ಎಂಟೂರು ದತ್ತು ಪಡೆದ ಎಸ್‌ಆರ್‌ಪಿ
ಇಂದು ಬಾಡಗಂಡಿಯಲ್ಲಿ ವಿಶೇಷ ಕಾರ್ಯಕ್ರಮ ; ವಿನೂತನವಾಗಿ ಜನ್ಮ ದಿನ ಆಚರಣೆ
Team Udayavani, Jul 31, 2022, 2:29 PM IST
ಬಾಗಲಕೋಟೆ: ಜಿಲ್ಲೆಯ ಹಿರಿಯ ಮುತ್ಸದ್ಧಿ ರಾಜಕಾರಣಿಗಳಲ್ಲಿ ಪ್ರಮುಖರಾದ, ಮಾಜಿ ಸಚಿವ, ವಿಧಾನಪರಿಷತ್ ವಿರೋಧ ಪಕ್ಷದ ಮಾಜಿ ನಾಯಕ, ಜಿಲ್ಲೆಯ ಶಿಕ್ಷಣ ಮತ್ತು ಸಹಕಾರಿ ರಂಗದ ಹಿರಿಯ ಮುಖಂಡ ಎಸ್.ಆರ್. ಪಾಟೀಲರ 74ನೇ ಜನ್ಮದಿನ ಕಾರ್ಯಕ್ರಮ ಜು. 31ರಂದು ವಿಶೇಷ ಹಾಗೂ ವಿನೂತನವಾಗಿ ನಡೆಯಲಿದೆ.
ಹೌದು, ಪ್ರತಿಬಾರಿ ಪ್ರವಾಹ, ಬೇಸಿಗೆ ಮತ್ತಿತರ ಸಂಕಷ್ಟದ ದಿನಗಳಿದ್ದರೆ ಜನ್ಮದಿನ ಆಚರಣೆ ನಿರಾಕರಿಸುತ್ತಲೇ ಬರುತ್ತಿದ್ದ ಎಸ್.ಆರ್. ಪಾಟೀಲರು, ಈ ಬಾರಿ ತಮ್ಮ ಬೆಂಬಲಿಗರು ಹಾಗೂ ಅಭಿಮಾನಿಗಳ ಒತ್ತಾಸೆ ಮೇರೆಗೆ ಸಮಾಜಮುಖೀ ಕಾರ್ಯಗಳ ಮೂಲಕ ಜನ್ಮದಿನ ಆಚರಿಸಲು ಮುಂದಾಗಿದ್ದಾರೆ.
ಎಂಟೂರು ದತ್ತು: ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯದ ಹಿನ್ನೀರ ವ್ಯಾಪ್ತಿಯಲ್ಲಿ ಮುಳುಗಡೆಯಾದ ಬೀಳಗಿ ತಾಲೂಕಿನ ಹೆಗ್ಗೂರ ಗ್ರಾಪಂ ವ್ಯಾಪ್ತಿಯ ಹೆಗ್ಗೂರ, ಲಿಂಗಾಪುರ ಎಸ್. ಕೆ, ಗುಂಡನಪಲ್ಲೆ, ಗೋಡಿಹಾಳ, ಚಿನವಾಲಕೊಪ್ಪ, ಮುತ್ತಲದಿನ್ನಿ, ಮುತ್ತಲದಿನ್ನಿ ತಾಂಡಾ ಹಾಗೂ ಕೊಪ್ಪ ಎಸ್.ಆರ್ ಗ್ರಾಮಗಳು ಸುಮಾರು 25 ವರ್ಷಗಳ ಹಿಂದೆಯೇ ಮುಳುಗಡೆಯಾಗಿವೆ. ಈ ಗ್ರಾಮಗಳ ಜನರಿಗೆ ಬೀಳಗಿ ಕ್ರಾಸ್ ಬಳಿ ಪುನರ್‌ವಸತಿ ಕೇಂದ್ರ ನಿರ್ಮಿಸಿ, ಪುನರ್‌ವಸತಿ ಕಲ್ಪಿಸಲಾಗಿದೆ. ಆದರೆ, ಈ ಎಂಟೂರಲ್ಲಿ ಇಂದಿಗೂ ರಸ್ತೆ, ಚರಂಡಿ, ವಿದ್ಯುತ್ ಸಹಿತ ಕೆಲವು ಮೂಲಭೂತ ಸೌಲಭ್ಯಗಳ ಕೊರತೆ ಇವೆ.
