ಆಡಳಿತ ಸದಸ್ಯರಿಂದಲೇ ಲಂಚಾವತಾರ ಅನಾವರಣ
ಲಂಚವಷ್ಟೇ ಅಲ್ಲ ನಕಲಿ ಸಹಿ-ನಕಲಿ ರಸೀದಿಯಂತೆ ; ಪಾಲಿಕೆ ಗತಿ ಅಧೋಗತಿ
Team Udayavani, Jul 30, 2022, 2:19 PM IST
ಹುಬ್ಬಳ್ಳಿ: ಪಾಲಿಕೆಯಲ್ಲಿ ಕೆಲಸ ಆಗಬೇಕೆಂದರೆ, ಅಕ್ರಮ ಮುಚ್ಚಿಕೊಳ್ಳಬೇಕೆಂದರೆ, ಹೆಚ್ಚಿನ ಕರ ಕಡಿಮೆ ಮಾಡಿಸಬೇಕೆಂದರೆ ಕೆಲ ಅಧಿಕಾರಿಗಳು-ಸಿಬ್ಬಂದಿ ಕೈ ಬಿಸಿ ಮಾಡಬೇಕೆಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಲೇ ಇದೆ. ಆದರೆ, ಅಲ್ಲಿನ ಲಂಚಾವತಾರವನ್ನು ಪಾಲಿಕೆ ಸದಸ್ಯರೇ ಅದರಲ್ಲೂ ಆಡಳಿತ ಪಕ್ಷದ ಸದಸ್ಯರೇ ಅನಾವರಣಗೊಳಿಸಿದ್ದಾರೆ.
ಆಡಳಿತದಲ್ಲಿ ಮಾಹಿತಿ-ತಂತ್ರಜ್ಞಾನ ಬಳಕೆ ಆಗುತ್ತಿದೆ, ಪಾರದರ್ಶಕತೆಗೆ ಒತ್ತು ನೀಡಲಾಗಿದೆ ಎಂಬೆಲ್ಲ ಹೇಳಿಕೆಗಳ ನಡುವೆಯೂ ಪಾಲಿಕೆ ವಲಯ ಕಚೇರಿಗಳು, ಮುಖ್ಯ ಕಚೇರಿಯ ಕೆಲವೊಂದು ವಿಭಾಗಗಳು ಲಂಚಕೂಪಗಳಾಗಿವೆ ಎಂಬ ಸಾರ್ವಜನಿಕರ ಅಳಲು ಅರಣ್ಯರೋದನದಂತಿತ್ತು. ಇನ್ನು ಕೆಲವು ಸಾರ್ವಜನಿಕರು ತಮ್ಮ ಅಕ್ರಮ, ತಪ್ಪುಗಳನ್ನು ಮುಚ್ಚಿಕೊಳ್ಳಲು, ಕರ ಕಡಿಮೆ ಮಾಡಿಕೊಳ್ಳಲು ತಾವಾಗಿಯೇ ಮುಂದೆ ಹೋಗಿ ಹಣದ ಆಮಿಷ ತೋರುವುದು ಒಂದು ಕಡೆಯಾದರೆ, ಅಧಿಕಾರಿ-ಸಿಬ್ಬಂದಿ ಒಂದು ರೀತಿ ಅಧಿಕಾರಯುತ ಧಿಮಾಕಿನಲ್ಲೇ ಹಣ ವಸೂಲಿ ಮಾಡುವ ಪ್ರಕರಣಗಳು ಸಾಲು, ಸಾಲು.
