ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಪ್ರಕರಣ: ಯುವಕ, ಯುವತಿ ವಿರುದ್ಧ ಕೇಸು
Team Udayavani, Aug 16, 2022, 6:50 AM IST
ಮಂಗಳೂರು: ಭದ್ರತೆ ಬಗ್ಗೆ ಸಂದೇಹ ಮತ್ತು ಆತಂಕ ಮೂಡಿಸುವಂತಹ ವಾಟ್ಸ್ ಆ್ಯಪ್ ಚಾಟಿಂಗ್ ನಡೆಸಿ ರವಿವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂದಲ ಸೃಷ್ಟಿಸಿದ್ದ ಯುವಕ ಮತ್ತು ಯುವತಿಯ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಡಿಗೋ ವಿಮಾನಯಾನ ಸಂಸ್ಥೆಯ ಮ್ಯಾನೇಜರ್ ನೀಡಿರುವ ದೂರಿನಂತೆ ದಿಪಯಾನ್ ಮಾಜಿ (23) ಮತ್ತು ಸಿಮ್ರಾನ್ ಟಾಮ್ (23) ವಿರುದ್ಧ ಭಾರತೀಯ ದಂಡ ಸಂಹಿತೆ 505 (1)(ಬಿ) ಮತ್ತು (ಸಿ)ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಯುವತಿ ಸಿಮ್ರಾನ್ ಟಾಮ್ ವಿಮಾನದೊಳಗಿದ್ದ ತನ್ನ ಗೆಳೆಯ ದಿಪಯಾನ್ ಮಾಜಿ ಎನ್ನುವಾತನಿಗೆ ಕಳುಹಿಸಿದ್ದ ವಾಟ್ಸ್ ಆ್ಯಪ್ ಸಂದೇಶದಲ್ಲಿ “ಬಾಂಬರ್’ ಎನ್ನುವ ಶಬ್ದವನ್ನು ಉಲ್ಲೇಖೀಸಿದ್ದಳು. ಅಲ್ಲದೆ ನಿರ್ದಿಷ್ಟ ಸಮುದಾಯದ ಬಗ್ಗೆಯೂ ಚಾಟ್ ಮಾಡಿದ್ದರು ಎಂದು ಮ್ಯಾನೇಜರ್ ದೂರಿನಲ್ಲಿ ತಿಳಿಸಿದ್ದಾರೆ.
ಇಬ್ಬರೂ ಉತ್ತರಪ್ರದೇಶದವರು
ದಿಪಯಾನ್ ಮಾಜಿ ಮತ್ತು ಸಿಮ್ರಾನ್ ಟಾಮ್ ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯವರಾಗಿದ್ದು, ಸ್ನೇಹಿತರಾಗಿದ್ದರು. ದಿಪಯಾನ್ ಮಾಜಿ ಮಣಿಪಾಲದಲ್ಲಿ ತಾಂತ್ರಿಕ ಶಿಕ್ಷಣ ಪೂರೈಸಿ ಪ್ರಸ್ತುತ ಗುಜರಾತ್‌ನ ವಡೋದರದಲ್ಲಿ ಉದ್ಯೋಗಿಯಾಗಿದ್ದಾನೆ.
ಸಿಮ್ರಾನ್ ಟಾಮ್ ಚೆನ್ನೈನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ದಿಪಯಾನ್ ಕೆಲವು ದಿನಗಳ ಹಿಂದೆ ಸಿಮ್ರಾನ್‌ಳನ್ನು ಮಣಿಪಾಲಕ್ಕೆ ಕರೆದುಕೊಂಡು ಬಂದಿದ್ದ. ರವಿವಾರ ಬೆಳಗ್ಗೆ ಇಬ್ಬರು ಕೂಡ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ದಿಪ ಯಾನ್ ಮುಂಬಯಿ ವಿಮಾನ, ಸಿಮ್ರಾನ್ ಬೆಂಗಳೂರು ವಿಮಾನದಲ್ಲಿ ಹೋಗುವ ವರಿದ್ದರು. ಅದರಂತೆ ದಿಪಯಾನ್ ಬೆಳಗ್ಗೆ 11 ಗಂಟೆಯ ಮುಂಬಯಿ ವಿಮಾನದಲ್ಲಿ ಕುಳಿತುಕೊಂಡಿದ್ದ. ಸಿಮ್ರಾನ್ ಬೆಂಗಳೂರು ವಿಮಾನಕ್ಕಾಗಿ ಕಾಯುತ್ತಿದ್ದಳು.
