ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗೆಹರಿದರೆ ಅಭಿವೃದ್ಧಿಗೆ ವೇಗ
ಮೂಡುಕೊಣಾಜೆ: ರಸ್ತೆ, ಶಾಲೆ, ಪಶು ಚಿಕಿತ್ಸಾ ಕೇಂದ್ರ ಬೇಡಿಕೆ
Team Udayavani, Jul 14, 2022, 11:55 AM IST
ಮೂಡುಬಿದಿರೆ: ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮೂಡುಕೊಣಾಜೆ ಗ್ರಾಮದಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆ ಎಲ್ಲದಕ್ಕೂ ಅಡ್ಡಿಯಾಗಿ ಕಾಡುತ್ತಿದೆ. ಮನೆ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಆಗುತ್ತಿಲ್ಲ. ರಸ್ತೆಗಳು ಕಾಯಕಲ್ಪಕ್ಕಾಗಿ ಕಾಯುತ್ತಿವೆ.
ಸುಮಾರು ಎರಡು ಸಾವಿರ ಜನಸಂಖ್ಯೆ ಇರುವ ಮೂಡುಕೊಣಾಜೆ ಗ್ರಾಮದಲ್ಲಿರುವ ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದಾಗಿ ಬಹಳಷ್ಟು ಜನ ಮನೆ ನಿವೇಶನ ಪಡೆಯಲಾಗದೆ ಸಂಕಷ್ಟದಲ್ಲಿದ್ದಾರೆ. ವಿಶೇಷವಾಗಿ ಒಂಟಿ ಜೀವಿಗಳು, ನಿರ್ಗತಿಕರು, ವಿಧವೆಯರೇ ಮೊದಲಾದವರು ಸ್ವಂತ ನಿವೇಶನ ಹೊಂದಲಾಗದ ಸ್ಥಿತಿಯಲ್ಲಿದ್ದಾರೆ. ಕಂದಾಯ ಇಲಾಖೆ ಮನಸ್ಸು ಮಾಡಿದರೆ ಸುಮಾರು 99 ಮಂದಿಗೆ ನಿವೇಶನ ಲಭಿಸಲು ಸಾಧ್ಯ. ಬೆಕ್ಕಿಗೆ ಗಂಟೆ ಕಟ್ಟುವವರಾರು?
ಅಭಿವೃದ್ಧಿಯ ನಿರೀಕ್ಷೆಯಲ್ಲಿ ರಸ್ತೆಗಳು
ಮೂಡುಕೊಣಾಜೆಯಲ್ಲಿರುವ ಇಜಿನ್ ರಸ್ತೆ, ಎರ್ಮುಡೆ, ಪೊಸಲಾಯಿ, ಕಂಚಿಲೋಡಿ ರಸ್ತೆಗಳ ಅಭಿವೃದ್ಧಿ ಆಗಬೇಕಾಗಿದೆ. ಕಂಚಿಲೋಡಿ ರಸ್ತೆ ಎರಡೂವರೆ ಕಿ.ಮೀ. ಉದ್ದಕ್ಕೂ ನಾದುರಸ್ತಿಯಾಗಿದ್ದು ಪೂರ್ತಿ ಡಾಮರು ಇಲ್ಲವೇ ಕಾಂಕ್ರೀಟ್ ಹಾಕಬೇಕಾಗಿದೆ.
ಕಂಗಿನಡಿ-ಬಂಗ್ಲೆಗುಡ್ಡೆ ರಸ್ತೆಗೂ ಮಣ್ಣ ಭಾಗ್ಯದಿಂದ ಮುಕ್ತಿ ದೊರೆಯುವುದನ್ನು ಕಾಯುತ್ತಿದೆ.
ಕೈಕಂಜಿ ಕಡಪು ರಸ್ತೆ ಹತ್ತು ವರ್ಷಗಳ ಹಿಂದೆ ರಚಿಸುವಾಗಲೇ ಸುಭದ್ರವಾಗಿ ರಚಿಸಿಲ್ಲ. ಮಣ್ಣಿನ ಮೇಲೆ ಡಾಮರ್ ಹೊದೆಸಿದ ಪರಿಣಾಮವಾಗಿ ಮಳೆಗಾಲದಲ್ಲಿ ನೆಲದಡಿಯಿಂದ ನೀರು ಒಸರಿ ಒಂದೂವರೆ ಕಿ.ಮೀ. ರಸ್ತೆ ಹಾಳಾಗಿದೆ. ಇದಕ್ಕೆ ಶೀಘ್ರ ಕಾರ್ಯಕಲ್ಪವಾಗಬೇಕಿದೆ. ಈ ರಸ್ತೆ ಮುಂದೆ ಮೂಡುಬಿದಿರೆ ಮಾರೂರು ವೇಣೂರು ರಸ್ತೆಯನ್ನು ಸಂಪರ್ಕಿಸುವ ಮಹತ್ವದ ಸಂಪರ್ಕ ಕೊಂಡಿಯಾಗಿದೆ.
