ಹೊಟ್ಟೆಯ ಆರೋಗ್ಯ ಅಂದರೇನು?
ಹೊಟ್ಟೆಯ ಆರೋಗ್ಯದ ಬಗ್ಗೆ ನೀವು ತಿಳಿದಿರಬೇಕಾದದ್ದು
Team Udayavani, Jul 24, 2022, 10:56 AM IST
ನಮ್ಮ ಹೊಟ್ಟೆಯ ಆರೋಗ್ಯದ ಕಡೆಗೆ ನಾವು ಏಕೆ ಗಮನ ನೀಡಬೇಕು?
ನಮ್ಮ ಆರೋಗ್ಯದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ “ಹೊಟ್ಟೆ’ ಎಂದರೆ ಹೊಟ್ಟೆ ಮತ್ತು ಕರುಳುಗಳನ್ನು ಒಳಗೊಳ್ಳುತ್ತದೆ. ಹೊಟ್ಟೆಗೆ ಸಂಬಂಧಿಸಿದ ವೈದ್ಯಕೀಯ ಪರಿಭಾಷೆಯ ಪದ ಗ್ಯಾಸ್ಟ್ರೊಇಂಟಸ್ಟೈನಲ್ ಅಥವಾ ಜಿಐ ವ್ಯೂಹ. ಕನ್ನಡದಲ್ಲಿ ಸರಳವಾಗಿ ಜೀರ್ಣಾಂಗ ವ್ಯೂಹ ಎನ್ನಬಹುದು. ನಾವು ಸೇವಿಸುವ ಎಲ್ಲ ಆಹಾರ ವಸ್ತುಗಳು ಅಂತಿಮವಾಗಿ ಹೊಟ್ಟೆ ಅಥವಾ ಕರುಳಿನಲ್ಲಿ ಸರಳ ರೂಪಕ್ಕೆ ಅರಗಿಸಲ್ಪಡುತ್ತದೆ; ಇದರಿಂದಾಗಿ ಅದು ರಕ್ತ ಪರಿಚಲನೆ ವ್ಯವಸ್ಥೆಯನ್ನು ಸೇರಿ ನಮ್ಮ ದೇಹಾದ್ಯಂತ ಪೌಷ್ಟಿಕಾಂಶಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಆರೋಗ್ಯವಂತ ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾ, ವೈರಸ್ ಗಳು ಮತ್ತು ಶಿಲೀಂಧ್ರಗಳಂತಹ ಸೋಂಕುಕಾರಕ ಸೂಕ್ಷ್ಮಜೀವಿಗಳನ್ನು ನಿರ್ಮೂಲನಗೊಳಿಸಬಲ್ಲಂತಹ ರೋಗ ನಿರೋಧಕ ಜೀವಕೋಶಗಳು ಮತ್ತು ಆರೋಗ್ಯವಂತ ಬ್ಯಾಕ್ಟೀರಿಯಾಗಳು ಇರುತ್ತವೆ. ಅಲ್ಲದೆ ಆರೋಗ್ಯವಂತ ಹೊಟ್ಟೆಯು ನರವ್ಯೂಹ ಮತ್ತು ಹಾರ್ಮೋನ್‌ಗಳ ಮೂಲಕ ಮಿದುಳಿನ ಜತೆಗೆ ಸಂವಹನ ಸಾಧಿಸುತ್ತದೆ, ಇದರಿಂದಾಗಿ ದೇಹದ ಒಟ್ಟಾರೆ ಸೌಖ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ಹೊಟ್ಟೆ ಅಥವಾ ಕರುಳಿನ ಆರೋಗ್ಯ ಸಮಸ್ಯೆಯ ಲಕ್ಷಣಗಳೇನು?
