ಉಚಿತ ಕೊಡುಗೆ: ನೀತಿ ಸಂಹಿತೆಯಡಿ ತರಲು ಚು.ಆಯೋಗ ಚಿಂತನೆ
Team Udayavani, Oct 6, 2022, 6:00 AM IST
ಪ್ರತಿ ಚುನಾವಣೆ ಎದುರಾದಾಗಲೂ ರಾಜಕೀಯ ಪಕ್ಷಗಳು ಮತದಾರರಿಗೆ ಉಚಿತ ಕೊಡುಗೆಗಳ ಭರವಸೆ ನೀಡುವ ಮೂಲಕ ಅವರನ್ನು ಪಕ್ಷದತ್ತ ಸೆಳೆಯಲು ಕಸರತ್ತು ನಡೆಸುವುದು ಸಾಮಾನ್ಯ. ಈ ಕುರಿತಂತೆ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೇ ಒಂದಿಷ್ಟು ಚರ್ಚೆಗಳು ನಡೆ ದಿದ್ದವು. ಆದರೆ ಆ ಬಳಿಕವೂ ದೇಶದ ವಿವಿಧೆಡೆಗಳಲ್ಲಿ ನಡೆದ ಚುನಾವಣೆ ಗಳಲ್ಲಿ ರಾಜಕೀಯ ಪಕ್ಷಗಳು ಒಂದಲ್ಲ ಒಂದು ರೀತಿಯಲ್ಲಿ ಜನತೆಗೆ ಪುಗ ಸಟ್ಟೆ ಕೊಡುಗೆಗಳನ್ನು ನೀಡುವ ಯೋಜನೆಗಳನ್ನು ಘೋಷಿಸುತ್ತಲೇ ಬಂದಿವೆ.
ಪಕ್ಷಗಳು ತಮ್ಮ ಚುನಾವಣ ಪ್ರಣಾಳಿಕೆಗಳಲ್ಲಿ ಘೋಷಿಸುವ ಇಂಥ ಯೋಜನೆಗಳ ಬಗೆಗೆ ರಾಜಕೀಯ ಪಕ್ಷಗಳ ನಾಯಕರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇನ್ನು ರಾಜಕೀಯ ಪಂಡಿತರಲ್ಲಿಯೂ ಈ ಬಗ್ಗೆ ಸಹಮತದ ಅಭಿಪ್ರಾಯ ಇಲ್ಲ. ಈ ಉಚಿತ ಕೊಡುಗೆಗಳ ಬಗೆಗೆ ಅಸಮಾಧಾನ ವ್ಯಕ್ತಪಡಿಸುವ ವರ್ಗ ಮತ್ತು ರಾಜಕೀಯ ಪಕ್ಷಗಳು ಇದು ದೇಶದ ಜನರ ನಡುವೆ ತಾರತಮ್ಯ ಉಂಟು ಮಾಡುವ ಕಾರ್ಯವಾಗಿದ್ದು, ಎಲ್ಲ ತೆರಿಗೆದಾರರಿಗೆ ಸಮಾನ ನ್ಯಾಯ ದೊರಕ ಬೇಕು ಎಂದು ವಾದಿಸುತ್ತ ಬಂದಿವೆ. ಆದರೆ ಈ ಕೊಡುಗೆಗಳ ಪರ ವಾಗಿರುವವರು ಕಟ್ಟಕಡೆಯ ಪ್ರಜೆಗೆ ಸಮಾನ ಹಕ್ಕು ಮತ್ತು ಸಹಜ ನ್ಯಾಯ ಲಭಿಸುತ್ತಿಲ್ಲವಾಗಿದ್ದು ಇಂಥ ಜನರನ್ನು ಮುಖ್ಯವಾಹಿನಿಗೆ ತರುವಲ್ಲಿ ಈ ಯೋಜನೆಗಳು ಪೂರಕ ಎಂದು ಸಮರ್ಥಿಸಿಕೊಳ್ಳುತ್ತಾರೆ. ಇಂಥ ಕೊಡುಗೆಗಳ ಘೋಷಣೆ ವೇಳೆ ಅದು ಅನರ್ಹರ ಮತ್ತು ಬಲಿಷ್ಠರ ಕೈಸೇರದಂತೆ ಎಚ್ಚರ ವಹಿಸುವುದು ಆಡಳಿತ ವ್ಯವಸ್ಥೆಯ ಜವಾಬ್ದಾರಿ ಎಂಬ ಷರಾವನ್ನು ಬರೆಯಲು ಈ ಉಚಿತ ಕೊಡುಗೆಗಳ ಸಮರ್ಥಕರು ಮರೆಯುವುದಿಲ್ಲ.
