ನ್ಯಾಷನಲ್ ಹೆರಾಲ್ಡ್ ಪ್ರಕರಣ: ಇ.ಡಿ. ಸಮನ್ಸ್‌ಗೆ ಖರ್ಗೆ ಕಿಡಿ
Team Udayavani, Aug 5, 2022, 6:20 AM IST
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ, ಪ್ರಧಾನ ಕಚೇರಿ ಜಪ್ತಿ, ಕಾಂಗ್ರೆಸ್‌ನ ಪ್ರಮುಖ ನಾಯಕರ ವಿಚಾರಣೆಗೆ ಸಮನ್ಸ್ ವಿಚಾರ ಗುರುವಾರ ಸಂಸತ್ ಅಧಿವೇಶನದಲ್ಲಿ ಭಾರೀ ಸದ್ದು ಮಾಡಿದೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರ ಸಚಿವ ಪಿಯೂಷ್ ಗೋಯಲ್ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಸರ್ಕಾರವು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷಗಳು ಗದ್ದಲವೆಬ್ಬಿಸಿದ್ದರಿಂದ ಕಲಾಪಗಳೂ ಮುಂದೂಡಲ್ಪಟ್ಟಿವೆ.
“ಮಧ್ಯಾಹ್ನ 12.30ಕ್ಕೆ ವಿಚಾರಣೆಗೆ ಹಾಜರಾಗಿ’ ಎಂದು ಜಾರಿ ನಿರ್ದೇಶನಾಲಯ ಕಳುಹಿಸಿರುವ ಸಮನ್ಸ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ರಾಜ್ಯಸಭೆಯಲ್ಲಿ ಮಾತನಾಡಿದ ಖರ್ಗೆ, “ಸಂಸತ್ ಅಧಿವೇಶನ ನಡೆಯುತ್ತಿದೆ. ನಾನು ಇಲ್ಲಿ ಪ್ರತಿಪಕ್ಷ ನಾಯಕ. ಅಧಿವೇಶನ ನಡೆಯುತ್ತಿರುವಾಗ ಸಮನ್ಸ್ ಕಳುಹಿಸುವುದು ಎಷ್ಟು ಸರಿ? ನಾನು ಕಾನೂನು ಪಾಲಿಸುವಾತ. ನಾನು ವಿಚಾರಣೆಗೆ ಹಾಜರಾಗುತ್ತೇನೆ. ಆದರೆ, ಇ.ಡಿ. ಈ ಸಮಯದಲ್ಲಿ ಸಮನ್ಸ್ ಕೊಡುವುದು ನ್ಯಾಯಸಮ್ಮತವೇ?’ ಎಂದು ಪ್ರಶ್ನಿಸಿದರು.
ಜತೆಗೆ, ಬುಧವಾರ ಸೋನಿಯಾ ಗಾಂಧಿ, ರಾಹುಲ್ ನಿವಾಸಕ್ಕೆ ಪೊಲೀಸರು ಘೇರಾವ್ ಹಾಕಿದ್ದಾರೆ. ಇದು ಹೀಗೇ ಮುಂದುವರಿದರೆ ನಮ್ಮ ಪ್ರಜಾಪ್ರಭುತ್ವ ಜೀವಂತವಾಗಿ ಉಳಿಯುತ್ತದೆಯೇ? ಅದು ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸಲು ಸಾಧ್ಯವೇ? ನಮ್ಮ ನೈತಿಕ ಸ್ಥೈರ್ಯ ಕುಂದಿಸಲೆಂದೇ ಉದ್ದೇಶಪೂರ್ವಕವಾಗಿ ಹೀಗೆಲ್ಲ ಮಾಡಲಾಗುತ್ತಿದೆ. ಆದರೆ ನಾವು ಹೆದರಲ್ಲ, ನಮ್ಮ ಹೋರಾಟ ಮುಂದುವರಿಯುತ್ತದೆ ಎಂದೂ ಖರ್ಗೆ ಆಕ್ರೋಶಭರಿತರಾಗಿ ನುಡಿದರು.
