ಅಧಿಕಾರಿಗಳ ವರ್ತನೆಗೆ ಸದಸ್ಯರ ಅಸಮಾಧಾನ
ಪಾಲಿಕೆ ಕಂದಾಯ ಉಪ ಆಯುಕ್ತರ ವಿರುದ್ಧ ಭ್ರಷ್ಟಾಚಾರದ ಆರೋಪ ; ವಿಚಾರಣೆ ನಡೆಸಿ 15 ದಿನದಲ್ಲಿ ವರದಿ ನೀಡಲು ಮಹಾಪೌರ ಆದೇಶ
Team Udayavani, Jul 30, 2022, 3:24 PM IST
ಹುಬ್ಬಳ್ಳಿ: ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದರೆ ಆಯಾ ಇಲಾಖೆ ಮುಖ್ಯಸ್ಥರು ಹಾಗೂ ವಲಯಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಪಾಲಿಕೆ ಕಂದಾಯ ಉಪ ಆಯುಕ್ತ ಆನಂದ ಕಲ್ಲೋಳಿಕರ್ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪ ಕುರಿತಾಗಿ 15 ದಿನಗಳೊಳಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಮಹಾಪೌರ ಈರೇಶ ಅಂಚಟಗೇರಿ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಶುಕ್ರವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ವೀರಣ್ಣ ಸವಡಿ ಪಾಲಿಕೆ ಆರ್ಥಿಕ ಸ್ಥಿತಿ, ಆದಾಯ ಹಾಗೂ ವೆಚ್ಚದ ಕುರಿತಾಗಿ ಗಮನ ಸೆಳೆಯುವ ಸೂಚನೆ ಮಂಡಿಸಿದರು. ಇದರ ಮೇಲೆ ಪಕ್ಷಭೇದ ಮರೆತು ಮಾತನಾಡಿದ ಸದಸ್ಯರು ಪಾಲಿಕೆಯಲ್ಲಿ ಅಧಿಕಾರಿಗಳ ವರ್ತನೆ, ಪ್ರತಿಯೊಂದಕ್ಕೂ ಹಣ ಕೇಳುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ಮಾತನಾಡಿ, 2022-23ನೇ ಸಾಲಿನ ಬಜೆಟ್‌ನಲ್ಲಿ 381 ಕೋಟಿ ರೂ. ಆದಾಯ ನಿರೀಕ್ಷೆ ಹೊಂದಲಾಗಿದೆ. ಇದರಲ್ಲಿ ಆಸ್ತಿಕರ, ಮಳಿಗೆಗಳ ಬಾಡಿಗೆ, ಜಾಹೀರಾತು ಫಲಕಗಳ ಶುಲ್ಕ ಇತ್ಯಾದಿ ಸೇರಿ ಪಾಲಿಕೆ ಸ್ವಯಂ ಆದಾಯ ಅಂದಾಜು 110 ಕೋಟಿ ರೂ. ನಿರೀಕ್ಷೆ ಹಾಗೂ 92 ಕೋಟಿ ರೂ. ವೆಚ್ಚದ ಅಂದಾಜು ಹೊಂದಲಾಗಿದೆ. ಪ್ರತಿ ವಾರ್ಡ್‌ನಲ್ಲಿ 300-400 ಖಾಲಿ ನಿವೇಶನಗಳು ಇವೆ ಎಂದು ದಾಖಲೆಯಲ್ಲಿದ್ದರೆ ವಾಸ್ತವಿಕವಾಗಿ ಅಲ್ಲಿ ಸುಮಾರು 200 ನಿವೇಶನಗಳಲ್ಲಿ ಮನೆಗಳಾಗಿವೆ. ಪರವಾನಗಿ ಪಡೆಯದೇ ನಿರ್ಮಾಣಗೊಂಡಿದ್ದು, ಅವೆಲ್ಲವುಗಳನ್ನು ದಂಡ ಸಮೇತ ಕರ ಜಾಲಕ್ಕೆ ತರಲಾಗುತ್ತಿದೆ ಎಂದರು.
