ವರುಣನ ಪ್ರತಾಪ; ವಿವಿಧ ಜಿಲ್ಲೆಗಳಲ್ಲಿ ವರ್ಷ ಪ್ರಕೋಪಕ್ಕೆ ಸಿಲುಕಿ 11 ಮಂದಿ ಸಾವು
ಬೈಂದೂರು, ಶಿರೂರು, ಪ. ಘಟ್ಟದ ತಪ್ಪಲಿನಲ್ಲಿ ಭಾರೀ ಹಾನಿ
Team Udayavani, Aug 3, 2022, 6:35 AM IST
ಬೈಂದೂರು/ಸುಬ್ರಹ್ಮಣ್ಯ/ ಬೆಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉತ್ತರದ ತುದಿ ಬೈಂದೂರು- ಶಿರೂರು ಮತ್ತು ಪಶ್ಚಿಮ ತುದಿ ಸುಬ್ರಹ್ಮಣ್ಯ, ಹರಿಹರ, ಕಡಮಕಲ್ಲು, ಸಂಪಾಜೆಗಳಲ್ಲಿ ಹಠಾತ್ ಸುರಿದ ಭಾರೀ ಮಳೆಯಿಂದ ಜಲಸ್ಫೋಟದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಪಾರ ನಾಶ-ನಷ್ಟಕ್ಕೆ ಕಾರಣವಾಗಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಧಾರಾಕಾರ ಮಳೆಯಾಗಿದ್ದು, ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಒಟ್ಟು 11 ಮಂದಿ ಸಾವನ್ನಪ್ಪಿದ್ದಾರೆ.
ಬೈಂದೂರು-ಶಿರೂರು ಭಾಗದಲ್ಲಿ ಸೋಮ ವಾರ ತಡರಾತ್ರಿಯಿಂದ ಮಂಗಳವಾರ ಬೆಳಗ್ಗಿನ ವರೆಗೆ ಸತತ ಸುರಿದ ಮಳೆಯಿಂದಾಗಿ 10 ಕೋ.ರೂ.ಗೂ ಅಧಿಕ ನಷ್ಟ ಸಂಭವಿಸಿದೆ. ಅನೇಕ ಮನೆ, ದೋಣಿಗಳಿಗೆ ಹಾನಿಯಾಗಿದ್ದು, ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಕೊಲ್ಲಮೊಗ್ರು, ಹರಿಹರ: ಅಪಾರ ಹಾನಿ
ಪಶ್ಚಿಮ ಘಟ್ಟದ ತಪ್ಪಲಿನ ಕೊಲ್ಲಮೊಗ್ರು, ಹರಿಹರ ಪಳ್ಳತ್ತಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಸುರಿದ ಭಾರೀ ಮಳೆಯಿಂದ ಜಲಸ್ಫೋಟದಂತೆ ತೋಡು, ಹೊಳೆ, ನದಿಗಳು ಉಕ್ಕಿಹರಿದಿದ್ದು, ಬೃಹತ್ ಮರಗಳು ಉರುಳಿ ತೇಲಿಬಂದು ರಸ್ತೆ, ಸೇತುವೆಗಳು ನಾಶವಾಗಿವೆ. ಎರಡು ಅಂಗಡಿಗಳು ಕುರುಹೇ ಇಲ್ಲದಂತೆ ನೀರು ಪಾಲಾಗಿವೆ. ಈ ಭಾಗದಲ್ಲಿ 3 ಮನೆಗಳು ಸಂಪೂರ್ಣ ನಾಶ, 30ರಷ್ಟು ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ರೆಡ್ ಅಲರ್ಟ್
ರಾಜ್ಯಾದ್ಯಂತ ಮುಂದಿನ 4ರಿಂದ 5 ದಿನಗಳ ವರೆಗೆ ಭರ್ಜರಿ ಮಳೆಯಾಗಲಿದೆ. ಆ. 3ರಿಂದ 4 ದಿನ ಕರಾವಳಿ ಜಿಲ್ಲೆಗಳು ಹಾಗೂ ಆ. 4ರಿಂದ 3 ದಿನ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ.
