ವಿಟ್ಲಮುಡ್ನೂರು: ಚಿಕ್ಕ ಗ್ರಾಮವೆಂದು ಅವಗಣಿಸಬೇಡಿ
ಹತ್ತಾರು ಸಮಸ್ಯೆಗಳಿಗೆ ಪರಿಹಾರ ದೊರಕಬೇಕಿದೆ
Team Udayavani, Jul 18, 2022, 10:42 AM IST
ವಿಟ್ಲ: ವಿಟ್ಲಮುಡ್ನೂರು ನಾಲ್ಕು ವಾರ್ಡ್‌ಗಳಿರುವ ಚಿಕ್ಕ ಗ್ರಾಮ. ಈ ಗ್ರಾಮ ವಿಟ್ಲಕಸಬಾ ಗ್ರಾಮಕ್ಕೆ ತಾಗಿಕೊಂಡಿದೆ. ವಿಟ್ಲ ಪಟ್ಟಣ ಪಂಚಾಯತ್ ಗಡಿಯಿಂದ ಮೂರು ಕಿಮೀ ವ್ಯಾಪ್ತಿಯಲ್ಲಿರುವ ಗ್ರಾಮವಿದು. ಹಾಗಾಗಿ ವಿಟ್ಲದ ಕಂದಾಯ ಕಾನೂನು ನಿಯಮಗಳೇ ಈ ಗ್ರಾಮಕ್ಕೂ ಅನ್ವಯ.
ಇದರಿಂದ ಈ ಗ್ರಾಮಸ್ಥರಿಗೆ ಆಗಿರುವ ನಷ್ಟವೇ ಹೆಚ್ಚು. ಯಾಕೆಂದರೆ ಗ್ರಾಮಸ್ಥರಿಗೆ ಅಕ್ರಮ ಸಕ್ರಮ, ಕುಮ್ಕಿ ಹಕ್ಕು, 94ಸಿ, 94 ಸಿಸಿ ಸೌಲಭ್ಯಗಳು ಸಿಗದಂತಾಗಿದೆ. ಹಾಗಾಗಿ ವಿಟ್ಲ ಗ್ರಾ.ಪಂ. ಮೇಲ್ದರ್ಜೆಗೇರಿ ಪಟ್ಟಣ ಪಂಚಾಯತ್ ಆದದ್ದು ಈ ಗ್ರಾಮದ ಪಾಲಿಗೆ ವರವಾಗಲಿಲ್ಲ; ಶಾಪವಾಗಿ ಪರಿಣಮಿಸಿದೆ.
ವಿಟ್ಲಮುಡ್ನೂರು ಗ್ರಾಮದ ವಿಸ್ತೀರ್ಣ 3,260 ಎಕ್ರೆ ಪ್ರದೇಶ. ಜನಸಂಖ್ಯೆ 4,500. ವಿಟ್ಲದಿಂದ ವಿಟ್ಲಮುಡ್ನೂರು ಸಾಗುವ ಮತ್ತು ಗ್ರಾಮದ ಪ್ರಮುಖ ರಸ್ತೆಯು ಮುಕ್ಕಾಲು ಭಾಗ ಹತ್ತಾರು ವರ್ಷಗಳ ಬಳಿಕ ಡಾಮರು ಕಂಡಿದೆ. ಆದರೆ ಇನ್ನೂ ಕಾಲು ಭಾಗ ಸಂಚರಿಸಲು ಸಾಧ್ಯವಾಗದಂತಿದೆ. ಇನ್ನೊಂದು ಪ್ರಮುಖ ರಸ್ತೆ ವಿಟ್ಲ ಕಂಬಳಬೆಟ್ಟು ಕಬಕ ರಸ್ತೆ. ಇದರ ಅವಸ್ಥೆಯೂ ಅವ್ಯವಸ್ಥೆ. ಕಾಮಗಾರಿ ನಿರ್ವಹಿಸಿದವರ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿಟ್ಲ ಕಬಕ ರಸ್ತೆ ಜನತೆಗೆ ಸಂಕಷ್ಟವಾಗಿ ಪರಿಣಮಿಸಿದೆ.
ಈ ಗ್ರಾಮದಲ್ಲಿ ಸಹಕಾರಿ ಸಂಘದ ಶಾಖೆ ಹೊರತು ಪಡಿಸಿದರೆ ಬೇರೆ ವಾಣಿಜ್ಯ ಬ್ಯಾಂಕ್‌ಗಳಿಲ್ಲ. ಎಟಿಎಂ ಇಲ್ಲ. ಮೆಸ್ಕಾಂ ಕಚೇರಿಯಿಲ್ಲ. ದೂರವಾಣಿ ವಿನಿಮಯ ಕೇಂದ್ರವಿಲ್ಲ. ಗ್ರಾಮದೊಳಗೆ ನಿರಂತರ ಬಸ್ ಸಂಚಾರವೂ ಇಲ್ಲ. ಕೆಎಸ್‌ಆರ್‌ಟಿಸಿ ಬಸ್ ಈ ಗ್ರಾಮದೊಳಗೆ ಸಂಚರಿಸುತ್ತಿಲ್ಲ. ಗ್ರಾಮಸ್ಥರು ವ್ಯವಹಾರಕ್ಕೆ ವಿಟ್ಲ ಪೇಟೆಯನ್ನು ಅವಲಂಬಿಸಬೇಕು. ಸ್ವಂತ ವಾಹನ ಅಥವಾ ಬಾಡಿಗೆ ವಾಹನಗಳೇ ಗತಿ.
