ಜೀವನದ ಸಂತೋಷ ದಾನದಲ್ಲಿ ಅಡಗಿದೆ
Team Udayavani, Jul 20, 2022, 6:20 AM IST
ಪ್ರಪಂಚದ ಇತರ ಜೀವಿಗಳಿಗಿಂತ ಮಾನವ ಜನ್ಮವು ಶ್ರೇಷ್ಠವಾಗಿದೆ. ಮಾನವರಿಗೆ ಬುದ್ಧಿ, ಶಕ್ತಿ, ಮಾತು, ತ್ಯಾಗ, ಉಪಕಾರ, ದಯೆ, ಎಲ್ಲ ಒಳ್ಳೆಯ ಗುಣಗಳನ್ನು ದೇವರು ಕೊಟ್ಟಿದ್ದಾನೆ. ಆದ್ದರಿಂದ ಈ ಎಲ್ಲ ಗುಣಗಳನ್ನು ಮಾನ ವನು ಜೀವನದಲ್ಲಿ ಅನುಸರಿಸಿಕೊಳ್ಳಬೇಕು. ಈ ಭೂಮಿಯಲ್ಲಿ ಜನಿಸಿದ ಎಲ್ಲ ಮಾನವರು ಕೆಲವು ಋಣಗಳನ್ನು ಪಡೆದು ಕೊಂಡು ಬರುತ್ತಾರೆ. ಅದರಲ್ಲಿ ದೇವ ಋಣ, ಋಷಿ ಋಣ, ಪಿತೃ ಋಣ ಮುಖ್ಯವಾಗಿದೆ. ದೇವ ಋಣವನ್ನು ದೇವರ ಭಕ್ತಿ, ಪೂಜೆ, ಭಜನೆ, ಅರ್ಚನೆ, ಹರಕೆಗಳ ಮೂಲಕ ತೀರಿಸಬಹುದು. ಋಷಿ ಋಣವನ್ನು ಅವರು ಬರೆದ ಗ್ರಂಥಗಳ ಅಧ್ಯಯನ ಮಾಡಿ, ಋಷಿ ತರ್ಪಣ ನೀಡುವುದರ ಮೂಲಕ ತೀರಿಸ ಬಹುದು. ಪಿತೃ ಋಣವನ್ನು ಅವರು ಜೀವಂತ ಇರುವಾಗ ಚೆನ್ನಾಗಿ ನೋಡಿ ಕೊಂಡು, ಅವರ ಅಗಲಿಕೆಯ ಅನಂತರ ಪಿತೃ ತರ್ಪಣ ಶ್ರಾದ್ಧಾದಿ ಕರ್ಮಗಳನ್ನು ಮಾಡಿ ತೀರಿಸಬಹುದು. ಇವುಗಳ ಜತೆಗೆ ಮಾನವನು ಸಂಘ ಜೀವಿ ಎಂದ ಮೇಲೆ ಸಾಮಾಜಿಕ ಋಣವನ್ನು ತೀರಿಸುವ ಜವಾಬ್ದಾರಿ ಹೊತ್ತಿರುತ್ತಾನೆ. ಈ ಋಣ ವನ್ನು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ದೀನದಲಿತರಿಗೆ ಸಹಕಾರ ನೀಡುವುದರ ಮೂಲಕ ತೀರಿಸಬಹುದು. ಆದ್ದರಿಂದ ಉಳ್ಳವರು ಇಲ್ಲದವರಿಗೆ ದಾನ ಧರ್ಮಗಳ ಮೂಲಕ ಸಹಾಯ ಮಾಡಿ ದರೆ ಈ ಪ್ರಪಂಚದಲ್ಲಿ ಜನಿಸಿದ್ದಕ್ಕೆ ಸಾರ್ಥಕವೆನಿಸಬಹುದು. ಉಳ್ಳವರು ಸಂಪತ್ತನ್ನು ಕೂಡಿಡಬಾರದು. ಅದು ನಿಂತ ನೀರಾಗಬಾರದು. ಅದು ಹರಿಯುವ ನೀರಾಗಬೇಕು.
