ಸುಂದರ ಪರಿಧಿಯ ಭಾರತೀಯ ರಾಜಕೀಯ ಸಿದ್ಧಾಂತ
Team Udayavani, Sep 13, 2022, 6:05 AM IST
ಭಾರತವು ಸಮೃದ್ಧ, ಶಕ್ತಿಶಾಲಿ ಮತ್ತು ವಿಶ್ವಗುರು ಆಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ಭಾರತದಲ್ಲಿ ಕ್ರಿಸ್ತಪೂರ್ವ ಬಹುಹಿಂದಿನಿಂದಲೂ ಉನ್ನತ ರಾಜ ಮನೆತನಗಳು ಆಳ್ವಿಕೆ ನಡೆಸಿದ್ದವು. ಭಾರತೀಯ ಪುರಾಣಗಳಲ್ಲಿಯೂ ರಾಜರ ಆಳ್ವಿಕೆಯ ವಿವರಗಳಿವೆ. ಸಮರ್ಥ ಆಳ್ವಿಕೆಯ ಪುರಾತನ ಮತ್ತು ಆಧುನಿಕ ನೆಲೆಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸುವ ಪ್ರಯತ್ನ ಈ ಲೇಖನದಲ್ಲಿದೆ.
ನಮ್ಮ ಭಾರತ ಮತ್ತೊಮ್ಮೆ ಸಮೃದ್ಧಶಾಲಿ, ಶಕ್ತಿಶಾಲಿ ಹಾಗೂ ವಿಶ್ವಗುರು ಆಗುವ ಆಶಯತ್ರಯದಲ್ಲಿ ಸಾಗುತ್ತಿದೆ. ಈ ನೆಲೆಯಲ್ಲಿ “ಪ್ರಾಚೀನ ಭಾರತದ ರಾಜಕೀಯ ಚಿಂತನೆ’ಯ ಕಡೆಗೆ ಒಂದಿನಿತು ಬೆಳಕು ಚೆಲ್ಲುವುದು ಅರ್ಥಪೂರ್ಣ ಎನಿಸುತ್ತದೆ.
ನಮ್ಮಿ ನೆಲದ ಇತಿಹಾಸದಲ್ಲಿ ರಾಮರಾಜ್ಯದ ಕನಸು, ಯುಧಿಷ್ಟಿರನ ಧರ್ಮರಾಜ್ಯ, ಅಂಗ, ವಂಗ, ಕಳಿಂಗ, ಕಾಂಭೋಜ, ಮಿಥಿಲೆ, ದೂರದ ಗಾಂಧಾರವೂ ಸೇರಿ ಅರಸೊತ್ತಿಗೆ, ಮಕುಟಧಾರಿಗಳ ಘನ ರಾಜ್ಯಭಾರದ ವರ್ಣನೆ ಧಾರಾಳ ದೊರಕುತ್ತದೆ. ಹಾಗೆಯೇ ಅಗಣಿತ ರಾಜವಂಶಗಳ ಇತಿಹಾಸದ ಸುಂದರ ಬನವೇ ಗೋಚರಿಸುತ್ತದೆ. ಇನ್ನೊಂದೆಡೆ ಸಾಲು ಸಾಲು ಆಕ್ರಮಣ ಈ ನೆಲದ ಮೇಲೆ ನಡೆದುದು ಈಗ ಇತಿಹಾಸ. ಸುಮಾರು ಒಂದು ಸಾವಿರ ವರ್ಷಗಳ ಸುದೀರ್ಘ ಅವಧಿಯಲ್ಲಿ ವ್ಯಾಪಾರಕ್ಕೆಂದು ಈ ದೇಶಕ್ಕೆ ಆಗಮಿಸಿದವರೇ ಆಳಿದ ಸಿಂಹಾಸನದ ಗುರುತುಗಳೂ ಕಾಣ ಸಿಗುತ್ತವೆ.
