76ನೇ ಸ್ವಾತಂತ್ರ್ಯೋತ್ಸವ ದಿನ – ಎಲ್ಲೆಡೆಯೂ ಸಂಭ್ರಮ
ಗತ ವೈಭವದ ಅಜ್ಜರಕಾಡು ಮೈದಾನದಲ್ಲಿ ದೇಶ ಭಕ್ತಿಯ ಅನಾವರಣ...
Team Udayavani, Aug 16, 2022, 12:19 PM IST
ಉಡುಪಿ: ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಅಜ್ಜರಕಾಡಿ ನಲ್ಲಿರುವ ಮಹಾತ್ಮಗಾಂಧಿ ಮೈದಾನ ಸಂಭ್ರಮದಿಂದ ಕಳೆ ಕಟ್ಟಿತ್ತು. ನೂರು ಮೀಟರ್ ಉದ್ದದ ರಾಷ್ಟ್ರಧ್ವಜ ಹಿಡಿದು ಕ್ರೀಡಾಳುಗಳು ಮೈದಾನದಲ್ಲಿ ಸುತ್ತುತ್ತಿದ್ದಂತೆ, ಶಾಲಾ ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದರು. ವಂದೇ ಮಾತರಂ, ರಾಷ್ಟ್ರಗೀತೆ, ನಾಡಗೀತೆ ಗಾಯನವೂ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಧ್ವಜಾರೋಹಣ ನೆರವೇರಿಸಿ, ಗೌರವವಂದನೆ ಸ್ವೀಕರಿಸಿದರು. ಜಿಲ್ಲಾ ಸಶಸ್ತ್ರ ಮೀಸಲುಪಡೆಯ ಭೀಮನಗೌಡ ಕೆ. ಅವರ ನೇತೃತ್ವದಲ್ಲಿ ಪಥಸಂಚಲನ ನಡೆಯಿತು.
ಜಿಲ್ಲಾ ಶಸಸ್ತ್ರ ಮೀಸಲುಪಡೆ, ಗೃಹರಕ್ಷಕ ದಳ, ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಪೂರ್ಣಪ್ರಜ್ಞ ಕಾಲೇಜಿನ ಎನ್‌ಸಿಸಿ ಹುಡುಗರು, ಹುಡುಗಿಯರು, ಕರಾವಳಿ ಕಾವಲುಪಡೆ, ಕ್ರಿಶ್ಚಿಯನ್ ಹೈಸ್ಕೂಲ್‌ನ ಹುಡುಗರು, ಹುಡುಗಿಯರು, ಸೈಂಟ್ ಸಿಸಿಲೀಸ್ ಹೈಸ್ಕೂಲ್‌ನ ಹುಡುಗರು, ಹುಡುಗಿಯರು, ಪೊಲೀಸ್ ಬ್ಯಾಂಡ್, ಒಳಕಾಡು ಪ್ರೌಢಶಾಲೆ, ಡಾ| ಜಿ.ಶಂಕರ್ ಪ್ರಥಮದರ್ಜೆ ಕಾಲೇಜು, ಟೀಮ್ ನೇಷನ್ ಫಸ್ಟ್ ತಂಡವು ಪಥಸಂಚಲನದಲ್ಲಿ ಭಾಗವಹಿಸಿ, ಗಮನ ಸೆಳೆದರು.
ಇದೇ ವೇಳೆ ಸೇನಾಪೂರ್ವ 20 ದಿನಗಳ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಸಚಿವರು ಪ್ರೋತ್ಸಾಹ ನೀಡಿ, ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.
ವಳಕಾಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 150 ವಿದ್ಯಾರ್ಥಿಗಳು ವಂದೇ ಮಾತರಂ ಗೀತೆಗೆ ನೃತ್ಯ ಮಾಡಿದರು. ಮಾಧವ ಕೃಪಾ ಶಾಲೆಯ 100 ವಿದ್ಯಾರ್ಥಿಗಳ ತಂಡ ನಮೋ-ನಮೋ ಭಾರತಾಂಬೆ ಗೀತೆಯ ನೃತ್ಯರೂಪಕ ಪ್ರಸ್ತುತ ಪಡಿಸಿದರು. ಇಂದ್ರಾಳಿ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 100 ಮಕ್ಕಳ ತಂಡ ಭಾರತಿ ಅನ್ಕೋಂಕಿ ಸೀತಾರೆ ಗೀತೆಯ ಮೂಲಕ ಎಲ್ಲರ ಗಮನ ಸೆಳೆಯಿತು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಡಾ| ರೋಶನ್ ಕುಮಾರ್ ಶೆಟ್ಟಿ, ಕುದಿ ವಸಂತ ಶೆಟ್ಟಿ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.