ಪ್ರೌಢ ಮಕ್ಕಳಿಗಿಲ್ಲ ಮೊಟ್ಟೆ,ಬಾಳೆಹಣ್ಣು,ಚಿಕ್ಕಿ! ಸರಕಾರದ ತಾರತಮ್ಯ ನೀತಿಗೆ ಆಕ್ಷೇಪ
1 ರಿಂದ 8ನೇ ತರಗತಿ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ
Team Udayavani, Aug 22, 2022, 7:05 AM IST
ಕಾಪು: ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸರಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿ ವರೆಗಿನ ಮಕ್ಕಳಿಗೆ ವಾರಕ್ಕೆ 2 ದಿನ ಮೊಟ್ಟೆ, ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು, ನೆಲಗಡಲೆಯ ಚಿಕ್ಕಿ ವಿತರಿಸುತ್ತಿವೆ. ಆದರೆ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳನ್ನು ಯೋಜನೆಯಿಂದ ಕೈಬಿಟ್ಟಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಎರಡು ವಾರಗಳ ಹಿಂದೆ ಆರಂಭವಾದ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯನ್ನು ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರುವ ಮುನ್ನವೇ ಯೋಜನೆಯ ಬಗ್ಗೆ ಅಪಸ್ವರ ಎದ್ದಿದೆ. 9 ಮತ್ತು 10ನೇ ತರಗತಿಯ ಮಕ್ಕಳನ್ನು ಹೊರಗಿಟ್ಟಿರುವುದು ವಿದ್ಯಾರ್ಥಿಗಳಲ್ಲಿ ಭಾರೀ ನಿರಾಸೆಗೆ ಕಾರಣವಾಗಿದೆ.
ಪ್ರತೀ ವಿದ್ಯಾರ್ಥಿಗೆ 6 ರೂ. ವೆಚ್ಚ
ಈ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಲಾಗಿದ್ದು ಕೇಂದ್ರ ಸರಕಾರ ಶೇ. 60, ರಾಜ್ಯ ಸರಕಾರ ಶೇ. 40 ಅನುದಾನವನ್ನು ಭರಿಸಲಿದೆ. ಶೈಕ್ಷಣಿಕ ಸಾಲಿನ 46 ದಿನ ವಾರಕ್ಕೆ 2 ಮೊಟ್ಟೆ, ಅಥವಾ 2 ಬಾಳೆ ಹಣ್ಣು ಇಲ್ಲವೇ ನೆಲಕಡಲೆ, ಏಲಕ್ಕಿ ಮತ್ತು ಬೆಲ್ಲದಿಂದ ತಯಾರಿಸಿದ ಚಿಕ್ಕಿಯನ್ನು ವಿತರಿಸಲಾಗುತ್ತದೆ. ಇದಕ್ಕಾಗಿ ಪ್ರತೀ ವಿದ್ಯಾರ್ಥಿಗೆ ದಿನವೊಂದಕ್ಕೆ 6 ರೂ. – ವಾರ್ಷಿಕ 280 ರೂ. ಖರ್ಚಾಗಲಿದೆ. ಎಸ್‌ಡಿಎಂಸಿ ಮತ್ತು ಶಿಕ್ಷಕರಿಗೆ ಇದರ ಹೊಣೆ ವಹಿಸಲಾಗಿದೆ ಎಂದು ಉಡುಪಿ ಜಿ.ಪಂ. ಅಕ್ಷರ ದಾಸೋಹ ವಿಭಾಗದ ಅಧಿಕಾರಿ ವಿವೇಕಾನಂದ ಗಾಂವ್ಕರ್ ತಿಳಿಸಿದ್ದಾರೆ.
ಶಿಕ್ಷಕರಿಗೆ ಸಂಕಷ್ಟ
ಸರಕಾರಿ, ಅನುದಾನಿತ ಪ್ರೌಢ ಶಾಲೆಗಳಲ್ಲಿ 1ರಿಂದ 7 ಮತ್ತು 8, 9, 10ನೇ ತರಗತಿಗಳು ಜತೆಗೇ ಇದ್ದು ಸರಕಾರದ ನಿಯಮಾವಳಿಯಿಂದಾಗಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ನಡುವೆ ತಾರತಮ್ಯ ಎಸಗುತ್ತಿದ್ದೇವೆ ಎಂಬ ಅಪರಾಧಿ ಭಾವ ಶಿಕ್ಷಕರನ್ನು ಕಾಡುತ್ತಿದೆ. 1ರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳು ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ತಿನ್ನುತ್ತಿದ್ದರೆ 9 ಮತ್ತು 10ನೇ ತರಗತಿಯ ಮಕ್ಕಳು ಆಸೆಗಣ್ಣುಗಳಿಂದ ನೋಡುವಾಗ ಶಿಕ್ಷಕರ ಮನಸ್ಸು ಮರುಗುತ್ತದೆ.
ಸರಕಾರದ ಯೋಜನೆ ಉಪಯುಕ್ತವಾಗಿದೆ. ಆದರೆ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳನ್ನು ಹೊರಗಿಟ್ಟಿರುವುದು ಸರಿಯಲ್ಲ; ಸರಕಾರ ಅವರಿಗೂ ವಿತರಿಸಬೇಕು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆಗ್ರಹಿಸಿದ್ದಾರೆ.
ರಾಜ್ಯ ಸರಕಾರದ ನಿಯಮದಂತೆ 1ರಿಂದ 7ನೇ ತರಗತಿ ಪ್ರಾಥಮಿಕ ವಿಭಾಗದಲ್ಲಿದ್ದು ಈ ಮಕ್ಕಳಿಗೆ ಮೊಟ್ಟೆ, ಬಾಳೆ ಹಣ್ಣು ಮತ್ತು ಚಿಕ್ಕಿ ವಿತರಿಸಲಾಗುತ್ತಿದೆ. ಆರ್‌ಟಿಇ ಪ್ರಕಾರದಲ್ಲಿ 8ನೇ ತರಗತಿ ಕೂಡ ಪ್ರಾಥಮಿಕ ವಿಭಾಗದಲ್ಲಿ ಇರುವುದರಿಂದ ಆ ಮಕ್ಕಳಿಗೂ ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗುತ್ತಿದೆ. ಎಲ್ಲರಿಗೂ ಮೊಟ್ಟೆ ಅಥವಾ ಪೌಷ್ಟಿಕಾಂಶಯುತ ಆಹಾರ ಪೂರೈಕೆ ಕಷ್ಟ ಸಾಧ್ಯ. ಈ ಬಗ್ಗೆ ಮುಂದೆ ಯೋಚಿಸಲಾಗುವುದು.
– ಬಿ.ಸಿ. ನಾಗೇಶ್, ಶಿಕ್ಷಣ ಸಚಿವರು
-ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.