![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jul 28, 2022, 5:47 PM IST
ಬಾದಾಮಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಶಿವಯೋಗ ಮಂದಿರದ ಶ್ರೀ ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆ ಸಹಯೋಗದಲ್ಲಿ ಜು.28ರಿಂದ ಆ.1ರವರೆಗೆ 5 ದಿನಗಳ ಕಾಲ ಸಂತ ಸಾಹಿತ್ಯ ಅಧ್ಯಯನ ಶಿಬಿರವನ್ನು ಸುಕ್ಷೇತ್ರ ಶಿವಯೋಗ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕಮ್ಮಟದ ನಿರ್ದೇಶಕ ಡಾ| ಕರಿಯಪ್ಪ ಮಾಳಿಗೆ ಹೇಳಿದರು.
ಪಟ್ಟಣದ ಕಾನಿಪ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಯೋಗ ಮಂದಿರ ಸಂಸ್ಥೆ ಅಧ್ಯಕ್ಷ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ, ಹೊಸಪೇಟಿ-ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ಶ್ರೀ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸುವರು.
ಹಿರಿಯ ಸಾಹಿತಿ ಪ್ರೊ| ಕೆ.ಜಿ. ನಾಗರಾಜಪ್ಪ ರಾಜ್ಯಮಟ್ಟದ ಶಿಬಿರ ಉದ್ಘಾಟಿಸಲಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ. ವಸಂತಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಕಮ್ಮಟದ ಡಾ| ಕರಿಯಪ್ಪ ಮಾಳಿಗೆ, ಡಾ| ಎ. ರಘುರಾಂ, ಡಾ| ಶೀಲಾದಾಸ್ ಹಾಗೂ ಸದಸ್ಯ ಸಂಚಾಲಕರಾಗಿ ಡಾ| ಬಿ.ಎಂ. ಶರಭೇಂದ್ರಸ್ವಾಮಿ, ಮಾರುತಿ ಕಟ್ಟಿಮನಿ ಕಾರ್ಯನಿರ್ವಹಿಸಲಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್. ಉಪಸ್ಥಿತರಿರುವರು. ನಿರ್ದೇಶಕರಾಗಿ ಮೊದಲನೇ ದಿನ “ಕರ್ನಾಟಕದ ಸಂತರು’ ವಿಷಯ ಕುರಿತು ಡಾ| ಬಸವರಾಜ ಕೊಡಗುಂಟಿ, “ಭಾರತದ ಸಂತರು 1′ ಬಗ್ಗೆ ಅರುಣಕುಮಾರ್ ಬಿ.ವಿ ಹಾಗೂ ಸಂತರ ಬಗ್ಗೆ ಬಂದಿರುವ ಸಾಹಿತ್ಯ ಕುರಿತು ಡಾ| ಎಫ್.ಟಿ. ಹಳ್ಳಿಕೇರಿ ಮಾತನಾಡಲಿದ್ದಾರೆ ಎಂದರು.
ಎರಡನೇ ದಿನದ ಗೋಷ್ಠಿಗಳಲ್ಲಿ ಸಂತರು ಬರೆದಿರುವ ಸಾಹಿತ್ಯ ಕುರಿತು ಡಾ| ಬಿ. ಗಂಗಾಧರ, ಉತ್ತರ ಕರ್ನಾಟಕದಲ್ಲಿ ಸಂತ ಪರಂಪರೆ ಬಗ್ಗೆ ಡಾ| ವಾಲಿ.ಎ.ಸಿ, ಕರ್ನಾಟಕದ ಬಯಲು ಸೀಮೆಯಲ್ಲಿ ಸಂತ ಪರಂಪರೆ ಬಗ್ಗೆ ಡಾ| ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡಲಿದ್ದಾರೆ. ಮೂರನೇ ದಿನದ ಗೋಷ್ಠಿಗಳಲ್ಲಿ ಕರಾವಳಿ ಕರ್ನಾಟಕದಲ್ಲಿ ಸಂತ ಸಾಹಿತ್ಯ ಕುರಿತು ಡಾ| ಕಾತ್ಯಾಯಿನಿ ಕುಂಜಿಬೆಟ್ಟು, ಕಲ್ಯಾಣ ಕರ್ನಾಟಕದಲ್ಲಿ ಸಂತ ಪರಂಪರೆ ಬಗ್ಗೆ ಡಾ| ಅಮರೇಶ ನುಗಡೋಣಿ, ಶಿವಯೋಗ ಮಂದಿರ ಸಂಸ್ಥೆ ಪರಂಪರೆ ಕುರಿತು ಡಾ| ಜಿ.ಜಿ. ಹಿರೇಮಠ ವಿಚಾರ ಮಂಡಿಸಲಿದ್ದಾರೆ. ಇವುಗಳ ಜೊತೆಗೆ ವಿವಿಧ ವಿಷಯಗಳ ಬಗ್ಗೆ ಶಿಬಿರಾರ್ಥಿಗಳಿಂದ ಪ್ರಬಂಧ ಮಂಡನೆ-ಚರ್ಚೆ ನಡೆಯಲಿದೆ. ಕಮ್ಮಟದ ನಿರ್ದೇಶಕರು ಶಿಬಿರಾರ್ಥಿಗಳಿಗೆ ಪ್ರಾಯೋಗಿಕ ತರಗತಿ ನಡೆಸಲಿದ್ದಾರೆ ಎಂದರು.