ನಾವು ಮೂಗುತೂರಿಸಲ್ಲ:
ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಸಭೆ ನಾಯಕ ಪಿಯೂಷ್ ಗೋಯಲ್, “ಜಾರಿ ನಿರ್ದೇಶನಾಲಯದ ಕಾರ್ಯದಲ್ಲಿ ನಾವು ಮೂಗುತೂರಿಸುವುದಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಾಗೆ ಮಾಡಿರಬಹುದು, ಆದರೆ ನಾವು ಮಾಡುವುದಿಲ್ಲ. ಯಾರು ಏನೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಖರ್ಗೆ ಅವರ ಆರೋಪ ಆಧಾರರಹಿತ. ಕಾಂಗ್ರೆಸ್ ನಾಯಕರು ತಪ್ಪಿಸಿಕೊಂಡು ಓಡಿ ಹೋಗುವ ಬದಲು ಕಾನೂನು ಪಾಲಿಸಲಿ’ ಎಂದು ಹೇಳಿದರು.
ಇಂದು ಪ್ರಧಾನಿ ನಿವಾಸಕ್ಕೆ ಮುತ್ತಿಗೆ :
ಬೆಲೆಯೇರಿಕೆ, ಜಿಎಸ್‌ಟಿ ಹೆಚ್ಚಳ ಖಂಡಿಸಿ ಪ್ರತಿಪಕ್ಷಗಳ ಸಂಸದರು ಶುಕ್ರವಾರ ಭಾರೀ ಪ್ರತಿಭಟನೆ ನಡೆಸಲು ಸಜ್ಜಾಗಿದ್ದು, ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಘೋಷಿಸಿದೆ. ಜತೆಗೆ,ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ಭವನಕ್ಕೆ ಪಾದಯಾತ್ರೆ ನಡೆಸಿ, ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದೆ. ನಿಷೇಧಾಜ್ಞೆ ಉಲ್ಲಂ ಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ನಾಯಕರಿಗೆ ದೆಹಲಿ ಪೊಲೀಸರು ಗುರುವಾರ ಎಚ್ಚರಿಕೆ ನೀಡಿದ್ದಾರೆ.
ಅಧಿವೇಶನ ನಡೆಯುತ್ತಿರುವಾಗ ಖರ್ಗೆ ಅವರಿಗೆ ಸಮನ್ಸ್ ಕಳುಹಿಸಿರುವುದು ಶಾಸನಸಭೆಗೆ ಮಾಡಿರುವ ಅವಮಾನ. “ಮೋದಿಶಾಹಿ’ ಈಗ ಮತ್ತಷ್ಟು ಕೀಳುಮಟ್ಟಕ್ಕೆ ಇಳಿಯುತ್ತಿದೆ. – ಜೈರಾಂ ರಮೇಶ್, ಕಾಂಗ್ರೆಸ್ ನಾಯಕ
ಕಾಂಗ್ರೆಸ್ ಮೊದಲು ಲೂಟಿ ಮಾಡಿ, ಈಗ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ. ಸೋನಿಯಾ, ರಾಹುಲ್ ಕಾನೂನಿಗಿಂತ ದೊಡ್ಡವರಲ್ಲ. ಕಾಂಗ್ರೆಸ್ ನಾಯಕರು ತನಿಖಾ ಸಂಸ್ಥೆಯನ್ನು ಬೆದರಿಸಲು ಯತ್ನಿಸುತ್ತಿದ್ದಾರೆ.– ಗೌರವ್ ಭಾಟಿಯಾ, ಬಿಜೆಪಿ ವಕ್ತಾರ
ಸ್ವಾತಂತ್ರ್ಯ ಹೋರಾಟದಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪಾತ್ರ ಮಹತ್ವದ್ದಾಗಿತ್ತು. ನನ್ನ ಸ್ವಂತ ಮನೆ ಆನಂದ್ ಭವನ್ ಮಾರಾಟ ಮಾಡುವ ಪರಿಸ್ಥಿತಿ ಬಂದರೂ ನಾನು ಹೆರಾಲ್ಡ್ ಕಚೇರಿ ಮುಚ್ಚುವುದಿಲ್ಲ ಎಂದು ನೆಹರೂ ಹೇಳಿದ್ದರು. ಅದನ್ನು ಉಳಿಸಿಕೊಳ್ಳಬೇಕಾದ್ದು ಕಾಂಗ್ರೆಸ್‌ನ ಕರ್ತವ್ಯ.– ವಿ.ಡಿ.ಸತೀಷನ್, ಕಾಂಗ್ರೆಸ್ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.