ಸಿದ್ಧು ಜನ್ಮದಿನ ಆಚರಣೆಗೆ ದೇವನಗರಿ ಸಜ್ಜು
3ರಂದು ಶಾಮನೂರು ಅರಮನೆ ಮೈದಾನದಲ್ಲಿ ಅದ್ಧೂರಿ ಸಮಾರಂಭ; 8ರಿಂದ 10 ಲಕ್ಷ ಜನ ಭಾಗವಹಿಸುವ ನಿರೀಕ್ಷೆ
Team Udayavani, Aug 1, 2022, 3:21 PM IST
ದಾವಣಗೆರೆ: ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನದ ಪ್ರಯುಕ್ತ ಆ.3ರಂದು ಹಮ್ಮಿಕೊಂಡಿರುವ ಅಮೃತ ಮಹೋತ್ಸವಕ್ಕಾಗಿ ನಗರದ ಹೊರವಲಯದ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ 50 ಎಕರೆ ಪ್ರದೇಶದಲ್ಲಿರುವ ಶಾಮನೂರು ಅರಮನೆ ಮೈದಾನ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ.
ಅದ್ಧೂರಿ ಮತ್ತು ವಿಜೃಂಭಣೆಯಿಂದ ಆಚರಿ ಸುವ ಉದ್ದೇಶದಿಂದ ವೇದಿಕೆ, ಸಭಾಂಗಣ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಬಹುತೇಕ ಮುಕ್ತಾಯ ಹಂತದಲ್ಲಿದೆ. ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ನೀಡಿರುವ ಯೋಜನೆ, ಕಾರ್ಯಕ್ರಮಗಳನ್ನು ಜನರ ಮನೆ, ಮನಕ್ಕೆ ಮುಟ್ಟಿಸುವ ಉದ್ದೇಶದಿಂದ ಅಮೃತ ಮಹೋತ್ಸವವನ್ನು ವೇದಿಕೆಯನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ನಾಡಿನ ವಿವಿಧ ಭಾಗಗಳಲ್ಲಿ ಅಮೃತ ಮಹೋತ್ಸವದ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ. ಆಯಾ ಸಮಾಜಗಳ ಮುಖಂಡರು ತಮಗೆ ವಹಿಸಿರುವ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. 5ರಿಂದ 8 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಾಜ್ಯದ ವಿವಿಧ ಭಾಗಗಳಿಂದ 1 ಲಕ್ಷಕ್ಕೂ ಹೆಚ್ಚು ಕುರಿಗಾಹಿಗಳು ಭಾಗವಹಿಸುತ್ತಿರುವುದು ವಿಶೇಷ.
ಬೃಹತ್ ವೇದಿಕೆ ನಿರ್ಮಾಣ: ಶಾಸಕ ಡಾ| ಶಾಮನೂರು ಶಿವಶಂಕರಪ್ಪ ಒಡೆತನದ 50 ಎಕರೆಯ ಶಾಮನೂರು ಅರಮನೆ ಮೈದಾನದಲ್ಲಿ ಅಮೃತ ಮಹೋತ್ಸವವನ್ನು ಅವಿಸ್ಮರಣೀಯವಾಗಿ ಆಚರಿಸುವ ಉದ್ದೇಶದಿಂದ 80 ಜನರು ಕುಳಿತುಕೊಳ್ಳಬಹುದಾದ 50/142 ಅಡಿಯ ಬೃಹತ್ ವೇದಿಕೆ ನಿರ್ಮಾಣವಾಗಿದೆ. 3.5 ಲಕ್ಷದಷ್ಟು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅಮೃತ ಮಹೋತ್ಸವಕ್ಕೆ ಬರುವವರಿಗೆ ಮೈಸೂರು ಪಾಕ್, ಪುಲಾವ್, ಮೊಸರನ್ನ ಉಣಬಡಿಸಲು ಬೆಂಗಳೂರಿನ 2,500 ಅಡುಗೆ ಕೆಲಸಗಾರರು ಈಗಾಗಲೇ ಕೆಲಸ ಪ್ರಾರಂಭಿಸಿದ್ದಾರೆ. ಸುಮಾರು 400 ಕೌಂಟರ್‌ಗಳಲ್ಲಿ ಆಹಾರ ವಿತರಣೆಗೆ ವ್ಯವಸ್ಥೆ ಮಾಡಲಾಗುವುದು. ಕುಡಿಯುವ ನೀರಿಗಾಗಿ 200 ನಲ್ಲಿಗಳನ್ನು ಅಳವಡಿಸಲಾಗಿದೆ. ಗಣ್ಯರಿಗೆ ಪ್ರತ್ಯೇಕ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತಿದೆ.