ಪಾಲಿಕೆ ಆದಾಯಕ್ಕೆ ಕೊಕ್ಕೆ: ಪಾಲಿಕೆಯಲ್ಲಿ ಒಂದು ಸಣ್ಣ ಕೆಲಸಕ್ಕೂ ಕೆಲ ಸಿಬ್ಬಂದಿ, ಅಧಿಕಾರಿಗಳು ಹತ್ತು ಹಲವು ಸಬೂಬು, ಕಾರಣ ಮುಂದಿಡುತ್ತಾರೆ. ಜನರು ಕಚೇರಿ ಅಲೆಯುವಂತೆ ಮಾಡುತ್ತಾರೆ. ಆದರೆ, ಅದೇ ಏಜೆಂಟ್ ಮೂಲಕ ಇಲ್ಲವೆ ಮುಟ್ಟಿಸುವ ಮಾಮೂಲು ಮುಟ್ಟಿಸಿದರೆ ಸಾಕು ಕೆಲಸ ಅವಧಿ-ನಿರೀಕ್ಷೆಗಿಂತ ಮುನ್ನವೇ ಆಗಿರುತ್ತದೆ. ಸಾರ್ವಜನಿಕರು ಜನನ-ಮರಣ ಪ್ರಮಾಣ ಪತ್ರ, ಕಟ್ಟಡ ಪರವಾನಗಿ, ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ, ಖಾತಾ ಬದಲಾವಣೆ, ಕರ ಪಾವತಿಗೆ ಚಲನ್ ಪಡೆಯುವಿಕೆ ಹೀಗೆ ಯಾವುದೇ ಕೆಲಸಕ್ಕೆ ಹೋದರೂ ಅವರನ್ನು ವಿವಿಧ ನಿಯಮ-ಕಾಯ್ದೆ ಹೇಳಿ ಕಾಡುವ, ಸಾಗಹಾಕುವ ಕೆಲಸಗಳು ಸಿಬ್ಬಂದಿಯಿಂದ ಆಗುತ್ತಿದೆ. ಆಸ್ತಿಕರ ಪಾವತಿಗೆ ಸಿದ್ಧರಿದ್ದರೂ, ವಲಯ ಕಚೇರಿಗಳಲ್ಲಿ ಚಲನ್‌ಗಳನ್ನು ನೀಡುತ್ತಿಲ್ಲ ಎಂದು ಅನೇಕ ಸಾರ್ವಜನಿಕರು ಹಲವು ಸಂದರ್ಭದಲ್ಲಿ ಅಲವತ್ತುಕೊಂಡಿದ್ದೂ ಇದೆ.
ಇದೇ ಕೆಲಸವನ್ನು ಪಾಲಿಕೆ ಹಾಗೂ ಅಲ್ಲಿನ ಸಿಬ್ಬಂದಿಯನ್ನು ಬಲ್ಲ ಏಜೆಂಟ್ ಮೂಲಕ ಹೋದರೆ ಮನೆಯಲ್ಲಿಯೇ ಕುಳಿತು ಎಲ್ಲವನ್ನು ಪಡೆದುಕೊಳ್ಳಬಹುದಾಗಿದೆ. ಕಟ್ಟಡ ಮಾಲೀಕನ ಮುಖ ಸಹ ನೋಡದೆಯೇ ಆತನ ಮನೆಗೆ ಕಟ್ಟಡ ಪರವಾನಗಿ, ಪೂರ್ಣಗೊಂಡ ಪ್ರಮಾಣಪತ್ರ, ಖಾತಾ ಬದಲಾವಣೆ ಎಲ್ಲವೂ ಬಂದಿರುತ್ತವೆ. ಅಷ್ಟರ ಮಟ್ಟಿಗೆ ಪಾಲಿಕೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಕ್ಷಭೇದ ಮರೆತು ಸದಸ್ಯರು ಸಾಕ್ಷೀಕರಿಸುವ ಯತ್ನ ಮಾಡಿದ್ದಾರೆ.
ಆದಾಯ ದೃಷ್ಟಿಯಿಂದ ಪಾಲಿಕೆ ಸೊರಗುವ ಸ್ಥಿತಿಯಲ್ಲಿದ್ದರೂ, ಅಲ್ಲಿನ ಕೆಲ ಸಿಬ್ಬಂದಿ-ಅಧಿಕಾರಿಗಳ ಜೇಬುಗಳಿಗೆ ಮಾತ್ರ ಆದಾಯ ವರದಾನವಾಗಿ ಪರಿಣಮಿಸಿದೆಯೇ? ಎಂಬುದನ್ನು ಪಾಲಿಕೆ ಸದಸ್ಯರ ಅನಿಸಿಕೆ, ಸಾರ್ವಜನಿಕರು ಅನುಭವಿಸುವ ನೋವು ಮತ್ತೆ ಮತ್ತೆ ಹೌದು ಎಂದು ಹೇಳುತ್ತಿವೆ.