ಮುಂದುವರಿದ ವಿಚಾರಣೆ
ಯುವಕ ಮತ್ತು ಯುವತಿಯರ ವಾಟ್ಸ್ ಆ್ಯಪ್ ಸಂಭಾಷಣೆ ವಿಮಾನ ನಿಲ್ದಾಣದಲ್ಲಿ ಕೆಲವು ಹೊತ್ತು ಗೊಂದಲ ಸೃಷ್ಟಿಸಿತ್ತು. ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿತ್ತು. ಸಂದೇಶದಲ್ಲಿ ನಿರ್ದಿಷ್ಟ ಸಮುದಾಯವೊಂದರ ಬಗ್ಗೆ ತಪ್ಪು ಅಭಿಪ್ರಾಯ ಕೂಡ ಬಿಂಬಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಬ್ಬರ ವಿಚಾರಣೆ ಕೂಡ ಮುಂದುವರೆದಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
“ನೀನೊಬ್ಬ ಬಾಂಬರ್’ ಎಂದಿದ್ದಳು
ಇಬ್ಬರೂ ವಾಟ್ಸ್ ಆ್ಯಪ್ ಚಾಟಿಂಗ್ ನಡೆಸುತ್ತಿದ್ದರು. ಆಗ ಸಿಮ್ರಾನ್ “ನೀನೊಬ್ಬ ಬಾಂಬರ್’ ಎನ್ನುವುದಾಗಿ ಸಂದೇಶ ಕಳುಹಿಸಿದ್ದಳು. ಅಲ್ಲದೆ ಒಂದು ಸಮುದಾಯದ ಬಗ್ಗೆಯೂ ಉಲ್ಲೇಖಿಸಿದ್ದಳು. ಈ ವಾಟ್ಸ್ ಆ್ಯಪ್ ಸಂದೇಶವನ್ನು ದಿಪಯಾನ್‌ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೋರ್ವರು ಗಮನಿಸಿ ವಿಮಾನ ಸಿಬಂದಿಗೆ ತಿಳಿಸಿ ಆತಂಕ ವ್ಯಕ್ತಪಡಿಸಿದ್ದರು. ಹಾಗಾಗಿ ವಿಮಾನದ ಹಾರಾಟವನ್ನು ಮೊಟಕುಗೊಳಿಸಿ ಎಲ್ಲ 186 ಪ್ರಯಾಣಿಕರನ್ನು ಇಳಿಸಿ ತಪಾಸಣೆಗೊಳಪಡಿಸಲಾಯಿತು. ಅನಂತರ ಸಂಜೆ 5 ಗಂಟೆಗೆ ವಿಮಾನ ಮುಂಬಯಿಗೆ ತೆರಳಿತ್ತು. ದಿಪಯಾನ್ ಮತ್ತು ಸಿಮ್ರಾನ್‌ಳನ್ನು ವಿಮಾನ ನಿಲ್ದಾಣದ ಭದ್ರತೆ ನೋಡಿಕೊಳ್ಳುತ್ತಿರುವ ಸಿಐಎಸ್‌ಎಫ್ನವರು ಬಜಪೆ ಪೊಲೀಸರ ವಶಕ್ಕೆ ನೀಡಿದ್ದರು.
ಇಬ್ಬರಿಗೂ ವಿಮಾನಯಾನ ನಿಷೇಧ?
ಆತಂಕ ಮತ್ತು ಗೊಂದಲ ಸೃಷ್ಟಿಸಿ ವಿಮಾನ ಪ್ರಯಾಣ ಮತ್ತು ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದ ಹಿನ್ನೆಲೆಯಲ್ಲಿ ಯುವತಿ ಮತ್ತು ಯುವಕನಿಗೆ ವಿಮಾನಯಾನಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು ನಿಷೇಧ ಹೇರುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.