ಕಾಂಗ್ರೆಸ್‌ನ ಇಮ್ರಾನ್ ಯಲಿಗಾರ ಮಾತನಾಡಿ, ಪಾಲಿಕೆಯ ಸ್ವಯಂ ಆದಾಯ 110 ಕೋಟಿ ರೂ. ಅದರಲ್ಲಿ ವೆಚ್ಚ 92 ಕೋಟಿ ರೂ. ಆದರೆ, ಪಾಲಿಕೆಯಿಂದ ಸುಮಾರು 360 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಗುತ್ತಿಗೆ ನೀಡಲಾಗಿದೆ. ಎಲ್ಲಿಂದ ಹಣ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದರು.
ಆಡಳಿತ ಮತ್ತು ವಿಪಕ್ಷ ಸದಸ್ಯರಾದ ಶಿವು ಹಿರೇಮಠ, ಚಂದ್ರಶೇಖರ ಮನಗುಂಡಿ, ನಿರಂಜನ ಹಿರೇಮಠ, ಶಿವು ಮೆಣಸಿನಕಾಯಿ, ಸುವರ್ಣಾ ಕಲ್ಲಕುಂಟ್ಲಾ, ರಾಜಣ್ಣಾ ಕೊರವಿ, ಸತೀಶ ಹಾನಗಲ್ಲ, ಕವಿತಾ ಕಬ್ಬೇರ, ಉಮೇಶ ಕೌಜಗೇರಿ, ಶಂಭುಗೌಡ ಸಾಲುಮನೆ, ಆರೀಫ್ ಭದ್ರಾಪುರ, ರಾಮಣ್ಣ ಬಡಿಗೇರ ಇನ್ನಿತರರು ಮಾತನಾಡಿ, ಅನೇಕ ಕಡೆ ಒಂದು ಅಂತಸ್ತಿಗೆ ಪರವಾನಗಿ ಪಡೆದು ಎರಡ್ಮೂರು ಅಂತಸ್ತು ನಿರ್ಮಾಣ ಮಾಡಲಾಗಿದೆ. ಕೇಬಲ್ ಹಾಕುವ ನಿಟ್ಟನಲ್ಲಿ ಹಣ ಪಡೆದು ಒಂದು ಕಿಮೀಗೆ ಪರವಾನಗಿ ನೀಡಿ 10 ಕಿಮೀ ಹಾಕಲಾಗುತ್ತಿದೆ. ಕರ ಪಾವತಿದಾರರಿಗೆ ಹೆಚ್ಚಿನ ಕರವಿದೆ ಎಂದು ಬೆದರಿಸಿ ಹಣ ವಸೂಲಿ ಮಾಡಲಾಗುತ್ತಿದೆ.
ಕಟ್ಟಡ ಪರವಾನಗಿ, ಪೂರ್ಣಗೊಂಡ ಪ್ರಮಾಣ ಪತ್ರ ನೀಡಲು ಹಣ ನೀಡಬೇಕು. ಅನಧಿಕೃತ ಪಿಜಿಗಳಿಗೆ ಕರ ಆಕರಣೆ, ಮೊಬೈಲ್ ಟವರ್‌ಗಳಿಗೆ ಕರ ಆಕರಣೆ ಮಾಡಬೇಕು. ಆರ್ಯಭಟ ಟೆಕ್‌ಪಾರ್ಕ್‌ನಲ್ಲಿ ಹಂಚಿಕೆಯಾದರೂ ಕಂಪೆನಿ ಆರಂಭವಾಗದ ನಿವೇಶನಗಳನ್ನು ವಶಕ್ಕೆ ಪಡೆದು ಮರು ಹರಾಜು ಹಾಕಬೇಕು. ಜಾಹೀರಾತು ಫಲಕಗಳಿಂದ ಕಟ್ಟುನಿಟ್ಟಿನ ಶುಲ್ಕ ವಸೂಲಿ, ಹೆಸ್ಕಾಂ ಕಂಬಗಳಿಗೆ ಕೇಬಲ್ ಅಳವಡಿಕೆ ಆಗುತ್ತಿದ್ದು, ಅದಕ್ಕೂ ಬಾಡಿಗೆ ವಿಧಿಸಬೇಕು ಎಂಬುದು ಸೇರಿದಂತೆ ವಿವಿಧ ಸಲಹೆ ನೀಡಿದರು.