ಈ ನೆಲೆಯಲ್ಲಿ ಅಗಾಧ ರಾಜಕೀಯ ಪರಿಜ್ಞಾನದ, ವಿಶ್ವದರ್ಜೆಯ, ಚಾಣಕ್ಯ ಅಥವಾ ಕೌಟಿಲ್ಯ ಬಿರು ದಾಂಕಿತ ವಿಷ್ಣುಗುಪ್ತನ “ಅರ್ಥಶಾಸ್ತ್ರ’ ಹೊತ್ತಗೆ ಮಿಂಚು ತ್ತದೆ. ಇದನ್ನು ಆಧರಿಸಿ, ಪ್ರಾಚೀನ ಹಾಗೂ ಪ್ರಚಲಿತ “ಸಪ್ತಾಂಗ’ ಸಿದ್ಧಾಂತವನ್ನು ತುಲನಾತ್ಮಕವಾಗಿ ವಿಶದೀಕರಿಸ ಬಹುದಾಗಿದೆ. ಕೌಟಿಲ್ಯ ತನ್ನ ಅರ್ಥಶಾಸ್ತ್ರ ಮೇರುಕೃತಿ ಯಲ್ಲಿ ರಾಜ್ಯವ್ಯವಸ್ಥೆಯಲ್ಲಿನ ಸಮಗ್ರ ಚಿತ್ರಣವನ್ನು ಏಳು ಮೂಲಧಾತುಗಳೊಂದಿಗೆ ಹೀಗೆ ವರ್ಣಿಸುತ್ತಾನೆ:
ಮೊದಲನೆಯದಾಗಿ ಸಮರ್ಥ ರಾಜನ ವರ್ಣನೆಯನ್ನು ನೀಡಲಾಗಿದೆ. ಕುಲೀನ ಮನೆತನದಲ್ಲಿ ಹುಟ್ಟಿದ ಅದೃಷ್ಟಶಾಲಿ, ಬುದ್ಧಿಶಾಲಿ, ಬಲಾಡ್ಯ, ನ್ಯಾಯ ಪಕ್ಷಪಾತಿ, ಸತ್ಯಸಂಧ, ಉತ್ಸಾಹಿ, ಶಿಸ್ತು ತುಂಬಿದ, ಕೃತಜ್ಞತ ಭಾವದ, ಎಂದೂ ಮಾತು ಮುರಿಯದ, ಉದಾತ್ತ, ಉನ್ನತ ಧ್ಯೇಯಶಾಲಿ, ಕ್ಷಿಪ್ರಗತಿಯ ಹಾಗೂ ದೂರದೃಷ್ಟಿಯ ರಾಜನೋರ್ವ ರಾಷ್ಟ್ರಕ್ಕೆ ಒದಗಿದಾಗ, ಆ ದೇಶ ಭಾಗ್ಯಶಾಲಿ ಎನಿಸುತ್ತದೆ.
ಮಂತ್ರಿಮಂಡಲ ಅಥವಾ ಸಚಿವ ಸಂಪುಟ ಅತ್ಯಂತ ಮೇಲ್ದರ್ಜೆಯ, ಅರಿವಿನ, ನುರಿತ, ದಕ್ಷ, ಪ್ರಾಮಾಣಿಕ, ವಿಷಯವನ್ನು ತಳಸ್ಪರ್ಶಿ ಅರಿಯುವ ಸಾಮರ್ಥ್ಯದಿಂದ ಕೂಡಿರಬೇಕು. ಮಾತ್ರವಲ್ಲ ಅವರೆಲ್ಲರಲ್ಲಿ ಧೈರ್ಯ, ಸಾಹಸ ಪ್ರವೃತ್ತಿ, ವಿಧೇಯತೆ, ಮುಂಬರುವ ಅಪಾಯವನ್ನು ಅರಿಯುವ ಚಾಕಚಕ್ಯತೆ, ಸಮಚಿತ್ತ, ವಿರೋಧಗಳನ್ನು ಮೆಟ್ಟಿ ನಿಲ್ಲುವ ಎದೆಗಾರಿಕೆ- ಈ ಎಲ್ಲ ಗುಣಗಳು ಇರಬೇಕು ಎಂಬುದು ಚಾಣಕ್ಯ ಉಕ್ತಿ.
