ಚಿಕ್ಕಬಳ್ಳಾಪುರ ಜಿಲ್ಲೆಗೆ 16 ವರ್ಷದ ಸಂಭ್ರಮ
Team Udayavani, Aug 23, 2022, 4:28 PM IST
ಚಿಕ್ಕಬಳ್ಳಾಪುರ: ಅಖಂಡ ಕೋಲಾರ ಜಿಲ್ಲೆಯಿಂದ ಬೇರ್ಪಟ್ಟು ಉದಯವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆ ತನ್ನ 15 ವಸಂತಗಳನ್ನು ಪೂರೈಸಿ 16ನೇ ವರ್ಷದ ಸಂಭ್ರಮ ಜಿಲ್ಲಾದ್ಯಂತ ಮನೆ ಮಾಡಿದೆ.
ಈ 15 ವರ್ಷಗಳ ಅವಧಿಯಲ್ಲಿ ವಿಭಿನ್ನ ಸರ್ಕಾರಗಳು ಅಧಿಕಾರ ನಡೆಸಿದರೂ ಜಿಲ್ಲೆಯು ಅನೇಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ. ಆದರೂ, ಸಹ ನಿರೀಕ್ಷಿತ ಪ್ರಮಾಣದಲ್ಲಿ ಜಿಲ್ಲೆಯ ಅಭಿವೃದ್ಧಿ ಆಗಿಲ್ಲ ಎಂಬ ಕೊರಗು ಸಹ ಜಿಲ್ಲೆಯ ಜನರನ್ನು ಕಾಡುತ್ತಿದೆ.
ಬೆಂಗಳೂರು ನಗರಕ್ಕೆ ಮತ್ತು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆ ಬೆಂಗಳೂರಿಗೆ ಪರ್ಯಾಯ ಅಭಿವೃದ್ಧಿ ಹೊಂದುತ್ತದೆ ಎಂಬ ನಿರೀಕ್ಷೆ ಹುಟ್ಟಿಕೊಂಡರೂ ಜಿಲ್ಲಾ ಕೇಂದ್ರವಾಗಿರುವ ಚಿಕ್ಕಬಳ್ಳಾಪುರ ಇನ್ನೂ ಹಲವು ರೀತಿ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಎಂದಾಕ್ಷಣ ರೇಷ್ಮೆ ಮತ್ತು ಹೈನುಗಾರಿಕೆ ಅದರ ಜೊತೆಗೆ ಹೂ ಹಣ್ಣು ಮತ್ತು ತರಕಾರಿ ಉತ್ಪಾದನೆ ನೆನಪಾಗುತ್ತದೆ. ಸತತ ಬರಗಾಲದಿಂದ ತತ್ತರಿಸುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2 ವರ್ಷಗಳಿಂದ ಸುರಿಯುತ್ತಿರುವ ಮಳೆ, ಕೆ.ಸಿ.ವ್ಯಾಲಿ ನೀರು, ಏತ ನೀರಾವರಿಯಿಂದಾಗಿ ಹಂತಹಂತವಾಗಿ ಅಂತರ್ಜಲಮಟ್ಟ ವೃದ್ಧಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಗೆ ಎಚ್‌ಎನ್ ವ್ಯಾಲಿ ಯೋಜನೆಯನ್ನು ರೂಪಿಸಿ ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಹರಿಸಿದ ಪರಿಣಾಮ ಜಿಲ್ಲೆಯ ಸುಮಾರು 45 ಕೆರೆಗಳಿಗೆ ನೀರು ಹರಿದಿದೆ.
ಕುಂಠಿತವಾಗಿ ಸಾಗುತ್ತಿರುವ ಎತ್ತಿನಹೊಳೆ: ನೀರಾವರಿ ಸೌಲಭ್ಯಕ್ಕಾಗಿ ಎತ್ತಿನಹೊಳೆ ಯೋಜನೆ ಕಾಮಗಾರಿ ಆಮೇಗತಿಯಲ್ಲಿ ಸಾಗುತ್ತಿದ್ದು, ಇದರಿಂದ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಕನಸಾಗಿಯೇ ಉಳಿದಿದೆ. ಸಚಿವ ಡಾ.ಕೆ.ಸುಧಾಕರ್ ವಿಶೇಷ ಕಾಳಜಿ ವಹಿಸಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆಸಕ್ತಿ ವಹಿಸಿದ್ದಾರೆ. ಜತೆಗೆ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಕನಸು ಕಂಡು ಅದನ್ನು ಪೂರ್ಣಗೊಳಿಸಲು ಶ್ರಮವಹಿದ್ದಾರೆ.