ಪಾಲಿಕೆ ಕಂದಾಯ ಉಪ ಆಯುಕ್ತ ಆನಂದ ಕಲ್ಲೋಳಿಕರ್ ಮಾತನಾಡಿ, ಪ್ರತಿ ಮನೆಗೆ ಕರ ಆಕರಣೆ ಮಾಡಲಾಗುತ್ತಿದೆ. ಇಲ್ಲಿವರೆಗೆ ಶೇ.45 ಮನೆಗಳ ಆಸ್ತಿಕರ, ಶೇ.50 ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿ ಮಾಡಲಾಗಿದೆ. ಇ-ಖಾತೆಯಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದ್ದೇವೆ ಎಂದು ಹೇಳುತ್ತಿದ್ದಾಗ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಸಂತೋಷ ಚವ್ಹಾಣ, ಸದನದಲ್ಲಿ ಸದಸ್ಯರ ಹೆಸರು ಬಳಸುವಂತಿಲ್ಲ. ನೀವು ರಾಜಕಾರಣಿ ತರಹ ಮಾತನಾಡಲು ಅಧಿಕಾರ ನೀಡಿದ್ದು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಭ್ರಷ್ಟಾಚಾರದಲ್ಲಿ ನಿಮ್ಮದೂ ಪಾತ್ರವಿದೆ ಎಂದು ಆರೋಪಿಸಿದರು. ಇದಕ್ಕೆ ಸದಸ್ಯರಾದ ಸತೀಶ ಹಾನಗಲ್ಲ, ಶಂಭು ಸಾಲಿಮನೆ ಇನ್ನಿತರ ಸದಸ್ಯರು ಅಧಿಕಾರಿ ವಿರುದ್ಧ ಮುಗಿಬಿದ್ದರು, ಅಧಿಕಾರಿ ಹೆಸರಲ್ಲಿಯೇ ನಕಲಿ ಸಹಿ ಮಾಡಲಾಗಿದೆ ಎಂದು ಆರೋಪಿಸಿದರು.
ಈ ವೇಳೆ ಸಭಾನಾಯಕ ತಿಪ್ಪಣ್ಣ ಮಜ್ಜಗಿ ಕಂದಾಯ ಉಪ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಅನೇಕ ಕಡತಗಳು ನಿಮ್ಮಲ್ಲಿಯೇ ಇರಿಸಿಕೊಂಡಿದ್ದೀರಿ, ಹಣ ನೀಡದೆ ಅವು ಆಯುಕ್ತರ ಕಚೇರಿಗೆ ಹೋಗುವುದೇ ಇಲ್ಲ ಎಂದು ಆರೋಪಿಸಿದರಲ್ಲದೆ, ಆದಾಯ ಹೆಚ್ಚಳಕ್ಕೆ ತಂಡ ರಚಿಸಿ, ಪ್ರತಿ ತಿಂಗಳು ಆಯುಕ್ತರಿಂದ ಕರ ಸಂಗ್ರಹ, ಆದಾಯ ಬಗ್ಗೆ ಪರಾಮರ್ಶೆ ನಡೆಯಬೇಕೆಂದರು.