ಕಂಬಳಬೆಟ್ಟು ಪ್ರದೇಶದ ನಾಗರಿಕರಿಗೆ ಸ್ವಲ್ಪ ಮಟ್ಟಿಗೆ ಪೇಟೆಯ ವಾತಾವರಣದ ಪ್ರಯೋಜನ ಪಡೆಯುತ್ತಿದ್ದಾರೆ.ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನ ಗ್ರಾಮ ದೇವಸ್ಥಾನ. ಆಲಂಗಾರು ಶ್ರೀ ಮೂಕಾಂಬಿಕಾ ದೇವಸ್ಥಾನ, ಮಲರಾಯ ದೈವಸ್ಥಾನ, ಕಂಬಳಬೆಟ್ಟು ಮಸೀದಿ ಇಲ್ಲಿನ ಪ್ರಮುಖ ಧಾರ್ಮಿಕ ಕೇಂದ್ರಗಳು. ಆರೋಗ್ಯ ಉಪಕೇಂದ್ರ ಕಾರ್ಯಾಚರಿಸುತ್ತದೆ. ಗ್ರಾ.ಪಂ. ಕಟ್ಟಡ ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಆದರೆ ವಿಸ್ತರಿಸುವ ಅವಕಾಶವಿದೆ. ಪಂಚಾಯತ್ ಗ್ರಂಥಾಲಯ ಇದೆ. ಪುಸ್ತಕ ಓದುವವರಿಲ್ಲ. ನೀರಿನ ಸಮಸ್ಯೆ ಈ ಪ್ರದೇಶದಲ್ಲಿ ಕಡಿಮೆ. ಹಳ್ಳಿ ಪ್ರದೇಶವಾದುದರಿಂದ ಹೆಚ್ಚಿನ ಮನೆಗಳು ದೂರ ದೂರದಲ್ಲಿದ್ದು, ಸ್ವಂತ ನೀರಿನ ಆಶ್ರಯ ಹೊಂದಿ ರುವುದು ಗ್ರಾ.ಪಂ. ಭಾರವನ್ನು ತಗ್ಗಿಸಿದೆ.
ಗ್ರಾಮದಲ್ಲಿ ಕ್ರಶರ್‌ಗಳ ಸಂಖ್ಯೆ ಹೆಚ್ಚು. ಈ ಕ್ರಶರ್‌ಗಳಿಗೆ ಪರ-ವಿರೋಧ ಎರಡೂ ಇದೆ. ಕ್ರಶರ್‌ಗಳ ಕಾರಣಕ್ಕೆ ಭಾರ ತುಂಬಿದ ಲಾರಿಗಳ ಓಡಾಟದಿಂದ ರಸ್ತೆ ಹದಗೆಡುತ್ತಿದೆ. ಇವೆಲ್ಲವನ್ನೂ ಗಮನ ಹರಿಸಬೇಕಿದೆ.
ಈ ಗ್ರಾಮದ ಸಮಸ್ಯೆ ಎಂದರೆ ಚಿಕ್ಕದೆಂಬುದು. ಹಾಗಾಗಿ ಅಭಿವೃದ್ಧಿ ವಿಷಯದಲ್ಲಿ ಸಿಗಬೇಕಾದಷ್ಟು ಆದ್ಯತೆ ಸಿಗುತ್ತಿಲ್ಲ ಎಂಬ ಅಭಿಪ್ರಾಯವಿದೆ. ಹಾಗೆಂದು ಗ್ರಾಮದಲ್ಲಿ ಆಗಬೇಕಾದ ಕೆಲಸಗಳ ಪಟ್ಟಿ ದೊಡ್ಡದಿದೆ. ಪ್ರಮುಖ ರಸ್ತೆಯ ಅಭಿವೃದ್ಧಿಯಿಂದ ಹಿಡಿದು ಕೆಲವು ಕಾಮಗಾರಿಗಳಾದರೂ ಆದ್ಯತೆ ಮೇರೆಗೆ ನಡೆಯಬೇಕಿದೆ.
