ಇಂದು ಮಹಾಲಯ ಅಮಾವಾಸ್ಯೆ; ಪಿತೃಋಣ ವಿಮೋಚನೆಯ ಪಿತೃಪಕ್ಷ
Team Udayavani, Sep 25, 2022, 6:10 AM IST
ಗರ್ಭದಾನದಿಂದ ಅಂತ್ಯೇಷ್ಠಿಯವರೆಗೆ ಒಬ್ಬ ಮನುಷ್ಯ ಷೋಡಶ ಸಂಸ್ಕಾರಗಳ ಘಟ್ಟವನ್ನು ದಾಟಿ ಬರುವುದು ಹಿಂದೂ ಧರ್ಮ ಸಂಸ್ಕೃತಿಯ ಅಪೂರ್ವ ಪದ್ಧತಿ, ಪರಂಪರೆ! ಅಂತ್ಯೇಷ್ಠಿಯಲ್ಲಿ ವ್ಯಕ್ತಿಯ ಮರಣೋತ್ತರ ವಿಧಿವಿಧಾನಗಳು ಆತನ ಮಕ್ಕಳಿಂದ ನೆರವೇರಿಸಲ್ಪಡುತ್ತವೆ. ಈ ಮೂಲಕ ತನ್ನ ತಂದೆಯ ಋಣವನ್ನು ಮಕ್ಕಳು ತೀರಿಸಬೇಕು. ಮಾಸಿಕ ಶ್ರಾದ್ಧ, ವರ್ಷಾಂತಿಕ ಶ್ರಾದ್ಧ, ಇತ್ಯಾದಿ ಶ್ರಾದ್ಧ ತರ್ಪಣಾದಿಗಳನ್ನು ಮಾಡುವುದರ ಜತೆಗೆ ಪ್ರತೀ ವರ್ಷ ವಾರ್ಷಿಕ ಶ್ರಾದ್ಧವನ್ನು ಮಾಡಬೇಕೆಂದಿದೆ. ಇದು ಪಿತೃಗಳನ್ನು ಸಂವತ್ಸರದಲ್ಲೊಮ್ಮೆ ನೆನಪಿಸಿಕೊಳ್ಳುವ ದಿವಸ. ಅಂದು ನಮ್ಮ ಪೂರ್ವಜರಿಗೂ ಶ್ರಾದ್ಧ ತರ್ಪಣ, ದಾನಾದಿಗಳನ್ನು ನೀಡಬೇಕು. ಅಂತಹ ಒಂದು ಪಕ್ಷವನ್ನೇ ಅಂದರೆ 15 ದಿನಗಳುಳ್ಳ ಅವಧಿಯನ್ನು ಪಿತೃಗಳಿಗಾಗಿಯೇ ನಮ್ಮ ಪ್ರಾಚೀನರು ಮೀಸಲಿಟ್ಟಿದ್ದಾರೆ. ಅದು ಪಿತೃ ಪಕ್ಷ. ಭಾದ್ರಪದ ಮಾಸ ಕೃಷ್ಣ ಪಕ್ಷ, ಪಿತೃ ಪಕ್ಷ. ಅಪರ ಪಕ್ಷ. ಆ ಪಕ್ಷದ ಕೊನೆಯ ದಿನ ಅಮಾವಾಸ್ಯೆ ಮಹಾಲಯ ಅಥವಾ ಪಿತೃಪಕ್ಷ ಅಮಾವಾಸ್ಯೆ.