ಸದಸ್ಯರ ಅನಿಸಿಕೆಗಳನ್ನು ಆಲಿಸಿದ ಮಹಾಪೌರ ಈರೇಶ ಅಂಚಟಗೇರಿ, ಆರ್ಯಭಟ ಟೆಕ್ ಪಾರ್ಕ್‌ನಲ್ಲಿ ಬಳಕೆಯಾಗದ ನಿವೇಶನಗಳನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳಬೇಕು. ಕೇಬಲ್ ಅಳವಡಿಕೆದಾರರಿಗೆ ನಿಯಮ ಮೀರಿದ್ದರೆ ಐದು ಪಟ್ಟು ದಂಡ ವಸೂಲಿ ಮಾಡಬೇಕು. ಮುಂದಿನ 100 ದಿನಗಳಲ್ಲಿ ಎಲ್ಲ ವಲಯ ಕಚೇರಿಗಳಲ್ಲಿ ಶೇ.100 ಇ-ಸ್ವತ್ತು ನೀಡಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.
ಉಪ ಮಹಾಪೌರ ಉಮಾ ಮುಕುಂದ ಸೇರಿದಂತೆ ಅನೇಕರು ಇದ್ದರು.
ಭ್ರಷ್ಟಾಚಾರ ವಿಚಾರದಲ್ಲಿ ರಾಜಿ ಇಲ್ಲವೇ ಇಲ್ಲ
ಪಾಲಿಕೆ ಆಯುಕ್ತ ಡಾ| ಬಿ.ಗೋಪಾಲಕೃಷ್ಣ ಮಾತನಾಡಿ, ಭ್ರಷ್ಟಾಚಾರ ವಿಚಾರದಲ್ಲಿ ಯಾವುದೇ ರಾಜಿ ಇಲ್ಲವೇ ಇಲ್ಲ. ಪಾಲಿಕೆ ಅಧಿಕಾರಿ-ಸಿಬ್ಬಂದಿ ವಿರುದ್ಧ ಭ್ರಷ್ಟಾಚಾರದ ಕುರಿತು ಮಾಹಿತಿ ನೀಡಿದರೆ ತಕ್ಷಣಕ್ಕೆ ತನಿಖೆಗೆ ಆದೇಶ ನೀಡುವೆ. ವಲಯ ಕಚೇರಿಗಳಲ್ಲಿ ಬದಲಾವಣೆ ಅವಶ್ಯವಾಗಿದ್ದು, ಅದನ್ನು ಮಾಡಿ ತೋರಿಸುತ್ತೇವೆ ಎಂದರು.
ಪಾಲಿಕೆ ಆದಾಯ ಹೆಚ್ಚಳಕ್ಕೆ ಜಿಐ ಸಮೀಕ್ಷೆ ಅತ್ಯವಶ್ಯವಾಗಿದೆ. ಆದಷ್ಟು ಬೇಗ ಸಮೀಕ್ಷೆ ಕೈಗೊಳ್ಳಲಾಗುವುದು. ಭೂ ಬಾಡಿಗೆ, ಗುತ್ತಿಗೆ ಆಸ್ತಿ ಬಗ್ಗೆ ಸಮರ್ಪಕ ಲೆಕ್ಕವೇ ಇರಲಿಲ್ಲ. ಅದನ್ನು ಸರಿಪಡಿಸಲಾಗುತ್ತಿದೆ. ಈ ಆಸ್ತಿಗಳನ್ನು ಹರಾಜು ಮೂಲಕ ನೀಡಿದರೆ ಪಾಲಿಕೆಗೆ ದೊಡ್ಡ ಪ್ರಮಾಣದ ಆದಾಯ ಬಂದು ಅಭಿವೃದ್ಧಿ ಚಿತ್ರಣವೇ ಬದಲಾಗುತ್ತದೆ. ಎಲ್ಲ ಕೇಬಲ್ ಕಂಪೆನಿಗಳಿಂದ ಭೂ ಬಾಡಿಗೆ ವಸೂಲಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಾಲಿಕೆಯ ತೆರಿಗೆ ಸಾಫ್ಟ್‌ವೇರ್ ಹಳೆಯದಾಗಿದ್ದು, ಸಾಫ್ಟ್‌ವೇರ್ ಬದಲಾವಣೆ ಮಾಡಲಾಗುತ್ತಿದೆ. ಜತೆಗೆ ಕರದಾತರಿಗೆ ಅವರ ಕರ ಪಾವತಿಸುವ ದಿನಾಂಕ ಮಾಹಿತಿ ನೀಡಿಕೆ ಮೊಬೈಲ್ ಆ್ಯಪ್ ಅಳವಡಿಕೆಗೂ ಕ್ರಮ ಕೈಗೊಳ್ಳಲಾಗುತ್ತಿದೆ. 2018-19ರಲ್ಲಿ ಆಸ್ತಿಕರ 53 ಕೋಟಿ ರೂ. ಸಂಗ್ರಹವಾಗಿತ್ತು. 2021-22ರಲ್ಲಿ ಅದು 88.58 ಕೋಟಿ ರೂ. ಇದ್ದರೆ, 2022-23ನೇ ಸಾಲಿನ ಇಲ್ಲಿವರೆಗೆ 59 ಕೋಟಿ ರೂ. ಸಂಗ್ರಹವಾಗಿದೆ. ಜಿಐ ಸಮೀಕ್ಷೆ ಕೈಗೊಂಡರೆ ಆಸ್ತಿಕರದಿಂದಲೇ ಅಂದಾಜು 150 ಕೋಟಿ ರೂ. ಆದಾಯ ಬರಲಿದೆ ಎಂದು ತಿಳಿಸಿದರು.
ನಮ್ಮ ನಗರ, ಸ್ವಚ್ಛ ನಗರ ಯೋಜನೆಯಡಿ ಖಾಲಿ ನಿವೇಶನಗಳ ಪರಿಶೀಲನೆ ಅಭಿಯಾನ ಎಲ್ಲ ವಲಯಗಳಲ್ಲಿ ಕೈಗೊಳ್ಳಲಾಗಿದೆ. ಎಲ್ಲ ವಾರ್ಡ್‌ಗಳಲ್ಲಿಯೂ ಖಾಲಿ ನಿವೇಶನ ಎಂದು ಇರುವ ಕಡೆಗಳಲ್ಲಿ ಈಗಾಗಲೇ ಕಟ್ಟಡಗಳು ನಿರ್ಮಾಣಗೊಂಡಿದ್ದು, ಅಂತಹವುಗಳಿಗೆ ಶೇ.200 ದಂಡ ವಿಧಿಸಲಾಗುತ್ತಿದೆ. ವಲಯ 6ರಲ್ಲಿ ಇಂತಹ ಒಂದು ಕಟ್ಟಡಕ್ಕೆ 80 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದರಿಂದ ಹೆಚ್ಚಿನ ಹಣ ಬಂದರೆ ಶೇ.50 ಹಣವನ್ನು ಪಾಲಿಕೆ ಸದಸ್ಯರಿಗೆ ಮಹಾಪೌರರು ಘೋಷಿಸಿದ ವಾರ್ಡ್‌ಗೆ 50 ಲಕ್ಷ ರೂ. ಸುಲಭವಾಗಿ ನೀಡಬಹುದಾಗಿದೆ. ಮುಂದಿನ ದಿನಗಳಲ್ಲಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗುವುದು. ಇದರಡಿಯಲ್ಲಿಯೇ ಸುಮಾರು 500 ಸ್ಮಾರ್ಟ್ ಕಂಬಗಳು, 50 ಸಾರ್ವಜನಿಕ ಶೌಚಾಲಯ, ಬಸ್ ತಂಗುದಾಣಗಳು ಬರಲಿವೆ ಎಂದರು.
