ಹುರಳಿ ಕೆರೆಯ ಒತ್ತುವರಿ ತೆರವು ಕಾರ್ಯ ಆರಂಭ
Team Udayavani, Jul 27, 2022, 4:59 PM IST
ಸಾಗರ: ತಾಲೂಕಿನ ಗೌತಮಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೆಣಸಿನಸರ ಗ್ರಾಮದ ಹುರಳಿ ಕೆರೆಯ ಒತ್ತುವರಿಯನ್ನು ಬುಧವಾರ ತಹಶೀಲ್ದಾರ್ ಸೂಚನೆ ಮೇರೆಗೆ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯ್ತಿ ವತಿಯಿಂದ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಮೆಣಸಿನಸರ ಗ್ರಾಮದ ಸರ್ವೇ ನಂ. 37ರಲ್ಲಿ ಬರುವ ಹುರಳಿಕೆರೆ 7.36 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಕೆರೆ ಜಾಗದಲ್ಲಿ 18 ಜನ ರೈತರು 5.36 ಎಕರೆ ಜಾಗವನ್ನು ಕಳೆದ 70 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಬುಧವಾರ ತಹಶೀಲ್ದಾರ್ ಸೂಚನೆ ಮೇರೆಗೆ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ದಾಸನ್, ರಾಜಸ್ವ ನಿರೀಕ್ಷಕ ಕವಿರಾಜ್, ಗ್ರಾಮ ಲೆಕ್ಕಾಧಿಕಾರಿ ಎಚ್.ಕೆ.ಕಟ್ಟಿಮನಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಾಣಿಶ್ರೀ ನೇತೃತ್ವದಲ್ಲಿ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಒತ್ತುವರಿ ತೆರವು ಹೆಸರಿನಲ್ಲಿ ನಮ್ಮನ್ನು ಒಕ್ಕಲೆಬ್ಬಿಸುವ ಪ್ರಯತ್ನ ಸರಿಯಲ್ಲ. ಈಗಾಗಲೇ ನಾವು ಸಾಗುವಳಿ ಮಾಡಿದ್ದೇವೆ. ನಮಗೆ ಸ್ವಲ್ಪ ಕಾಲಾವಶಕಾಶ ಕೊಡಬೇಕು. ಕೆರೆ ಜಾಗವನ್ನು ಪುನರ್ ಸರ್ವೇ ಮಾಡಬೇಕು. ಗೌತಮಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನರಸೀಪುರ, ತಳಗೇರಿ ಇನ್ನಿತರ ಗ್ರಾಮಗಳಲ್ಲಿ ಸಹ ಕೆರೆ ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ದಾಸನ್, ಹುರಳಿಕೆರೆಯನ್ನು ಸುಪ್ರೀಂಕೋರ್ಟ್, ಸರ್ಕಾರದ ಆದೇಶದಂತೆ ತಹಶೀಲ್ದಾರ್ ಸೂಚನೆ ಮೇರೆಗೆ ತೆರವುಗೊಳಿಸಲಾಗುತ್ತಿದೆ. ಇಲ್ಲಿ 6.6 ಎಕರೆ ಒತ್ತುವರಿಯಾಗಿದ್ದು ಕಂಡು ಬಂದಿದೆ. ರೈತರು ನಾಟಿ ಮಾಡಿದ್ದು ಕಂಡು ಬಂದಿದೆ. ಊರಿಗೆ ಕೆರೆ ಅತ್ಯಗತ್ಯ. ಸದ್ಯಕ್ಕೆ ಕೆರೆ ತೆರವು ಮಾಡುವುದನ್ನು ತಡೆಹಿಡಿಯಲಾಗಿದೆ. ಸ್ಥಳೀಯ ರೈತರು ನಾಟಿ ನಂತರ ಕೆರೆ ಒತ್ತುವರಿ ತೆರವುಗೊಳಿಸುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ಗೌತಮಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಕೆರೆಯನ್ನು ತೆರವುಗೊಳಿಸಲಾಗುತ್ತಿದೆ ಎಂದು ಹೇಳಿದರು.
ಕೆರೆ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ಹೋರಾಡುತ್ತಿರುವ ರೈತ ಸತ್ಯನಾರಾಯಣ ಮಾತನಾಡಿ, ಇದು ನಕಾಶೆ ಕಂಡ ಕೆರೆಯಾಗಿದ್ದು, ಆಡಳಿತ ತಕ್ಷಣ ಒತ್ತುವರಿ ತೆರವುಗೊಳಿಸಬೇಕು. ಒಂದೊಮ್ಮೆ ಒತ್ತುವರಿ ತೆರವು ಮಾಡದೆ ಹೋದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಖಾತೆ ಮಾಡಿಕೊಡಿ. ಅನಗತ್ಯ ಅಧಿಕಾರಿಗಳು ಗ್ರಾಮಸ್ಥರ ನಡುವೆ ಗೊಂದಲ ಸೃಷ್ಟಿ ಮಾಡಬಾರದು ಎಂದರು.
ಕೆರೆ ಜಾಗದಲ್ಲಿ ಸಾಗುವಳಿ ಮಾಡುತ್ತಿರುವ ರೈತ ಯೋಗೇಂದ್ರಪ್ಪ ಮಾತನಾಡಿ, ಕಳೆದ ಏಳೆಂಟು ದಶಕಗಳಿಂದ ನಮ್ಮ ಹಿರಿಯರ ಕಾಲದಿಂದಲೂ ನಾವು ಇದೇ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ. ಇಲ್ಲಿ 18 ರೈತರ ಜಮೀನು ಇದೆ. ನಮಗೆ ಉಳುಮೆ ಮಾಡಲು ಬೇರೆ ಜಾಗ ಇಲ್ಲ. ನಾವು ಒತ್ತುವರಿ ತೆರವುಗೊಳಿಸಲು ಬದ್ಧರಿದ್ದು, ಈ ಸಾರಿ ಫಸಲು ಕೊಯ್ಲು ಆಗುವ ತನಕ ಸಮಯಾವಕಾಶ ನೀಡಿ. ಕೆರೆ ಜಾಗವನ್ನು ಪುನರ್ ಸರ್ವೇ ಮಾಡಿ ಎಂದು ಒತ್ತಾಯಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.