ಸಾಮ್ರಾಜ್ಯ ಅಥವಾ ಭೂಪ್ರದೇಶ ಮತ್ತು ಜನಪದ ಉತ್ತಮ ಗುಣ ಮಟ್ಟದ್ದಾಗಿರಬೇಕು. ಕೃಷಿ ಯೋಗ್ಯ ಭೂಮಿ, ಉತ್ತಮ ಹವಾಮಾನ, ಅರಣ್ಯ, ಖನಿಜಗಳಿಂದ ಕೂಡಿದ ಸುಂದರ ರಾಜ್ಯ, ಉತ್ತಮ ಸಂಪರ್ಕದ ನೀರು ಸರಬರಾಜು ಹಾಗೂ ಜಲಸಾರಿಗೆಗೆ ಯೋಗ್ಯ ನದಿಗಳು ಇವೆಲ್ಲದರ ವರ್ಣನೆ ಈ ಮೂರನೇ ಧಾತುವಿನಲ್ಲಿ ಅಡಕವಾಗಿದೆ. ಅದಕ್ಕನುಗುಣವಾಗಿ ಕೃಷಿಯ ಹಾಗೂ ಇನ್ನಿತರ ಪ್ರಾವೀಣ್ಯ ಹೊಂದಿದ ವಿಧೇಯ, ಸತ್ಯ ನಿಷ್ಠ, ದೇಶ ನಿಷ್ಠ, ಸ್ವಾಮಿ ನಿಷ್ಠ ಪ್ರಜಾಗಣ, ಮಹತ್ವಪೂರ್ಣ ಮೂರನೇ ಅಂಗ ಎನಿಸುತ್ತದೆ.
ಅತ್ಯಂತ ಸದೃಢ ಹಾಗೂ ಅಭೇದ್ಯವಾದ ರಕ್ಷಣಾತ್ಮಕ ಕೋಟೆಗಳು ರಾಜ್ಯವೊಂದರ ಪ್ರಬಲ ಅಂಶ ಎಂಬ ವರ್ಣನೆ ಅರ್ಥಶಾಸ್ತ್ರದ ನಾಲ್ಕನೇ ಮೂಲಾಂಗ.
ಕೋಶ ಅರ್ಥಾತ್ ಟ್ರಜರಿ ಸಾಕಷ್ಟು ಭದ್ರವಾಗಿ ತುಂಬಿರಬೇಕು ಎಂಬುದು ಚಾಣಕ್ಯನ ಅಭಿಮತ. ಸಮಗ್ರ ರಾಜ್ಯವ್ಯವಸ್ಥೆಯನ್ನು ಹೊಂದಿಸಿಕೊಡು ಹೋಗುವಲ್ಲಿ ಖಜಾನೆಯ ಪಾತ್ರ ಹಿರಿದು. ಹೂವಿನಿಂದ ಮಕರಂದವನ್ನು ಸಂಗ್ರಹಿಸುವಂತೆ ರಾಜನಾದವನು ಪ್ರಜೆಗಳನ್ನು ಹಿಂಸಿಸದೆ ತೆರಿಗೆಯನ್ನು ಸಂಗ್ರಹಿಸಬೇಕೆಂಬುದು ಕೌಟಿಲ್ಯನ ಸಲಹೆ.
ಅತ್ಯಂತ ಸಂಘಟಿತ, ತರಬೇತಿ ಹೊಂದಿದ, ಶಸ್ತ್ರಾಸ್ತ್ರ ಸಜ್ಜಿತ ಸೈನ್ಯ ಆರನೇ ಪ್ರಬಲ ಅಂಗ ಎಂಬುದು ಅರ್ಥಶಾಸ್ತ್ರದ ಸ್ಪಷ್ಟೋಕ್ತಿ.
ತನ್ನ ಮಂಡಲ ಸಿದ್ಧಾಂತದ ವರ್ಣನೆಯಲ್ಲಿ ರಾಜನೊಬ್ಬನಿಗೆ ಇರತಕ್ಕ ಸಮರ್ಥ ಮಿತ್ರರೂ ರಾಜ್ಯವೊಂದಕ್ಕೆ ಪೂರಕ ಶಕ್ತಿ ತುಂಬುವ ಮೂಲಧಾತು ಎಂಬುದು ಚಾಣಕ್ಯನ ನಿಪುಣ ವಾದ.