ಈ ಎಲ್ಲ ಪುನರ್‌ವಸತಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸಂಬಂಧಿಸಿದ ಇಲಾಖೆಗೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ಜತೆಗೆ ಎಸ್.ಆರ್. ಪಾಟೀಲ ಶಿಕ್ಷಣ ಪ್ರತಿಷ್ಠಾನದಿಂದಲೂ ಇಲ್ಲಿನ ಮಕ್ಕಳ ಶಿಕ್ಷಣ ಕಲಿಕೆಗೆ ಹೆಚ್ಚಿನ ಒತ್ತು ನೀಡಲು ಮುಂದಾಗಿದ್ದಾರೆ. ಪಾಟೀಲರು ಸಚಿವರಾಗಿದ್ದಾಗ ಸರ್ಕಾರ ಹೊರತುಪಡಿಸಿ, ಕೆಲವು ಸಂಘ-ಸಂಸ್ಥೆಗಳ ಮೂಲಕ ರೈತರಿಗಾಗಿ ಹಲವಾರು ಅತ್ಯುತ್ತಮ ಕಾರ್ಯ ಮಾಡಿದ್ದು, ನಿರಂತರ ಹೋರಾಟ, ಸಾಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆದಿದ್ದಾರೆ.
ಈ ಬಾರಿ ತಮ್ಮ 74ನೇ ಜನ್ಮದಿನವನ್ನು ಎಂಟು ಗ್ರಾಮಗಳ ದತ್ತು, ತಂದೆ-ತಾಯಿ ಹೆಸರಿನಲ್ಲಿ ಪ್ರತಿವರ್ಷ ಪ್ರದಾನ ಮಾಡುವ ಪ್ರಶಸ್ತಿಗಳನ್ನು ಉತ್ತಮ ಸಾಧಕರಿಗೆ ನೀಡಿ ಗೌರವಿಸುವ ಜತೆಗೆ ಹಲವು ಕಾರ್ಯಕ್ರಮ ನಡೆಸುತ್ತಿದ್ದಾರೆ.
ಅಸಹಾಯಕರಿಗೆ ಹೊಲಿಗೆ ಯಂತ್ರ: ಅಲ್ಲದೇ ಈ ಎಂಟು ಗ್ರಾಮಗಳ ವ್ಯಾಪ್ತಿಯ ಅಸಹಾಯಕ 74 ಜನ ಮಹಿಳೆಯರಿಗೆ ಹೊಲಿಗೆ ಯಂತ್ರ ಕೂಡ ವಿತರಿಸಲಾಗುತ್ತಿದೆ. ಆ ಮಹಿಳೆಯರು ಸ್ವಾವಲಂಬಿ ಬದುಕು ನಡೆಸಲು ನೆರವಾಗುವ ನಿಟ್ಟಿನಲ್ಲಿ ಹೊಲಿಗೆ ಯಂತ್ರ ವಿತರಿಸುವ ಜತೆಗೆ ಹೊಲಿಗೆ ತರಬೇತಿ ಕೂಡ ನೀಡಲಾಗಿದೆ. ಇದರಿಂದ ಆ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕೆ ನೆರವಾಗಲಿದೆ ಎಂಬುದು ಎಸ್. ಆರ್. ಪಾಟೀಲ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎನ್. ಪಾಟೀಲರ ಆಶಯ.
74 ಜನ ಅಸಹಾಯಕ ಮಹಿಳೆಯರಿಗೆ ಹೊಲಿಗೆ ಯಂತ್ರ, ಎಂಟು ಪುನರ್‌ವಸತಿ ಕೇಂದ್ರಗಳ ದತ್ತು ಸ್ವೀಕಾರದ ಜತೆಗೆ ಈ ಎಂಟೂ ಹಳ್ಳಿಗಳ ಜನರಿಗೆ ಉಚಿತವಾಗಿ ಆಯುರ್ವೇದ ವೈದ್ಯಕೀಯ ತಪಾಸಣೆ ಶಿಬಿರ ಕೂಡ ನಡೆಯಲಿದೆ.