ಒಂದು ಊರಿನಲ್ಲಿ ಒಬ್ಬ ಜಿಪುಣನಿದ್ದ. ಅವನಲ್ಲಿ ಹೇರಳವಾದ ಧನ, ಕನಕ ಗಳಿದ್ದವು. ಆದರೆ ಅವನು ಇತರರಿಗೆ ದಾನ ಮಾಡದೆ ಕೂಡಿಡುತ್ತಿದ್ದನು. ಅದನ್ನು ಕಳ್ಳಕಾಕರ ಭಯದಿಂದ ಮನೆಯ ಬಾಗಿಲ ಬುಡದಲ್ಲಿ ಒಂದು ಬಿಲವನ್ನು ತೋಡಿ ಅದರೊಳಗೆ ಹೂತಿಟ್ಟಿದ್ದನು. ನಿತ್ಯವೂ ಬಾಗಿಲ ಬುಡದಲ್ಲಿ ಹೂತಿಟ್ಟ ಚಿನ್ನ ಹಾಗೂ ಇತರ ವಸ್ತಗಳನ್ನು ನೋಡಿ ಪೆಟ್ಟಿಗೆಗೆ ಬಾಗಿಲು ಹಾಕಿ ಮುಚ್ಚಿಡುತ್ತಿದ್ದನು. ಅದೇ ಅವನಿಗೆ ಸಂತೋಷವಾಗುತ್ತಿತ್ತು. ಒಂದು ದಿನ ಅವನಿಗೆ ಯಾವುದೋ ಕೆಲಸದ ನಿಮಿತ್ತ ಪಕ್ಕದ ಊರಿಗೆ ಪ್ರಯಾಣ ಮಾಡುವ ಅನಿವಾರ್ಯತೆ ಬಂತು. ಅಲ್ಲಿಗೆ ಹೋಗಿ ಮರುದಿನ ಮನೆಗೆ ಬಂದು ನೋಡುವಾಗ ಅವನು ಪೆಟ್ಟಿಗೆಯೊಳಗಿಟ್ಟ ಅಮೂಲ್ಯ ವಸುÂಗಳು ಮಾಯವಾಗಿತ್ತು.
ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬ ವಚನದಂತೆ ನಾವು ದಾನ ಮಾಡಿ ದರೆ ಯಾವತ್ತಾದರೂ ಒಮ್ಮೆ ಅದು ನಮಗೆ ನೆರವಿಗೆ ಬರುತ್ತದೆ. ಅದು ಕಟ್ಟಿಟ್ಟ ಬುತ್ತಿಯಂತೆ ಉಪಯೋಗವಾಗುವುದು. ಆದರೆ ಉಪಯೋಗವಾಗಲಿ ಎನ್ನುವ ಮನಃಸ್ಥಿತಿಯಲ್ಲಿ ದಾನ ಮಾಡುವುದು ಕೂಡ ವ್ಯರ್ಥವೇ.
