ಮತ್ತೆ ಕಬ್ಬಿಗರ ದರ ಸಂಘರ್ಷ; ಹೆಚ್ಚುವರಿ ದರ ನೀಡಲು ಅನ್ನದಾತರ ಒತ್ತಾಯ
ಸರ್ಕಾರ ನಿಗದಿ ಮಾಡಿರುವ ಕಬ್ಬಿನ ದರಕ್ಕೆ ರೈತರ ಆಕ್ಷೇಪ
Team Udayavani, Oct 4, 2022, 3:02 PM IST
ಬೆಳಗಾವಿ: ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭ, ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ಎಫ್‌ಆರ್‌ಪಿ ಪ್ರಕಾರ ದರ ನಿಗದಿ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಮತ್ತೆ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆಗಳ ಮಧ್ಯೆ ದರ ಸಂಘರ್ಷ’ ಉಂಟಾಗುವ ಲಕ್ಷಣಗಳು ಕಾಣುತ್ತಿವೆ.
ಸರ್ಕಾರ ದರ ನಿಗದಿ ಮಾಡಿ ಹೊರಡಿಸಿರುವ ಆದೇಶವನ್ನು ರಾಜ್ಯದ ಕಬ್ಬು ಬೆಳೆಗಾರರು ಒಪ್ಪುತ್ತಾರೆಯೇ ಎಂಬ ಅನುಮಾನ ಕಾಡುತ್ತಿದೆ. ಈ ಆದೇಶದ ಹಿಂದೆ ಸಕ್ಕರೆ ಕಾರ್ಖಾನೆಗಳ ಲಾಬಿ ಇದೆ. ಪ್ರಭಾವಿಗಳ ಒತ್ತಡ ಇದೆ ಎಂಬ ಅನುಮಾನವನ್ನು ರೈತ ಮುಖಂಡರು ವ್ಯಕ್ತಪಡಿಸಿರುವುದು ಇದಕ್ಕೆ ಪುಷ್ಟಿ ನೀಡಿದೆ. ರಾಜ್ಯದ 73 ಸಕ್ಕರೆ ಕಾರ್ಖಾನೆಗಳಿಗೆ ಕಳೆದ ಸಾಲಿನಲ್ಲಿ ಕಬ್ಬಿನಿಂದ ಸಕ್ಕರೆ ಉತ್ಪಾದಿಸಿದ ಇಳುವರಿ ಆಧಾರದ ಮೇಲೆ ಸರ್ಕಾರ ಎಫ್‌ಆರ್‌ಪಿ ದರ ನಿಗದಿ ಮಾಡಿ ಆದೇಶ ಹೊರಡಿಸಿದ ನಂತರ ಕಬ್ಬು ಬೆಳೆಗಾರರು ಹಾಗೂ ರಾಜ್ಯ ರೈತ ಸಂಘದ ಸದಸ್ಯರು ಸರ್ಕಾರದ ಈ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಸಾಲಿನಲ್ಲಿ ರಾಜ್ಯದ 73 ಸಕ್ಕರೆ ಕಾರ್ಖಾನೆಗಳಲ್ಲಿ ಸಕ್ಕರೆ ಇಳುವರಿ ಆಧಾರದ ಮೇಲೆ ಸರ್ಕಾರ ಪ್ರತಿ ಟನ್ ಕಬ್ಬಿಗೆ 2800ರಿಂದ 3600 ರೂ.ವರೆಗೆ ದರ ನಿಗದಿ ಮಾಡಿದೆ. ಇದರ ಪ್ರಕಾರ ಹೋದರೆ ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಡಿತ ಮಾಡಿ ಕೊನೆಗೆ ರೈತರಿಗೆ 2200ರಿಂದ 2800 ರೂ. ದರ ಮಾತ್ರ ಸಿಗಲಿದೆ. ಇದು ಕಬ್ಬು ಬೆಳೆಗಾರರಿಗೆ ಮಾಡಿರುವ ಮಹಾ ಮೋಸ. ಕಾರ್ಖಾನೆಗಳ ಲಾಬಿಗೆ ಮಣಿದು ಸರ್ಕಾರ ಈ ಆದೇಶ ಮಾಡಿದೆ ಎಂಬುದು ಕಬ್ಬು ಬೆಳೆಗಾರರ ಸಂಘದ ಮುಖಂಡರ ಆರೋಪ.