ಚಿಮುಲ್ ಸ್ಥಾಪನೆ: ಕೋಲಾರಕ್ಕಿಂತ ಚಿಕ್ಕಬಳ್ಳಾಪುರದಲ್ಲಿ ಹೆಚ್ಚು ಹಾಲು ಉತ್ಪಾದನೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಿದ ಡಾ.ಕೆ.ಸುಧಾಕರ್ ಸರ್ಕಾರದಲ್ಲಿ ಸತತವಾಗಿ ಪ್ರಯತ್ನ ಮಾಡಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟವನ್ನು ಸ್ಥಾಪಿಸಿದ್ದಾರೆ.
45 ಸಾವಿರ ಜನರಿಗೆ ನಿವೇಶನ ಭಾಗ್ಯ: ಜಿಲ್ಲೆಯಲ್ಲಿ ನಿವೇಶನ ರಹಿತರನ್ನು ಗುರುತಿಸಿ ಅವರಿಗೆ ನಿವೇಶನ ನೀಡುವ ಸಲುವಾಗಿ ಹಿಂದಿನ ಜಿಲ್ಲಾಧಿಕಾರಿ ಆರ್. ಲತಾ ಅವರು ವಿಶೇಷ ಆಸಕ್ತಿ ವಹಿಸಿ ಸುಮಾರು 45 ಸಾವಿರ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಮೊದಲಿಗೆ ಸರ್ಕಾರಿ ಜಾಗವನ್ನು ಕಾಯ್ದರಿಸಿ ಗಮನ ಸೆಳೆದಿದ್ದರು. ಸರ್ಕಾರಿ ಸೇವೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಸಕಾಲ ಯೋಜನೆ ಮೂಲಕ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಸತತವಾಗಿ 50 ಬಾರಿ ಪ್ರಥಮ ಸ್ಥಾನದಲ್ಲಿಯೇ ಉಳಿಯುವಂತೆ ಮಾಡಿದರು.
ಥೀಮ್ ಪಾರ್ಕ್ ನಿರ್ಮಾಣ: ಜಿಲ್ಲೆಯ ಕಂದವಾರ ಕೆರೆಯಲ್ಲಿ ಕೆಆರ್‌ಎಸ್ ಮಾದರಿಯಲ್ಲಿ ಥೀಮ್ ಪಾರ್ಕ್ ಮಾಡಲು ಈಗಾಗಲೇ ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿಯು ಸಹ ಪ್ರಗತಿಯಲ್ಲಿದೆ. ಜಿಲ್ಲೆಯ ನಂದಿಗಿರಿಧಾಮದಲ್ಲಿ ಸುಮಾರು 93 ಕೋಟಿ ರೂಗಳ ವೆಚ್ಚದಲ್ಲಿ ರೋಪ್ ವೇ ನಿರ್ಮಾಣಕ್ಕೆ ಚಿಂತಿಸಲಾಗಿದೆ.
