ಏಕದಿನದ ಬಳಿಕ ಟಿ20 ಕದನ: ಇಂದಿನಿಂದ 5 ಪಂದ್ಯಗಳ ಸರಣಿ
Team Udayavani, Jul 29, 2022, 6:40 AM IST
ಟರೂಬ (ಟ್ರಿನಿಡಾಡ್): ಒಂದು ಕಾಲದ ದೈತ್ಯ ತಂಡವಾದ ವೆಸ್ಟ್ ಇಂಡೀಸ್ ವಿರುದ್ಧ ಅವರದೇ ನೆಲದಲ್ಲಿ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ಭಾರತವಿನ್ನು ಟಿ20 ಸರಣಿಯನ್ನು ಆಡಲಿಳಿಯಲಿದೆ. ಶುಕ್ರವಾರದಿಂದಲೇ 5 ಪಂದ್ಯಗಳ ಸರಣಿ ಆರಂಭವಾಗಲಿದ್ದು, ಕೊನೆಯ 2 ಪಂದ್ಯಗಳ ಆತಿಥ್ಯ ಯುಎಸ್‌ಎ ( ಫ್ಲೋರಿಡಾದ ಲಾಡರ್‌ಹಿಲ್ ) ಪಾಲಾಗಿರುವುದು ವಿಶೇಷ.
ಇವೆಲ್ಲವೂ ಹಗಲು ಪಂದ್ಯಗಳಾಗಿದ್ದು, ಭಾರತದ ರಾತ್ರಿಯ ಕಾಲಮಾನಕ್ಕೆ ಸರಿಯಾಗಿ ಹೊಂದಿಸಿಕೊಳ್ಳಲಾಗಿದೆ. ಅದರಂತೆ ರಾತ್ರಿ 8 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ.
ಪೂರ್ಣ ಸಾಮರ್ಥ್ಯದ ತಂಡ :
ಏಕದಿನದಲ್ಲಿ ಭಾರತ ಶಿಖರ್ ಧವನ್ ಸಾರಥ್ಯದಲ್ಲಿ ಕಣಕ್ಕಿಳಿದಿತ್ತು. ಇಲ್ಲಿ ಸ್ಟಾರ್ ಆಟಗಾರರಿಗೆಲ್ಲ ವಿಶ್ರಾಂತಿ ನೀಡಲಾಗಿತ್ತು. ಆದರೆ ಟಿ20 ಸರಣಿಗೆ ನಾಯಕ ರೋಹಿತ್ ಶರ್ಮ ಸೇರಿದಂತೆ, ಪ್ರಮುಖ ಆಟಗಾರರಾದ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್ ಮೊದಲಾದವರೆಲ್ಲ ಮರಳಿದ್ದಾರೆ. ಆದರೆ ಕೆ.ಎಲ್. ರಾಹುಲ್ ಇನ್ನೂ ಫಿಟ್ ಆಗಿಲ್ಲ. ಏಕದಿನ ಸರಣಿ ವಿಜೇತ ನಾಯಕ ಧವನ್ ಟಿ20ಗೆ ಆಯ್ಕೆಯಾಗಿಲ್ಲ.
ಆಸ್ಟ್ರೇಲಿಯದ ಆತಿಥ್ಯದಲ್ಲಿ ನಡೆಯಲಿರುವ ವರ್ಷಾಂತ್ಯದ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಇದು ಎರಡೂ ತಂಡಗಳ ಪಾಲಿಗೆ ಮಹತ್ವದ ಸರಣಿ. ಅದರಲ್ಲೂ ಆತಿಥೇಯ ವೆಸ್ಟ್ ಇಂಡೀಸ್ ಪಾಲಿಗೆ ಪ್ರತಿಷ್ಠೆಯ ಸಮರ. ಏಕದಿನದಲ್ಲಿ ಹೋದ ಮಾನವನ್ನು ಚುಟುಕು ಕ್ರಿಕೆಟ್‌ನಲ್ಲಿ ಗಳಿಸಬೇಕಾದ ಒತ್ತಡ ಹಾಗೂ ಅನಿವಾರ್ಯತೆ ಪೂರಣ್ ಪಡೆಯ ಮೇಲಿದೆ. ಮೇಲ್ನೋಟಕ್ಕೆ ಅದು ಟಿ20 ಸ್ಪೆಷಲಿಸ್ಟ್‌ಗಳನ್ನು ಹೊಂದಿರುವ ತಂಡವಾಗಿದೆ.