ಇಳುವರಿ ಆಧಾರದ ಮೇಲೆ ದರ ನಿಗದಿ ಮಾಡುವಲ್ಲಿ ಯಾವುದೇ ಆಕ್ಷೇಪ ಇಲ್ಲ. ಆದರೆ ಪ್ರತಿಟನ್‌ಗೆ ಕನಿಷ್ಟ 3500 ರೂ. ದರ ನಿಗದಿ ಮಾಡಬೇಕು ಎಂಬುದು ರೈತರ ಆಗ್ರಹ. ಸರ್ಕಾರ ಈಗ ಸಕ್ಕರೆ ಇಳುವರಿ ಆಧಾರದ ಮೇಲೆ ನಿಗದಿ ಮಾಡಿರುವ ದರದಲ್ಲಿ ಕೊನೆಗೆ ರೈತರಿಗೆ ಪ್ರತಿ ಟನ್‌ಗೆ 2200 ರಿಂದ 2800 ರೂ. ದರ ಮಾತ್ರ ಸಿಗುತ್ತದೆ.
ದರ ನಿಗದಿ ಎಷ್ಟು?:
ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಚಿಕ್ಕೋಡಿಯ ಅರಿಹಂತ ಶುಗರ್ಸ್ ಗೆ 3,462 ರೂ., ಅಥಣಿ ಶುಗರ್ಸ್ 3,355 ರೂ., ಬೆಳಗಾವಿ ಶುಗರ್ಸ್ 3,526 ರೂ., ಚಿಕ್ಕೋಡಿಯ ಚಿದಾನಂದ ಬಸವಪ್ರಭು ಕೋರೆ ಕಾರ್ಖಾನೆಗೆ 3,523 ರೂ., ರಾಮದುರ್ಗದ ಖಾನಪೇಟೆಯ ಇಐಡಿ ಪ್ಯಾರಿ ಕಾರ್ಖಾನೆಗೆ 3,636 ರೂ., ಘಟಪ್ರಭಾ ಎಸ್ ಎಸ್‌ಕೆ ಕಾರ್ಖಾನೆ 3,355 ರೂ., ಗೋಕಾಕ ಶುಗರ್ಸ್ ಲಿಮಿಟೆಡ್ 3,492 ರೂ., ನಿಪ್ಪಾಣಿಯ ಹಾಲಸಿದ್ದನಾಥ ಕಾರ್ಖಾನೆ 3526 ರೂ., ಸವದತ್ತಿಯ ಹರ್ಷ ಶುಗರ್ಸ್ 3,270 ರೂ., ಹುಕ್ಕೇರಿಯ ಹಿರಣ್ಯಕೇಶಿ ಕಾರ್ಖಾನೆ 3,459 ರೂ., ಸವದತ್ತಿಯ ರೇಣುಕಾ ಶುಗರ್ಸ್ 3,660 ರೂ, ಸೇರಿದಂತೆ ಜಿಲ್ಲೆಯ 27 ಸಕ್ಕರೆ ಕಾರ್ಖಾನೆಗಳಿಗೆ ಗರಿಷ್ಠ 3590 ರೂ. ದರ ನಿಗದಿ ಮಾಡಲಾಗಿದೆ.
ಬಾಗಲಕೋಟೆ ಜಿಲ್ಲೆಯ 12 ಸಕ್ಕರೆ ಕಾರ್ಖಾನೆಗಳಿಗೆ 3400 ರೂ.ದಿಂದ 3600 ರೂ. ವರೆಗೆ ದರ ನಿಗದಿ ಮಾಡಿದರೆ, ವಿಜಯಪುರ ಜಿಲ್ಲೆಯ ಒಂಬತ್ತು ಸಕ್ಕರೆ ಕಾರ್ಖಾನೆಗಳಿಗೆ 2821 ರೂ.ದಿಂದ 3477 ರೂ. ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ. ಬೀದರ ಜಿಲ್ಲೆಯ ಆರು ಸಕ್ಕರೆ ಕಾರ್ಖಾನೆಗಳಿಗೆ 2821 ರೂ.ದಿಂದ 3184 ರೂ., ಮಂಡ್ಯ ಜಿಲ್ಲೆಯ ನಾಲ್ಕು ಸಕ್ಕರೆ ಕಾರ್ಖಾನೆಗಳಿಗೆ 2821 ರೂ., ಕಲಬುರಗಿಯ ನಾಲ್ಕು ಕಾರ್ಖಾನೆಗಳಿಗೆ 2989 ರೂ.ದಿಂದ 3358 ರೂ. ದರ ನಿಗದಿ ಮಾಡಲಾಗಿದೆ. ಆದರೆ ಈ ಯಾವ ಜಿಲ್ಲೆಯಲ್ಲೂ ಸರ್ಕಾರದ ಈ ಆದೇಶಕ್ಕೆ ಸಹಮತ ವ್ಯಕ್ತವಾಗಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
