51 ಕಸಗುಡಿಸುವ ಯಂತ್ರ ಖರೀದಿಗೆ ಪಾಲಿಕೆ ನಿರ್ಧಾರ
Team Udayavani, Sep 21, 2022, 1:19 PM IST
ಬೆಂಗಳೂರು: ನಗರದ ರಸ್ತೆಗಳ ಕಸ ಗುಡಿಸುವುದನ್ನು ಮತ್ತಷ್ಟು ಸುಲಭವಾಗಿಸಲು ಮುಂದಾಗಿರುವ ಬಿಬಿಎಂಪಿ ಅದಕ್ಕಾಗಿ 51 ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳ ಖರೀದಿಗೆ ಮುಂದಾಗಿದೆ.
ಬಿಬಿಎಂಪಿ ಅಧಿಕಾರಿಗಳು ರೂಪಿಸಿರುವ ಯೋಜನೆಯಂತೆ ಶುಭ್ರ ಬೆಂಗಳೂರು ಹಾಗೂ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳನ್ನು ಖರೀದಿಸಲಾಗುತ್ತಿದೆ. ಶುಭ್ರ ಬೆಂಗಳೂರು ಅನುದಾನದಲ್ಲಿ 39.43 ಕೋಟಿ ರೂ. ವೆಚ್ಚದಲ್ಲಿ 24 ಯಂತ್ರಗಳು ಹಾಗೂ 15ನೇ ಹಣಕಾಸು ಆಯೋಗದ ಅನುದಾನದಲ್ಲಿ 44.36 ಕೋಟಿ ರೂ. ಬಳಸಿ 27 ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳ ಖರೀದಿಗೆ ಬಿಬಿಎಂಪಿ ತೀರ್ಮಾನಿಸಿದೆ. ಒಟ್ಟು 51 ಯಂತ್ರಗಳಿಗಾಗಿ 83 ಕೋಟಿ ರೂ.ವ್ಯಯಿಸಲಾಗುತ್ತಿದೆ.
ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳನ್ನು ಪೂರೈಸುವ ಸಂಸ್ಥೆಗಳು ಮುಂದಿನ 7 ವರ್ಷಗಳವರೆಗೆ ಅದರ ನಿರ್ವಹಣೆ ಮಾಡಬೇಕಿದೆ. ಅದಕ್ಕೆ ಬದಲಾಗಿ ಮೊದಲ ವರ್ಷ 27 ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಕ್ಕೆ 11.38 ಕೋಟಿ ರೂ ಹಾಗೂ 24 ಸ್ವೀಪಿಂಗ್ ಯಂತ್ರಕ್ಕೆ 10.11 ಕೋಟಿ ರೂ. ನಿರ್ವಹಣಾ ವೆಚ್ಚ ನೀಡಲಾಗುತ್ತದೆ. ಪ್ರತಿ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಕ್ಕೂ ಜಿಪಿಎಸ್ ಅಳವಡಿಸಬೇಕಿದೆ. ಬಿಬಿಎಂಪಿ ನಿಗದಿ ಮಾಡುವ ರಸ್ತೆ, ಪಾದಚಾರಿ ಮಾರ್ಗಗಳನ್ನು ರಾತ್ರಿ ವೇಳೆ ಗುಡಿಸಿ ಸ್ವತ್ಛಗೊಳಿಸಬೇಕಿದೆ. ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳ ಪೂರೈಕೆಗೆ ಟೆಂಡರ್ ಕರೆಯಲಾಗಿದೆ. ರಸ್ತೆ ಗುಡಿಸಲು ಯಂತ್ರಗಳ ಖರೀದಿ ಜತೆಗೆ ರಸ್ತೆಗಳಲ್ಲಿ ವಾಹನಗಳು ಓಡಾಡಿದಂತೆ ದೂಳು ಏಳುವುದನ್ನು ತಡೆಯಲು ರಸ್ತೆಗಳಿಗೆ ನೀರು ಸಿಂಪಡಿಸಲು ಬಿಬಿಎಂಪಿ ಮುಂದಾಗಿದೆ.