ಪ್ರತಿಯೊಬ್ಬರೂ ಜೀವನದ ಒಂದಲ್ಲ ಒಂದು ಕಾಲಘಟ್ಟದಲ್ಲಿ ಜೀರ್ಣ ಕ್ರಿಯೆಗೆ ಸಂಬಂಧಿಸಿದ ಹೊಟ್ಟೆನೋವು, ಉಬ್ಬರ, ನೀರಾದ ಮಲ ವಿಸರ್ಜನೆ, ಎದೆಯುರಿ, ಹೊಟ್ಟೆ ತೊಳೆಸುವಿಕೆ ಅಥವಾ ವಾಂತಿಯಂತಹ ಸಮಸ್ಯೆಗಳನ್ನು ಎದುರಿಸಿರುತ್ತಾರೆ. ಈ ಸಮಸ್ಯೆಗಳು ದೀರ್ಘಕಾಲ ಉಳಿದುಕೊಂಡಿವೆಯಾದರೆ ಅದು ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ ಅಗತ್ಯವಾಗಿರುವ ಬೇರೆ ಯಾವುದೋ ಅಂತರ್ಗತ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು. ಸರಿಯಾದ ಕಾರಣ ಇಲ್ಲದೆ ತೂಕ ನಷ್ಟ, ಮಲದಲ್ಲಿ ರಕ್ತದ ಅಂಶ ಇರುವುದು, ಕಪ್ಪಾದ ಮಲ ವಿಸರ್ಜನೆ (ಇದು ಕರುಳಿನಲ್ಲಿ ರಕ್ತಸ್ರಾವ ಆಗುತ್ತಿರುವುದರ ಸೂಚನೆ), ತೀವ್ರವಾದ ವಾಂತಿ, ಜ್ವರ, ತೀವ್ರವಾದ ಹೊಟ್ಟೆ ನೋವು, ಆಹಾರವನ್ನು ನುಂಗಲು ಸಮಸ್ಯೆ, ಆಹಾರವನ್ನು ನುಂಗುವಾಗ ಗಂಟಲು ಅಥವಾ ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದು ಅಥವಾ ಹಳದಿ ಕಾಮಾಲೆ (ಚರ್ಮ ಅಥವಾ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು) ಯಂತಹ ಸಮಸ್ಯೆಗಳು ಗಂಭೀರ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗಬಹುದಾದ ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಗಳ ಮುನ್ಸೂಚನೆಗಳಾಗಿರಬಹುದು. ಮೇಲೆ ಹೇಳಲಾಗಿರುವ ಯಾವುದೇ ಸಮಸ್ಯೆಗಳಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ನಮ್ಮ ಹೊಟ್ಟೆ ಅಥವಾ ಕರುಳನ್ನು ಗುಣಪಡಿಸಿಕೊಳ್ಳುವುದು ಹೇಗೆ?
ನಮ್ಮ ಕರುಳು ಅಥವಾ ಹೊಟ್ಟೆಯ ಅನಾರೋಗ್ಯವನ್ನು ಗುಣಪಡಿಸಿಕೊಳ್ಳುವುದು ಅದರ ಉರಿಯೂತ ಅಥವಾ ಹಾನಿಗೆ ಕಾರಣವಾಗಿರುವ ಮೂಲ ಸಮಸ್ಯೆಗೆ ಹೇಗೆ ಚಿಕಿತ್ಸೆ ನೀಡುತ್ತೀರಿ ಎನ್ನುವುದನ್ನು ಆಧರಿಸಿದೆ. ಆಹಾರ ಸರಿಯಾಗಿಲ್ಲದಿರುವುದು, ಆಲಸ್ಯದ ಜೀವನಶೈಲಿ, ಒತ್ತಡ, ಕೆಲವು ನಿರ್ದಿಷ್ಟ ಔಷಧಗಳ ಅಡ್ಡಪರಿಣಾಮಗಳು, ಥೈರಾಯ್ಡ ಗ್ರಂಥಿಯು ಸರಿಯಾಗಿ ಕೆಲಸ ಮಾಡದೆ ಇರುವುದು ಅಥವಾ ಅತಿಯಾಗಿ ಸಕ್ರಿಯವಾಗಿರುವುದು, ಸರಿಯಾಗಿ ನಿದ್ದೆ ಮಾಡದೆ ಇರುವುದು ಮತ್ತು ಆಹಾರಗಳ ಅಲರ್ಜಿಯಂತಹ ಹತ್ತು ಹಲವು ಕಾರಣಗಳು ಕರುಳಿನ ಅನಾರೋಗ್ಯಕ್ಕೆ ಇರಬಹುದು.ನಮ್ಮ ಕರುಳಿನ ಅನಾರೋಗ್ಯವನ್ನು ಗುಣಪಡಿಸಿಕೊಳ್ಳುವತ್ತ ಒಂದು ಹೆಜ್ಜೆ ಮುನ್ನಡೆಯುವುದಕ್ಕೆ ಅಗತ್ಯವಾದ ಕೆಲವು ಕ್ರಮಗಳು ಈ ಕೆಳಗಿನಂತಿವೆ:
