ದಿನಕ್ಕೆ 500 ಕೆ.ಜಿ. ಒಣ ತ್ಯಾಜ್ಯ ಬರ್ನ್
ಸುಳ್ಯ: ತಂತ್ರಜ್ಞಾನ ಆಧಾರಿತ ತ್ಯಾಜ್ಯ ವಿಲೇವಾರಿ ಪ್ರಾಯೋಗಿಕ ಆರಂಭ
Team Udayavani, Aug 25, 2022, 10:14 AM IST
ಸುಳ್ಯ: ಅಭಿವೃದ್ಧಿ ಹೊಂದುತ್ತಿರುವ ಕಡೆಗಳಲ್ಲಿ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ ತ್ಯಾಜ್ಯ ವಿಲೇವಾರಿ. ಪ್ಲಾಸ್ಟಿಕ್ ಹಾವಳಿಯಿಂದ ಜಗತ್ತೇ ತಲ್ಲಣಗೊಳ್ಳುತ್ತಿದೆ. ಇದರ ಮಧ್ಯೆ ಸುಳ್ಯ ನಗರ ಪಂಚಾಯತ್ ವತಿಯಿಂದ ಕಸವನ್ನು ಆಧುನಿಕ ತಂತ್ರಜ್ಞಾನ ಬಳಸಿ ಗ್ಯಾಸಿಫಿಕೇಷನ್ ಯಂತ್ರದ ಸಹಾಯದಿಂದ ಪ್ಲಾಸ್ಟಿಕ್ ಸಹಿತ ವಿಲೇವಾರಿ (ಸುಡುವ) ಮಾಡುವ ಘಟಕ ಪ್ರಾಯೋಗಿಕವಾಗಿ ಕಾರ್ಯಾರಂಭಗೊಂಡಿದ್ದು ಪ್ರಯೋಗ ಯಶಸ್ವಿ ಹಂತದಲ್ಲಿದೆ.
ಸುಳ್ಯದ ಕಲ್ಚಪೆìಯಲ್ಲಿ ಬರ್ನಿಂಗ್ ಘಟಕ ಕಾರ್ಯಾಚರಿಸುತ್ತಿದೆ. ಒಣ ಕಸ ಸೇರಿದಂತೆ ಸುಮಾರು 500 ಕೆ.ಜಿ.ಯಷ್ಟು ತ್ಯಾಜ್ಯವನ್ನು ಪ್ರತೀ ದಿನ ಘಟಕದಲ್ಲಿ ಉರಿಸಲಾಗುತ್ತದೆ. ಕಳೆದ ಒಂದು ವರ್ಷಗಳ ಹಿಂದೆ ಯಂತ್ರ ಅಳವಡಿಕೆ ಮಾಡಲಾಗಿದ್ದು, ಇದೀಗ ಕಾರ್ಯಾರಂಭಿಸಿದೆ. ಬೆಂಗಳೂರಿನ ಪೆಟ್ರಿಕೋರ್ ಈಕೊ ಇನ್ನೋವೇಶನ್ಸ್ ಪ್ರೈವೆಟ್ ಲಿಮಿಟೆಡ್ ಎಂಬ ಸಂಸ್ಥೆ ಘಟಕ ನಿರ್ಮಿಸಿದ್ದು, 3 ತಿಂಗಳು ಕಂಪೆನಿ ಯವರೇ ಘಟಕದ ಕೆಲಸ ಹಾಗೂ ನಿರ್ವಹಣೆ ಮಾಡಲಿ ದ್ದಾರೆ. ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಘಟಕ ನಿರ್ಮಾಣಗೊಂಡಿದೆ.
ತ್ರಿಫೇಸ್ ವಿದ್ಯುತ್ ಅಗತ್ಯ ಘಟಕ ಕಾರ್ಯಾಚರಿಸಲು ನಿರಂತರವಾಗಿ ತ್ರಿಫೇಸ್ ವಿದ್ಯುತ್ ಪೂರೈಕೆ ಅತ್ಯಗತ್ಯವಾಗಿದೆ. ಘಟಕದಲ್ಲಿ ಒಟ್ಟು ಏಳು ಪಂಪ್‌ಗ್ಳಿದ್ದು, ನಾಲ್ಕು ನಿರಂತರ ಕಾರ್ಯಚರಿಸುತ್ತದೆ. ಎರಡು ಲೋಡ್ ಮಾಡುವಾಗ ಕಾರ್ಯಾಚರಿಸುತ್ತದೆ. ವಿದ್ಯುತ್ ಇಲ್ಲದೇ ಇರುವ ಸಂದರ್ಭದಲ್ಲಿ ಜನರೇಟರ್ ಬಳಕೆ ಮಾಡಲಾಗುತ್ತದೆ.