ಅಮೃತ ಮಹೋತ್ಸವದ ಪ್ರತಿ ವ್ಯವಸ್ಥೆಯ ಬಗ್ಗೆ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಬಸವರಾಜ ರಾಯರಡ್ಡಿ, ಡಾ|ಎಚ್.ಸಿ.ಮಹದೇವಪ್ಪ ಪರಿಶೀಲನೆ ನಡೆಸುತ್ತಿದ್ದಾರೆ. ಆ.1ರಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಯಲಿದೆ. ಪ್ರಾರಂಭಿಕ ಹಂತದಲ್ಲಿ ಸಿದ್ದರಾಮೋತ್ಸವ ಆಚರಿಸಲಾಗುವುದು ಎನ್ನಲಾಗುತ್ತಿತ್ತು. ಕೆಲ ಕಾರಣದಿಂದ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಂಗವಾಗಿ ಅಮೃತ ಮಹೋತ್ಸವ ಆಚರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಭಾಗಿ: ಅಮೃತ ಮಹೋತ್ಸವದಲ್ಲಿ ಸ್ವತಃ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಭಾಗವಹಿಸುತ್ತಿದ್ದಾರೆ. ಹಾಗಾಗಿ ವೇದಿಕೆ ಮತ್ತು ಸಭಾಂಗಣ, ಅಕ್ಕಪಕ್ಕದ ಜಾಗ, ರಸ್ತೆಯಲ್ಲಿ ಈಗಿನಿಂದಲೇ ಭಾರೀ ಭದ್ರತೆ ಒದಗಿಸಲಾಗುತ್ತಿದೆ. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವೇದಿಕೆ ನಿರ್ಮಾಣದ ಜಾಗದಲ್ಲಿ ಹದ್ದಿನ ಕಣ್ಗಾವಲು ಇಟ್ಟಿದ್ದಾರೆ. ದಾವಣಗೆರೆ ನಗರದ ಹೊರ ವಲಯದಲ್ಲಿ ಅಮೃತ ಮಹೋತ್ಸವ ನಡೆಯುತ್ತಿರುವ ಕಾರಣಕ್ಕೆ ನಗರದ ಒಳಭಾಗದಲ್ಲಿ ಸಂಚಾರಿ ವ್ಯವಸ್ಥೆ ಮೇಲೆ ಅಷ್ಟೇನೂ ತೊಂದರೆ ಆಗುವುದಿಲ್ಲ. ಮೈದಾನದ ಅಕ್ಕಪಕ್ಕದಲ್ಲಿನ ಜಮೀನು, ಜಾಗಗಳಲ್ಲಿ ವಾಹನಗಳಿಗೆ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.
ಡಿಕೆಶಿ ಬರುವರೇ?
ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಿಶೇಷ ಕೋರ್ಟ್‌ನಲ್ಲಿ ವಿಚಾರಣೆ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜಾಮೀನು ಬಗ್ಗೆ ಆ.2ರಂದು ಮಧ್ಯಾಹ್ನ 3ಕ್ಕೆ ತೀರ್ಪು ಹೊರ ಬೀಳಲಿದೆ. ನ್ಯಾಯಾಲಯದ ತೀರ್ಪು ಆಧರಿಸಿ ಡಿ.ಕೆ.ಶಿವಕುಮಾರ್ ಅಮೃತ ಮಹೋತ್ಸವದಲ್ಲಿ ಭಾಗಹಿಸುವುದು ನಿರ್ಧಾರ ಆಗಲಿದೆ. ಹಾಗಾಗಿಯೇ ಅವರ ಹಾಜರಾತಿ ಸಾಕಷ್ಟು ಕುತೂಹಲ ಮೂಡಿಸಿದೆ.
ಮಳೆ ಅಡ್ಡಿ ಸಾಧ್ಯತೆ
ಹವಾಮಾನ ಇಲಾಖೆ ದಾವಣಗೆರೆ ಜಿಲ್ಲೆಯಲ್ಲಿ ಆ.2ರಿಂದ ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಯೆಲ್ಲೋ ಅಲರ್ಟ್ ಘೋಷಿಸಿದೆ. ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಳೆ ಅಡ್ಡಿಯಾಗುವ ಆತಂಕವೂ ಇದೆ. ವಾಟರ್ ಫ್ರೂಫ್ ವೇದಿಕೆ, ಸಭಾಂಗಣ ಸಿದ್ಧಮಾಡಿಕೊಂಡಿದ್ದರೂ ಮಳೆಯ ಭೀತಿ ತಪ್ಪಿಲ್ಲ.
●ರಾ.ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.