ಹೀಗೆ ಒಟ್ಟು ಸಪ್ತಾಂಗದ ವರ್ಣನೆ, ಚಿಂತನೆ ಸಹಸ್ರಾರು ವರ್ಷಗಳ ಹಿಂದೆಯೇ ಈ ನೆಲದಲ್ಲಿ ಬಿತ್ತಿದ ಮಹಾನ್ ವ್ಯಕ್ತಿ ಕೌಟಿಲ್ಯ ಅಥವಾ ಚಾಣಕ್ಯ ನಾಮಧೇಯದ ವಿಷ್ಣುಗುಪ್ತ.
ಆಧುನಿಕ ಸಪ್ತಾಂಗ
ಈಗ ಪ್ರಚಲಿತ ಕಾಲಮಾನದಲ್ಲಿಯೂ ಈ ಸಾರ್ವ ಕಾಲಿಕ ಕೌಟಿಲ್ಯ ನೀತಿಯ ಮೆರುಗನ್ನು “ಅರ್ಥಶಾಸ್ತ್ರ’ದ ಬೆಳಕಿನಲ್ಲಿ ಪ್ರಚುರ ಪಡಿಸಬಹುದಾಗಿದೆ. ರಾಜ್ಯಶಾಸ್ತ್ರದ ಆಧುನಿಕ ಪರಿವಿಡಿಯಲ್ಲಿ ಜನ ಸಮುದಾಯ, ಸರಕಾರ, ವ್ಯಾಪ್ತಿ ಪ್ರದೇಶ (Territory), ಸಾರ್ವಭೌಮತೆ ಇವು ನಾಲ್ಕು ಮೂಲಾಂಶಗಳು ಎಂಬುದಾಗಿ ನಮೂ ದಿತಗೊಂಡಿವೆ. ಆದರೆ ಯಥಾವತ್ತಾಗಿ ಪ್ರಚಲಿತ ಭೂಗೋಲದ ರಾಜ್ಯ ವ್ಯವಸ್ಥೆಯಲ್ಲಿಯೂ ಸರಿಯಾಗಿ ಸಪ್ತಧಾತುಗಳು ಅಥವಾ ಏಳು ಮೂಲಾಂಶಗಳು ಗೋಚರಿಸುತ್ತವೆ. ಇವುಗಳನ್ನು ಕ್ರಮಬದ್ಧವಾಗಿ ಹೀಗೆ ದಾಖಲಿಸಬಹುದಾಗಿದೆ. 1) ಸಂವಿಧಾನ 2) ಪ್ರಜಾ ಸಮುದಾಯ 3) ರಾಜಕೀಯ ನೇತಾರಿಕೆ ಹಾಗೂ ನೌಕರಶಾಹಿ ಕಾರ್ಯಾಂಗ 4) ಪ್ರಜಾ ಪ್ರತಿನಿಧಿ ಸಭೆ 5) ನ್ಯಾಯಾಂಗ 6) ಪತ್ರಿಕಾರಂಗ 7) ಬಲಶಾಲಿ ಸೈನ್ಯ ಹಾಗೂ ಆಂತರಿಕ ಭದ್ರತಾ ಪಡೆ.
ಹೀಗೆ ಒಂದು ರಾಷ್ಟ್ರದ ಸಮಗ್ರ ಪ್ರಗತಿಯ ಚಕ್ರ ಪರಿಭ್ರಮಣೆಯಲ್ಲಿ ಸಪ್ತಧಾತುಗಳನ್ನು ಆಧುನಿಕತೆಯ ವಾಸ್ತವಿಕ ಹೊಳಹಿನಲ್ಲಿ ವಿವರಿಸಬಹುದಾಗಿದೆ. ಭದ್ರ ಪಂಚಾಗ ಅಥವಾ ಸದೃಢ ಬುನಾದಿಯ ರೀತಿಯಲ್ಲಿ ರಾಷ್ಟ್ರದ ಸಂವಿಧಾನ ಅಥವಾ ರಾಜ್ಯಾಂಗ ಘಟನೆ ಮೊತ್ತಮೊದಲ ಅಂಗ. ಎರಡನೆಯದಾಗಿ ದೇಶಪ್ರೇಮ ಹೊಂದಿದ, ತಮ್ಮ ಪವಿತ್ರ ಹಕ್ಕುಗಳ ಅಂತೆಯೇ ಮೂಲಭೂತ ಕರ್ತವ್ಯಗಳ ಬಗೆಗೆ ಚೆನ್ನಾಗಿ ಅರಿತ, ಸ್ವಾಭಿಮಾನಿ, ಪರಿಶ್ರಮದಿಂದ ಅಭಿವೃದ್ಧಿ ಸಾಧಿಸುವ ಛಲ ಹಾಗೂ ಬಲ ಹೊಂದಿದ ಪ್ರಜಾವರ್ಗ ರಾಜ್ಯವ್ಯವಸ್ಥೆಯ ಅತ್ಯಂತ ಆವಶ್ಯಕ ಮೂಲಾಂಶ.