ಜಿಐ ಸಮೀಕ್ಷೆಗೆ ಕ್ರಮ ಕೈಗೊಳ್ಳಿ
ವೀರಣ್ಣ ಸವಡಿ ಮಾತನಾಡಿ, ಮಹಾನಗರ ವ್ಯಾಪ್ತಿಯಲ್ಲಿ 1.72ರಿಂದ 1.80 ಲಕ್ಷ ಮನೆ-ಕಟ್ಟಡಗಳು ಇವೆ ಎಂದು ಪಾಲಿಕೆ ದಾಖಲೆಗಳು ಹೇಳುತ್ತಿವೆ. ಆದರೆ, ಹೆಸ್ಕಾಂನಿಂದ ಪರವಾನಗಿ ಪಡೆದ ದಾಖಲೆಗಳಲ್ಲಿ ಸುಮಾರು 2.50 ಲಕ್ಷ ಮನೆಗಳು ಇವೆ ಎಂದಿದೆ. ಇವೆಲ್ಲವುದಕ್ಕೂ ಕರ ಆಕರಣೆ ಮಾಡಿದರೆ ಪಾಲಿಕೆಗೆ 70-80 ಕೋಟಿ ರೂ. ಹೆಚ್ಚುವರಿ ಆದಾಯ ಬರುತ್ತದೆ. ಜಿಐ ಸಮೀಕ್ಷೆ ಮಾಡುವಂತೆ 2016ರಲ್ಲಿಯೇ ಪ್ರಸ್ತಾಪಿಸಿ, ಸಮೀಕ್ಷೆಗೆ ಟಿಸಿಎಸ್ ಕಂಪೆನಿಯವರು ಮುಂದೆ ಬಂದಿದ್ದರೂ ಅದು ಸಾಧ್ಯವಾಗಿರಲಿಲ್ಲ. ಸಮೀಕ್ಷೆಗೆ ಆಗ 3 ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿತ್ತು. ಇದೀಗ ಅದು 4-5 ಕೋಟಿ ರೂ. ಆಗಬಹುದಾಗಿದೆ. ವೆಚ್ಚವಾದರೂ ಪಾಲಿಕೆಗೆ ಹೆಚ್ಚಿನ ಆದಾಯ ಬರಲಿದೆ. ಕೂಡಲೇ ಜಿಐ ಸಮೀಕ್ಷೆಗೆ ಕ್ರಮ ಕೈಗೊಳ್ಳಬೇಕಾಗಿದೆ. ಇನ್ನು ಪಾಲಿಕೆಯಿಂದ ಭೂ ಬಾಡಿಗೆ, ಗುತ್ತಿಗೆ ಆಧಾರದಲ್ಲಿ ನೀಡಿದ ಸುಮಾರು 2,700 ಜಾಗಗಳಲ್ಲಿ ಕಲ್ಯಾಣಮಂಟಪ, ಶಾಲೆ ಇನ್ನಿತರ ಕಟ್ಟಡಗಳು ಬಂದಿದ್ದು, 2013ರಿಂದ ಅವುಗಳಿಂದ ಕರ ಪಾವತಿಯೂ ಆಗುತ್ತಿಲ್ಲ. ಅವುಗಳನ್ನು ಮಾರಾಟ ಮಾಡಿ ಕರ ಜಾಲಕ್ಕೆ ತರುವುದು ಸೂಕ್ತ ಎಂದರು. ಅವಳಿನಗರದಲ್ಲಿ ಸುಮಾರು 1,600 ಮಳಿಗೆಗಳಿದ್ದು, ಅವುಗಳಿಂದ ಸಮರ್ಪಕ ಬಾಡಿಗೆ ವಸೂಲಿ, ಕೇಬಲ್ ಅಳವಡಿಕೆ ಕಂಪೆನಿಗಳಿಗೆ ಭೂ ಬಾಡಿಗೆ ನಿಗದಿ, ಇ-ಸ್ವತ್ತು ನೀಡಿಕೆ ಇನ್ನಿತರ ಪಾಲಿಕೆ ಆದಾಯ ಮೂಲಗಳ ವಿಚಾರದಲ್ಲಿ ಕಂದಾಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಜನರು ಕರ ಪಾವತಿಗೆ ಬಂದರೂ ಹಣ ಕೇಳುತ್ತಿದ್ದು, ಎರಡು ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸಿ, ಆದಾಯ ಹೆಚ್ಚಳವಾಗದಿದ್ದರೆ ಆಡಳಿತ ಪಕ್ಷದಲ್ಲಿದ್ದರೂ ಹೋರಾಟಕ್ಕೆ ಮುಂದಾಗುವುದಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.