ಈ ಸಂಬಂಧ ಹಲವು ಸುತ್ತಿನ ಚರ್ಚೆಗಳು ನಡೆದಿವೆಯಾದರೂ ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಲು ಇದುವರೆಗೆ ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರಧಾನಿ ಮೋದಿ ಅವರೂ ಇತ್ತೀಚೆಗೆ ಆಕ್ಷೇಪ ಎತ್ತಿ ಈ ಕುರಿತು ವಿಸ್ತೃತ ಚರ್ಚೆ ನಡೆಯಬೇಕಿದೆ ಎಂದಿದ್ದರು. ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿಯೂ ಒಂದಿಷ್ಟು ವಾದ-ಪ್ರತಿವಾದಗಳು ನಡೆದು ಕೊನೆಗೆ ಚುನಾವಣ ಆಯೋಗ ಮತ್ತು ರಾಜಕೀಯ ಪಕ್ಷಗಳೇ ಅಂತಿಮ ನಿರ್ಧಾರಕ್ಕೆ ಬರುವುದು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು.
ಇದೀಗ ಚುನಾವಣ ಆಯೋಗ ಈ ವಿಷಯವಾಗಿ ದೇಶದ ಎಲ್ಲ ರಾಷ್ಟ್ರೀಯ ಪಕ್ಷಗಳು ಮತ್ತು ರಾಜ್ಯ ಮಟ್ಟದ ಅಧಿಕೃತ ಪಕ್ಷಗಳಿಗೆ ಪತ್ರ ಬರೆದು ಸಲಹೆ, ಪ್ರಸ್ತಾವಗಳನ್ನು ಮುಂದಿಟ್ಟು ಅಭಿಪ್ರಾಯಗಳನ್ನು ತಿಳಿಸು ವಂತೆ ಸೂಚಿಸಿದೆ. ಉಚಿತ ಕೊಡುಗೆಗಳನ್ನೂ ಒಳಗೊಂಡಂತೆ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸುವ ಯೋಜನೆಗಳ ಅನುಷ್ಠಾನದ ಹಣಕಾಸು ಕಾರ್ಯಸಾಧ್ಯತೆಯ ಕುರಿತಂತೆಯೂ ಮತದಾರರಿಗೆ ಮನ ದಟ್ಟು ಮಾಡಬೇಕು. ಈ ಕುರಿತಂತೆ ಚುನಾವಣ ಮಾದರಿ ನೀತಿ ಸಂಹಿತೆಗೆ ತಿದ್ದುಪಡಿಯನ್ನು ತರಬೇಕು ಎಂದು ಆಯೋಗ ಸಲಹೆ ನೀಡಿದೆ.
ಆದರೆ ಇದೊಂದು ಸೂಕ್ಷ್ಮ ವಿಚಾರವಾಗಿರುವುದರಿಂದ ಕೇವಲ ಬಹುಮತಕ್ಕೆ ಕಿವಿಯಾಗದೆ ದೇಶದಲ್ಲಿನ ಸಾಮಾಜಿಕ ವೈವಿಧ್ಯವನ್ನು ಗಮನದಲ್ಲಿರಿಸಿಕೊಂಡು ಅಂತಿಮ ನಿರ್ಧಾರಕ್ಕೆ ಬರಬೇಕಿದೆ. ಹಾಗೆಂದು ಇದು ಇನ್ನೊಂದು “ಬಡತನ ನಿವಾರಣ ಯೋಜನೆ’ಯಂತಾಗಬಾರದು. ಜನರಿಗೆ ಎಲ್ಲವನ್ನೂ ಉಚಿತವಾಗಿ ಒದಗಿಸುವ ಮೂಲಕ ಅವರನ್ನು ಶಾಶ್ವತವಾಗಿ ಹಿನ್ನೆಲೆಗೆ ದೂಡುವ ಪ್ರಯತ್ನವಾಗದೆ ಎಲ್ಲರನ್ನೂ ಸಮಾಜದ ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರಕ್ಕೆ ಬರುವುದು ಇಂದಿನ ಅನಿವಾರ್ಯ ಮಾತ್ರವಲ್ಲ ತುರ್ತು ಕೂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.