ನಕಲಿ ಸಹಿ-ನಕಲಿ ರಸೀದಿ?: ಮಹಾನಗರ ಪಾಲಿಕೆ ಕೆಲ ಸಿಬ್ಬಂದಿ ಸಾರ್ವಜನಿಕರಿಂದ ಹಣ ಪಡೆದು ಕೆಲಸ ಮಾಡಿಕೊಡುವ, ಅಕ್ರಮದ ಕಾರ್ಯವನ್ನು ಸಕ್ರಮವಾಗಿಸುವ, ಪಾಲಿಕೆ ಆದಾಯಕ್ಕೆ ಧಕ್ಕೆ ತರುವುದಕ್ಕೂ ಸಹಿ ಮಾಡಿ, ಹಣ ನೀಡುವವರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡುತ್ತಿಲ್ಲ. ಬದಲಾಗಿ ಪಾಲಿಕೆಗೆ ವಂಚನೆ ಮಾಡುವ ರೀತಿಯಲ್ಲಿ ಕೆಲವರು ಅಧಿಕಾರಿಯ ನಕಲಿ ಸಹಿ ಮಾಡಿದ್ದರೆ, ಇನ್ನು ಕೆಲವರು ಪಾಲಿಕೆ ಮಾದರಿಯಲ್ಲಿ ನಕಲಿ ರಸೀದಿಗಳನ್ನು ಮುದ್ರಿಸಿಕೊಂಡು ಅದರಲ್ಲಿ ಹೆಚ್ಚಿನ ಕರ ನಮೂದಿಸಿ ಆಸ್ತಿ ಮಾಲೀಕರನ್ನು ಇಷ್ಟೊಂದು ಇದೆ ಎಂದು ಹೇಳಿ ಕಡಿಮೆ ಮಾಡಿಸುವ ನೆಪದಲ್ಲಿ ಹಣ ಪಡೆಯುತ್ತಿದ್ದಾರೆ ಎಂದು ಪಾಲಿಕೆ ಕೆಲ ಸದಸ್ಯರ ಆರೋಪ ಅತ್ಯಂತ ಗಂಭೀರವಾದದ್ದಾಗಿದೆ. ಕೇಬಲ್ ಕಂಪೆನಿಗಳು 1 ಕಿ.ಮೀ.ಗೆ ಪರವಾನಗಿ ಪಡೆದು 10-20 ಕಿ.ಮೀ. ಕೇಬಲ್ ಹಾಕುತ್ತಿವೆ. ನಿಗದಿತ ಪ್ರಮಾಣದ ಜಾಗಕ್ಕಿಂತ ಹೆಚ್ಚಿನ ಭಾಗವನ್ನು ರಸ್ತೆ ಅಗೆಯುತ್ತಾರೆ. ರಸ್ತೆ ಅಗೆತದ ಶುಲ್ಕ ಸಮರ್ಪಕವಾಗಿ ಪಾವತಿಸದೆ, ಅಗೆದ ರಸ್ತೆ ಸಮರ್ಪಕವಾಗಿ ಸರಿಪಡಿಸದೆ ಕೆಲ ಸಿಬ್ಬಂದಿ-ಅಧಿಕಾರಿಗಳನ್ನು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಾಕ್ಷಿ ಎನ್ನುವಂತೆ ಅವಳಿನಗರದಲ್ಲಿ ಕೇಬಲ್ ಅಳವಡಿಕೆ ಜಾಗಗಳಿವೆ.