ಭಟ್ಕಳ: ಗುಡ್ಡ ಕುಸಿದು ನಾಲ್ವರು ಸಾವು
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಅಸು ನೀಗಿ ದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿ ನಾಲ್ವರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಸ್ಥಳಕ್ಕೆ ಉತ್ತರ ಕನ್ನಡ ಜಿಲ್ಲಾಧಿ ಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಧಾವಿಸಿ ರಕ್ಷಣೆ ಮತ್ತು ಪರಿಹಾರ ಕಾರ್ಯಾ ಚರಣೆಯ ನೇತೃತ್ವ ವಹಿಸಿದ್ದರು.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಾದ್ಯಂತ ಸೋಮವಾರ ರಾತ್ರಿ ಗುಡುಗು, ಸಿಡಿಲು ಸಹಿತ ಸುರಿದ ಭಾರೀ ಮಳೆಗೆ ಯುವಕ ನೀರು ಪಾಲಾಗಿದ್ದಾನೆ. ಕುಣಿಗಲ್ ನಗರದ ರೈಲ್ವೇ ಅಂಡರ್ ಪಾಸ್ ಬಳಿ ಚಲಿಸುತ್ತಿದ್ದ ಕಾರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಕಾರು ಚಾಲಕ ರಮೇಶ್ ಪಾರಾಗಿದ್ದಾರೆ. ಶಿರಾ ತಾಲೂಕಿನ ದಾವೂದ್ ಪಾಳ್ಯ ಗ್ರಾಮದ ಸರಕಾರಿ ಶಾಲೆಯ ಶಿಕ್ಷಕ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿರುವ ವೇಳೆ ದ್ವಿಚಕ್ರ ವಾಹನ ಸಹಿತ ಕೊಚ್ಚಿಕೊಂಡು ಹೋಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದ್ದು, ಅಪಾರ ಪ್ರಮಾಣದಲ್ಲಿ ಕೃಷಿ ಭೂಮಿಗೆ ನೀರು ನುಗ್ಗಿ ಹಾನಿ ಉಂಟಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಕೊಡಲಕುಪ್ಪೆ ಗ್ರಾಮದ ಬಳಿ ನಾಲೆಯಲ್ಲಿ ವೃದ್ಧೆಯೊಬ್ಬರ ಶವ ತೇಲಿ ಬಂದಿದೆ. ಕೋಲಾರ ಜಿಲ್ಲೆಯಲ್ಲಿ ಕೂಡ ಧಾರಾಕಾರ ಮಳೆಯಾಗಿದೆ. ಜಿಲ್ಲೆಯ ಬಹುತೇಕ ಕೆರೆಗಳು ತುಂಬಿ ಹರಿದಿವೆ ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನಾಲ್ಕು ದಿನಗಳಿಂದ ಬಿರುಸಿನಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ಬೆಳೆ ನಾಶವಾಗಿದೆ. ಹುಣಸೂರಿನಲ್ಲಿ ಮಹಿಳೆಯೊಬ್ಬರು ನೀರುಪಾಲಾಗಿ ಮೃತಪಟ್ಟಿದ್ದಾರೆ. ಚಿಂಚೋಳಿಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ.
ಗಣಿನಾಡು ಬಳ್ಳಾರಿ – ವಿಜಯನಗರ ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಹೊಸಪೇಟೆಯ ಜಿ.ನಾಗಲಾಪುರ ಗ್ರಾಮದಲ್ಲಿ ತುಂಬಿ ಹರಿದ ಹಳ್ಳದಲ್ಲಿ ರೈತ ಕೊಚ್ಚಿ ಹೋಗಿ ದ್ದಾನೆ.
ಭಾರೀ ಮಳೆಗೆ ಕಾರಣವೇನು?
ಛತ್ತೀಸ್‌ಗಢದಿಂದ ದಕ್ಷಿಣಕ್ಕೆ ಮೇಲ್ಮೈ ಸುಳಿಗಾಳಿ ಇರುವುದು, ತಮಿಳುನಾಡಿನಿಂದ ಬಂಗಾಲಕೊಲ್ಲಿ ಕಡೆಗೆ ಆಂಧ್ರ ಕರಾವಳಿಯ ಮೂಲಕ ಮೇಲ್ಮೈ ಸುಳಿಗಾಳಿ ಬೀಸುತ್ತಿರುವುದು ಮತ್ತು ದಕ್ಷಿಣ ದ್ವೀಪದಲ್ಲಿ ಪೂರ್ವ ಮತ್ತು ಪಶ್ಚಿಮ ಎರಡೂ ದಿಕ್ಕುಗಳಲ್ಲಿ ಗಾಳಿ ಬೀಸುತ್ತಿರುವ ಕಾರಣ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪರಿಹಾರ ಕಾರ್ಯದಲ್ಲಿ ವಿಳಂಬ ಸಲ್ಲದು: ಸಿಎಂ ಸೂಚನೆ
ಮಳೆಯಿಂದ ಹಾನಿಗೀಡಾದ 11 ಜಿಲ್ಲೆಗಳ ಡಿ.ಸಿ.ಗಳ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿದರು.
ತುರ್ತು ಪರಿಹಾರ ಮತ್ತು ರಕ್ಷಣ ಕಾರ್ಯಾಚರಣೆಗಳಲ್ಲಿ ವಿಳಂಬವಾಗಬಾರದು ಎಂದು ಅವರು ಆದೇಶ ನೀಡಿದ್ದಾರೆ. ಮೈಸೂರು, ದಾವಣಗೆರೆ ಹಾಗೂ ಉಡುಪಿ ಜಿಲ್ಲೆಗಳಿಗೆ ಅಗತ್ಯ ಇರುವ ಹೆಚ್ಚುವರಿ ಅನುದಾನ ನೀಡಬೇಕು. ಕಾಳಜಿ ಕೇಂದ್ರಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳು ಇರುವ ಬಗ್ಗೆ ತಹಸೀಲ್ದಾರ್‌ಗಳು ಖಚಿತಪಡಿಸಿಕೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಮೇಲ್ವಿಚಾರಣೆ ನಡೆಸಬೇಕು ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.