ಅದೇ ರೀತಿ, ಉಂಜೆ ಬೆಟ್ಟು – ಕಂಚಿಲೋಡಿ (ಒಂದೂವರೆ ಕಿ.ಮೀ), ಮಾವಿನಕಟ್ಟೆ ಕಂಚಿಲೋಡಿ (ಎರಡೂವರೆ ಕಿ.ಮೀ.), ಇಜಿನು ಕಂಚಿಲೋಡಿ ರಸ್ತೆ (ಎರಡೂವರೆ ಕಿ.ಮೀ.) ಇವೆಲ್ಲ ಡಾಮರು ಭಾಗ್ಯ ಹೊಂದಬೇಕಾಗಿವೆ. ಸೀಮುಲಗುಡ್ಡೆಯಲ್ಲಿರುವ ಐದು ಸೆಂಟ್ಸ್ ಕಾಲನಿಯಲ್ಲಿ ಸುಮಾರು ಒಂದು ಕಿ.ಮೀ. ರಸ್ತೆ ದುರಸ್ತಿ ಆಗಬೇಕು. ಎಲ್ಲ ಕಡೆ ದಾರಿದೀಪಗಳ ವಿಸ್ತರಣೆ ಆಗಬೇಕು.
ಉಂಜೆ, ಇಜಿನು, ಕೊರ್ಯಾರು, ಅಗೈರಿ, ಕಂಚರ್ಲಗುಡ್ಡೆ ಮೊದಲಾದ ಕಡೆಗಳ ರಸ್ತೆಗಳ ಸುಧಾರಣೆ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಲಾಗಿದ್ದು, ಹೆಚ್ಚಿನ ಬೇಡಿಕೆಗಳು ಈಡೇರುವ ಸ್ಥಿತಿ ಇವೆ.
ಲೈನ್‌ಮ್ಯಾನ್ ಕೊರತೆ
ವಿದ್ಯುತ್ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕೊರತೆ ಇರುವ ಮೆಸ್ಕಾಂ ಲೈನ್ ಮ್ಯಾನ್‌ಗಳನ್ನು ನಿಯುಕ್ತಿಗೊಳಿಸುವುದು ಬಹಳ ಮುಖ್ಯ. ಮೂಡುಕೊಣಾಜೆಯಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ. ಶ್ಮಶಾನಕ್ಕೆ ಹೆಚ್ಚಿನ ಅನುದಾನ ಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಅಂಗನವಾಡಿ, ಶಾಲಾ ಕಟ್ಟಡ
ಮೂಡುಕೊಣಾಜೆ ಗ್ರಾಮದಲ್ಲಿರುವ ಅಂಗನವಾಡಿಗೆ ಹೊಸಕಟ್ಟಡ ಆಗಬೇಕು. ಕಂಚರ್ಲಗುಡ್ಡೆಯಲ್ಲಿ ಅಂಗನವಾಡಿ ಆರಂಭ ಮಾಡಬೇಕು ಎಂಬ ಬೇಡಿಕೆ ಇದೆ. ಆದರೆ ಇಲಾಖೆಯ ನಿಯಮಗಳಿಂದ ಸ್ವಲ್ಪ ಸಮಸ್ಯೆ ಇದೆ. ಅದನ್ನು ನೀಗಿಸಬೇಕಾಗಿದೆ. ಮೂಡುಕೊಣಾಜೆ ಸರಕಾರಿ ಪ್ರೌಢಶಾಲೆಗೆ ಕೊಠಡಿಗಳ ಸಹಿತ ಕೆಲವು ಮೂಲಸೌಕರ್ಯಗಳು ಒದಗಿಬರಬೇಕಾಗಿವೆ.
ಪ್ರಕೃತಿ ರಮ್ಯ ತಾಣ
ಪಶ್ಚಿಮ ಘಟ್ಟದ ಸೆರಗಿನಂಚಿನಲ್ಲಿರುವ ಮೂಡುಕೊಣಾಜೆ ಪ್ರಕೃತಿ ರಮ್ಯ ತಾಣ. ಕೃಷಿ ಮತ್ತು ಹೈನುಗಾರಿಕೆ ಇಲ್ಲಿನ ಪ್ರಧಾನ ಕಾಯಕ. ಇಲ್ಲೊಂದು ಸಂಚಾರಿ ಪಶುವೈದ್ಯಕೀಯ ಘಟಕದ ಆವಶ್ಯಕತೆ ಇದೆ. ಪಶುವೈದ್ಯಕೀಯ ಸಂಚಾರಿ ಆಥವಾ ಮಾವಿನಕಟ್ಟೆಯಲ್ಲಿ ಸುಸಜ್ಜಿತ ಘಟಕ, ಇರುವ ಆರೋಗ್ಯ ಉಪಕೇಂದ್ರ ಸುಧಾರಣೆ ಆಗಬೇಕು.
ಅನುದಾನ ಬೇಕಾಗಿದೆ: ಗ್ರಾಮದಲ್ಲಿ ನೀರು, ರಸ್ತೆ, ದಾರಿದೀಪ ಮೊದಲಾದ ವಿಷಯಗಳಲ್ಲಿ ಅಭಿವೃದ್ಧಿ ಆಗಿಲ್ಲ ಎನ್ನಲಾಗದು. ಆದರೆ ಇನ್ನೂ ಆಗಬೇಕಾಗಿದೆ. ವಿಶೇಷವಾಗಿ ಅಂಗನವಾಡಿ ಕೊಠಡಿ, ರಸ್ತೆಗಳಿಗೆ ಹೆಚ್ಚಿನ ಅನುದಾನ ಒದಗಿಬರಬೇಕಾಗಿದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆ ನೀಗಿ ಮನೆ ನಿವೇಶನದ ಹಕ್ಕುಪತ್ರಗಳ ವಿತರಣೆ ಆಗಬೇಕು. -ಸುಕೇಶ್ ಶೆಟ್ಟಿ, ಗ್ರಾಮಸ್ಥರು
-ಧನಂಜಯ ಮೂಡುಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.