ಸೇತುವೆ ನಿರ್ಮಾಣವಾಗಲಿ
ಸೇನೆರೆಮಜಲು ಎಂಬಲ್ಲಿ ಬೃಹತ್ ಸೇತುವೆ ನಿರ್ಮಾಣವಾಗಬೇಕಾಗಿದೆ. ಕಂಬಳಬೆಟ್ಟು ನೂಜಿಯಲ್ಲೂ ಸೇತುವೆ ಆವಶ್ಯಕತೆಯಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಪರವಾಗಿಲ್ಲ. ಇನ್ನೂ ಹಲವಾರು ರಸ್ತೆ ಅಭಿವೃದ್ಧಿಯಾಗಬೇಕಿದೆ. ಸಣ್ಣಸಣ್ಣ ರಸ್ತೆಗಳಿಗೆ ಕಾಂಕ್ರೀಟ್, ಡಾಮರು ಆಗಬೇಕಿದೆ. ಹತ್ತಾರು ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಬದನಾಜೆ – ಕುಂಡಡ್ಕ -ಪರಿಯಾಲ್ತಡ್ಕ ಪ್ರಮುಖ ರಸ್ತೆಯ ಅಭಿವೃದ್ಧಿ ಕಾಮಗಾರಿ ಪೂರ್ತಿಯಾಗಿಲ್ಲ. ಕಾಲು ಭಾಗದ ಕಾಮಗಾರಿ ಅನುದಾನವಿಲ್ಲದೇ ಕುಂಠಿತವಾಗಿದೆ. ಪರಿಣಾಮವಾಗಿ ಇನ್ನೂ ಸಂಚಾರ ಸುಸೂತ್ರವಾಗುತ್ತಿಲ್ಲ. ಈ ಗ್ರಾಮಕ್ಕೆ ಕುಳ, ಕಬಕ, ಪುಣಚ, ಕೇಪು ಗ್ರಾಮಗಳ ಸಂಪರ್ಕವೂ ಇದೆ. ಪುತ್ತೂರು ತಾಲೂಕು ಕೇಂದ್ರವು ಬಂಟ್ವಾಳ ತಾಲೂಕು ಕೇಂದ್ರಕ್ಕಿಂತ ಹೆಚ್ಚು ಸಮೀಪವಾಗಿದೆ. ಬಂಟ್ವಾಳ ತಾಲೂಕು ಕೇಂದ್ರವಾಗಿದ್ದು, ವಿಟ್ಲ ಹೋಬಳಿಯ ವ್ಯಾಪ್ತಿಯಲ್ಲಿರುವ ಈ ಗ್ರಾಮದ ಅಭಿವೃದ್ಧಿ ಹೆಚ್ಚು ಅವಶ್ಯವಾಗಿದೆ. ನವೀಕರಣಗೊಳಿಸಿ, ಆಧುನಿಕ ಸೌಲಭ್ಯಗಳನ್ನು ಸ್ಥಳದಲ್ಲೇ ಗ್ರಾಮಸ್ಥರು ಪಡೆಯುವಂತಾಗಬೇಕಿದೆ.
ಪ್ರಸ್ತಾವ ಸಲ್ಲಿಕೆ: ಗ್ರಾಮ ಪಂಚಾಯತ್‌ಗೆ ನೂತನ ಹಾಗೂ ಸುಸಜ್ಜಿತ ಕಟ್ಟಡ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸೇನೆರೆಮಜಲು, ಕಂಬಳಬೆಟ್ಟು ನೂಜಿ ಸೇತುವೆಗೂ ರುದ್ರಭೂಮಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಹಂತಹಂತವಾಗಿ ನಡೆಯುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಆರ್ ಡಿಎಲ್ ಯೋಜನೆಯ ಅನುದಾನದಲ್ಲಿ ಆಟದ ಮೈದಾನ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣವಾಗಿಲ್ಲ. ಶಾಸಕರು, ಸಂಸದರು ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ತ್ಯಾಜ್ಯ ಘಟಕಕ್ಕೆ 50 ಸೆಂಟ್ಸ್ ಜಾಗ ಮಂಜೂರಾಗಿದೆ. ಕಟ್ಟಡ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿದೆ. -ಜಯಪ್ರಕಾಶ ನಾಯಕ್, ಅಧ್ಯಕ್ಷರು, ಗ್ರಾಮ ಪಂಚಾಯತ್, ವಿಟ್ಲಮುಟ್ನೂರು
ಅಭಿವೃದ್ಧಿಗೆ ಆದ್ಯತೆ ನೀಡಿ: ಗ್ರಾಮದ ಪ್ರಮುಖ ರಸ್ತೆ ಅಭಿವೃದ್ಧಿಯಾಗಬೇಕೆಂಬ ನಮ್ಮ ಬೇಡಿಕೆಯೇ ಇನ್ನೂ ಈಡೇರಿಲ್ಲ. ಅರ್ಧಂಬರ್ಧ ಆಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಬದನಾಜೆ, ಪರಿಯಾಲ್ತಡ್ಕ ರಸ್ತೆಯನ್ನು ಪೂರ್ಣವಾಗಿ ಸುಸಜ್ಜಿತಗೊಳಿಸಿ, ಗ್ರಾಮಸ್ಥರ ಸಮಸ್ಯೆ ಪರಿಹರಿಸಬೇಕು. ಈ ಗ್ರಾಮ ತೀರಾ ಕಡೆಗಣಿಸಲ್ಪಟ್ಟಿದೆ. ಯಾವ ಸೌಲಭ್ಯವೂ ನಮ್ಮನ್ನು ತಲುಪಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ, ತತ್‌ಕ್ಷಣ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಿ ಗ್ರಾಮದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. -ಎಲ್ಯಣ್ಣ ಪೂಜಾರಿ, ಗ್ರಾಮಸ್ಥರು
-ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.