ಹೆಚ್ಚಿನ ಮೊತ್ತದ ಕರ ಇದ್ದವರಿಗೆ ಸಿಬ್ಬಂದಿಯೇ ಅಡ್ಡದಾರಿ ಹೇಳಿಕೊಟ್ಟು ಬೇಕಾದ್ದನ್ನು ಪಡೆದುಕೊಳ್ಳುತ್ತಾರೆ. ಇನ್ನು ಮನೆ, ಕಟ್ಟಡಗಳ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆ ಮಾಡಿದ್ದರೆ, ಅವುಗಳನ್ನು ಸರಿಪಡಿಸುವ ನೆಪದಲ್ಲಿ ಪಾಲಿಕೆ ಆದಾಯಕ್ಕೂ ಕತ್ತರಿ ಹಾಕಿ ತಾವೇ ಹಣ ಪಡೆದು ವಾಸ್ತವದಲ್ಲಿ ಅಕ್ರಮವಾಗಿದ್ದರೂ, ದಾಖಲೆಗಳಲ್ಲಿ ಸಕ್ರಮದ ರೂಪ ನೀಡುವ ಕಾರ್ಯಗಳು ನಡೆಯುತ್ತಿವೆ ಎಂಬ ಆರೋಪಗಳು ಇವೆ.
ಪಾಲಿಕೆಯಲ್ಲಿ ಕೇವಲ 500, 1000, 10,000 ಅಷ್ಟೇ ಅಲ್ಲ ಕೆಲವೊಂದು ಪ್ರಕರಣಗಳಲ್ಲಿ 80 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಹಣ ಪಡೆಯಲಾಗಿದೆ ಎಂಬುದು ಕೆಲ ಪಾಲಿಕೆ ಸದಸ್ಯರ ನೇರ ಆರೋಪ. ಇಷ್ಟೊಂದು ಹಣ ನೀಡುವವರು ಪಾಲಿಕೆಗೆ ಎಷ್ಟು ನಷ್ಟ ಉಂಟು ಮಾಡಿರಬೇಕು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಬವಿಸುತ್ತದೆ. ಪಾಲಿಕೆಯಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಮೇಲಧಿಕಾರಿಗಳು ಯಾಕೆ ಮೌನವಾಗಿದ್ದಾರೆ. ಅವರ ಮೇಲೇನಾದರೂ ಒತ್ತಡ ಇದೆಯೇ? ಇನ್ನು ಒಂದಿಬ್ಬರು ಅಧಿಕಾರಿಗಳು ನನಗೆ ಅವರು ಗೊತ್ತು, ಇವರು ಗೊತ್ತು ಅವರೊಂದಿಗೆ ನನ್ನ ಸಂಬಂಧ ಉತ್ತಮವಾಗಿದೆ ಎಂದು ಅಧಿಕಾರದಲ್ಲಿರುವ ರಾಜಕೀಯ ನಾಯಕರ ಹೆಸರು ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ. ಇಂತಹ ಅಧಿಕಾರಿಗೆ ರಾಜಕೀಯ ನಾಯಕರ ಕೃಪಾಶೀರ್ವಾದ ನಿಜವಾಗಿಯೂ ಇದೇ ಎಂಬುದು ಸ್ಪಷ್ಟವಾಗಬೇಕಾಗಿದೆ.
ಪಾಲಿಕೆ ಸದಸ್ಯರೇ ಸದನದಲ್ಲಿ ಪಾಲಿಕೆ ಭ್ರಷ್ಟಾಚಾರ ಕುರಿತಾಗಿ ಪಕ್ಷಭೇದ ಮರೆತು ಆರೋಪಕ್ಕೆ ಮುಂದಾಗುವಷ್ಟು ಹದಗೆಟ್ಟ ಸ್ಥಿತಿ ಕುರಿತಾಗಿ ಗಂಭೀರ ಚಿಂತನೆ ನಡೆಯಬೇಕಾಗಿದೆ. ಆರೋಪಗಳು ಸತ್ಯವಾಗಿವೆ ಎಂದಾದರೆ ಕಾಲಮಿತಿಯಲ್ಲಿ ಸಮಗ್ರ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಮುಖ್ಯವಾಗಿ ಅಧಿಕಾರದಲ್ಲಿದ್ದವರು ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮದ ಮೂಲಕ ಹಣ ಪಡೆಯುವ ಅಧಿಕಾರಿಗಳ ಜತೆ ನಮ್ಮ ಯಾವ ನಂಟು ಇಲ್ಲ ಎಂಬುದನ್ನು ಸಾಬೀತು ಪಡಿಸಬೇಕಾಗಿದೆ.