ಕೈಗಾರಿಕೆ ಭಾಗ್ಯವಿಲ್ಲ: ಬೆಂಗಳೂರಿಗೆ ಸಮೀಪವಿರುವ ನಗರವನ್ನು ಉಪಗ್ರಹ ನಗರವನ್ನಾಗಿ ಮಾಡಲು ಘೋಷಣೆ ಮಾಡಲಾಗಿದೆ ಹೊರತು ಈ ಕುರಿತ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಸಚಿವ ಸುಧಾಕರ್ ಮಾದರಿ ಜಿಲ್ಲೆಯನ್ನು ಮಾಡುವ ಸಂಕಲ್ಪ ಮಾಡಿದ್ದಾರೆ. ಜಿಲ್ಲೆಯಲ್ಲಿ ಹೂ ಹಣ್ಣು ತರಕಾರಿ ಉತ್ಪಾದನೆ ಆದರೂ ಸಹ ಅದನ್ನು ಸಂರಕ್ಷಣೆ ಮಾಡುವ ಸಲುವಾಗಿ ರೈತರಿಗೆ ಅನುಕೂಲ ಕಲ್ಪಿಸಲು ಕೋಲ್ಡ್ ಸ್ಟೋರೇಜ್‌ಗಳ ಸೌಲಭ್ಯವಿಲ್ಲದಂತಾಗಿದೆ. ಕೃಷಿ ಇಲಾಖೆಯ ಮೂಲಕ ಕೋಲ್ಡ್ ಸ್ಟೋರೇಜ್ ಸೆಂಟರ್ ಮಾಡಲು ಈಗ ಪ್ರಯತ್ನಗಳು ಪ್ರಾರಂಭವಾಗಬೇಕಿದೆ.
ಜಿಲ್ಲೆಯಲ್ಲಿ ಈಗಾಗಲೇ 8 ಮಂದಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ ಅದರಲ್ಲಿ ಪ್ರಮುಖವಾಗಿ ದಿವಂಗತ ಪ್ರೊ ಮುಮ್ತಾಜ್ ಅಲೀಖಾನ್ ತಮ್ಮ ಕಾರ್ಯವೈಖರಿಯ ಮೂಲಕ ಜಿಲ್ಲೆಯ ಪ್ರಗತಿಗೆ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ಅಲ್ಲದೆ ಅಲಂಗೂರು ಶ್ರೀನಿವಾಸ್, ನಾರಾಯಣಸ್ವಾಮಿ, ಶೋಭ ಕರಂದ್ಲಾಜೆ, ವೆಂಕಟರವಣಪ್ಪ, ದಿನೇಶ್ ಗುಂಡೂರಾವ್, ರೋಶನ್ ಬೇಗ್, ರಾಮಲಿಂಗಾರೆಡ್ಡಿ, ಎನ್‌ಹೆಚ್ ಶಿವಶಂಕರರೆಡ್ಡಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಸುಬೋಧ್ ಯಾದವ್ ಪ್ರಥಮ ಜಿಲ್ಲಾಧಿಕಾರಿ: ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ದಿಗೆ ಪ್ರಥಮ ಡೀಸಿ ಸುಬೋಧ್ ಯಾದವ್, ನಂತರ ಅನುಕ್ರಮವಾಗಿ ಅನ್ವರ್ ಪಾಷ, ಡಾ.ಮಂಜುಳಾ, ಡಾ.ವಿಶಾಲ್, ಡಾ.ಎಂ.ವಿ.ವೆಂಕಟೇಶ್, ದೀಪ್ತಿ ಆದಿತ್ಯ ಕಾನಡೆ, ಅನಿರುದ್ ಶ್ರವಣ್, ಆರ್.ಲತಾ ಹಾಗೂ ಪ್ರಸ್ತುತ ಹಾಲಿ ಜಿಲ್ಲಾಧಿಕಾರಿ ಎನ್‌ಎಂ ನಾಗರಾಜ್ ಅವರು ಜಿಲ್ಲೆಯ ಪ್ರಗತಿಗೆ ಶ್ರಮಿಸುತ್ತಿದ್ದಾರೆ.