ಟಿ20 ವಿಶ್ವಕಪ್‌ಗೆ ಇರುವುದು ಮೂರು ತಿಂಗಳಿಗೂ ಕಡಿಮೆ ಅವಧಿ. ಅಷ್ಟರಲ್ಲಿ ಭಾರತದ ಮುಂದೆ 16 ಟಿ20 ಪಂದ್ಯಗಳಿವೆ. ಈ ಸರಣಿಯ ಬಳಿಕ ಏಷ್ಯಾಕಪ್‌ನಲ್ಲಿ ಗರಿಷ್ಠ 5 ಪಂದ್ಯ, ಆಸ್ಟ್ರೇಲಿಯ ವಿರುದ್ಧ 3 ಪಂದ್ಯ, ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳನ್ನು ಆಡಬೇಕಿದೆ.
ಕೊಹ್ಲಿ ಕತೆ ಏನು? :
ತೀವ್ರ ಬ್ಯಾಟಿಂಗ್ ಬರಗಾಲದಲ್ಲಿರುವ ವಿರಾಟ್ ಕೊಹ್ಲಿ ಅವರ ಭವಿಷ್ಯವನ್ನು ನಿರ್ಧರಿಸುವ ಸರಣಿಯೂ ಇದಾಗಬಹುದು. ಕೊಹ್ಲಿ ಗೈರಲ್ಲಿ ಭಾರತ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಆಗಿ ವಶಪಡಿಸಿಕೊಂಡಿತು. ಇನ್ನು ಟಿ20 ಸರಣಿಯನ್ನೂ ಗೆದ್ದರೆ ಕೊಹ್ಲಿ ವಿಶ್ವಕಪ್‌ಗೆ ಅನಿವಾರ್ಯವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಅವರ ಸ್ಥಾನಕ್ಕೆ ದೀಪಕ್ ಹೂಡಾ ಸಮರ್ಥ ಆಯ್ಕೆ ಆಗಬಲ್ಲರು ಎಂಬ ಸೂಚನೆ ಈಗಾಗಲೇ ರವಾನೆಗೊಂಡಿದೆ.
ಅಶ್ವಿನ್ ಯಾಕೆ ಬೇಕು? :
ಸೀನಿಯರ್ ಸ್ಪಿನ್ನರ್ ಆರ್. ಅಶ್ವಿನ್ ಅವರನ್ನು ಮರಳಿ ಸೇರಿಸಿಕೊಂಡಿರುವುದು ಈ ತಂಡದ ಅಚ್ಚರಿ. ಈಗಾಗಲೇ ರವೀಂದ್ರ ಜಡೇಜ, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ರವಿ ಬಿಷ್ಣೋಯಿ ಸ್ಪಿನ್ ವಿಭಾಗದಲ್ಲಿ ಇರುವುದರಿಂದ ಅಶ್ವಿನ್ ಆಯ್ಕೆಯಿಂದ ಏನನ್ನು ಸಾಧಿಸಬಹುದೆಂಬುದೇ ದೊಡ್ಡ ಪ್ರಶ್ನೆ. ಆದರೆ ಇದು 5 ಪಂದ್ಯಗಳ ದೊಡ್ಡ ಸರಣಿಯಾದ್ದರಿಂದ ಎಲ್ಲರಿಗೂ ಅವಕಾಶ ನೀಡಿ ಅವರ ಸಾಮರ್ಥ್ಯವನ್ನು ಗುರುತಿಸಬೇಕಾದುದು ಕೋಚ್ ಹಾಗೂ ತಂಡದ ಆಡಳಿತ ಮಂಡಳಿಯ ಕೆಲಸವಾಗಬೇಕು.
ಟಿ20 ಸರಣಿ ವೇಳಾಪಟ್ಟಿ :
ದಿನಾಂಕ ಪಂದ್ಯ ಸ್ಥಳ ಆರಂಭ
ಜು. 29 1ನೇ ಟಿ20 ಟರೂಬ ರಾತ್ರಿ 8.00
ಆ. 1 2ನೇ ಟಿ20 ಬಸೆಟರ್ ರಾತ್ರಿ 8.00
ಆ. 2 3ನೇ ಟಿ20 ಬಸೆಟರ್ ರಾತ್ರಿ 8.00
ಆ. 6 4ನೇ ಟಿ20 ಲಾಡರ್‌ಹಿಲ್ ರಾತ್ರಿ 8.00
ಅ. 7 5ನೇ ಟಿ20 ಲಾಡರ್‌ಹಿಲ್ ರಾತ್ರಿ 8.00
ಸಮಯ: ಭಾರತೀಯ ಕಾಲಮಾನ
ಪ್ರಸಾರ: ಡಿಡಿ ಸ್ಪೋರ್ಟ್ಸ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.