ಕರ್ನಾಟಕ ಏರೋಸ್ಪೇಸ್, ಜಲನೀತಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ
ರಕ್ಷಣಾ ನೀತಿಗೆ ಪೂರಕವಾಗಿ ಕರ್ನಾಟಕವನ್ನು ಏರೋಸ್ಪೇಸ್ ಹಬ್ ಮಾಡುವ ಗುರಿ
Team Udayavani, Aug 13, 2022, 7:05 AM IST
ಬೆಂಗಳೂರು: ಕರ್ನಾಟಕ ಏರೊಸ್ಪೇಸ್ ನೀತಿ ಹಾಗೂ ಕರ್ನಾಟಕ ಜಲ ನೀತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ರಕ್ಷಣಾ ನೀತಿಗೆ ಪೂರಕವಾಗಿ ರಾಜ್ಯವನ್ನು ಏರೋಸ್ಪೇಸ್ ಹಬ್ ಮಾಡುವುದು, ಪ್ರಸ್ತುತ ಹೆಲಿಕಾಪ್ಟರ್ ಮತ್ತು ವಿಮಾನ ತಯಾರಿ ವಲಯದಲ್ಲಿ ಶೇ.65, ಬಾಹ್ಯಾಕಾಶ ವಲಯದಲ್ಲಿ ಶೇ.25ರಷ್ಟಿರುವ ಪಾಲುದಾರಿಕೆಯನ್ನು ಹೆಚ್ಚಿಸುವುದು ಏರೋಸ್ಪೇಸ್ ನೀತಿಯ ಗುರಿಯಾಗಿದೆ.
ರಾಜ್ಯದಲ್ಲಿ ನೀರಿನ ಸಂಗ್ರಹ, ಬಳಕೆ, ಪೂರೈಕೆ, ಮಿತ ಬಳಕೆ ಒಳಗೊಂಡಂತೆ ನೀರು ನಿರ್ವಹಣೆ ಮಾಡುವುದು. ಪ್ರವಾಹ ಸಂದರ್ಭದಲ್ಲಿ ನೀರು ಹಿಡಿದಿಟ್ಟುಕೊಂಡು ಮರುಬಳಕೆ ಮಾಡುವ ಮಾರ್ಗೋಪಾಯ ಕಂಡು ಹಿಡಿಯುವುದು ಜಲ ನೀತಿಯ ಪ್ರಮುಖ ಉದ್ದೇಶವಾಗಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಕರ್ನಾಟಕ ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ-2027 ಅಡಿ ನಾಲ್ಕು ವಲಯ ರಚಿಸಿ ರಫ್ತು ಉತ್ತೇಜಿಸಿ, ವಿದ್ಯುತ್, ಭೂ ಪರಿವರ್ತನೆ, ನೋಂದಣಿ ಸಂಬಂಧದ ಅನುಮತಿ ಸೇರಿ ಅನೇಕ ರೀತಿಯ ಸಬ್ಸಿಡಿ ಉದ್ಯಮದಾರರಿಗೆ ಕೊಡಲಾಗುವುದು. 20ರಿಂದ 25 ಲಕ್ಷ ರೂ.ವರೆಗೆ ಸಬ್ಸಿಡಿ ದೊರೆಯಲಿದೆ ಎಂದು ಹೇಳಿದರು.
ಈ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಆತ್ಮನಿರ್ಭರ್ ಯೋಜನೆಯಡಿ ದೇಶೀಯ ಉತ್ಪಾದನೆಯತ್ತ ಗಮನಹರಿಸಲು ಹಾಗೂ ಈ ಕ್ಷೇತ್ರಕ್ಕೆ ಹೆಚ್ಚಿನ ಹೂಡಿಕೆ ಆಕರ್ಷಿಸಲು ಈ ನೀತಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
2022-27ನೇ ಅವಧಿಯಲ್ಲಿ 45 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಿಸುವ ಗುರಿ ಹೊಂದಲಾಗಿದೆ. ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ 200 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ 70 ಸಾವಿರ ರೂ.ವರೆಗೆ ವಿದ್ಯಾರ್ಥಿ ವೇತನ ನೀಡಿ ಏರೋಸ್ಪೇಸ್ ವಲಯದಲ್ಲಿ ಹೊಸ ಹೊಸ ಆವಿಷ್ಕಾರ, ಸಂಶೋಧನೆಗೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.