ಅದಕ್ಕಾಗಿ 10 ಸಾವಿರ ಲೀಟರ್ ಸಾಮರ್ಥ್ಯದ, ನೀರನ್ನು ಚಿಮುಕಿಸುವ ಯಂತ್ರಗಳು ಅಳವಡಿಸಲಾದ 5 ಟ್ರಕ್‌ಗಳ ಖರೀದಿಗೆ ಯೋಜನೆ ರೂಪಿಸಲಾಗಿದೆ. ಆ 5 ಯಂತ್ರಗಳ ಖರೀದಿಗಾಗಿ 4.60 ಕೋಟಿ ರೂ. ವ್ಯಯಿಸಲು ನಿರ್ಧರಿಸಲಾಗಿದ್ದು, ಟ್ರಕ್‌ಗಳನ್ನು ಪೂರೈಸುವ ಸಂಸ್ಥೆ 3 ವರ್ಷ ನಿರ್ವಹಣೆ ಮಾಡುವಂತೆ ಸೂಚಿಸಲಾಗುತ್ತಿದೆ. ನಿರ್ವಹಣೆಗಾಗಿ ವಾರ್ಷಿಕ 1.58 ಕೋಟಿ ರೂ. ನೀಡಲಾಗುತ್ತದೆ.
ತಾಂತ್ರಿಕ ದೋಷ ಶಂಕೆಯಿದ್ದರೂ ಖರೀದಿ ಏಕೆ? : ಬಿಬಿಎಂಪಿಯಲ್ಲಿ ಈಗಾಗಲೇ 26 ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ 17 ಸೆಲ್ಫ್ ಮೌಂಟೆಡ್, 8 ಟ್ರಕ್ ಮೌಂಟೆಡ್ ಮತ್ತು ಒಂದು ಸಣ್ಣ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳಾಗಿವೆ. ಅದರೆ, ಈ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳು ತಾಂತ್ರಿಕವಾಗಿ ಸರಿಯಿಲ್ಲ ಎಂದು 2021ರ ಸೆಪ್ಟೆಂಬರ್ 14ರಂದು ನಡೆದ ಘನತ್ಯಾಜ್ಯ ವಿಭಾಗದ ಸಭೆಯಲ್ಲಿ ಅಂದಿನ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರ ಜತೆಗೆ ಬಿಎಂಟಿಸಿ ಅಥವಾ ಕೆಎಸ್ಸಾರ್ಟಿಸಿಯ ಪ್ರಾದೇಶಿಕ ವರ್ಕ್‌ಶಾಪ್‌ನಲ್ಲಿ ಎಲ್ಲ 26 ಯಂತ್ರಗಳನ್ನು ಪರೀಕ್ಷಿಸುವಂತೆಯೂ ಘನತ್ಯಾಜ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಈವರೆಗೆ ಆ ಕುರಿತ ಪರೀಕ್ಷೆ ನಡೆಸಲಾಯಿತೇ? ಪರೀಕ್ಷೆ ನಡೆಸಿದ್ದರೆ ಅದರ ವರದಿ ಏನು? ಎಂಬ ಬಗ್ಗೆ ಅಧಿಕಾರಿಗಳ ಬಳಿಯೇ ಮಾಹಿತಿಯಿಲ್ಲ. ಹೀಗಾಗಿ ಮುಖ್ಯ ಆಯುಕ್ತರಿಂದಲೇ ತಾಂತ್ರಿಕ ದೋಷದ ಬಗ್ಗೆ ಅನುಮಾನ ವ್ಯಕ್ತವಾಗಿದ್ದ ಮಾದರಿಯ ಯಂತ್ರಗಳನ್ನೇ ಮತ್ತೆ ಖರೀದಿಸಲು ಹೊರಟಿರುವುದು ಅನುಮಾನಕ್ಕೆ ಕಾರಣವಾಗಿದೆ.
– ಗಿರೀಶ್ ಗರಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.