ಕಾರ್ಯನಿರ್ವಹಣೆ ಘಟಕದಲ್ಲಿ ಇಬ್ಬರು ಇದೀಗ ಕಂಪೆನಿ ಕಡೆಯಿಂದ ನಿರ್ವಾಹಕರಿದ್ದಾರೆ. ಬರ್ನಿಂಗ್ ಯಂತ್ರಕ್ಕೆ ಒಂದು ಬಾರಿಗೆ 250 ಕೆ.ಜಿ.ಯಷ್ಟು ತ್ಯಾಜ್ಯ ಲೋಡ್ ಮಾಡಬೇಕಾಗುತ್ತದೆ. ಕೆಳಭಾಗದಲ್ಲಿ ಕಸವನ್ನು ಪುಲ್ಲಿಂಗ್ ಮಾಡಿ ಮೇಲ್ಭಾಗದ ಕೊಳವೆಗೆ ತುಂಬಲಾಗುತ್ತದೆ. ಬಳಿಕ ಯಂತ್ರ ಆನ್ ಮಾಡಲಾಗಿ, ಕೆಳಭಾಗದಿಂದ ಬೆಂಕಿ ನೀಡಲಾಗುತ್ತದೆ. ಕೊಳವೆಗೆ ನಿರಂತರ ನೀರು ಪೂರೈಕೆಯೂ ಬೇಕಾಗಿದೆ. ಗ್ಯಾಸಿಫಿಕೇಶನ್ ತಂತ್ರಜ್ಞಾನದ ಮೂಲಕ ಕಸವನ್ನು ಉರಿಸಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಕಸವನ್ನು ವಿಲೇವಾರಿ ಮಾಡಿದಾಗ ಗ್ಯಾಸ್ ಉತ್ಪಾದನೆ ಆಗುತ್ತದೆ. ಇದನ್ನು ಮರು ಬಳಕೆ ಮಾಡಬಹುದಾಗಿದೆ. 250 ಕೆ.ಜಿ. ಕಸ ಉರಿಸಲು 3-4 ಗಂಟೆ ಬೇಕಿದೆ. ಈಗ ದಿನಕ್ಕೆ ಎರಡು ಬಾರಿ ಕಸ ಉರಿಸಲಾಗುತ್ತದೆ.
ಇಲ್ಲಿ ದೊರೆತ ಗ್ಯಾಸನ್ನು ಸಂಗ್ರಹಿಸಿ ಬಳಕೆ ಮಾಡಬಹುದಾಗಿದೆ. ಅದರ ಬಳಕೆಗೂ ಪ್ರಯೋಗಗಳು ನಡೆ ಯುತ್ತಿದೆ. ಇಲ್ಲಿ ಉತ್ಪತ್ತಿ ಯಾಗುವ ಹೊಗೆ ಅಥವಾ ಇನ್ನಾವುದೇ ಪ್ರಕ್ರಿಯೆಗಳು ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂದು ಸಂಸ್ಥೆಯವರು ಹೇಳುತ್ತಾರೆ. ನ. ಪಂ.ನ ಹಾಲಿ ಆಡಳಿತ ಮಂಡಳಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬರ್ನಿಂಗ್ ಮೆಷಿನ್ ಅಳವಡಿಸಲು ಯೋಜನೆ ರೂಪಿಸಿತ್ತು. ಈಗ ದಿನಕ್ಕೆ 500 ಕೆ.ಜಿ. ತ್ಯಾಜ್ಯ ವಿಲೇವಾರಿ ಆಗುತ್ತಿದ್ದು ಅದನ್ನು 1 ಸಾವಿರ ಕೆ.ಜಿ.ಗೆ ಹೆಚ್ಚಿಸುವ ಗುರಿ ಇರಿಸಲಾಗಿದೆ ಎಂದು ನ.ಪಂ. ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ತಿಳಿಸಿದ್ದಾರೆ.
ವಿದ್ಯುತ್ ಉತ್ಪಾದನೆ
ಇಲ್ಲಿ ಉತ್ಪತ್ತಿಯಾಗುವ ಗ್ಯಾಸ್‌ನಿಂದ ವಿದ್ಯುತ್ ಉತ್ಪಾದಿಸುವ ಪ್ರಕ್ರಿಯೆಗಳ ಬಗ್ಗೆ ಯೋಜನೆ ರೂಪಿಸುವ ಕೆಲಸವನ್ನು ಸಂಸ್ಥೆ ನಡೆಸುತ್ತಿದೆ. ಅದನ್ನು ಇಲ್ಲಿನ ಘಟಕ ಕಾರ್ಯನಿರ್ವಹಿಸಲು ಪೂರೈಸುವಂತೆ ಮಾಡಲು ಚಿಂತನೆಗಳು ನಡೆದಿದೆ. ಜತೆಗೆ ಸಂಸ್ಥೆಯವರು ಉರಿಸಲ್ಪಡುವ ಇತರ ವಸ್ತುಗಳಿಂದಲೂ ವಿದ್ಯುತ್ ಉತ್ಪಾದನೆಗೆ ಮುಂದಾಗಿದ್ದಾರೆ.
ಪರಿಸರ ಸ್ನೇಹಿ ಘಟಕ: ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬರ್ನಿಂಗ್ ಮೆಷಿನ್ ಅಳವಡಿಸಲಾಗಿದೆ. ಇದೀಗ ಕಸ ಉರಿಸುವಿಕೆ ಯಶಸ್ವಿಯಾಗಿ ನಡೆಯುತ್ತಿದೆ. ಪರಿಸರ ಸ್ನೇಹಿ ಘಟಕದಿಂದ ಪರಿಸರಕ್ಕೆ ಯಾವುದೇ ಹಾನಿಯಿರುವುದಿಲ್ಲ. ಸುಳ್ಯದ ಕಸದ ಸಮಸ್ಯೆ ಪರಿಹರಿಸಲು ಇಲ್ಲಿನ ಘಟಕ ಪೂರಕವಾಗಲಿದೆ. –ವಿನಯಕುಮಾರ್ ಕಂದಡ್ಕ, ಅಧ್ಯಕ್ಷರು ನಗರ ಪಂಚಾಯತ್ ಸುಳ್ಯ
-ದಯಾನಂದ ಕಲ್ನಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.