ಮಹಿಳಾ ಸ್ವಾಸ್ಥ್ಯ ಕೇಂದ್ರ
ರಾಜ್ಯದ ತಾಲೂಕು ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಪರೀಕ್ಷೆ ಹಾಗೂ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆಗಾಗಿ 128 ಕಡೆ ಮಹಿಳಾ ಸ್ವಾಸ್ಥ್ಯ ಕೇಂದ್ರ ಸ್ಥಾಪನೆಗೆ ಸಂಪುಟ ಒಪ್ಪಿದೆ. ಇದರಡಿ ಓರ್ವ ತಜ್ಞ ವೈದ್ಯರು ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಇರಲಿದ್ದು, ಪರೀಕ್ಷೆಗಾಗಿ ಪ್ರತ್ಯೇಕ ಕೊಠಡಿ ಹಾಗೂ ಚಿಕಿತ್ಸೆಗಾಗಿ ವ್ಯವಸ್ಥೆ ಇರಲಿದೆ. ಇದಕ್ಕಾಗಿ 22.40 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು.
ಕೆ.ಶಿಪ್, ಕೆಆರ್‌ಡಿಸಿಎಲ್ ಮತ್ತು ಲೋಕೋಪಯೋಗಿ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸಿದ್ದ 1,329.47 ಕಿ.ಮೀ. ರಸ್ತೆಗಳ ನವೀಕರಣ ಮತ್ತು ದುರಸ್ತಿಗೆ 440 ಕೋಟಿ ರೂ. ಒದಗಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಆಕಾಂಕ್ಷಿ ತಾಲೂಕು ಯೋಜನೆ
ಡಾ| ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಶಿಫಾರಸಿನಂತೆ ಪ್ರಾದೇಶಿಕ ಅಸಮತೋಲನ ನಿವಾರಿಸಲು ಜಾರಿಯಲ್ಲಿರುವ ವಿಶೇಷ ಅಭಿವೃದ್ಧಿ ಯೋಜನೆಯ ಕಾಲಾವಧಿ ಮುಗಿದಿರುವುದರಿಂದ ಹೊಸ ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳ ಯೋಜನೆ ನೀತಿ ಜಾರಿಗೆ ಸಂಪುಟ ತೀರ್ಮಾನಿಸಿದೆ. ಇದರಡಿ 93 ತಾಲೂಕುಗಳಲ್ಲಿ ಶಿಕ್ಷಣ, 100 ತಾಲೂಕುಗಳಲ್ಲಿ ಆರೋಗ್ಯ, 102 ತಾಲೂಕುಗಳಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಿಸಲು 3 ಸಾವಿರ ಕೋಟಿ ರೂ. ವೆಚ್ಚದಲ್ಲಿ ಫಲಿತಾಂಶ ಕೇಂದ್ರಿತ ಪ್ರಯತ್ನ ಮಾಡಲಾಗುವುದು ಎಂದರು.
ಜಲಜೀವನ್ ಮಿಷನ್ ಅಡಿ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯತ್ 16 ಗ್ರಾಮಗಳಿಗೆ ನೀರು ಪೂರೈಕೆಗೆ 18 ಕೋಟಿ ರೂ., ಬೆಳಗಾವಿ ತಾಲೂಕಿನ ಹಲಬಾವಿ ಸಹಿತ ಮೂರು ಗ್ರಾಮಗಳಿಗೆ ನೀರು ಪೂರೈಕೆಗೆ 30 ಕೋಟಿ ರೂ. ರಾಯಭಾಗ ತಾಲೂಕಿನ 4 ಗ್ರಾಮಗಳಿಗೆ 47 ಕೋಟಿ ರೂ., ಕಲಬುರಗಿ ಜಿಲ್ಲೆಯ ಅಫjಲಪುರ , ಚಿಂಚೋಳಿ ತಾಲೂಕುಗಳ 24 ಜನವಸತಿಗಳಿಗೆ ನೀರು ಪೂರೈಕೆಗೆ 31 ಕೋಟಿ ರೂ., ವಿಜಯಪುರ, ಬಸವನಬಾಗೇವಾಡಿಯ ಗ್ರಾಮೀಣ ಹಾಗೂ ಇಂಡಿ ಟೌನ್‌ನ ನಗರ ಭಾಗಗಳಿಗೆ ಕುಡಿಯುವ ನೀರು ಪೂರೈಕೆಗೆ ನಬಾರ್ಡ್ ನೆರವಿನ 2077 ಕೋಟಿ ರೂ. ಯೋಜನೆಯಡಿ ಕಾಮಗಾರಿ ಹಾಗೂ ಬಾಗಲಕೋಟೆಯ ಘಟಪ್ರಭಾ ಬಲದಂಡೆ ಕಾಲುವೆ ವ್ಯಾಪ್ತಿಯ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಕಲ್ಪಿಸಲು 411 ಕೋಟಿ ರೂ. ಮೊತ್ತದ ಆನವಾಲ ಏತ ನೀರಾವರಿ ಯೋಜನೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಏನಿದು ಜಲ ನೀತಿ?