ಸಮಾಜದ ಸಂಪತ್ತನ್ನೇ ನಾವು ಉಪಯೋಗಿಸುವುದು ಬಿಟ್ಟು ಸಮಾಜಕ್ಕೆ ನಮ್ಮಿಂದಾಗುವ ಉಪಕಾರ ಮಾಡಬೇಕು. ದಾನದ ವಿಚಾರದಲ್ಲಿ ಪ್ರಾಣಿ, ಪಕ್ಷಿ, ಸಸ್ಯಗಳಿಂದ ನಾವು ಪಾಠವನ್ನು ಕಲಿಯ ಬಹುದು. ದನ ಹಾಲನ್ನು ಕರುವಿಗೆ ಮಾತ್ರ ನೀಡದೆ ನಮಗೂ ನೀಡುತ್ತದೆ. ಮಾವಿನ ಮರದಲ್ಲಿ ಆದ ಹಣ್ಣುಗಳನ್ನು ಅದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಮಗೆ ನೀಡುತ್ತದೆ. ಜೇನು ಹುಳುಗಳು ಹೂಗಳಿಂದ ಮಕರಂದ ಹೀರಿ ಜೇನು ತುಪ್ಪವನ್ನು ತಯಾರಿಸಿ ನಮಗಾಗಿ ಜೇನನ್ನು ನೀಡುತ್ತವೆ. ಕೂಡಿಟ್ಟ ಸಂಪತ್ತು ಎಂದಿಗೂ ಶಾಶ್ವತವಲ್ಲ. ನಮ್ಮಲ್ಲಿ ಅಧಿಕವಿರುವುದನ್ನು ಕೂಡಿಡುವ ಬದಲು ಸಮಾಜಕ್ಕೆ ನೀಡಿ ಸಾಮಾಜಿಕ ಋಣವನ್ನು ತೀರಿಸಿಕೊಳ್ಳಬಹುದು.
ಮಹಾಭಾರತದಲ್ಲಿ ಬರುವ ಕರ್ಣನ ಹೆಸರನ್ನು ಕೇಳದವರಿಲ್ಲ. ಒಂದು ದಿನ ಅವನು ಚಿನ್ನದ ತಟ್ಟೆಯಲ್ಲಿ ಎಣ್ಣೆ ಹಾಕಿ ಅದನ್ನು ಹಚ್ಚಿಕೊಂಡು ಸ್ನಾನ ಮಾಡಲು ಅಣಿಯಾಗಿದ್ದನು. ಆಗ ದೇವತಾ ಸ್ವರೂಪಿ ಬ್ರಾಹ್ಮಣನೊಬ್ಬನು ದಾನ ಕೇಳಲು ಬರುತ್ತಾನೆ. ಆಗ ಕರ್ಣನು ಎಡಕೈಯಲ್ಲೇ ಹಿಡಿದು ತುಳಸಿ ನೀರನ್ನು ಬಿಟ್ಟು ಕೃಷ್ಣಾ ರ್ಪಣ ಎನ್ನುತ್ತಾ ದಾನ ನೀಡುತ್ತಾನೆ. ಆಗ ಬ್ರಾಹ್ಮಣನು ಬಲಗೈಯಲ್ಲಿ ಕೃಷ್ಣಾರ್ಪಣ ಮಾಡಬಹುದಿತ್ತಲ್ಲ ಎನ್ನುತ್ತಾನೆ. ಆಗ ಕರ್ಣನು, ಎಡಕೈಯಿಂದ ಬಲಕ್ಕೆ ಬರುವಾಗ ಮನಸ್ಸು ಬದಲಾಗಬಹುದು ಎನ್ನುತ್ತಾನೆ. ಇನ್ನೊಂದು ಸಂದರ್ಭದಲ್ಲಿ ತನ್ನಲ್ಲಿರುವ ಕರ್ಣಕುಂಡಲವನ್ನೇ ಬ್ರಾಹ್ಮಣ ರೂಪದಲ್ಲಿದ್ದ ಕೃಷ್ಣನಿಗೆ ನೀಡಿ ದಾನಶೂರ ಕರ್ಣ ಎನಿಸಿಕೊಳ್ಳುತ್ತಾನೆ. ಆದ್ದರಿಂದ ದಾನ ಮಾಡುವುದಿದ್ದರೆ ತತ್‌ಕ್ಷಣ ಮಾಡಬೇಕು. ಸೂಕ್ತ ಸಮಯ, ಸೂಕ್ತ ವ್ಯಕ್ತಿಯನ್ನು ಅರಿತು ಮಾಡುವ ದಾನವೇ ಶ್ರೇಷ್ಠ, ಅದುವೇ ಧರ್ಮ.
- ದೇವರಾಜ್ ರಾವ್ ಎಂ. ಕಟಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.