ನಾಲ್ಕನೇ ದಿನದ ಗೋಷ್ಠಿಗಳಲ್ಲಿ ಮಲೆನಾಡು ಕರ್ನಾಟಕದ ಸಂತ ಪರಂಪರೆ ಕುರಿತು ಜಿ.ಬಿ. ಚನ್ನೇಶ್ ಹೊನ್ನಾಳಿ, ಸಿದ್ಧ, ನಾಥ, ಜೋಗಿ- ಪರಂಪರೆ ಕುರಿತು ಕೆಳಗಿನಮನಿ, ಅವಧೂತ, ಆರೂಢ ಪರಂಪರೆ ಕುರಿತು ಡಾ| ಕರಿಯಪ್ಪ ಮಾಳಿಗೆ, ಸೂಫಿಗಳು, ಶರಣರು ಕುರಿತು ಡಾ| ಎ. ರಘುರಾಂ ವಿಚಾರ ಮಂಡಿಸಲಿದ್ದಾರೆ. ಐದನೇ ದಿನದ ಗೋಷ್ಠಿಗಳಲ್ಲಿ ದಾಸರು, ತತ್ವಪದಕಾರರು ವಿಷಯದ ಬಗ್ಗೆ ಡಾ| ಶೀಲಾದಾಸ್, ದಕ್ಷಿಣ ಕರ್ನಾಟಕದಲ್ಲಿ ಸಂತ ಪರಂಪರೆ ಕುರಿತು ಡಾ| ಮೈಲಹಳ್ಳಿ ರೇವಣ್ಣ ಅವರು ವಿಚಾರ ಮಂಡಿಸಲಿದ್ದಾರೆ.
ನಾಲ್ಕು ದಿನಗಳು ಶಿಬಿರಾರ್ಥಿಗಳಿಗೆ ಯೋಗ-ಧ್ಯಾನ ಕುರಿತು ಯೋಗ ತರಬೇತುದಾರ ಕಾರ್ತಿಕ್ ಬೆಲ್ಲದ್ ತರಬೇತಿ ನೀಡಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಡಾ| ರಘುರಾಮ, ಕುಮಾರ ಯಡಪ್ಪನವರ, ಸೈಯದ ಜಾವೇದ್ ಇತರರಿದ್ದರು. ಆ.1ರಂದು ಸಮಾರೋಪ ಆ.1ರಂದು ಮಧ್ಯಾಹ್ನ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶಿವಯೋಗಮಂದಿರ ಸಂಸ್ಥೆ ಉಪಾಧ್ಯಕ್ಷ ಶ್ರೀ ಸದಾಶಿವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಡಾ| ಮೈಲಹಳ್ಳಿ ರೇವಣ್ಣ ಸಮಾರೋಪ ನುಡಿಯಾಡಲಿದ್ದಾರೆ.
ಈ ಸಂದರ್ಭದಲ್ಲಿ ಡಾ| ಕರಿಯಪ್ಪ ಮಾಳಿಗೆ, ಡಾ| ಎ. ರಘುರಾಂ, ಡಾ| ಶೀಲಾದಾಸ್, ಸದಸ್ಯ ಸಂಚಾಲಕ ಡಾ| ಬಿ.ಎಂ. ಶರಭೇಂದ್ರಸ್ವಾಮಿ, ಮಾರುತಿ ಕಟ್ಟಿಮನಿ, ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್. ಉಪಸ್ಥಿತರಿರಲಿದ್ದಾರೆ. ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ. ವಸಂತಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಮ್ಮಟದ ನಿರ್ದೇಶಕ ಡಾ| ಕರಿಯಪ್ಪ ಮಾಳಿಗೆ ತಿಳಿಸಿದರು.
You seem to have an Ad Blocker on.
To continue reading, please turn it off or whitelist Udayavani.