ಜಲ ಸಂಪನ್ಮೂಲ ನಿರ್ವಹಣೆ ಸಮರ್ಪಕವಾಗಿ ಬಲಪಡಿಸಲು ಅಂತರ್-ವಿಭಾಗೀಯ ರಾಜ್ಯ ಜಲಸಂಪನ್ಮೂಲ ಪ್ರಾಧಿಕಾರವನ್ನು ರಚಿಸಲು ಹೊಸ ಜಲ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಜಲ ಸಂಪನ್ಮೂಲ ನಿರ್ವಹಣೆಯನ್ನು ಬಲಪಡಿಸಲು ವಿಧಾನಗಳ ನೀತಿ ಮತ್ತು ಸಾಂಸ್ಥಿಕ ಮೌಲ್ಯ ಮಾಪನಗಳನ್ನು ಸಕ್ರಿಯಗೊಳಿಸುವುದು, ನೀರು ಬಳಕೆದಾರರ ಮಹಾ ಮಂಡಳಿ, ಕೆರೆ ನೀರು ಬಳಕೆದಾರರ ಸಂಘ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಮಿತಿ, ಜಲಾನಯನ ಸಮಿತಿಗಳನ್ನು ಬಲಪಡಿಸಲು ನಿಯಮಿತವಾಗಿ ಸಭೆ ನಡೆಸಲು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಜಲ ನೀತಿ ಸಮಿತಿ ರಚನೆಯನ್ನೂ ಒಳಗೊಂಡಿದೆ. ಅಟಲ್ ಭೂ ಜಲ್ ಯೋಜನೆಯಡಿ ಅಂತರ್ಜಲ ನಿರ್ವಹಣೆ ಪಾಲ್ಗೊಳ್ಳುವಿಕೆ ಉತ್ತೇಜಿಸುವುದು, ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರು ಬಳಕೆಯಿಂದ ರಾಜ್ಯದಲ್ಲಿ ಹೆಚ್ಚಿನ ಜನ ಸಂಖ್ಯೆಗೆ ನೀರನ್ನು ಒದಗಿಸುವುದು ಹೊಸ ಜಲ ನೀತಿ 2021ರ ಉದ್ದೇಶವಾಗಿರುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಪ್ರಮುಖ ತೀರ್ಮಾನಗಳು
-ಕರ್ನಾಟಕ ರಾಜ್ಯ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ನಿಯಮ-2022 ಒಪ್ಪಿಗೆ
-ಕೆಎಸ್‌ಆರ್‌ಟಿಸಿಗೆ 650 ಬಸ್ ಖರೀದಿಗೆ 199.4 ಕೋಟಿ ರೂ., ಬಿಎಂಟಿಸಿಗೆ 846 ಬಸ್ ಖರೀದಿಗೆ 336 ಕೋಟಿ ರೂ. ಬಿಡುಗಡೆ
-ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 100 ಕೋಟಿ ರೂ.
-ಕೊಳೆಗೇರಿ ಅಭಿವೃದ್ಧಿ ಮಂಡಳಿ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ 90 ಕೋಟಿ ರೂ.
-ಹಾಸನದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ 20 ಕೋಟಿ ರೂ.
-ಬೆಂಗಳೂರು ದಕ್ಷಿಣ ತಾಲೂಕು ಕುರುಬರಹಳ್ಳಿಯಲ್ಲಿ ಜನಸೇವಾ ಟ್ರಸ್ಟ್‌ಗೆ 35.33 ಎಕ್ರೆ ಜಮೀನು
-ಬೆಗಳೂರು ನಗರ ಜಿಲ್ಲೆ ದಾಸನಪುರ ಹೋಬಳಿ ಕಮ್ಮಸಂದ್ರದಲ್ಲಿ ಉತ್ತರ ಕರ್ನಾಟಕ ಸಂಘ-ಸಂಸ್ಥೆಗಳ ಮಹಾಸಂಸ್ಥೆಗೆ 3.24 ಎಕ್ರೆ ಜಮೀನು.
-ಶ್ರೀಶೈಲದಲ್ಲಿ ಯಾತ್ರಿ ನಿವಾಸ ಸಂಕೀರ್ಣ ನಿರ್ಮಾಣಕ್ಕೆ 85 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.