ಮೂರನೆಯದಾಗಿ ರಾಷ್ಟ್ರವನ್ನು ಆಳುವ, ನಾಯಕತ್ವದ ಸುಸಂಸ್ಕೃತ, ರಾಷ್ಟ್ರನಿಷ್ಠೆಯ ನೇತಾರಿಕೆ. ಇಲ್ಲಿ ಉತ್ತಮ ರಾಜಕೀಯ ಮುತ್ಸದ್ದಿತನವನ್ನೂ ದೇಶವೊಂದು ಹೊಂದಿದಾಗ ಮಾತ್ರ ಪ್ರಗತಿ ತನ್ನ ವೇಗವನ್ನು ಸಂವರ್ಧಿಸಬಲ್ಲುದು. ಈ ರಾಜಕೀಯ ಕಾರ್ಯಾಂಗಕ್ಕೆ (Political Executive) ಬೆನ್ನೆಲುಬಾಗಿ, ರಾಷ್ಟ್ರವ್ಯಾಪಿ ನೌಕರಶಾಹಿತ್ವದ (Permanent Executive) ಗುಣಮಟ್ಟ , ದೇಶವನ್ನು ಎತ್ತರಿಸಬಲ್ಲ ಶಕ್ತಿ ಸಂಜೀವಿನಿ. ಇಲ್ಲೇ ಸೇವೆ (Service) ಎನ್ನುವ ಪದಕ್ಕೆ ನೈಜ ಅರ್ಥ ತುಂಬಿ ಬರುವಂತಹದು. ರಾಜಕೀಯ ನೇತಾರಿಕೆ ಬದಲಾದರೂ ಜನಸ್ನೇಹಿ ಪ್ರಾಮಾಣಿಕ ನೌಕರವರ್ಗ ಒಂದು ರಾಷ್ಟ್ರದ ಅಮೂಲ್ಯ ಸಂಪತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇವೆರಡರಲ್ಲಿಯೂ ಬರ, ಶಿಥಿಲತೆ ಅಪರೂಪವೇನಲ್ಲ.
ನಾಲ್ಕನೆಯದಾಗಿ ಪ್ರಚಲಿತ ಪರೋಕ್ಷ ಜನ ತಂತ್ರೀಯ ವ್ಯವಸ್ಥೆಯಲ್ಲಿ ಪ್ರಜಾ ಪ್ರತಿನಿಧಿತ್ವ ಸುಯೋಗ್ಯ ವಾಗಿರುವುದು ಚೈತನ್ಯಶಾಲಿ ಹಾಗೂ ಆರೋಗ್ಯಕರ ರಾಜ್ಯವ್ಯವಸ್ಥೆಯ ಸೂಚ್ಯಂಕ. ಜನಮನದ ಆಶಯಗಳನ್ನು ಬಿಂಬಿಸುವಲ್ಲಿ, ಪ್ರಜಾಕೋಟಿಯ ಬೇಕು-ಬೇಡಗಳಿಗೆ ಸ್ಪಂದಿಸುವಲ್ಲಿ ಪ್ರಜಾನಾಯಕತ್ವ, ಪ್ರತಿನಿಧಿ ಸಭೆಗಳು ಪ್ರಚಲಿತ ಕಾಲಮಾನದ ನಿರ್ದಿಷ್ಟ ಮೂಲಾಂಶ.