ಮಹಾಪೌರರ ಸ್ಥಿತಿಯೇ… ನನಗೆ ಪರಿಚಿತರೊಬ್ಬರ ಕೆಲಸವೊಂದರ ಬಗ್ಗೆ ಪಾಲಿಕೆ ಅಧಿಕಾರಿ-ಸಿಬ್ಬಂದಿಗೆ ಹೇಳಿದ್ದೆ. ಅವರಲ್ಲಿಗೆ ಇವರನ್ನು ಕಳುಹಿಸಿದ್ದೆ. ಕೆಲ ದಿನಗಳ ನಂತರ ಆ ವ್ಯಕ್ತಿ ಬಂದು ಸಿಹಿ ನೀಡಿದ. ಕೆಲಸ ಆಗಿರಬೇಕೆಂದು ಅಂದುಕೊಂಡಿದ್ದೆ. ಆದರೆ, ಆ ವ್ಯಕ್ತಿ ನೀವು ಹೇಳಿದ್ದರಿಂದ ಯಾವ ಕೆಲಸವೂ ಆಗಲಿಲ್ಲ. ಬದಲಾಗಿ ನಾನು ಮುಟ್ಟಿಸುವುದು ಮುಟ್ಟಿಸಿ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದ್ದು ಕೇಳಿ ನನಗೆ ನಾಚಿಕೆಯಾಯಿತು. ಇದು ಸ್ವತಃ ಮಹಾಪೌರ ಈರೇಶ ಅಂಚಟಗೇರಿ ಅವರ ಅನಿಸಿಕೆ. ಮಹಾಪೌರರ ಸ್ಥಿತಿಯೇ ಹೀಗಾದರೆ, ಸಾರ್ವಜನಿಕರ ಗೋಳು ಇನ್ನೇನಾಗಿರಬೇಕು. ಅಷ್ಟರ ಮಟ್ಟಿಗೆ ಪಾಲಿಕೆ ಸಿಬ್ಬಂದಿ ಪ್ರಬಲರಾಗಿದ್ದಾರೆಯೇ ಎಂಬ ಪ್ರಶ್ನೆ ಅನೇಕ ಸಾರ್ವಜನಿಕರದ್ದಾಗಿದೆ.
ಪಾಲಿಕೆ ಸಿಬ್ಬಂದಿ ಅಧಿಕಾರಿಗಳ ಭ್ರಷ್ಟಾಚಾರ ಬಗ್ಗೆ ಮಾಹಿತಿ ನೀಡಿದರೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು. ಭ್ರಷ್ಟತೆ ಆರೋಪ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ತಪ್ಪಿಸ್ಥರಾದರೆ ಅಂತಹ ಅಧಿಕಾರಿಗಳು ನಮ್ಮ ಪಾಲಿಕೆಲಯಲ್ಲಿ ಇರಿಸಿಕೊಳ್ಳುವ ಅವಶ್ಯಕತೆಯೇ ಇಲ್ಲ. ಪಾಲಿಕೆಗೆ ಆದಾಯ ಎಂಬುದು ದೇಹಕ್ಕೆ ರಕ್ತ ಇದ್ದಂತೆ. ಅದನ್ನೇ ಇಲ್ಲವಾಗಿಸುವವರ ಬಗ್ಗೆ ಯಾವ ಕನಿಕರವೂ ಇಲ್ಲದೆ ಕ್ರಮಕ್ಕೆ ಸಿದ್ಧ. –ಡಾ| ಬಿ.ಗೋಪಾಲಕೃಷ್ಣ, ಪಾಲಿಕೆ ಆಯುಕ್ತ
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.