ಸಂಸ್ಕೃತ ಶಬ್ದ ಪಿತೃ ಪಿತ ಏಕವಚನ, ಪಿತರಃ ಬಹುವಚನೀಯ. ಪಿತ ಅಂದರೆ ತಂದೆ. ಪಿತರಃ, ನಮ್ಮ ಎಲ್ಲ ಪೂರ್ವಜರ ಪರಂಪರೆ. ಪಿತೃಲೋಕದಲ್ಲಿ ಇರುವವರು. ಸಾಂವತ್ಸರಿಕ ಶ್ರಾದ್ಧದಲ್ಲಿ ಮೂರು ತಲೆಮಾರು, ತಂದೆ, ಅಜ್ಜ, ಮುತ್ತಜ್ಜ ಇವರಿಗೆ ಪಿಂಡ ಪ್ರದಾನ ಮಾಡುವುದು ವಿಧಿ. ಪಿತೃಗಳು ಶ್ರಾದ್ಧಾದಿ ತರ್ಪಣಗಳನ್ನು ಕಾಯುತ್ತಿರುತ್ತಾರೆ ಎಂದು ನಂಬಿಕೆ. ಆ ದಿನಗಳಂದು ಪಿತೃಗಳು ಪಶುಪಕ್ಷಿ ರೂಪದಲ್ಲೋ ಅಥವಾ ಬ್ರಾಹ್ಮಣರೂಪಿಯಾಗಿಯೋ ಬಂದು ಆಹಾರವನ್ನು ಸ್ವೀಕರಿಸುತ್ತಾರೆ. ಪಿತೃಗಳಿಗೆ ಶ್ರಾದ್ಧ, ತರ್ಪಣಾದಿಗಳನ್ನು ನೀಡದಿದ್ದರೆ, ಹೇಗೆ ಮುಂದಿನ ಪದವಿಯನ್ನು ಗಳಿಸಲಾರರು ಎಂಬ ಅರ್ಜುನನ ವಿಷಾದ ಭ.ಗೀ ಯಲ್ಲಿ ಉಲ್ಲೇಖಗೊಂಡಿದೆ. –
ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ ಪತಂತಿ ಪಿತರೋ ಹೆಷಾಂ ಲುಪ್ತಪಿಂಡೋದಕಕ್ರಿಯಾಃ ||
– ವರ್ಣ ಸಾಂಕರ್ಯವು ಕುಲಘಾತಕರನ್ನು ಮತ್ತು ಕುಲವನ್ನೂ ನರಕಕ್ಕೆ ಕೊಂಡೊಯ್ಯುತ್ತದೆ. ಲುಪ್ತವಾದ ಪಿಂಡ ಮತ್ತು ತರ್ಪಣಾದಿಗಳಿಂದ ಅರ್ಥಾತ್ ಶ್ರಾದ್ಧ ಮತ್ತು ಪಿತೃತರ್ಪಣಗಳಿಂದ ವಂಚಿತರಾದ ಇವರ ಪಿತೃಗಳು ಕೂಡಾ ಅಧೋಗತಿಯನ್ನು ಪಡೆಯುತ್ತಾರೆ.
ಜೀವಾತ್ಮನು ಶರೀರವನ್ನು ತ್ಯಜಿಸಿದ ಬಳಿಕ ದೇವಯಾನ (ಬ್ರಹ್ಮಲೋಕ) ಅಥವಾ ಪಿತೃಯಾನ (ಚಂದ್ರಲೋಕ) ದಲ್ಲಿ ಸಂಚರಿಸುತ್ತಾನೆ ಎಂದು ಉಪನಿಷದ್ ಮತ್ತು ಭ.ಗೀತೆಯಲ್ಲಿ ತಿಳಿಸಿದೆ. ಪಿತೃಲೋಕದಲ್ಲಿ ಗತಿಸಿಹೋದ ನಮ್ಮ ಪೂರ್ವಜರು ನೆಲೆಸುತ್ತಾರೆ ಎಂದು ಹೇಳುತ್ತದೆ ಋಗ್ವೇದ. ಅದು ಪಿತೃಯಾನದಲ್ಲಿರುವ ಒಂದು ತಂಗುದಾಣ ಎಂದು ಬೃಹದಾರಣ್ಯಕ ಉ.ನಿ ಉಲ್ಲೇಖ.