ಎಫ್‌ಆರ್‌ಪಿ ಎಂಬುದು ನಾಮಕೆವಾಸ್ಥೆ ಆದೇಶ. ಇದು ಸಂಪೂರ್ಣ ಅವೈಜ್ಞಾನಿಕ. ನಾವು ಪ್ರತಿಟನ್ ಕಬ್ಬಿಗೆ ಕನಿಷ್ಟ 3500 ರೂ. ದರ ನಿಗದಿ ಮಾಡಬೇಕೆಂದು ಕೇಳುತ್ತಿದ್ದೇವೆ. ಇದರಿಂದ ಇಳುವರಿ ಆಧಾರದ ಮೇಲೆ ಪ್ರತಿಟನ್ ಕಬ್ಬಿಗೆ 3800 ರೂ. ದಿಂದ 4200 ರೂ. ದರ ಸಿಗುತ್ತದೆ. ಈಗ ಸರ್ಕಾರ ಮಾಡಿರುವ ಆದೇಶದಿಂದ ಎಲ್ಲ ವೆಚ್ಚ ಕಡಿತಗೊಳಿಸಿ ಕೊನೆಗೆ ರೈತರಿಗೆ ಪ್ರತಿ ಟನ್ ಕಬ್ಬಿಗೆ 2400ದಿಂದ 2600 ರೂ. ದರ ಸಿಗುತ್ತದೆ. ಈ ನ್ಯಾಯ ಸರಿಯಿಲ್ಲ. zಸಿದಗೌಡ ಮೋದಗಿ, ಕಬ್ಬು ನಿಯಂತ್ರಣ ಮಂಡಳಿ ಸದಸ್ಯ
ಇಳುವರಿಯಲ್ಲಿ ಮೋಸ
ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿಯಲ್ಲಿ ವಂಚನೆ ಮಾಡುತ್ತಿವೆ. ಪ್ರತಿಶತ ಒಂದರಷ್ಟು ಇಳುವರಿ ಕಡಿಮೆ ತೋರಿಸಿ ಹಣ ಲೂಟಿ ಮಾಡುತ್ತಿವೆ. ಯಾವುದೇ ಒಂದು ಕಾರ್ಖಾನೆ ಕನಿಷ್ಟ 10 ಲಕ್ಷ ಟನ್ ಕಬ್ಬು ಅರಿದರೆ ಅವರಿಗೆ 3ರಿಂದ 4 ಕೋಟಿ ಉಳಿತಾಯವಾಗಲಿದೆ. ಇದು ರೈತರಿಗೆ ಗೊತ್ತಾಗುವುದಿಲ್ಲ. ಈ ರೀತಿ ಇಳುವರಿಯಲ್ಲಿ ವ್ಯತ್ಯಾಸ ತೋರಿಸುವುದು ಮೊದಲಿಂದಲೂ ನಡೆದಿದೆ ಎನ್ನುತ್ತಾರೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರ ಶಾಂತಕುಮಾರ. ರಾಜ್ಯದಲ್ಲಿ 73 ಸಕ್ಕರೆ ಕಾರ್ಖಾನೆಗಳ ಪೈಕಿ 38 ಕಾರ್ಖಾನೆಗಳು ರಾಜಕಾರಣಿ ಗಳ ಹಿಡಿತದಲ್ಲಿವೆ. ಕಾನೂನು ಮಾಡುವವರು ಇವರೇ. ಇದಕ್ಕೆ ವಿರೋಧ ಮಾಡುವವರು ಇವರೇ. ಇವರಿಬ್ಬರ ಮಧ್ಯೆ ರೈತರು ಸಾಯುತ್ತಿದ್ದಾರೆ. ಪ್ರತಿಭಟನೆ ಮಾಡಿದರೆ ಇಲ್ಲಿ ನಮ್ಮ ಕಬ್ಬು ತೆಗೆದುಕೊಳ್ಳುವದಿಲ್ಲ ಎಂಬ ಭಯ ರೈತರನ್ನು ಕಾಡುತ್ತಿದೆ. ಹೀಗಾಗಿ ಯಾವ ರೈತರೂ ಕಾರ್ಖಾನೆಗಳ ವಿರುದ್ಧ ನಿಲ್ಲುತ್ತಿಲ್ಲ ಎಂಬುದು ಮುಖಂಡರ ನೋವು
ಉತ್ತರ ಪ್ರದೇಶ, ಗುಜರಾತ್‌ನಲ್ಲಿ ಎಫ್ ಆರ್‌ಪಿ ಪ್ರಕಾರ ಪ್ರತಿ ಟನ್ ಕಬ್ಬಿಗೆ 3,800 ರಿಂದ 4500 ರೂ. ನಿಗದಿ ಮಾಡಿ ದ್ದಾರೆ. ನಮ್ಮಲ್ಲಿ ಏಕೆ ಈ ದರವಿಲ್ಲ? –ಕುರಬೂರ ಶಾಂತಕುಮಾರ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ
●ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.