ಹೊಸ ತಾಲೂಕುಗಳ ರಚನೆ: ಚಿಕ್ಕಬಳ್ಳಾಪುರ ಜಿಲ್ಲೆ ಉದಯವಾಗಿ 15 ವರ್ಷಗಳ ಅವಧಿಯಲ್ಲಿ 6 ತಾಲೂಕುಗಳು ರಚನೆಯಾಗಿತ್ತು. ಈಗ ಹೊಸದಾಗಿ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯನ್ನು ಹಾಗೂ ಬಾಗೇಪಲ್ಲಿ ತಾಲೂಕಿನ ಚೇಳೂರು ಹೋಬಳಿಯನ್ನು ಹೊಸ ತಾಲೂಕುಗಳಾಗಿ ಘೋಷಣೆ ಮಾಡಿ ಸರ್ಕಾರ ಅಧೀಕೃತವಾಗಿ ಅಧಿಸೂಚನೆಗಳನ್ನು ಹೊರಡಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಗೆ 15 ವರ್ಷ ಪೂರ್ಣಗೊಂಡರೂ ಜಿಲ್ಲೆಯ ಹೂವು ಬೆಳೆಗಾರರಿಗೆ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆಯಿಲ್ಲ. ರೇಷ್ಮೆ ಬೆಳೆಗಾರರಿಗೆ ಮತ್ತು ರೈತರ ಪ್ರಗತಿಗೆ ಪೂರಕ ಯೋಜನೆಗಳ ಅನುಷ್ಠಾನವಾಗಿಲ್ಲ. –ಭಕ್ತರಹಳ್ಳಿ ಬೈರೇಗೌಡ, ರೈತಸಂಘದ ಪ್ರಧಾನ ಕಾರ್ಯದರ್ಶಿ
ಜಿಲ್ಲೆಯು 15 ವರ್ಷ ಪೂರೈಕೆ ಮಾಡಿರುವುದು ಸಂತೋಷ ಆದರೆ 2013 ರಿಂದ 2018 ರವರೆಗೆ ಜಿಲ್ಲೆಯ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆಗೊಳಿಸಲಾಗಿತ್ತು ನಂತರದ ದಿನಗಳಲ್ಲಿ ಜಿಲ್ಲೆಯ ಪ್ರಗತಿ ವೇಗವಾಗಿ ಕಂಡಿಲ್ಲ. – ಕೇಶವರೆಡ್ಡಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ
ಚಿಕ್ಕ ಬಳ್ಳಾಪುರ ವನ್ನು ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಅವರು ಜಿಲ್ಲೆಯಾಗಿ ಘೋಷಣೆ ಮಾಡಿ ಅವರ ಅವಧಿಯಲ್ಲಿ ವೇಗವಾಗಿ ಅಭಿವೃದ್ಧಿ ಕಾಮಗಾರಿಗಳು ನಡೆಯಿತೇ ವಿನಃ ನಂತರದ ದಿನಗಳಲ್ಲಿ ವೇಗ ಪಡೆದಿಲ್ಲ. – ಕೆ.ಎಂ. ಮುನೇಗೌಡ ಜಿಲ್ಲಾ ಜೆಡಿಎಸ್ ಅಧ್ಯಕ್ಷ
ಜಿಲ್ಲಾ ರಚನೆ ಬಳಿಕ ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದ್ದು, ನೀರಾವರಿ ಯೋಜನೆಗಳು, ವೈದ್ಯಕೀಯ ಕಾಲೇಜುಗಳ ನಿರ್ಮಾಣ ಸಂತಸ ಮೂಡಿಸಿವೆ. – ಎಂ.ಜಯರಾಂ, ಜಿಲ್ಲಾ ಹೋರಾಟ ಸಮಿತಿ ಮುಖಂಡ
ಜಿಲ್ಲೆಯಲ್ಲಿ ಕುಡಿವ ನೀರಿಗೆ ತೊಂದರೆಯಿದ್ದರೂ ರೈತರು ಹಾಲಿನ ಹೊಳೆ ಹರಿಸಿದ್ದಾರೆ. 13 ಸಾವಿರ ಕೋಟಿ ಖರ್ಚು, ಆದರೂ ಎತ್ತಿನಹೊಳೆ ಹರಿಯಲಿಲ್ಲ, ಎಚ್.ಎನ್ ಮತ್ತು ಕೆಸಿ ವ್ಯಾಲಿಯಿಂದ ಅಪಾಯ ಸಾಧ್ಯತೆಯಿದೆ. – ಆಂಜಿನೇಯರೆಡ್ಡಿ, ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ
-ಎಂ.ಎ.ತಮೀಮ್ ಪಾಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.