ಪಿತೃಪಕ್ಷ: ಹೆಸರೇ ತಿಳಿಸುವಂತೆ ಒಂದು ಪಕ್ಷವೇ ಪಿತೃಗಳಿಗೆ ಮೀಸಲು. ಪಿತೃಪಕ್ಷ. ಭಾದ್ರಪದ ಕೃಷ್ಣ ಪಕ್ಷದಲ್ಲಿ ಬರುವುದು. ಅಥವಾ ಮಹಾಲಯ ಪಕ್ಷ ಎಂತಲೂ ಕರೆಯುವುದಿದೆ. ಈ ದಿನಗಳಲ್ಲಿ ಪೂರ್ವಿಕರಿಗೆ ಶ್ರಾದ್ಧ, ತರ್ಪಣ, ದಾನದಿಂದ ತೃಪ್ತಿಯಾಗುತ್ತದೆ. ಸಮಸ್ತ ಕುಲವನ್ನು ಹರಸುತ್ತಾರೆ. ಪಿತೃಪಕ್ಷದಲ್ಲಿ ಮಾಡಿದ ಅನ್ನದಾನ ಗತಿಸಿಹೋದ ಸಮಸ್ತ ಪಿತೃಗಣಕ್ಕೆ ಸಲ್ಲುತ್ತದೆ. ಶ್ರಾದ್ಧ, ತರ್ಪಣ ಮತ್ತು ಪಿಂಡದಾನ ಮಹಾಲಯ ಶ್ರಾದ್ಧದ ವೈಶಿಷ್ಟ್ಯ.
ಮಹಾಲಯ: ಮಹಾ ಅಂದರೆ ಶ್ರೇಷ್ಠ ಅಥವಾ ದೊಡ್ಡದಾದ. ಲಯ – ನಾಶ. ದೇವ ದಾನವರ ನಡುವೆ ನಡೆದ ಘೋರ ಯುದ್ಧದಲ್ಲಿ ಅಪಾರ ಸಂಖ್ಯೆಯಲ್ಲಿ, ದೇವತೆಗಳು ಋಷಿಗಳು ದಾನವರ ಕೈಯಿಂದ ಮಡಿದರು. ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯ ಅವಧಿಯಲ್ಲಿ ಈ ಯುದ್ಧ ನಡೆದಿತ್ತು ಎಂದು ಒಂದು ಕಥೆ. ಮಹಾನಾಶ. ಮಹಾಲಯ! ದೇವತೆಗಳು ಮತ್ತು ಋಷಿಗಳು ಬೇರಾರೂ ಅಲ್ಲ, ನಮ್ಮ ಪೂರ್ವಜರೇ.
ಗೋದಾನ – ಸೇವೆ: ಗಾವೋ ಮೇ ಮಾತರ ಸರ್ವ ಪಿತರಾcಪಿ ಗೋವೃಷಃ ಎನ್ನುವಂತೆ ಗೋವು ಸಮಸ್ತ ಮಾನವರಿಗೂ ತಾಯಿ, ವೃಷಭ ತಂದೆ. ಪಿತೃಪಕ್ಷದಲ್ಲಿ ಗತಿಸಿಹೋದ ನಮ್ಮ ಪೂರ್ವಜರನ್ನು ಸ್ಮರಿಸಿದಂತೆಯೇ ಜೀವಂತ ಮಾತಾಪಿತೃಗಳಾದ ನಮ್ಮ ಗೋವುಗಳ ದಾನ, ಸೇವೆಯನ್ನು ಮಾಡಿ ಋಣಸಂದಾಯವನ್ನು ಮಾಡುವ ಚಿಂತನೆ. ಪಿಂಡಪ್ರದಾನ, ತರ್ಪಣದಂತೆಯೇ ಪಿತೃಪಕ್ಷದಲ್ಲಿ ಗೋದಾನ, ಸೇವೆಯೂ ಅತ್ಯಂತ ಪುಣ್ಯಪ್ರದ, ಫಲಪ್ರದ.
– ಜಲಂಚಾರು ರಘುಪತಿ ತಂತ್ರಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.