ಶ್ರೀಲಂಕಾ ಪ್ರಜೆಗಳ ಅಕ್ರಮ ಬಂಧನ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Team Udayavani, Aug 2, 2022, 5:30 AM IST
ಬೆಂಗಳೂರು: ಮಾನವ ಕಳ್ಳಸಾಗಾಣಿಕೆಯ ಸಂತ್ರಸ್ತರಾದ 38 ಮಂದಿ ಶ್ರೀಲಂಕಾ ಪ್ರಜೆಗಳನ್ನು ಅಕ್ರಮವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಬಂಧಿಸಿಟ್ಟಿರುವ ಪ್ರಕರಣದ ಕುರಿತು ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ವಿಚಾರವಾಗಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ್ ಶೆಟ್ಟಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.
ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಕೇಂದ್ರ ಸರ್ಕಾರದ ಗೃಹ ಸಚಿವಾಲಯ, ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ರಾಜ್ಯದ ಗೃಹ ಇಲಾಖೆ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.
ಮಂಗಳೂರು ನಗರದ “ಸೀಪೋರ್ಟ್ ಗೆಸ್ಟ್ ಹೌಸ್’ನಲ್ಲಿ 25 ಶ್ರೀಲಂಕಾ ಪ್ರಜೆಗಳು ಪಾಸ್‌ಪೋರ್ಟ್ ಹಾಗೂ ಇನ್ನಿತರೆ ಯಾವುದೇ ದಾಖಲೆಗಳಲ್ಲಿದೆ ಅನೇಕ ದಿನಗಳಿಂದ ವಾಸವಾಗಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಪೊಲೀಸರು 2021ರ ಜೂ.10ರಂದು ಈ 25 ಮಂದಿ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳು, ಪಾಸ್‌ಪೋರ್ಟ್ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದರು.
ಇವರೆಲ್ಲರೂ ಅಕ್ರಮವಾಗಿ ಭಾರತಕ್ಕೆ ನುಸಳಿದವರಲ್ಲ. ಕೆನಡಾದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಏಜೆನ್ಸಿಯೊಂದು ಇವರನ್ನು ಕಳ್ಳಸಾಗಾಣಿಕೆ ಮಾಡಲು ಪ್ರಯತ್ನಿಸಿತ್ತು. ಪ್ರಕರಣ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಎಫ್ಐಆರ್ ದಾಖಲಾದ ಶ್ರೀಲಂಕಾ ಪ್ರಜೆಗಳ ಹೆಸರನ್ನು ಆರೋಪ ಪಟ್ಟಿಯಿಂದ ಕೈಬಿಡುವಂತೆ ವಿಶೇಷ ಕೋರ್ಟ್ ಅವರನ್ನು ಸೆಂಟ್ರಲ್ ಜೈಲಿನಿಂದ ಡಿಟೆನ್ಷನ್ ಸೆಂಟರ್‌ಗೆ ಸ್ಥಳಾಂತರಿಸುವಂತೆ 2021ರ ಅ.30ರಂದು ಆದೇಶಿಸಿದೆ.
ಆದರೆ, ಇತೀಚಿಗೆ ಬೆಂಗಳೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಸೆಂಟ್ರಲ್ ಜೈಲಿಗೆ ಭೇಟಿ ಕೊಟ್ಟಾಗ ಎಫ್ಐಆರ್ ದಾಖಲಿಸಿದ 25 ಮಂದಿ ಸೇರಿದಂತೆ 38 ಶ್ರೀಲಂಕಾ ಪ್ರಜೆಗಳನ್ನು ಯಾವುದೇ ಅಪರಾಧ ಮಾಡದೆ ಅಕ್ರಮವಾಗಿ ಜೈಲಿನಲ್ಲಿಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. 38 ಮಂದಿ ಶ್ರೀಲಂಕಾ ಪ್ರಜೆಗಳನ್ನು ಜೈಲಿನಲ್ಲಿಟ್ಟಿರುವುದು ಕಾನೂನುಬಾಹಿರವಾಗಿದ್ದು, ವಿಶೇಷ ಕೋರ್ಟ್‌ನ ಆದೇಶ ಮತ್ತು ಮಾನವಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ತಕ್ಷಣ ಅವರನ್ನು ಜೈಲಿನಿಂದ ಡಿಟೆನÒನ್ ಸೆಂಟರ್‌ಗೆ ಸ್ಥಳಾಂತರಿಸುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮನವಿ ಮಾಡಿದ್ದಾರೆ.
ಮನವಿ ಏನು:
ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ತನಕ ಅವರನ್ನು ಇರಿಸಲು ರಾಜ್ಯದಲ್ಲಿ ಎಲ್ಲಾ ಮೂಲಸೌಕರ್ಯಗಳನ್ನು ಹೊಂದಿದ ಡಿಟೆನÒನ್ ಸೆಂಟರ್‌ಗಳನ್ನು ಸ್ಥಾಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಹೈಕೋರ್ಟ್ ನಿಗದಿಪಡಿಸಿದ ಕಾಲಮಿತಿಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಎನ್‌ಐಎ ವಿಶೇಷ ಕೋರ್ಟ್ 2021ರ ಅ.30ರಂದು ನೀಡಿರುವ ಆದೇಶದ ಪ್ರಕಾರ ಬೆಂಗಳೂರಿನಲ್ಲಿ ಡಿಟೆನ್ಷನ್ ಸೆಂಟರ್ ಸ್ಥಾಪಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಬೇಕು. 38 ಮಂದಿ ಶ್ರೀಲಂಕಾ ಪ್ರಜೆಗಳ ಹೇಳಿಕೆಯನ್ನು ತ್ವರಿತವಾಗಿ ದಾಖಲಿಸುವಂತೆ ಎನ್‌ಐಎ ವಿಶೇಷ ಕೋರ್ಟ್‌ಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.