ಓವಲ್ ಟೆಸ್ಟ್ ಗೆದ್ದ ಇಂಗ್ಲೆಂಡ್; 2-1 ಅಂತರದಿಂದ ಸರಣಿ ಸೋತ ದಕ್ಷಿಣ ಆಫ್ರಿಕಾ
Team Udayavani, Sep 12, 2022, 11:17 PM IST
ಲಂಡನ್: ಓವಲ್ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್‌ಗಳಿಂದ ಕೆಡವಿದ ಇಂಗ್ಲೆಂಡ್, 2-1 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಇದು ಎರಡೂವರೆ ದಿನದಲ್ಲಿ ಮುಗಿದ ಸಣ್ಣ ಮೊತ್ತದ ಟೆಸ್ಟ್ ಎನಿಸಿತು. ಮೊದಲ ದಿನ ಮಳೆಯಿಂದ ಆಟ ಸಾಧ್ಯವಾಗಿರಲಿಲ್ಲ. ಎರಡನೇ ರಾಣಿ ಎಲಿಜಬೆತ್ ನಿಧನದ ಶೋಕಾರ್ಥವಾಗಿ ದ್ವಿತೀಯ ದಿನದ ಆಟ ನಡೆಯಲಿಲ್ಲ. ಉಳಿದ ಮೂರು ದಿನಗಳ ಆಟದಲ್ಲಿ ಬೌಲರ್‌ಗಳೇ ವಿಜೃಂಭಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 118ಕ್ಕೆ ಕುಸಿಯಿತು. ಓಲೀ ರಾಬಿನ್ಸನ್ 5 ಮತ್ತು ಸ್ಟುವರ್ಟ್ ಬ್ರಾಡ್ 4 ವಿಕೆಟ್ ಹಾರಿಸಿದರು. ಜವಾಬಿತ್ತ ಇಂಗ್ಲೆಂಡ್ 158ಕ್ಕೆ ಆಲೌಟ್ ಆಯಿತು. ಮಾರ್ಕೊ ಜಾನ್ಸೆನ್ 5 ಮತ್ತು ಕಾಗಿಸೊ ರಬಾಡ 4 ವಿಕೆಟ್ ಉಡಾಯಿಸಿದರು.
ದ್ವಿತೀಯ ಸರದಿಯಲ್ಲೂ ಹರಿಣ ಗಳ ಬ್ಯಾಟಿಂಗ್ ಮಿಂಚಲಿಲ್ಲ. 169ಕ್ಕೆ ಸರ್ವಪತನ ಕಂಡಿತು. ಬ್ರಾಡ್ ಮತ್ತು ಸ್ಟೋಕ್ಸ್ ತಲಾ 3 ವಿಕೆಟ್, ಆ್ಯಂಡರ್ಸನ್ ಮತ್ತು ರಾಬಿನ್ಸನ್ ತಲಾ 2 ವಿಕೆಟ್ ಕಿತ್ತರು.
ಇಂಗ್ಲೆಂಡ್‌ಗೆ ಲಭಿಸಿದ ಟಾರ್ಗೆಟ್ 130 ರನ್. ಇದನ್ನು ಒಂದೇ ವಿಕೆಟ್ ನಷ್ಟದಲ್ಲಿ ಸಾಧಿಸಿತು. ಜಾಕ್ ಕ್ರಾಲಿ ಔಟಾಗದೆ 69 ರನ್ ಹೊಡೆದರು.
ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಹಾಗೂ 12 ರನ್ನುಗಳಿಂದ ಗೆದ್ದಿತ್ತು. ದ್ವಿತೀಯ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಿರುಗಿ ಬಿತ್ತು. ಇನ್ನಿಂಗ್ಸ್ ಹಾಗೂ 85 ರನ್ನುಗಳಿಂದ ಗೆದ್ದು ಸೇಡು ತೀರಿಸಿಕೊಂಡಿತು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ-118 ಮತ್ತು 169. ಇಂಗ್ಲೆಂಡ್-158 ಮತ್ತು ಒಂದು ವಿಕೆಟಿಗೆ 130. ಪಂದ್ಯಶ್ರೇಷ್ಠ: ಓಲೀ ರಾಬಿನ್ಸನ್. ಸರಣಿಶ್ರೇಷ್ಠ: ಬೆನ್ ಸ್ಟೋಕ್ಸ್, ಕಾಗಿಸೊ ರಬಾಡ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.