ಸರಿಯಾದ ಆಹಾರ ಕ್ರಮವನ್ನು ಪಾಲಿಸಿ
ಹಣ್ಣು ಮತ್ತು ತರಕಾರಿಗಳು, ಬೀನ್ಸ್, ಬೀಜಗಳಂತಹ ಸಸ್ಯಮೂಲದ, ಗಾಢ ವರ್ಣದ ಆಹಾರ ವಸ್ತುಗಳನ್ನು ಸೇವಿಸಿ. ಹೆಚ್ಚು ನಾರಿನಂಶ ಹೊಂದಿರುವ ಸಸ್ಯಜನ್ಯ ಆಹಾರ ವಸ್ತುಗಳು ಕರುಳಿನಲ್ಲಿ ಆರೋಗ್ಯಯುತ ಲೋಳೆ ಪದರ ರೂಪುಗೊಳ್ಳಲು ಮತ್ತು ಆರೋಗ್ಯವಂತ ಬ್ಯಾಕ್ಟೀರಿಯಾಗಳಿಗೆ ನೆರವಾಗುತ್ತವೆ. ಹೆಚ್ಚು ನಾರಿನಂಶ ಹೊಂದಿರುವ ಆಹಾರವಸ್ತುಗಳನ್ನು ಒಮ್ಮೆಲೆ ಸೇವಿಸಲು ಆರಂಭಿಸಿದರೆ ಹೊಟ್ಟೆಯುಬ್ಬರ ಉಂಟಾಗಬಹುದು; ಹಾಗಾಗಿ ಅವುಗಳನ್ನು ಕ್ರಮೇಣ ನಿಮ್ಮ ಆಹಾರವಸ್ತುಗಳ ಜತೆಗೆ ಸೇರಿಸಿಕೊಳ್ಳಿ ಮತ್ತು ಹೊಸ ಆಹಾರ ವಸ್ತುಗಳಿಗೆ ನಿಮ್ಮ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ನಿಗಾ ಇರಿಸಿ. ಸಂಸ್ಕರಿತ ಆಹಾರವಸ್ತುಗಳು, ಸಂಸ್ಕರಿತ ಹಿಟ್ಟುಗಳು ಮತ್ತು ಹೆಚ್ಚುವರಿ ಸಕ್ಕರೆ ಇತ್ಯಾದಿಗಳು ಕರುಳಿನಲ್ಲಿರುವ ಲೋಳೆಯ ಪದರ ಕರಗುತ್ತದೆ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗುತ್ತವೆ.
ಫ್ರುಕ್ಟೋಸ್ ಅಂಶ ಕಡಿಮೆ ಇರುವ ಹಣ್ಣುಗಳನ್ನು ಸೇವಿಸಿ
ಹೊಟ್ಟೆಯಲ್ಲಿ ವಾಯು ಪ್ರಕೋಪ, ಹೊಟ್ಟೆಯುಬ್ಬರ ಉಂಟಾಗುವವರು ನೀವಾಗಿದ್ದರೆ ಫ್ರುಕ್ಟೋಸ್ ಅಥವಾ ಹಣ್ಣುಮೂಲದ ಸಕ್ಕರೆಯಂಶ ಸೇವನೆಯನ್ನು ಕಡಿಮೆ ಮಾಡಬೇಕು. ಸೇಬು, ಪೇರ್ ಮತ್ತು ಮಾವಿನ ಹಣ್ಣಿನಂತಹ ಕೆಲವು ಹಣ್ಣುಗಳಲ್ಲಿ ಫ್ರುಕ್ಟೋಸ್ ಹೆಚ್ಚಿರುತ್ತದೆ. ಬೆರಿಗಳು ಮತ್ತು ಕಿತ್ತಳೆ, ಮೂಸಂಬಿಯಂತಹ ಸಿಟ್ರಸ್ ಹಣ್ಣುಗಳಲ್ಲಿ ಫುಕ್ಟೋಸ್ ಅಂಶ ಕಡಿಮೆ ಇದ್ದು, ಕರುಳಿಗೆ ಇದನ್ನು ತಾಳಿಕೊಳ್ಳಲು ಸುಲಭವಾಗುತ್ತದೆ; ವಾಯು ಪ್ರಕೋಪ ಉಂಟಾಗುವುದಿಲ್ಲ. ನಾರಿನಂಶ ಹೆಚ್ಚಿದ್ದು, ಫುಕ್ಟೋಸ್ ಕಡಿಮೆ ಇರುವ; ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗಬಲ್ಲ ಇನ್ಸುಲಿನ್ ಅಂಶವನ್ನು ಹೊಂದಿರುವ ಇನ್ನೊಂದು ಹಣ್ಣು ಬಾಳೆಹಣ್ಣು.