ಅಬ್ಬೆ-ರೈತ ಪ್ರಶಸ್ತಿ: ಎಸ್.ಆರ್. ಪಾಟೀಲರ ತಾಯಿ ಈರಮ್ಮತಾಯಿ ರು. ಪಾಟೀಲ ಅವರ ಸ್ಮರಣಾರ್ಥ ಪ್ರತಿವರ್ಷ ನೀಡಲಾಗುವ ಅಬ್ಬೆ ಪ್ರಶಸ್ತಿಯನ್ನು ಈ ಬಾರಿ ಬಾಗಲಕೋಟೆ ತಾಲೂಕಿನ ಶಿರೂರಿನ ಗುರಮ್ಮ ಸಂಕಿನಮಠ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ಅಲ್ಲದೇ ತಂದೆ ರುದ್ರಗೌಡ ಪಾಟೀಲರ ಸ್ಮರಣಾರ್ಥ ನೀಡುವ ಪ್ರಗತಿಪರ ರೈತ ಪ್ರಶಸ್ತಿಯನ್ನು ಜಿಲ್ಲೆಯ ಅತ್ಯುತ್ತಮ ರೈತರಾದ ರಾಮಣ್ಣ ಸಿ. ವಾಲಿಕಾರ, ಹಣಮಂತ ಎಸ್. ಬುಗಡಿ ಅವರಿಗೆ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಗಳು ತಲಾ 1 ಲಕ್ಷ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿರುವುದು ವಿಶೇಷ.
ಈ ಎಲ್ಲ ಕಾರ್ಯಕ್ರಮಗಳಿಗೆ ಉತ್ತರ ಕರ್ನಾಟಕ ಭಾಗದ ವಿವಿಧ ಸ್ವಾಮೀಜಿಗಳು, ಪಕ್ಷಾತೀತವಾಗಿ ರಾಜಕೀಯ ಪ್ರಮುಖರು ಆಗಮಿಸಲಿದ್ದಾರೆ. ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನ ಮಠದ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಸಾನಿಧ್ಯ ಮತ್ತು ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಡಾ|ಎಂ. ವೀರಪ್ಪ ಮೊಯ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಒಟ್ಟಾರೆ, ಎಸ್.ಆರ್. ಪಾಟೀಲರ ಜನ್ಮದಿನ ಈ ಬಾರಿ ಹಲವು ರೀತಿಯ ಸಮಾಜಮುಖೀ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿದೆ.
ಶಿಕ್ಷಣ, ಸಹಕಾರ, ರಾಜಕೀಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ಎಸ್.ಆರ್. ಪಾಟೀಲರ ಜನ್ಮದಿನವನ್ನು ಬೆಂಬಲಿಗರು, ಅಭಿಮಾನಿಗಳು ಕೂಡಿಕೊಂಡು ವಿನೂತನವಾಗಿ ಆಚರಿಸುತ್ತಿದ್ದೇವೆ. ಪುನರ್‌ವಸತಿ ಕೇಂದ್ರಗಳ ದತ್ತು ಸ್ವೀಕಾರ ಈ ಬಾರಿಯ ವಿಶೇಷತೆ. ಇದೇ ವೇಳೆ ಪಾಟೀಲರ ತಂದೆ ಮತ್ತು ತಾಯಿಯವರ ಹೆಸರಿನಲ್ಲಿ ನೀಡುವ ರೈತ ಮತ್ತು ಅಬ್ಬೆ ಪ್ರಶಸ್ತಿ ಪ್ರದಾನ ಕೂಡ ನಡೆಯಲಿದೆ. ಅವರ ಅಭಿಮಾನಿಗಳು, ಬೆಂಬಲಿಗರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರುತ್ತೇನೆ. zಎಂ.ಎನ್. ಪಾಟೀಲ, ಕಾರ್ಯದರ್ಶಿ, ಎಸ್.ಆರ್. ಪಾಟೀಲ ಶಿಕ್ಷಣ ಪ್ರತಿಷ್ಠಾನ
–ವಿಶೇಷ ವರದಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.