500 ಕೋಟಿ ಚೀನ ಲೋನ್ ಜಾಲ ಬಯಲಿಗೆ; ದೆಹಲಿ ಪೊಲೀಸರ ಕಾರ್ಯಾಚರಣೆ
100ಕ್ಕೂ ಅಧಿಕ ಆ್ಯಪ್ ಗಳಿಂದ ಕಾರ್ಯಾಚರಣೆ; 2 ತಿಂಗಳಿಂದ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಕಾರ್ಯಾಚರಣೆ: 22 ಬಂಧನ
Team Udayavani, Aug 22, 2022, 7:30 AM IST
ನವದೆಹಲಿ: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ “ಕ್ಷಣಮಾತ್ರದಲ್ಲಿ ಸಾಲ’ ನೀಡಿ ಗ್ರಾಹಕರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಜಾಲವನ್ನು ದೆಹಲಿ ಪೊಲೀಸರು ಬೇಧಿಸಿದ್ದಾರೆ. ಚೀನದ ನಂಟಿರುವ 500 ಕೋಟಿ ರೂ. ಮೊತ್ತದ ಇನ್‌ಸ್ಟೆಂಟ್ ಲೋನ್ ಆ್ಯಪ್ ಹಗರಣವನ್ನು ಅವರು ಬಯಲಿಗೆಳೆದಿದ್ದಾರೆ.
ಜತೆಗೆ, ಪ್ರಕರಣ ಸಂಬಂಧ ಕಳೆದ 2 ತಿಂಗಳಿಂದೀಚೆಗೆ ಒಟ್ಟಾರೆ 22 ಮಂದಿಯನ್ನು ಬಂಧಿಸಲಾಗಿದೆ.
ಹಣದ ತುರ್ತು ಅವಶ್ಯಕತೆ ಇದ್ದವರಿಗೆ ಆ್ಯಪ್ ಮೂಲಕ ಕ್ಷಣಮಾತ್ರದಲ್ಲಿ ಸಾಲ ನೀಡಿ, ಸಾಲದ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದ ಮೇಲೂ, ಗ್ರಾಹಕರ ಬೆತ್ತಲೆ ಫೋಟೋಗಳನ್ನು ಕಳುಹಿಸಿ ಹೆಚ್ಚಿನ ಹಣಕ್ಕಾಗಿ ಬೆದರಿಕೆಯೊಡ್ಡಲಾಗುತ್ತಿದೆ ಎಂದು ಹಲವರು ದೂರು ನೀಡಿದ್ದರು. ಈ ಹಿನ್ನೆಲೆ ತನಿಖೆ ಆರಂಭಿಸಿದ ಪೊಲೀಸರು, ಇಂತದ 100ಕ್ಕೂ ಹೆಚ್ಚು ಆ್ಯಪ್ ಗಳನ್ನು ಪತ್ತೆಹಚ್ಚಿದರು. ಜತೆಗೆ, ಗ್ರಾಹಕರನ್ನು ಬೆದರಿಸಿ ಪಡೆದ ಹಣವನ್ನು ಹವಾಲಾ ಹಾಗೂ ಕ್ರಿಪ್ಟೋ ಮೂಲಕ ಚೀನಾಗೆ ರವಾನಿಸುತ್ತಿರುವುದನ್ನೂ ಕಂಡುಹಿಡಿದಿದ್ದಾರೆ. ಈ ಜಾಲವು 3 ಸಾವಿರ ಕೋಟಿ ರೂ.ಗಳನ್ನು ಈ ಆ್ಯಪ್ ಮೂಲಕ ಸಂಗ್ರಹಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಬ್ಲ್ಯಾಕ್‌ಮೇಲ್ ಹೇಗೆ?
– ಆ್ಯಪ್ ಡೌನ್‌ಲೋಡ್ ಆದ ಬಳಿಕ ಬಳಕೆದಾರನ ಸಂಪರ್ಕ ಸಂಖ್ಯೆಗಳು, ಚಾಟ್, ಫೋಟೋಗಳನ್ನು ಈ ಆ್ಯಪ್ ಚೀನಾದಲ್ಲಿರುವ ಸರ್ವರ್‌ಗೆ ರವಾನಿಸುತ್ತದೆ.
– ನಂತರ ಬೇರೆ ಬೇರೆ ದೂರವಾಣಿ ಸಂಖ್ಯೆಗಳಿಂದ ಗ್ರಾಹಕರಿಗೆ ಕರೆ ಮಾಡಿ, ಹೆಚ್ಚಿನ ಮೊತ್ತ ಪಾವತಿಸುವಂತೆ ಬೆದರಿಕೆ ಹಾಕಲಾಗುತ್ತದೆ.
– ಫೋಟೋಗಳನ್ನು ತಿರುಚಿ ಗ್ರಾಹಕನ ಕುಟುಂಬ ಸದಸ್ಯರು, ಸ್ನೇಹಿತರಿಗೆ ಕಳುಹಿಸಿ ಬೆದರಿಕೆ ಹಾಕಲಾಗುತ್ತದೆ.
– ಸಾಮಾಜಿಕ ಭೀತಿ ಹಾಗೂ ಮರ್ಯಾದೆಗೆ ಅಂಜಿ ಅನೇಕರು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಣವನ್ನು ರವಾನಿಸಲು ಆರಂಭಿಸುತ್ತಾರೆ.
ಲೆಕ್ಕ ಪರಿಶೋಧಕರಿಗೆ ನೋಟಿಸ್ ಜಾರಿ?:
ಲೋನ್ ಆ್ಯಪ್ ಹಗರಣ ಬಯಲಿಗೆ ಬಂದ ಬೆನ್ನಲ್ಲೇ, ದೇಶದ ಹಲವು ಚಾರ್ಟರ್ಡ್ ಅಕೌಂಟೆಂಟ್‌ಗಳು, ಕಂಪನಿ ಸೆಕ್ರೆಟರಿಗಳು ಮತ್ತು ಕಾಸ್ಟ್ ಅಕೌಂಟೆಂಟ್‌ಗಳಿಗೆ ತನಿಖೆಯ ಬಿಸಿ ಮುಟ್ಟುವ ಸಾಧ್ಯತೆಯಿದೆ. ಭಾರತದಲ್ಲಿ ಚೀನದ ಕಂಪನಿಗಳು ಮತ್ತು ಅವುಗಳ ಅಂಗಸಂಸ್ಥೆಗಳ ಸ್ಥಾಪನೆ ವಿಚಾರದಲ್ಲಿ ಕಂಪನಿ ಕಾನೂನನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಇವರೆಲ್ಲರಿಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ. ಈ ಬಗ್ಗೆ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಿಂದ ಸೂಚನೆ ರವಾನೆಯಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.