ನಿಧಾನವಾಗಿ ಆಹಾರ ಸೇವಿಸಿ
ಇಂದಿನದು ಎಲ್ಲವೂ ತ್ವರಿತವಾಗಿ ನಡೆಯುವ, ವೇಗದ ಕಾಲಘಟ್ಟವಾಗಿದ್ದು, ಎಲ್ಲರೂ ತಮ್ಮ ತಮ್ಮ ಕೆಲಸಕಾರ್ಯಗಳನ್ನು ಲಗುಬಗೆಯಲ್ಲಿ ಪೂರೈಸಿಕೊಳ್ಳುವುದಕ್ಕಾಗಿ ಆಹಾರವನ್ನು ಕೂಡ ಬೇಗ ಬೇಗನೆ “ಮುಕ್ಕುವ’ ಪ್ರವೃತ್ತಿ ಹೊಂದಿರುತ್ತಾರೆ. ಅಂಥವರು ತಮ್ಮ ಆಹಾರ ಸೇವನೆಯ ಶೈಲಿಯ ಬಗ್ಗೆ ಗಮನಹರಿಸುವುದಿಲ್ಲ. ಜೀರ್ಣಕ್ರಿಯೆಯು ಬಾಯಿಯಿಂದಲೇ ಆರಂಭವಾಗುತ್ತದೆ, ಆದ್ದರಿಂದ ನಾವು ಆಹಾರವನ್ನು ನಿಧಾನವಾಗಿ ಸೇವಿಸುವುದು ಮತ್ತು ಸರಿಯಾಗಿ ಜಗಿದು ನುಂಗುವುದು ಬಹಳ ಮುಖ್ಯ. ಇದರಿಂದ ನಮ್ಮ ದೇಹಕ್ಕೆ ಆಹಾರಗಳಿಂದ ಪೌಷ್ಟಿಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ನಿಮಗೆ ಹೊಟ್ಟೆಯುಬ್ಬರ ಅಥವಾ ಮಲಬದ್ಧತೆ ಉಂಟಾಗಿದ್ದರೆ ನೀವು ಆಹಾರವನ್ನು ಸರಿಯಾದ ಕ್ರಮದಲ್ಲಿ ಸೇವಿಸುತ್ತಿರುವಿರೇ ಎಂಬ ಬಗ್ಗೆ ಗಮನ ಕೊಡಿ.
ದೇಹದಲ್ಲಿ ನೀರಿನಂಶ ಸರಿಯಾದ ಪ್ರಮಾಣದಲ್ಲಿ ಇರಲಿ
ಕರುಳಿನಲ್ಲಿ ಆರೋಗ್ಯಯುತ ಬ್ಯಾಕ್ಟೀರಿಯಾಗಳ ಪ್ರಮಾಣ ಸರಿಯಾಗಿ ಇರಬೇಕಿದ್ದರೆ ಸಾಕಷ್ಟು ನೀರು ಕುಡಿಯುವುದು ಅಗತ್ಯ. ದಿನವೊಂದಕ್ಕೆ ಕನಿಷ್ಟ 7ರಿಂದ 8 ಲೋಟ ನೀರು ಕುಡಿಯಬೇಕು. ಸಾಕಷ್ಟು ನೀರು ಕುಡಿಯುವುದರಿಂದ ಕರುಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ.
-ಮುಂದಿನ ವಾರ ಮುಂದುವರೆಯುತ್ತದೆ..
-ಪರ್ಲೀನ್ ರೋಡ್ರಿಗಸ್,
ಕ್ಲಿನಿಕಲ್ ಡಯಟೀಶಿಯನ್,
ಪಥ್ಯಾಹಾರ ವಿಭಾಗ, ಕೆಎಂಸಿ,
ಮಾಹೆ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.