ಐದನೆಯದಾಗಿ ನಿಷ್ಪಕ್ಷ ಹಾಗೂ ಶಕ್ತಿಶಾಲಿ ನ್ಯಾಯಾಂಗ ವ್ಯವಸ್ಥೆ ಒಂದು ರಾಷ್ಟ್ರದ ಮೂಲಶಿಲೆ. ನ್ಯಾಯದ ತಕ್ಕಡಿ ಎಲ್ಲಿ ಸರಿದೂಗುವುದಿಲ್ಲವೋ ಅಲ್ಲಿ ಮತ್ಸéನ್ಯಾಯ ಅಥವಾ ಅರಣ್ಯ ಶಾಸನ ( Rule of Jungle) ಅರ್ಥಾತ್ ಅರಾಜಕತೆ, ಅನ್ಯಾಯದ ನೋವು, ಕಾವು ಉಲ್ಬಣಿಸಿದಂತೆಯೇ ಸರಿ.
ಆರನೆಯದಾಗಿ ಪತ್ರಿಕಾರಂಗ ಈ ದಿನಗಳಲ್ಲಿ ವಿವಿಧ ಮಾಧ್ಯಮಗಳ ಮೂಲಕ ಟಿಸಿಲೊಡೆದಿದೆ. ನೇರ, ದಿಟ್ಟ ಹಾಗೂ ನಿಷ್ಪಕ್ಷ, ಗುಣಗ್ರಾಹಿ ವಾರ್ತಾಮಾಧ್ಯಮಗಳು ರಾಷ್ಟ್ರ ಚಿಂತನಾ ಪರಿಧಿಯ, ಕಾರ್ಯಶೀಲತೆಯ, ಅಂತೆಯೇ ಶಾಂತಿ ಸಾಮರಸ್ಯ ಸಂವರ್ಧನೆಯ ಶಲಾಕೆಗಳಂತೆ. ಮನೆ, ಮನದಲ್ಲಿ ಅದೇ ರೀತಿ ಸಮಾಜದಲ್ಲಿ ದ್ವೇಷ, ಸಂಘರ್ಷಗಳನ್ನು ಬಿತ್ತದೆ ಸೌಹಾರ್ದಕ್ಕೆ ಪೂರಕ ಹಾಗೂ ಪ್ರೇರಕ ಚೈತನ್ಯ ನೀಡುವ ಸಂಜೀವಿನಿ ಶಕ್ತಿ ವಾರ್ತಾ ಮಾಧ್ಯಮಗಳಿಗಿದೆ.
ಕೊನೆಯದಾಗಿ ಆಂತರಿಕವಾಗಿ ಕಾನೂನು ಪರಿಪಾಲನೆ, ಶಾಂತಿ ಸುವ್ಯವಸ್ಥೆಯನ್ನು ಕಾಪಿಡುವ ಹಾಗೂ ಬಾಹ್ಯ ಆಕ್ರಮಣವನ್ನು ಸಮರ್ಥವಾಗಿ ತಡೆಗಟ್ಟುವಲ್ಲಿ ಭದ್ರತಾ ಪಡೆಗಳ ಪಾತ್ರ ಆಧುನಿಕ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವಪೂರ್ಣ. ನೆಲ, ಜಲ, ವಾಯುಕ್ಷೇತ್ರಗಳಲ್ಲಿ ರಾಷ್ಟ್ರವನ್ನು ಗಟ್ಟಿನೆಲೆಯಲ್ಲಿ ಕಟ್ಟಿ ಬೆಳೆಸುವಲ್ಲಿ ಭದ್ರತಾ ಪಡೆಗಳ ಪಾತ್ರ ಪ್ರಚಲಿತ ಹಾಗೂ ಭವಿಷ್ಯದ ಕಾಲಘಟ್ಟದಲ್ಲಿಯೂ ನಿರ್ಣಾಯಕ ಎನಿಸುವಂತಹುದು.
ಹೀಗೆ ಅತ್ಯಂತ ಪ್ರಾಚೀನ ರಾಷ್ಟ್ರ ಭಾರತದ ರಾಜಕೀಯ ಪರಂಪರೆಯನ್ನು ವರ್ತಮಾನಕ್ಕೆ ಜೋಡಿಸಿ, ಭವಿಷ್ಯದ ಬೆಳಕು ತುಂಬಲ್ಲಿ ಈ ಏಳೂ ಅಂಶಗಳು ಮಹತ್ವದ ಭೂಮಿಕೆ ಹೊಂದಿವೆ.
-ಡಾ| ಪಿ. ಅನಂತಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.