಸಿ ಹಾಕಲಾಗಿದೆ. ಬುಧವಾರ ಮೊಬೈಲ್ ಪಾಸ್‌ವರ್ಡ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೊಬೈಲ್ ರಿಟ್ರೈವ್ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮೊಬೈಲ್‌ನಲ್ಲಿ ಸಿಕ್ಕ ಸಾûಾÂಧಾರಗಳನ್ನು ಮುಂದಿಟ್ಟುಕೊಂಡು ಆರೋಪಿಯನ್ನು ವಿಚಾರಣೆ ಮಾಡಬೇಕಿದೆ. 10 ದಿನಗಳ ಪೊಲೀಸ್ ಕಸ್ಟಡಿಯಲ್ಲಿ 5 ದಿನ ಮಾತ್ರ ಆರೋಪಿ ವಿಚಾರಣೆಗೆ ಸಹಕಾರ ನೀಡಿದ್ದಾರೆ ಎಂದೂ ಸರಕಾರಿ ಅಭಿಯೋಜಕಿ ಕೋರ್ಟ್‌ಗೆ ತಿಳಿಸಿದರು.
ಆರೋಪಿ ಪರ ವಕೀಲರ ಆಕ್ಷೇಪ
ಮತ್ತೊಂದೆಡೆ ಆರೋಪಿ ಪರ ವಕೀಲರು ಪೊಲೀಸ್ ಕಸ್ಟಡಿಗೆ ಆಕ್ಷೇಪ ವ್ಯಕ್ತಪಡಿಸಿ, ಈ ಹಿಂದೆ ಆರೋಪಿ 3 ಬಾರಿ ಸ್ವಯಂಪ್ರೇರಿತವಾಗಿಯೇ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡಿದ್ದಾರೆ. ಈಗಾಗಲೇ 10 ದಿನ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಹಿಂದೆ ಯಾವ ಆಧಾರದ ಮೇಲೆ ಪೊಲೀಸ್ ಕಸ್ಟಡಿಗೆ ಕೇಳಿದ್ದರೋ ಈಗಲೂ ಅದೇ ಅಂಶವನ್ನು ಪ್ರಸ್ತಾವಿಸುತ್ತಿದ್ದಾರೆ. ಹಾಗಾದರೆ “ಅದ್ಯಾವ ಪುರುಷಾರ್ಥ’ಕ್ಕೆ ಪೊಲೀಸ್ ಕಸ್ಟಡಿಗೆ ಪಡೆದಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಟುಂಬ ಭೇಟಿಗೆ ಅವಕಾಶ
ತಮಗೆ ಪ್ರತಿನಿತ್ಯ ಕುಟುಂಬ ಸದಸ್ಯರ ಭೇಟಿಗೆ ಹಾಗೂ ವೈದ್ಯರೊಂದಿಗೆ ಮಾತನಾಡಲು ಅವಕಾಶ ನೀಡುವಂತೆ ಪೌಲ್ ಮಾಡಿರುವ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ. ಪ್ರತಿನಿತ್ಯ 30 ನಿಮಿಷ ಕುಟುಂಬ ಸದಸ್ಯರ ಭೇಟಿಗೆ ಅವಕಾಶ ನೀಡಲಾಗಿದೆ. ಜತೆಗೆ ಆನ್‌ಲೈನ್ ಮೂಲಕ ವೈದ್ಯರನ್ನು ಸಂಪರ್ಕಿಸಲು ಸೂಚಿಸಿದೆ.
ಆರಾಮವಾಗಿದ್ದೇನೆ
ಈ ಮಧ್ಯೆ ಆರೋಪಿ ಅಮೃತ್‌ಪೌಲ್ ಕೋರ್ಟ್ ಕೊಠಡಿಯಿಂದ ಹೊರಬರುತ್ತಿದ್ದಂತೆ ಅವರ ಸಂಬಂಧಿಕರು “ಧೈರ್ಯವಾಗಿರಿ’ ಎಂದರು. ಆಗ ಅಮೃತ್‌ಪೌಲ್, “ನಾನು ಆರಾಮವಾಗಿದ್ದೇನೆ. ಡೋಂಟ್ ವರಿ’ ಎಂದು ಸಂಬಂಧಿಕರೊಬ್ಬರ ಬೆನ್ನುತಟ್ಟಿದ ಪ್ರಸಂಗ ನಡೆಯಿತು.
ನಾಲ್ವರಿಗೆ ನ್ಯಾಯಾಂಗ ಬಂಧನ
ಪ್ರಕರಣದ ಆರೋಪಿಗಳಾದ ಡಿವೈಎಸ್ಪಿ ಶಾಂತಕುಮಾರ್, ನೇಮಕಾತಿ ವಿಭಾಗ ಸಿಬಂದಿ ಶ್ರೀನಿವಾಸ್, ಹರ್ಷ, ಶ್ರೀಧರ್ ಅವರ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬುಧವಾರ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.